ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಮನೆ ಬಾಗಿಲಿಗೆ ಜನನ, ಮರಣ ಪ್ರಮಾಣಪತ್ರ

ದಲ್ಲಾಳಿಗಳಿಗೆ ಕಮಿಷನ್‌ ಕೊಡುವ ಅಗತ್ಯವೂ ಇಲ್ಲ
Last Updated 13 ಮಾರ್ಚ್ 2017, 7:10 IST
ಅಕ್ಷರ ಗಾತ್ರ

ಕೋಲಾರ: ನಗರವಾಸಿಗಳೇ ಇನ್ನು ನೀವು ಜನನ ಮತ್ತು ಮರಣ ಪ್ರಮಾಣಪತ್ರಕ್ಕಾಗಿ ನಗರಸಭೆ ಬಾಗಿಲಿಗೆ ಅಲೆಯುವ ತಾಪತ್ರಯವಿಲ್ಲ. ಅಲ್ಲದೇ, ಪ್ರಮಾಣಪತ್ರಗಳಿಗಾಗಿ ದಲ್ಲಾಳಿಗಳಿಗೆ ಕಮಿಷನ್‌ ಕೊಡುವ ಅಗತ್ಯವೂ ಇಲ್ಲ. ಇನ್ನು ನೀವು ಕುಳಿತ ಕಡೆಯೇ ನಿಮ್ಮ ಮನೆ ಬಾಗಿಲಿಗೆ ಉಚಿತವಾಗಿ ಪ್ರಮಾಣಪತ್ರಗಳು ಬಂದು ಸೇರಲಿವೆ.

ಹೌದು, ನಗರಸಭೆ ಈ ರೀತಿಯ ವಿಶಿಷ್ಟ ಮತ್ತು ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ನಗರವಾಸಿಗಳ ಅಲೆದಾಟ ತಪ್ಪಿಸಿ ಅವರ ಮನೆ ಬಾಗಿಲಿಗೆ ಜನನ ಮತ್ತು ಮರಣ ಪ್ರಮಾಣಪತ್ರ ತಲುಪಿಸುವ ಸೇವೆಯನ್ನು ನಗರಸಭೆ ಆರಂಭಿಸಿದೆ.

ಮಗು ಹುಟ್ಟಿದ ಅಥವಾ ವ್ಯಕ್ತಿ ಮೃತಪಟ್ಟ 21 ದಿನದೊಳಗೆ ಕುಟುಂಬ ಸದಸ್ಯರಿಗೆ ಉಚಿತವಾಗಿ ಪ್ರಮಾಣಪತ್ರ ವಿತರಿಸಲಾಗುತ್ತದೆ. 21 ದಿನದ ಗಡುವು ಮೀರಿದ್ದರೆ ₹ 17 ಶುಲ್ಕ ಪಡೆದು ಪ್ರಮಾಣಪತ್ರ ನೀಡಲಾಗುತ್ತದೆ. ಜನನ ಪ್ರಮಾಣಪತ್ರಕ್ಕಾಗಿ ನಗರಸಭೆಗೆ ವಾರಕ್ಕೆ ಸರಾಸರಿ 200 ಮತ್ತು ಮರಣ ಪ್ರಮಾಣಪತ್ರಕ್ಕೆ ಸುಮಾರು 50 ಅರ್ಜಿಗಳು ಬರುತ್ತಿವೆ. ಜತೆಗೆ ಪ್ರಮಾಣಪತ್ರದಲ್ಲಿನ ಸಣ್ಣಪುಟ್ಟ ತಪ್ಪುಗಳ ತಿದ್ದುಪಡಿ ಕೋರಿ ಸಾಕಷ್ಟು ಅರ್ಜಿಗಳು ಬರುತ್ತಿವೆ. ನಗರಸಭೆಯು 2016ರ ಏಪ್ರಿಲ್‌ನಿಂದ 2017ರ ಫೆಬ್ರುವರಿ ಅಂತ್ಯದವರೆಗೆ ಆನ್‌ಲೈನ್‌ ಮೂಲಕ 12,639 ಜನನ ಪ್ರಮಾಣಪತ್ರ ಮತ್ತು 1,996 ಮರಣ ಪ್ರಮಾಣಪತ್ರ ವಿತರಣೆ ಮಾಡಿದೆ.

ಮಧ್ಯವರ್ತಿಗಳ ಕೂಟ: ಜನನ ಮತ್ತು ಮರಣ ಪ್ರಮಾಣಪತ್ರ ಪಡೆಯಲು ಸಾರ್ವಜನಿಕರು ಈ ಹಿಂದೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರು ಪ್ರಮಾಣಪತ್ರಗಳನ್ನು ಪಡೆಯಲು ಪದೇ ಪದೇ ನಗರಸಭೆಗೆ ಅಲೆಯುವ ಪರಿಸ್ಥಿತಿ ಇತ್ತು. ಸಾರ್ವಜನಿಕರು ನಾಲ್ಕೈದು ಬಾರಿ ನಗರಸಭೆಗೆ ಅಲೆದರೂ ಸಿಬ್ಬಂದಿ ಪ್ರಮಾಣಪತ್ರ ಕೊಡಲು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದರು.

ಮತ್ತೊಂದೆಡೆ ಶೀಘ್ರವೇ ಪ್ರಮಾಣಪತ್ರ ಕೊಡಿಸುವುದಾಗಿ ಹೇಳಿ ಸಾರ್ವಜನಿಕರಿಂದ ಕಮಿಷನ್‌ ಪಡೆಯುವ ಮಧ್ಯವರ್ತಿಗಳ ದೊಡ್ಡ ಕೂಟವೇ ನಗರಸಭೆಯಲ್ಲಿತ್ತು. ಮಧ್ಯವರ್ತಿಗಳ ಜತೆ ಕೈಜೋಡಿಸಿದ್ದ ಅಧಿಕಾರಿಗಳು ಸಾರ್ವಜನಿಕರಿಗೆ ಸಕಾಲಕ್ಕೆ ಜನನ ಮತ್ತು ಮರಣ ಪ್ರಮಾಣಪತ್ರ ಕೊಡದೆ ಸತಾಯಿಸುತ್ತಿದ್ದರು. ಆದರೆ, ಮಧ್ಯವರ್ತಿಗಳ ಮೂಲಕ ಬಂದವರಿಗೆ ಶೀಘ್ರವೇ ಪ್ರಮಾಣಪತ್ರ ಕೊಟ್ಟು ಕಮಿಷನ್‌ ಹಣವನ್ನು ಮೆಲ್ಲಗೆ ಜೇಬಿಗಿಳಿಸುತ್ತಿದ್ದರು.
ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರು ಕೇಳಿಬಂದ ಕಾರಣ ಮತ್ತು ಮಧ್ಯವರ್ತಿಗಳ ದಂಧೆಗೆ ಕಡಿವಾಣ ಹಾಕುವ ಉದ್ದೇಶಕ್ಕಾಗಿ ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ ಅವರು ಜನರ ಮನೆ ಬಾಗಿಲಿಗೆ ಜನನ ಹಾಗೂ ಮರಣಪ್ರಮಾಣ ಪತ್ರಗಳನ್ನು ತಲುಪಿಸುವ ಸೇವೆ ಆರಂಭಿಸಿದ್ದಾರೆ.

ಆಸ್ಪತ್ರೆಗಳೊಂದಿಗೆ ಸಂಪರ್ಕ: ನಗರದಲ್ಲಿ ಸುಮಾರು 28 ಖಾಸಗಿ ಆಸ್ಪತ್ರೆಗಳಿದ್ದು, ಈ ಆಸ್ಪತ್ರೆಗಳೊಂದಿಗೆ ನಗರಸಭೆಯ ಜನನ ಮತ್ತು ಮರಣ ಪ್ರಮಾಣಪತ್ರ ವಿತರಣೆ ವಿಭಾಗದ ಸಿಬ್ಬಂದಿ ಸಂಪರ್ಕ ಹೊಂದಿದ್ದಾರೆ. ಈ ಆಸ್ಪತ್ರೆಗಳಲ್ಲಿ ಯಾವುದೇ ಮಗು ಜನಿಸಿದರೆ ಅಥವಾ ವ್ಯಕ್ತಿ ಮೃತಪಟ್ಟರೆ ಆ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಶೀಘ್ರವೇ ನಗರಸಭೆಯ ಜನನ ಮತ್ತು ಮರಣ ಪ್ರಮಾಣಪತ್ರ ವಿತರಣೆ ವಿಭಾಗಕ್ಕೆ ಕರೆ ಮಾಡಿ ಮಾಹಿತಿ ನೀಡುತ್ತಾರೆ.

ಮಗು ಹುಟ್ಟಿದ ದಿನಾಂಕ, ಪೋಷಕರ ಹೆಸರು, ಮನೆ ವಿಳಾಸ, ಮೊಬೈಲ್‌ ಸಂಖ್ಯೆ ಸೇರಿದಂತೆ ಎಲ್ಲಾ ವೈಯಕ್ತಿಕ ವಿವರ ನೀಡುತ್ತಾರೆ. ಅದೇ ರೀತಿ ಯಾವುದೇ ವ್ಯಕ್ತಿ ಮೃತಪಟ್ಟಾಗ ಅವರ ಕುಟುಂಬ ಸದಸ್ಯರ ವಿವರಗಳನ್ನು ಕೊಡುತ್ತಾರೆ. ನಗರಸಭೆ ಸಿಬ್ಬಂದಿ ಈ ಮಾಹಿತಿ ಆಧರಿಸಿ ಪ್ರಮಾಣಪತ್ರ ಸಿದ್ಧಪಡಿಸುತ್ತಾರೆ. ಬಳಿಕ ಮಗುವಿನ ಪೋಷಕರು ಅಥವಾ ಮೃತ ವ್ಯಕ್ತಿಯ ಸಂಬಂಧಿಕರು ಆಸ್ಪತ್ರೆಯ ವೈದ್ಯಕೀಯ ಸಾರಾಂಶ ದಾಖಲೆಪತ್ರದೊಂದಿಗೆ (ಡಿಸ್ಚಾರ್ಜ್‌ ಸಮ್ಮರಿ) ನಗರಸಭೆಗೆ ಬಂದರೆ ಸಿಬ್ಬಂದಿ ಸ್ಥಳದಲ್ಲೇ ಪ್ರಮಾಣಪತ್ರ ವಿತರಿಸುತ್ತಾರೆ.

ಮಗುವಿನ ಪೋಷಕರಿಗೆ ಅಥವಾ ಮೃತ ವ್ಯಕ್ತಿಯ ಕುಟುಂಬ ಸದಸ್ಯರಿಗೆ ನಗರಸಭೆಗೆ ಬರಲು ಸಾಧ್ಯವಾಗದ ಸಂದರ್ಭದಲ್ಲಿ ಸಿಬ್ಬಂದಿಯೇ ಅವರಿದ್ದ ಕಡೆಗೆ ಪ್ರಮಾಣಪತ್ರ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಈ ಕಾರ್ಯಕ್ಕೆ ನಗರಸಭೆಯ ಪೌರ ಕಾರ್ಮಿಕರು ಮತ್ತು ಸ್ಥಳೀಯ ವಾಲ್‌ಮನ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ನಗರಸಭೆಯ ಈ ಸೇವೆಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಅಲೆಯುವ ಪರಿಸ್ಥಿತಿ
ಜನನ ಮತ್ತು ಮರಣ ಪ್ರಮಾಣಪತ್ರ ಪಡೆಯಲು ಪದೇ ಪದೇ ನಗರಸಭೆಗೆ ಅಲೆಯುವ ಪರಿಸ್ಥಿತಿ ಇತ್ತು. ಸಾರ್ವಜನಿಕರ ಅಲೆದಾಟ ತಪ್ಪಿಸಲು ಹಾಗೂ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸಾರ್ವಜನಿಕರ ಮನೆ ಬಾಗಿಲಿಗೆ ಜನನ ಮತ್ತು ಮರಣ ಪ್ರಮಾಣಪತ್ರ ತಲುಪಿಸುವ ಸೇವೆ ಆರಂಭಿಸಲಾಗಿದೆ.
–ಮಹಾಲಕ್ಷ್ಮಿ, ನಗರಸಭೆ ಅಧ್ಯಕ್ಷೆ

***

ಈ ಕ್ರಮ ಸ್ವಾಗತಾರ್ಹ. ಇದರಿಂದ ಪ್ರಮಾಣಪತ್ರಗಳು ಸಕಾಲಕ್ಕೆ ಸಾರ್ವಜನಿಕರ ಕೈಸೇರಿ ನಗರಸಭೆಗೆ ಅಲೆಯುವ ತೊಂದರೆ ತಪ್ಪುತ್ತದೆ. ಆದರೆ, ಈ ಸೇವೆ ಇತರೆ ಯೋಜನೆಗಳಂತೆ ಅರ್ಧಕ್ಕೆ ಸ್ಥಗಿತಗೊಳ್ಳಬಾರದು.
–ಬೈರಪ್ಪ, ಪ್ರಮಾಣಪತ್ರದ ಅರ್ಜಿದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT