ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯಲ್ಲೂ ತಂಪುನೀಡುವ ಮಳೆನೀರು

Last Updated 13 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಎನ್.ಜೆ. ದೇವರಾಜರೆಡ್ಡಿ
ಮಳೆಗಾಲದಲ್ಲಿ ಬಿದ್ದಂತಹ ಮಳೆನೀರು ವ್ಯರ್ಥವಾಗಿ ಹರಿದು ಕೃಷಿ ಭೂಮಿಯಿಂದ ಹೊರಹೋಗುತ್ತಿದೆ. ಅಂತಹ ನೀರನ್ನು ಮಳೆಗಾಲದ ದಿನಗಳಲ್ಲಿ ಸಂಗ್ರಹಿಸಿ ಬೇಸಿಗೆ ಕಾಲದಲ್ಲಿ ಬಳಸುವಂತಹ ಹೊಸ ವಿಧಾನ ಈಗ ಲಭ್ಯವಿದೆ. ಪ್ರತಿಯೊಬ್ಬ ರೈತರು ಈ ತಂತ್ರಜ್ಞಾನವನ್ನು ಅವರ ತೋಟದಲ್ಲಿ ಅಳವಡಿಸಿಕೊಂಡರೆ ನೀರಿನ ಸಮಸ್ಯೆ ಬರುವುದಿಲ್ಲ. 
 
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕು ಲಿಂಗದಹಳ್ಳಿ ಗ್ರಾಮದ  ಸಿದ್ದಾರ್ಥರವರ 24 ಎಕರೆ ಅಡಿಕೆ ತೋಟ ನಳನಳಿಸಲು ಕಾರಣ ಸುಮಾರು ಒಂದು ಕೋಟಿ ಲೀಟರ್ ಸಾರ್ಮಥ್ಯದ ಬೃಹತ್ ಮಳೆ ನೀರು ಸಂಗ್ರಹಣಾ ಟ್ಯಾಂಕ್. ಇವರಿಗೆ ಈ ಮೊದಲು ಬೇಸಿಗೆ ದಿನಗಳಲ್ಲಿ ಪ್ರತಿ ವರ್ಷ ನಾಲ್ಕೈದು ಕೊಳವೆ ಬಾವಿ ಕೊರೆಸುವುದು ಸಾಮಾನ್ಯವಾಗಿತ್ತು. ಆದರೂ ನೀರಿನ ಕೊರತೆಯಿಂದಾಗಿ ಅಡಿಕೆ ಇಳುವರಿ ಕಡಿಮೆಯಾಗುತ್ತಿತ್ತು. ಈಗ ಅವರು ನಿಶ್ಚಿಂತರಾಗಿದ್ದಾರೆ. 
 
ಹಾಗಿದ್ದರೆ ಅವರು ಹೇಗೆ ಟ್ಯಾಂಕ್‌ ನಿರ್ಮಾಣ ಮಾಡಿದ್ದಾರೆ ಎನ್ನುವುದನ್ನು ಗಮನಿಸೋಣ. 160 ಅಡಿ  ಉದ್ದ, 150 ಅಡಿ ಅಗಲ ಹಾಗೂ 86 ಅಡಿ ಆಳದ ಟ್ಯಾಂಕ್‌ ನಿರ್ಮಿಸಿದ್ದಾರೆ. ಇದಕ್ಕೆ ಜೆಸಿಬಿಯ ನೆರವು ಪಡೆದಿದ್ದಾರೆ. ಭೂಮಿಯಿಂದ ಒಳಗೆ 60 ಅಡಿ ಹಾಗೂ ನೆಲದ ಮೇಲೆ 8 ಅಡಿ ಎತ್ತರ ಬದು ನಿರ್ಮಿಸಿದ್ದಾರೆ. ಇದಕ್ಕೆ ಜಿಯೊ ಮೆಂಬ್ರೋನ್‌ ಎಚ್‌.ಡಿ.ಪಿ.ಇ ಹಾಳೆ (Geo Membrone  HDPE sheet) ಹಾಸಿದ್ದಾರೆ. ಈ ಹಾಳೆ 500 ಜಿಎಸ್ಎಂ ಇದ್ದರೆ ಹೆಚ್ಚಿನ ಕಾಲ ಬಾಳಿಕೆ ಬರುತ್ತದೆ. 
 
ಈ ರೀತಿ ಟ್ಯಾಂಕ್ ನಿರ್ಮಿಸುವಾಗ ಭೂಮಿಯಲ್ಲಿ ಕಲ್ಲುಗಳು ಬಂದರೆ ಹೊರಗಡೆಯಿಂದ ಮೃದುವಾದ ಮಣ್ಣನ್ನು ತಂದು ಒಳಮುಖ ಇಳಿಜಾರು ಇರುವಂತೆ, ಅಂದರೆ ಸಾಧ್ಯವಾದರೆ 45 ಡಿಗ್ರಿ ಇಳಿಜಾರು ಇರುವಂತೆ ನೋಡಿಕೊಳ್ಳಬೇಕು. ಸಾಧ್ಯವಾದಷ್ಟು ದೂಳು ಮಿಶ್ರಿತ ಮಣ್ಣಿನಿಂದ ಲೇಪನ ಮಾಡಬೇಕು. ಮೇಲೆ ಹಾಸುವ ಜಿಯೊ ಮೆಂಬ್ರೋನ್‌ ಎಚ್‌.ಡಿ.ಪಿ.ಇ ಹಾಳೆಗೆ ಯಾವುದೇ ವಿಧವಾದ ಕಲ್ಲಿನ ಚೂರುಗಳು ಚುಚ್ಚುವಂತಿರಬಾರದು.
 
ಇಂತಹ ಟ್ಯಾಂಕ್‌ಗಳನ್ನು ಮುಳ್ಳು ಕಲ್ಲುಗಳಿಂದ ಕೂಡಿದ ಪ್ರದೇಶದಲ್ಲಿ ಮಾಡುವಂತಿಲ್ಲ, ಟ್ಯಾಂಕ್ ಸುತ್ತಲೂ ಭದ್ರವಾದ ಬೇಲಿ ನಿರ್ಮಿಸಬೇಕು, ಯಾವುದೇ ಪ್ರಾಣಿಗಳು ಸಾರ್ವಜನಿಕರು ಸುಲಭವಾಗಿ ಪ್ರವೇಶಿಸುವಂತಿರಬಾರದು. ಜಿಯೊ ಮೆಂಬ್ರೋನ್‌ ಎಚ್‌.ಡಿ.ಪಿ.ಇ ಹಾಳೆ ಇಲಿ, ಹೆಗ್ಗಣ ಮುಂತಾದುವುಗಳಿಂದ ಮುಕ್ತವಾಗಿರಲು ಶೀಟ್ ಹೊರಭಾಗದಲ್ಲಿ ಔಷಧಿ ಪುಡಿ ಹಾಕಬೇಕಾಗುತ್ತದೆ.
 
ಟ್ಯಾಂಕ್‌ನಲ್ಲಿ ನೀರು ತುಂಬಿಸಿ ಹೆಚ್ಚು ದಿನಗಳ ಕಾಲ ಸಂಗ್ರಹಿಸುವಾಗ ಉತ್ತಮ ಶೇಡ್ ನೆಟ್‌ನಿಂದ ಸೂರ್ಯ ಕಿರಣಗಳಿಂದ ಮುಕ್ತವಾಗಿರುವ ಹಾಗೆ ರಕ್ಷಣೆ ಕೊಟ್ಟರೆ ನೀರು ಆವಿಯಾಗುವುದನ್ನು ತಡೆಗಟ್ಟಬಹುದು. ಟ್ಯಾಂಕ್ ಪ್ರದೇಶದಲ್ಲಿ ಸೂಕ್ತವಾಗಿ ಗೇಟ್‌ಹಾಕಿ ಭದ್ರವಾಗಿ ಬೀಗ ಹಾಕುವಂತಿರಬೇಕು, ಆ ಪ್ರದೇಶದಲ್ಲಿ ಸಾರ್ವಜನಿಕರು ಈಜಾಡುವುದನ್ನು ನಿರ್ಬಂಧಿಸಬೇಕು, ಸೂಕ್ತವಾದ ಮಾಹಿತಿ ಬರೆಸಬೇಕು, ಟ್ಯಾಂಕ್‌ನಲ್ಲಿ ಕೊನೆ ಪಕ್ಷ ಒಂದು ಮೀಟರ್‌ನಷ್ಟು ಎತ್ತರ ನೀರು ಇರುವಂತೆ ನೋಡಿಕೊಂಡರೆ ಶೀಟ್ ದೀರ್ಘ ಕಾಲ ಬಾಳಿಕೆ ಬರುತ್ತದೆ.
 
3 ರಿಂದ4 ಇಂಚು ಎತ್ತರ ಮರಳು ಬೇಕಾದರೂ ಹಾಕಬಹುದು, ಈ ಬೃಹತ್ ಕೆರೆಗಳಲ್ಲಿ, ಮೀನು ಮರಿಗಳನ್ನು ಬೇಕಾದರೂ ಸಾಕಬಹುದು, ಸಾಧ್ಯವಾದಷ್ಟು ಇದರ ಮೇಲೆ ಚಪ್ಪಲಿ ಹಾಕಿಕೊಂಡು ಓಡಾಡುವಂತಿಲ್ಲ, ಇಂತಹ ಟ್ಯಾಂಕ್‌ಗಳನ್ನು ನಿರ್ಮಿಸುವಾಗ ಹರಿದು ಬರುವಂತಹ ಮಳೆ ನೀರನ್ನು ನೇರವಾಗಿ ತುಂಬಿಸುವುದಕ್ಕೆ ಬರುವುದಿಲ್ಲ. ಏಕೆಂದರೆ ಮಳೆ ನೀರು ಕಸ, ಕಡ್ಡಿ ಮಣ್ಣಿನಿಂದ ಕೂಡಿರುವುದರಿಂದ ಶೋಧಿಸಿ ಸಾಧ್ಯವಾದಷ್ಟು ನೀರು ಬಿಳಿ ಬಣ್ಣ ಇದ್ದರೆ ಉತ್ತಮ.
 
ಟ್ಯಾಂಕ್ ಎತ್ತರ ಜಾಗದಲ್ಲಿ ಇದ್ದರೆ ಮಳೆ ನೀರನ್ನು ಪಂಪ್ ಮಾಡಿ ತುಂಬಿಸಬಹುದು. ಕೆರೆ, ಕಟ್ಟೆ, ಕಾಲುವೆ, ಟ್ಯಾಂಕರ್, ಬೋರ್‌ವೆಲ್ ಯಾವುದೇ ನೀರಿನ ಮೂಲಗಳನ್ನು ಬಳಸಿ ಮಳೆಗಾಲದ ದಿನಗಳಲ್ಲಿ ಸಂಗ್ರಹಿಸಿ ಕೊಂಡರೆ ಬೇಸಿಗೆ ದಿನಗಳಲ್ಲಿ ಆಪತ್ಕಾಲಕ್ಕೆ ಅನುಕೂಲವಾಗುತ್ತದೆ. ಒಂದು ಕೋಟಿ ಲೀಟರ್ ನೀರು ಸಂಗ್ರಹಣಾ ವ್ಯವಸ್ಥೆಗೆ ಸಿದ್ಧಾರ್ಥ ಅವರು ಮಾಡಿರುವ ಖರ್ಚುವೆಚ್ಚ ಹೀಗಿದೆ: ಜೆ.ಸಿ.ಬಿ.ಗೆ ₹2ಲಕ್ಷ ಹಾಗೂ ಹಾಳೆಗೆ ₹1.9ಲಕ್ಷ. 
 
ಇತ್ತೀಚಿನ ದಿನಗಳಲ್ಲಿ ಪಾಲಿ ಹೌಸ್ ಕೃಷಿ ತುಂಬಾ ಜನರು ಮಾಡುತ್ತಿದ್ದಾರೆ. ಅವರು ಪಾಲಿಹೌಸ್ ಮೇಲೆ ಬೀಳುವಂತಹ ಮಳೆ ನೀರನ್ನು ಬೃಹತ್ ಪೈಪುಗಳಿಂದ ತಂದು ಈ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿಟ್ಟುಕೊಂಡರೆ ಬೋರ್‌ವೆಲ್ ಇಲ್ಲದೆ ತೋಟಗಾರಿಕೆ ಮಾಡಬಹುದು.
 
ಬೆಂಗಳೂರಿನಂತಹ ಪ್ರದೇಶದಲ್ಲಿ ವಾರ್ಷಿಕ ಸರಾಸರಿ 900 ಮಿ.ಮಿ. ಮಳೆ ಎಂದು ಪರಿಗಣನೆಗೆ ತೆಗೆದುಕೊಂಡು ಮಳೆನೀರನ್ನು ಸಂಗ್ರಹಿಸುವುದೇ ಆದಲ್ಲಿ ಒಂದು ಎಕರೆ ಪಾಲಿಹೌಸ್ ಚಾವಣಿಯಿಂದ ಸಿಗುವುದು ಸುಮಾರು 36 ಲಕ್ಷ ಲೀಟರ್ ನೀರು. ಈ ಮಳೆ ನೀರು ಪರಿಶುದ್ಧವಾಗಿರುತ್ತದೆ. ಫ್ಲೋರೈಡ್, ನೈಟ್ರೇಟ್‌ ಅಂಶಗಳಿಂದ ಮುಕ್ತವಾಗಿರುವ ಜೊತೆಗೆ ನೀರು ಗಡುಸಾಗಿರದೆ ಸಿಹಿಯಾಗಿರುವ ಕಾರಣ ಗಿಡಗಳಿಗೆ ಬೇಸಿಗೆ ದಿನಗಳಲ್ಲಿ ತುಂಬಾ ಪ್ರಯೋಜನಕಾರಿ.
 
ಹತ್ತು ಇಪ್ಪತ್ತು ಎಕರೆ ತೋಟ ಮಾಡಿರುವ ರೈತರು ನೀರಿಗೊಸ್ಕರ 7–8 ಕಿ.ಮೀಟರ್ ದೂರದಿಂದ ನೀರನ್ನು ತರುವ ಸಂಬಂಧ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಈ ವಿಧವಾದ ಹೊಸ ತಾಂತ್ರಿಕ ಬೃಹತ್ ನೀರು ಟ್ಯಾಂಕ್ ನಿರ್ಮಿಸಿದರೆ ಬೇಸಿಗೆಯಲ್ಲಿ ನೀರಿನ ನಿಶ್ಚಿಂತೆಯಿಂದ ಇರಬಹುದು. 
 
ಪ್ರತಿಯೊಬ್ಬ ರೈತರು ಜಮೀನಿನಲ್ಲಿ ನೀರಿನ ಲಭ್ಯತೆ  ಎಷ್ಟು ಎಕರೆ ಕೃಷಿ ಭೂಮಿ ಎಲ್ಲವನ್ನು ಪರಿಗಣಿಸಿ ಬೇಸಿಗೆ ದಿನಗಳಲ್ಲಿ ನೀರಿನ ಬಳಕೆಗೆ ತಕ್ಕಂತೆ ಟ್ಯಾಂಕ್ ನಿರ್ಮಿಸಬೇಕಾಗುತ್ತದೆ. 
 
ಈ ವಿಧವಾದ ಟ್ಯಾಂಕ್‌ಗಳು ಮಹಾರಾಷ್ಟ್ರ, ಗುಜರಾತ್ ರಾಜ್ಯದಲ್ಲಿ ಹೆಚ್ಚಿನ ರೈತರು ಕೃಷಿಗೆ, ಕಾರ್ಖಾನೆಗಳಿಗೆ, ಸಾರ್ವಜನಿಕ ಉಪಯೋಗಕ್ಕೆ ನಿರ್ಮಿಸಿಕೊಳ್ಳುತ್ತಿದ್ದಾರೆ. 
 
ವಿಜಯಪುರ ಜಿಲ್ಲೆಯಲ್ಲಿ ಡಾ. ಮುದನೂರ ಅವರು 20 ಎಕರೆ ತೋಟಗಾರಿಕೆ ಬೆಳಗೆ ಬೇಕಾದ ಎರಡು ಎಕರೆ ಟ್ಯಾಂಕ್ ನಿರ್ಮಿಸಿ ಮಾದರಿಯಾಗಿದ್ದಾರೆ. ಇಂತಹ ವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ಬೇಸಿಗೆಕಾಲದಲ್ಲಿ ನೀರಿನ ಬವಣೆ ಇಲ್ಲದೆ ತಮ್ಮ ಕೃಷಿ ಚಟುವಟಿಕೆಯನ್ನು ಮತ್ತು ಮನೆಗೆ ಬಳಸುವ ನೀರಿನ ಪರದಾಟವಿಲ್ಲದೆ ನೆಮ್ಮದಿಯಿಂದ ಇರುವುದಲ್ಲದೆ ಮತ್ತು ಲಾಭವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಲೇಖಕರ ಸಂಪರ್ಕ ಸಂಖ್ಯೆ 9448125498.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT