ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿಗಳಲ್ಲಿ ಬಿಳಿಜಾಲಿ ಕಾಯಿ ವಿಷಬಾಧೆ

Last Updated 13 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಡಾ. ಎನ್.ಬಿ.ಶ್ರೀಧರ 
ಸಸ್ಯಗಳನ್ನೇ ತಿಂದು ಬದುಕುವ ಕುರಿ ಮತ್ತು ಆಡುಗಳಿಗೆ ಕೆಲವೊಮ್ಮೆ ಅವುಗಳೇ ಜೀವಕ್ಕೆ ಮಾರಕವಾಗುವುದುಂಟು. ಇಂತಹ ಸಸ್ಯಗಳಲ್ಲಿ ಬಿಳಿಜಾಲಿ ಅಥವಾ ಟಪಾಲು ಕಾಯಿಯ ವಿಷಬಾಧೆ ಸಾಮಾನ್ಯ. ಆಂಗ್ಲ ಭಾಷೆಯಲ್ಲಿ ಈ ಗಿಡವನ್ನು ಅಕೇಶಿಯಾ ಲ್ಯೂಕೋಫ್ಲಿಯಾ ಎ೦ದು ಕರೆಯುತ್ತಾರೆ. ಈ ಗಿಡವನ್ನು ನಾಯಿಬೇಲ, ಸಾರಾಯಿ ಬೇಲ, ಕಾಡುಹುರುಳಿಕಾಯಿ, ತೊಪಾಲೆ, ತುಂಬಿ ಎಂದೂ ಕರೆಯುತ್ತಾರೆ. 
 
ಕುರಿಗಳ ಜೀವಕ್ಕೆ ಮಾರಕವಾಗುವ ಹಲವು ಸಸ್ಯಗಳಲ್ಲಿ ಈ ಸಸ್ಯದ ಕಾಯಿಯೂ ಒಂದು. ಎಲ್ಲ ಸಸ್ಯಗಳೂ ಆಡು ಅಥವಾ ಕುರಿ ಮಂದೆಗೆ ಆಹಾರವಾದರೂ ಕೆಲವೊಮ್ಮೆ ಕೆಲವು ಸಸ್ಯಗಳನ್ನು ಜಾಸ್ತಿಯಾಗಿ ತಿಂದಲ್ಲಿ ಅವು ವಿಷವಾಗಿ ಪರಿಣಮಿಸಿ ಸಾವು ಖಚಿತ. ಆಡು, ಕುರಿ ಅಥವಾ ಇತರ ಜಾನುವಾರುಗಳಿಗೆ ವಿಷಕಾರಿ ಸಸ್ಯಗಳನ್ನು ಗುರುತಿಸಿ ಅವುಗಳನ್ನು ತಿನ್ನದೇ ಇರುವ ಸ್ವಭಾವ ಇರುತ್ತದೆ ಎಂದು ಹೇಳಲಾಗುತ್ತಿದೆಯಾದರೂ ವೈಜ್ಞಾನಿಕ ಆಧಾರ ಇದಕ್ಕೆ ಸದ್ಯಕ್ಕಿಲ್ಲ.

ಸಾಮಾನ್ಯವಾಗಿ ಕೆಲವು ವಿಷಕಾರಿ ಸಸ್ಯಗಳು ಒಗರಾಗಿರುತ್ತಿದ್ದು ಪ್ರಾಣಿಗಳು ಅವುಗಳನ್ನು ತಿನ್ನಲಾರವು. ಇದಕ್ಕೆ ಉದಾಹರಣೆಯೆಂದರೆ ಕಾಸರಕ ಗಿಡ. ಇದರ ಎಲೆ ಮತ್ತು ಇತರ ಭಾಗ ಬಹಳ ಒಗರಾಗಿರುತ್ತಿದ್ದು ಜಾನುವಾರು ಮತ್ತು ಕುರಿಗಳು ಇವುಗಳನ್ನು ತಿನ್ನಲಾರವು. ಇವುಗಳ ಬೀಜದಲ್ಲಿ ವಿಷಕಾರಕ ಅಂಶವು ಹೇರಳವಾಗಿದ್ದರೂ ಬೀಜದ ಹೊರಪದರ ತುಂಬಾ ಗಟ್ಟಿಯಾಗಿರುವುದರಿಂದ ಕಾಸರಕದ ಹಣ್ಣನ್ನು ತಿಂದರೂ ಬೀಜದ ತಿರುಳಿನಲ್ಲಿರುವ ಅಂಶ ಹೊಟ್ಟೆ ಸೇರದೇ ಇರುವುದರಿಂದ ಇವು ವಿಷಕಾರಿಯಾಗಲಿಕ್ಕಿಲ್ಲ. ಇನ್ನು ಕೆಲ ಸಸ್ಯಗಳು ದುರ್ವಾಸನೆ ಹೊಂದಿರುತ್ತವೆ.
 
ಇದರಿಂದ ಜಾನುವಾರು ಅಥವಾ ಕುರಿಗಳಿಗೆ ಇಷ್ಟವಾಗುವುದಿಲ್ಲ. ಇದಕ್ಕೆ ಉದಾಹರಣೆಯೆಂದರೆ ಚದುರಂಗ ಅಥವಾ ಲಂಟಾನಾ ಗಿಡ. ಆದರೆ ಬೇರೆ ಮೇವು ಲಭ್ಯವಿಲ್ಲದಿದ್ದಲ್ಲಿ ಅಥವಾ ಬರಗಾಲದಲ್ಲಿ ಆಡು ಕುರಿಗಳು ವಿಷಕಾರಿ ಗಿಡಗಳನ್ನು ತಿನ್ನುವುದುಂಟು. ಇತ್ತೀಚೆಗೆ ಕೊಪ್ಪಳ ಮತ್ತಿತರ ಜಿಲ್ಲೆಯಲ್ಲಿ ಹಲವು ಕುರಿಗಳು ಈ ಗಿಡವನ್ನು ತಿಂದು ಮೃತಪಟ್ಟಿವೆ ಎಂಬ ಬಗ್ಗೆ ವರದಿಗಳಿವೆ.
 
ಕೆಲವು ಸಸ್ಯಗಳು ವರ್ಷದ ಒಂದು ಕಾಲಮಾನದಲ್ಲಿ ಮಾತ್ರ ವಿಷಕಾರಿ ಗುಣವನ್ನು ಹೊಂದುವ ಸ್ವಭಾವ ಹೊಂದಿದ್ದು, ಇದರಲ್ಲಿ ಬಿಳಿಜಾಲಿ ಗಿಡವೂ ಸೇರುತ್ತದೆ. ಬಿಳಿಜಾಲಿ ಗಿಡದ ವಿವಿಧ ಭಾಗಗಳನ್ನು ಆಡು ಮತ್ತು ಕುರಿಗಳಿಗೆ ಆಹಾರವನ್ನಾಗಿ ವಿವಿಧ ಕಾಲಗಳಲ್ಲಿ ಆಹಾರವನ್ನಾಗಿ ಉಪಯೋಗಿಸುತ್ತಾರೆ. ಆದರೆ ಈ ಮರದ ಕಾಯಿಗಳು ಮಾತ್ರ ಆಡು ಕುರಿಗಳಿಗೆ ವಿಷವಾಗಿ ಪರಿಣಮಿಸುತ್ತವೆ.
 
ಅದೂ ಕಾಯಿಯಲ್ಲಿನ ನೀರಿನ ಅಂಶ ಕಡಿಮೆಯಾಗಿ ಒಣಗುತ್ತಾ ಬಂದಂತೆ ಅದರಲ್ಲಿನ ವಿಷದ ಸಾಂದ್ರತೆ ಜಾಸ್ತಿಯಾಗುತ್ತದೆ. ಕಾರಣ 3–5 ಬಿಳಿಜಾಲಿ ಕಾಯಿಗಳನ್ನು ತಿಂದರೆ ಕುರಿಯಲ್ಲಿ ಸಾವು ಸಂಭವಿಸುತ್ತದೆ. ಈ ಕಾಯಿಯಲ್ಲಿ ಸಯನೈಡ್ ಅಂಶವಿದ್ದು, ಇದರಿಂದ ಶರೀರದ ಜೀವಕೋಶಗಳಿಗೆ ಆಮ್ಲಜನಕದ ಕೊರತೆಯಾಗಿ ಮೆದುಳಿನ ಜೀವಕೋಶಗಳು ನಿಷ್ಕ್ರಿಯಗೊಂಡು ಪ್ರಾಣಿ ಸಾವನ್ನಪ್ಪುತ್ತದೆ.
 
ವರ್ಷದ ಎಲ್ಲಾ ಋತುಗಳಲ್ಲಿ ಈ ಗಿಡದ ತೊಪ್ಪಲು, ಸೊಪ್ಪನ್ನು ಕುರಿಗಳು ತಿಂದರೂ ಗಿಡದ ಒಣಗಿದ ಕಾಯಿಗಳನ್ನು ತಿಂದಾಗ ಮಾತ್ರ ಸಮಸ್ಯೆಯಾಗುತ್ತದೆ. ಕಾರಣ, ರೈತರು ಈ ಕುರಿತು ಎಚ್ಚರ ವಹಿಸಿದಲ್ಲಿ ಮತ್ತು ಸೂಕ್ತ ಸಮಯದಲ್ಲಿ ತಜ್ಞ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಿದಲ್ಲಿ ಕುರಿ ಆಡುಗಳನ್ನು ವಿಷಬಾಧೆಯಿಂದ ಮುಕ್ತಗೊಳಿಸಬಹುದು.
ಲೇಖಕರು ಪ್ರಧಾನ ಸಂಶೋಧಕರು, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ
 
ಬಾಟಲಿ ನೀರು, ಗಿಡಗಳು ಹಸಿರು
ಸೋಮು ಕುದರಿಹಾಳ

ಕೈತೋಟಗಳಲ್ಲಿರುವ ಹೂಗಿಡಗಳು, ತರಕಾರಿಗಳ ಬಳ್ಳಿಗಳು, ಶೋ ಗಿಡಗಳು ಮನೆಯ ಪುಟ್ಟ ಬಯಲಿನಲ್ಲಿ ನೆಟ್ಟ ಗಿಡಗಳು ಹಸಿರು ಹಸಿರಾಗಿ ನಳನಳಿಸುತ್ತಿರಬೇಕೆ? ನೀರು ಕಡಿಮೆಯಿದ್ದರೂ ಗಿಡದ ಬುಡದಲ್ಲಿನ ತೇವಾಂಶ ಬೇಗ ಆರಿಹೋಗಬಾರದೆ? ಇದಕ್ಕೊಂದು ಸುಲಭೋಪಾಯವಿದೆ. ಪ್ಲಾಸ್ಟಿಕ್‌ ಬಾಟಲಿ ತೆಗೆದುಕೊಳ್ಳಿ. ಬಾಟಲಿಯ ತಳವನ್ನು ಕತ್ತರಿಸಿ.

ಗಿಡಗಳ ಪಕ್ಕದಲ್ಲಿ ಒಂದು ಚಿಕ್ಕ ಕಟ್ಟಿಗೆ ನಿಲ್ಲಿಸಿ ಆ ಕಟ್ಟಿಗೆಗೆ ಬಾಟಲಿಯನ್ನು ತಲೆಕೆಳಗು ಮಾಡಿ ಕಟ್ಟಿ. ಗಿಡಗಳಿಗೆ ಅಗತ್ಯವಿರುವ ನೀರಿನ ಪ್ರಮಾಣಕ್ಕನುಗುಣವಾಗಿ ಚಿಕ್ಕ ಬಾಟಲಿಗಳನ್ನು ಚಿಕ್ಕ ಗಿಡಗಳಿಗೆ ದೊಡ್ಡ ಬಾಟಲಿಗಳನ್ನು ದೊಡ್ಡ ಗಿಡಗಳಿಗೆ ಕಟ್ಟಿ. ಬಾಟಲಿಯ ಮುಚ್ಚಳಕ್ಕೆ ಚಿಕ್ಕ ರಂಧ್ರ ಮಾಡಿ. ಇದರಿಂದ ಗಿಡಗಳಿಗೆ ಹನಿಹನಿಯಾಗಿ ನೀರು ಬೀಳುವಂತೆ ಮಾಡಬಹುದು.

ಮನೆಯಿಂದ ಒಂದೆರಡು ದಿನ ಹೊರಗೆ ಹೋಗುವಾಗಲೂ ಈ ಉಪಾಯ ಅನುಕೂಲಕ್ಕೆ ಬರುತ್ತದೆ. ಈ ವಿಧಾನವನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಂಟೋಜಿ ಲಕ್ಷ್ಮೀಕ್ಯಾಂಪಸ್‌ನಲ್ಲಿ ಅಳವಡಿಸಿಕೊಳ್ಳಲಾಗಿದೆ. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT