ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದ ಒಡಲಲಿ ಕೃಷ್ಣಮೃಗ?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕಸ ವಿಲೇವಾರಿ ಘಟಕ ಸ್ಥಾಪಿಸುವ ಪ್ರಸ್ತಾವ
Last Updated 20 ಮಾರ್ಚ್ 2017, 6:49 IST
ಅಕ್ಷರ ಗಾತ್ರ
-ಡಾ. ಸಿದ್ಧಲಿಂಗಸ್ವಾಮಿ ಹಿರೇಮಠ
ಕರ್ನಾಟಕ ಪ್ರವಾಸೋದ್ಯಮದ ನಕ್ಷೆಯಲ್ಲಿ ತುಮಕೂರು ಜಿಲ್ಲೆಯ ಸಿದ್ದಗಂಗಾಕ್ಷೇತ್ರ, ಶಿವಗಂಗಾಬೆಟ್ಟ, ದೇವರಾಯನದುರ್ಗ, ಮೈದನಹಳ್ಳಿ, ತಿಮ್ಲಾಪುರ, ಎಡೆಯೂರು, ಮಧುಗಿರಿ, ಸಿದ್ಧರಬೆಟ್ಟ ಮುಂತಾದ ಪ್ರಾಕೃತಿಕ ಪ್ರವಾಸೀ ಸ್ಥಳಗಳ ಪಟ್ಟಿ ಬೆಳೆದರೂ ಸ್ವಾತಂತ್ರ್ಯೋತ್ತರ ಸಂದರ್ಭದಲ್ಲಿ ಇಲ್ಲಿನ ಪ್ರವಾಸೋದ್ಯಮದ ಅಭಿವೃದ್ಧಿ ಮರೀಚಿಕೆಯಾಗಿದೆ. 
 
ಇಂಥ ಸಂದರ್ಭದಲ್ಲಿ ಈಗ ಮೈದನಹಳ್ಳಿಯ ಜಯಮಂಗಲೀ ಕೃಷ್ಣಮೃಗ ಸಂರಕ್ಷಿತ ಅಭಯಾರಣ್ಯದ ಒಂದು ಭಾಗದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕಸ ವಿಲೇವಾರಿ ಘಟಕವನ್ನು ಸ್ಥಾಪಿಸುವ ಪ್ರಸ್ತಾವ ಇಟ್ಟಿದೆ.  ಅಭಿವೃದ್ಧಿಯ ಹೆಸರಿನ ಕರಿನೆರಳು ಕೃಷ್ಣಮೃಗಗಳ ಮೇಲೆ ಬೀಳುತ್ತಿದ್ದು, ಬಹುದೊಡ್ಡ ಪ್ರಾಕೃತಿಕ ಅನಾಹುತಕ್ಕೆ ಎಡೆಯಾಗುತ್ತಿದೆ. 
 
ಏಷ್ಯಾದಲ್ಲಿಯೇ ಅತೀ ಹೆಚ್ಚು  ಎಂದರೆ 12 ಸಾವಿರಕ್ಕೂ ಹೆಚ್ಚು ಕೃಷ್ಣಮೃಗಗಳನ್ನು ಹೊಂದಿರುವ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಕೃಷ್ಣಮೃಗ ಅಭಯಾರಣ್ಯವನ್ನು ಹೊರತುಪಡಿಸಿದರೆ, ಇನ್ನೊಂದು ಸಂರಕ್ಷಿತ ಅಭಯಾರಣ್ಯ ಎಂದರೆ ಅದು ಮೈದನಹಳ್ಳಿಯ ಜಯಮಂಗಲೀ ಕೃಷ್ಣಮೃಗ ಸಂರಕ್ಷಿತ ಅಭಯಾರಣ್ಯ.

ಇದು ಸುಮಾರು 3.23 ಚ.ಕಿ.ಮೀ.ವ್ಯಾಪ್ತಿಯನ್ನು ಹೊಂದಿದೆ. ಈಗಾಗಲೇ ಈ ಅರಣ್ಯದ ಸುತ್ತ ನೆಲೆಗೊಂಡಿರುವ ಪರಿಸರ ವಿರೋಧಿ ಚಟುವಟಿಕೆಗಳಿಂದ ರಕ್ಷಿಸಿಕೊಳ್ಳಲು ಹೆಣಗಾಡುತ್ತಿರುವ ಕೃಷ್ಣಮೃಗಗಳಿಗೆ ಈಗ ಭಾರಿ ಬರಸಿಡಿಲು ಬಂದೆರಗಿದಂತಾಗಿದೆ.
 
ಈಗಾಗಲೇ ತೋಟಗಳಿಗೆ ಸುತ್ತ ರಕ್ಷಣೆಗಾಗಿ ಹಾಕಿರುವ ವಿದ್ಯುತ್ ಬೇಲಿಗಳಿಂದ  ಇಲ್ಲಿನ ಕೃಷ್ಣಮೃಗಗಳ ಸ್ವಚ್ಛಂದ ವಿಹಾರಕ್ಕೆ ತಡೆಯುಂಟಾಗಿದೆ. ರೈತರು ತಮ್ಮ ಫಸಲುಗಳಿಗೆ ಬಳಸುತ್ತಿರುವ ಕೀಟನಾಶಕಗಳ ಸೇವನೆಯಿಂದ ಕೃಷ್ಣಮೃಗಗಳ ಸಂತತಿ ಕ್ಷೀಣಿಸುತ್ತಿದೆ. 2002ರ ಗಣತಿಯಂತೆ ಇಲ್ಲಿ 610 ಕೃಷ್ಣಮೃಗಗಳು ಇದ್ದರೆ 2012ರ ವೇಳೆಗೆ ಅವುಗಳ ಸಂಖ್ಯೆ 252ಕ್ಕೆ ಕುಸಿದಿದೆ.
 
ಅತ್ಯಂತ ಸುಂದರ, ಸಭ್ಯ ಪ್ರಾಣಿ ಕೃಷ್ಣಮೃಗದ ಮಾಂಸದ ರುಚಿಗೆ ಮನಸೋತ ಸಲ್ಮಾನ್ ಖಾನ್, ಸೋನಾಲಿ ಬೇಂದ್ರೆ ಮತ್ತಿತರರು 1998ರಲ್ಲಿ ಕೃಷ್ಣಮೃಗವನ್ನು ಬೇಟೆಯಾಡಿ ಈಗಲೂ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿರುವುದನ್ನು ಮರೆತಿರುವ ಈ ಭಾಗದ ಪ್ರಭಾವಿ ಬೇಟೆಗಾರರ ನಾಲಿಗೆಯ ಚಪಲಕ್ಕೆ, ಪ್ರಾಣಿ-ಪಕ್ಷಿ ಬೇಟೆಯಾಡಿ ಬದುಕನ್ನು ಸವೆಸುವ ಜನಾಂಗದವರು ಕಾಡಿನಲ್ಲಿ ಹಾಕುವ ಉರುಳಿಗೆ ಸಿಲುಕಿ ಕೃಷ್ಣಮೃಗಗಳು ಇನ್ನಿಲ್ಲವಾಗುತ್ತಿವೆ. (ಬೇಟೆಯಾಡುವವರನ್ನು ತಡೆಯಲು ಅರಣ್ಯ ಇಲಾಖೆಯವರು ಇತ್ತೀಚೆಗೆ ಅಭಯಾರಣ್ಯದಲ್ಲಿ ಕ್ಯಾಮೆರಾ ಟ್ರ್ಯಾಪಿಂಗ್ ಅಳವಡಿಸಿರುವುದು ಅಭಿನಂದನಾರ್ಹ).

ಹೀಗೆ ಹತ್ತು ಹಲವಾರು ಪರಿಸರ ವಿರೋಧಿ ಚಟುವಟಿಕೆಗಳಿಂದ ಈ ಜಿಂಕೆಗಳು ತಮ್ಮ ಮೂಲಸ್ಥಾನವನ್ನು ತೊರೆದು ಉತ್ತರಭಾಗದತ್ತ ವಲಸೆ ಹೋಗುತ್ತಿರುವಾಗ ಈಗ ಇನ್ನೊಂದು ಅನಾಹುತಕ್ಕೆ ಈ ಅರಣ್ಯ ಸಾಕ್ಷಿಯಾಗಹೊರಟಿರುವುದು ದೊಡ್ಡ ದುರಂತ. 
 
ಕೃಷ್ಣಮೃಗಗಳ ಕುರಿತು ಒಂದಿಷ್ಟು...
ಇದರ ವೈಜ್ಞಾನಿಕ ಹೆಸರು ಆಂಟಿಲೋಪ್ ಸರ್ವಿಕಾಪ್ರ. ಭಾರತ, ಪಾಕಿಸ್ತಾನ ಮತ್ತು ನೇಪಾಳದಲ್ಲಿ ಹೆಚ್ಚಾಗಿ ಕಂಡುಬರುವ ಈ ಜಾತಿಯ ಜಿಂಕೆ (ಹುಲ್ಲೆ, ಚಿಗರೆ) ಏಕಾಂತ ಬಯಸುವ ಹಾಗೂ ಅತೀ ಬೇಗ ನಶಿಸುತ್ತಿರುವ ಸಂತತಿ. 
 
ಕ್ರಿ.ಶ. 1758 ಸ್ವೀಡನ್ನಿನ ಪ್ರಾಣಿಶಾಸ್ತ್ರಜ್ಞ ಕಾರ್ಲ್ ಲಿನಿಯಸ್ ಈ ಮೃಗವನ್ನು ಮೊದಲಿಗೆ ಗುರುತಿಸಿ ವೈಜ್ಞಾನಿಕ ವಿವರಣೆಯನ್ನು ನೀಡಿದ್ದರು.
ಸದಾ ಬಯಲಿನಲ್ಲಿ ಹೆಣ್ಣು ಜಿಂಕೆಗಳೊಂದಿಗೆ ವಿಹರಿಸುವ ಇವುಗಳಿಗೆ ಹಸಿರು ಹುಲ್ಲು ಮೂಲ ಆಹಾರ. ಹಸಿರು ಮೇವಿನ ಕೊರತೆಯಿಂದ ರೈತರ ಫಸಲುಗಳಿಗೆ ಕೃಷ್ಣಮೃಗಗಳು ದಾಳಿ ಇಡುವುದರಿಂದ ಅರಣ್ಯ ಇಲಾಖೆಯೊಂದಿಗೆ ರೈತರ ಜಟಾಪಟಿ ನಿತ್ಯದ ಕಾಯಕ. ಈ ನಿಟ್ಟಿನಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ತೊಟ್ಟಿಗಳನ್ನು ಸರ್ಕಾರ ನಿರ್ಮಿಸಿದೆ.
 
ರಾಣೆಬೆನ್ನೂರಿನ ಕೃಷ್ಣಮೃಗ ಅಭಯಾರಣ್ಯದಲ್ಲಿ ಹರಿಹರದ ಪಾಲಿಫೈಬರ್ ಉದ್ಯಮಕ್ಕೆ ಬೆಂಬಲವಾಗಿ ನೀಲಗಿರಿ ಮರಗಳನ್ನೇ ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿರುವ ಅರಣ್ಯ ಇಲಾಖೆ ಇಲ್ಲಿಯೂ ನೀಲಗಿರಿಗೆ ಪ್ರಾಧಾನ್ಯ ನೀಡಿರುವುದರಿಂದ ಅಂತರ್ಜಲ ಮಟ್ಟ ಒಂದೂವರೆ ಸಾವಿರ ಅಡಿಗಳಷ್ಟು ಕುಸಿಯುತ್ತಿರುವುದು ಯಾರ ಕಣ್ಣಿಗೆ ಕಾಣುತ್ತಿಲ್ಲವಾದರೂ, ಈ ಅರಣ್ಯ ಪ್ರದೇಶ ಬಿಬಿಎಂಪಿ ಕಣ್ಣಿಗೆ ಕುಕ್ಕುತ್ತಿದೆ.
 
ಇಂತಹ ವೈಪರೀತ್ಯಗಳಿಂದ ರೋಸಿಹೋಗಿರುವ ಕೃಷ್ಣಮೃಗಗಳು ಪಕ್ಕದ ಜಿಲ್ಲೆಗಳ ಪ್ರದೇಶಗಳತ್ತ ವಲಸೆ ಹೋಗುತ್ತಿರುವುದು ಈ ಮೃಗಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. 
 
ಕೃಷ್ಣಮೃಗಗಳ ಸಂತತಿಯೊಂದಿಗೆ ಇಲ್ಲಿ ಅನೇಕ ಪ್ರಾಣಿ-ಪಕ್ಷಿಗಳು ನೆಲೆಗೊಂಡಿವೆ. ಕರಡಿಗಳು, ಚಿರತೆಗಳು, ನವಿಲು ಹೀಗೆ ಅನೇಕ ಬಗೆಯ ಜೀವರಾಶಿಯನ್ನು ತನ್ನೊಡಲೊಳಗೆ ಇಟ್ಟುಕೊಂಡಿರುವ ಈ ಜಯಮಂಗಲೀ ಸಂರಕ್ಷಿತ ಅಭಯಾರಣ್ಯದಲ್ಲಿ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಕಸ ವಿಲೇವಾರಿ ಘಟಕವನ್ನು ಸ್ಥಾಪಿಸಲು ಹೊರಟಿರುವುದನ್ನು ಈಗಾಗಲೇ ಅಲ್ಲಿನ ಜನವಾಸಿಗಳು ವಿರೋಧಿಸಿದ್ದಾರೆ.
 
ಆದರೂ ಕರ್ನಾಟಕ ರಾಜಕಾರಣ ಕೇಂದ್ರಿತ ಬೆಂಗಳೂರಿಗರ ಕಸವನ್ನು ತನ್ನೊಡಲೊಳಗೆ ಹಾಕಿಕೊಳ್ಳಲು ಇಲ್ಲದ ಮನಸ್ಸಿನಿಂದ ಜಯಮಂಗಲೀ ಅಣಿಯಾಗಿದ್ದಾಳೆ! 
 
ಆಧುನಿಕ ಬದುಕಿಗೆ ನಮ್ಮನ್ನು ತೆರೆದುಕೊಳ್ಳುವ ಮುನ್ನ ಆಧುನಿಕತೆ ಸೃಷ್ಟಿಸಬಹುದಾದ ಪ್ರಾಕೃತಿಕ ವಿಕೋಪ-ಪ್ರಕೋಪ-ಪರಿಣಾಮಗಳ ಕುರಿತು ಚಿಂತನ-ಮಂಥನ ನಡೆಸುವ ತುರ್ತು ನಮ್ಮ ಮುಂದಿದೆ. ಪಶ್ಚಿಮದ ನಾಗರಿಕತೆಯನ್ನು (ಬದುಕಿನ ಶೈಲಿ) ಕುರುಡಾಗಿ ಅನುಸರಿಸುವುದು ಬಹಳ ಅಪಾಯಕಾರಿ ಎನ್ನುವ ಎಚ್ಚರದ ನಿಲುವನ್ನು ಹೊಂದಿದ್ದ ಗಾಂಧೀಜಿಯವರನ್ನು ಈ ಹೊತ್ತಿನಲ್ಲಿ ಬಿಬಿಎಂಪಿ ನೆನಪಿಸಿಕೊಂಡರೆ ಒಳಿತು.
 
ಕಸ ವಿಲೇವಾರಿಯನ್ನು ಪಶ್ಚಿಮದವರು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಬಿಬಿಎಂಪಿ ಇದುವರೆಗೂ ನಡೆಸಿರುವ ವಿದೇಶಿ ಅಧ್ಯಯನ ಪ್ರವಾಸಗಳಿಂದ ತಿಳಿದುಕೊಂಡಿಲ್ಲವೆಂದರೆ ಪ್ರವಾಸಕ್ಕೆ ಸುರಿದಿರುವ ಹಣ ವ್ಯರ್ಥವಲ್ಲವೇ?
 
ಇಂತಹ ಮುಗ್ಧ ಪ್ರಾಣಿ-ಪಕ್ಷಿಗಳ ಮುಖವನ್ನಾದರೂ ನೋಡಿ ಕಸ ವಿಲೇವಾರಿ ಘಟಕದ ಸ್ಥಾಪನೆಯ ಸಾಧಕ-ಬಾಧಕಗಳ ಕುರಿತು ಇನ್ನೊಮ್ಮೆ ಚಿಂತನೆ ನಡೆಸುವ ಸೌಜನ್ಯವನ್ನು ಸರ್ಕಾರ ತೋರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ 
 
ಮೈದನಹಳ್ಳಿಯ ಹಾಗೂ ಸುತ್ತಮುತ್ತಲಿನ ಜನಪದರು
ಮೈದನಹಳ್ಳಿಯ ಕಾಡಿನಲ್ಲಿ ಕಸ ಸುರಿಯುವ ಮುನ್ನ ಅಲ್ಲಿನ ಅರಣ್ಯದ ಚೆಲುವನ್ನು, ಸುಂದರ ಕೃಷ್ಣಮೃಗಗಳನ್ನು ಒಮ್ಮೆಯಾದರೂ ಕಣ್ತುಂಬಿಕೊಂಡೆವೆಲ್ಲಾ ಎಂದಾಗ ಜೊತೆಗಿದ್ದ ಮಿತ್ರರೆಲ್ಲ, ‘ಕಸ ಸುರಿದ ಮೇಲೆ ಈ ಕಾಡು ಹೆಂಗೆ ಕಾಣಬಹುದು ಸರ್...’ ಎಂದು ನಿಟ್ಟುಸಿರುಬಿಡುತ್ತಿರುವಾಗಲೇ ನೀಲಕಂಠ ಪುರ್ರನೇ ಹಾರಿ ಹೋಯಿತು. ಚಿತ್ರಗಳು ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT