ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನೋತ್ಸವಕ್ಕೆ ಶಿಲ್ಪ ಸ್ವಾಗತ

15 ದಿನದ ಶಿಬಿರದಲ್ಲಿ ಈ ಶಿಲ್ಪಗಳ ನಿರ್ಮಾಣ
Last Updated 13 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಬೆಂಗಳೂರಿನ ರಾಜಾಜಿನಗರದಲ್ಲಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ  ಕಾರ್ಖಾನೆಯ (ಕೆಎಸ್‌ಡಿಎಲ್‌) ಶತಮಾನೋತ್ಸವದ ಸಂಭ್ರಮದಲ್ಲಿದ್ದು, ಇದರ ಸ್ಮರಣಾರ್ಥ ವಿಶೇಷವಾದ ಶಿಲ್ಪಗಳನ್ನು ಕೆತ್ತಲಾಗಿದೆ.
 
ಶತಮಾನೋತ್ಸವ ಆಚರಣೆ ವೇಳೆ ವಿಭಿನ್ನ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ತೀರ್ಮಾನಿಸಿದ ಶತಮಾನೋತ್ಸವ ಸಮಿತಿಯ ಸದಸ್ಯರು ಶಿಲ್ಪಗಳ ಕುರಿತು ಯೋಚಿಸಿ ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿದ್ದಾರೆ. 
 
‘ಶತಮಾನೋತ್ಸವ ಎಂದಾಕ್ಷಣ ಒಂದೆರಡು ಕಾರ್ಯಕ್ರಮ ಮಾಡಿದರೆ ಮುಗಿದುಹೋಗುತ್ತದೆ. ಅದರಾಚೆಗೆ ಆಚರಣೆ ನೆನಪಿನಲ್ಲಿ ಉಳಿಯುವುದೇ ಇಲ್ಲ. ಆದರೆ ಈ ರೀತಿ ಶಿಲ್ಪಗಳು ಸಾವಿರಾರು ವರ್ಷ ಉಳಿದು ನೆನಪನ್ನು ಸದಾ ಹಸಿರಾಗಿರಿಸುತ್ತವೆ’ ಎನ್ನುವುದು ಇಲ್ಲಿಯ ಉದ್ಯೋಗಿಯೂ ಆಗಿರುವ ನಟ ಕೆಎಸ್‌ಡಿಎಲ್‌ ಚಂದ್ರು ಅವರ ಮಾತು.
 
ಶತಮಾನೋತ್ಸವ ಸಮಿತಿಗೆ ಅಧ್ಯಕ್ಷರಾಗಿದ್ದ  ಕೆಎಸ್‌ಡಿಎಲ್‌ನ ವ್ಯವಸ್ಥಾಪಕ ನಿರ್ದೇಶಕಿ ಶಮ್ಲಾ ಇಕ್ಬಾಲ್‌  ಶಿಲ್ಪಗಳ ಕೆತ್ತನೆಯ ಆಲೋಚನೆಗೆ ಬೆಂಬಲ ನೀಡಿದ್ದಾರೆ.  ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷರಾಗಿರುವ ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪಿ ಮತ್ತು ರಿಜಿಸ್ಟ್ರಾರ್‌ ಎಚ್‌.ವಿ.ಇಂದ್ರಮ್ಮ ಅವರು ಕೆಎಸ್‌ಡಿಎಲ್ ಕಾರ್ಯಕ್ರಮಕ್ಕೆ ಸಾಥ್‌ ನೀಡಿದ್ದಾರೆ.

ಶಿಲ್ಪಕಲಾ ಅಕಾಡೆಮಿಯಿಂದ ನಡೆದ 15 ದಿನದ ಶಿಬಿರದಲ್ಲಿ ಈ ಶಿಲ್ಪಗಳನ್ನು ನಿರ್ಮಿಸಲಾಗಿದೆ. ರಾಜ್ಯದ ವಿವಿಧ ಭಾಗದ 15 ಕಲಾವಿದರು ಇದರಲ್ಲಿ ಭಾಗವಹಿಸಿದ್ದಾರೆ. ಇವರಿಗೆ 15 ಸಹಾಯಕರು ನೆರವಾಗಿದ್ದಾರೆ. 
 
 
ಕೆಎಸ್‌ಡಿಎಲ್ ನಿರ್ಮಾತೃಗಳಾದ ನಾಲ್ವಡಿ ಕೃಷ್ಣರಾಜ ಒಡೆಯರ್‌, ವಿಶ್ವೇಶ್ವರಯ್ಯ, ಎಸ್‌.ಜಿ.ಶಾಸ್ತ್ರಿ, ಕೆಎಸ್‌ಡಿಎಲ್‌್ ಲಾಂಛನ ನಿರ್ಮಿಸಬೇಕು ಎನ್ನುವುದು ಕೆಎಸ್‌ಡಿಎಲ್‌ ಪರಿಕಲ್ಪನೆ. ನವಿಲುಗಳ ನರ್ತನ, ಕಸ್ತೂರಿ ಮೃಗ, ಪರಿಸರ, ಹೂವು ಮೊಗ್ಗು, ಸೋಪ್‌ ತಯಾರಿಗೆ ಬಳಸುವ ವಸ್ತುಗಳು, ಬುದ್ಧ ಇತ್ಯಾದಿ ಶಿಲಾಕೃತಿಗಳನ್ನು ಶಿಬಿರಾರ್ಥಿಗಳು ತಮ್ಮ ಕಲ್ಪನೆಗಳ ಪ್ರಕಾರ ರಚಿಸಿದ್ದಾರೆ.  
 
ಈ ಶಿಲ್ಪಕಲೆಗಳನ್ನು ‘ಸೋಪ್ ಸ್ಟೋನ್‌’ ನಿಂದ ನಿರ್ಮಿಸಲಾಗಿದೆ. ಈ ಕಲ್ಲುಗಳನ್ನು ಚಾಮರಾಜನಗರದಿಂದ ತರಿಸಲಾಗಿದೆ. ಕೆತ್ತನೆ ವೇಳೆ ಮೆತ್ತಗಿರುವ ಇವು ಕಾಲನಂತರದಲ್ಲಿ ಗಟ್ಟಿಯಾಗುತ್ತವೆ. 
 
‘100 ವರ್ಷವಾಗಿರುವ ಕಾರ್ಖಾನೆ ಇಷ್ಟು ವರ್ಷಗಳ ಕಾಲ ಎಷ್ಟೊಂದು ಜನರಿಗೆ ಅನ್ನ ನೀಡಿದೆ, ಆಶ್ರಯ ನೀಡಿದೆ ಎಂಬುದನ್ನು ನನ್ನ ಶಿಲ್ಪದಲ್ಲಿ ತೋರಿಸಿದ್ದೇನೆ. ಕಲಾಕೃತಿಯಲ್ಲಿರುವ ಅಲ್ಯುಮಿನಿಯಂ ಪಾತ್ರೆ ಮತ್ತು ಸೌಟು ಅದನ್ನೇ ಸಾಂಕೇತಿಕವಾಗಿ ಬಿಂಬಿಸುತ್ತದೆ. ಸಾರ್ವಜನಿಕ ರಂಗದ ಕಾರ್ಖಾನೆಗಳು ಒಂದು ಸಮುದಾಯವನ್ನು ಸೃಷ್ಟಿಸುತ್ತವೆ.

ಸಾವಿರಾರು ಜನಸಮುದಾಯ ಇಲ್ಲಿ ಸೇರುತ್ತದೆ. ಕಾಲಾನಂತರದಲ್ಲಿ ಇತಿಹಾಸವನ್ನು ಕಳೆದುಕೊಳ್ಳುವ ಇವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನನ್ನ ಈ ಕಲಾಕೃತಿಯ ಎತ್ತರ 6 ಅಡಿ, ಅಗಲ 4 ಅಡಿ. ಸುತ್ತಲೂ ಕೆತ್ತನೆ ಮಾಡಲಾಗಿದೆ’ ಎನ್ನುತ್ತಾರೆ ಹಿರಿಯ ಕಲಾವಿದೆ ಶ್ಯಾಮಲಾ ನಂದೀಶ್‌.
 
‘100 ವರ್ಷವಾಗಿರುವ ಸಾರ್ವಜನಿಕ ರಂಗದ ಕಾರ್ಖಾನೆಯನ್ನು  ಜನರ ನೆನಪಿನಲ್ಲಿ ಉಳಿಸುವುದು  ಹೇಗೆ ಎಂಬ ಪರಿಕಲ್ಪನೆಯೊಂದಿಗೆ ಕಲಾಕೃತಿಗಳನ್ನು ನಿರ್ಮಿಸಲಾಗಿದೆ. ಕಾರ್ಖಾನೆಯ ಪರಿಸರ ಮತ್ತು ಇಲ್ಲಿ ತಯಾರಾಗುವ ಉತ್ಪನ್ನಗಳಿಗೆ ಪೂರಕ ಶಿಲ್ಪಗಳಿವೆ’ ಎನ್ನುತ್ತಾರೆ  ಶಿಬಿರ ಸಂಚಾಲಕ  ಶಿವಪ್ರಸಾದ್‌.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT