ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಸ್ಥೆ ನಿವಾರಿಸಲಿ

Last Updated 13 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಬಳ್ಳಕಟ್ಟೆಯ ವಿದ್ಯಾವಾರಿಧಿ ಇಂಟರ್‌ನ್ಯಾಷನಲ್ ವಸತಿ ಶಾಲೆಯಲ್ಲಿ ಊಟ ಸೇವಿಸಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿರುವುದು ಪೋಷಕ ವರ್ಗವನ್ನು ಬೆಚ್ಚಿಬೀಳಿಸಿದೆ. ತಾವಿರುವ ಕಡೆ ಶಾಲಾ– ಕಾಲೇಜು ಇಲ್ಲದಿರುವುದರಿಂದಲೋ ಅಥವಾ  ‘ಹತ್ತಿರ ಇದ್ದರೆ ಮಕ್ಕಳು ಓದುವುದಿಲ್ಲ’ ಎಂದು ಭಾವಿಸಿಯೋ ಪೋಷಕರು ಇಂತಹ ವಸತಿ ಶಾಲೆಗಳನ್ನು ಅವಲಂಬಿಸುತ್ತಾರೆ.

ಆದರೆ ಬಹಳಷ್ಟು ವಸತಿ ಶಾಲೆಗಳು ವ್ಯವಸ್ಥಿತವಾಗಿರುವುದಿಲ್ಲ. ಅಕ್ಕಿ, ಬೇಳೆಯಲ್ಲಿ ಹುಳು ಇದ್ದರೂ ಅದನ್ನು ಶೋಧಿಸುವ ಕಾರ್ಯ ಸರಿಯಾಗಿ ನಡೆಯುವುದಿಲ್ಲ. ಆಹಾರ ‘ಶುಚಿ–ರುಚಿ’ ಇಲ್ಲದಿದ್ದರೂ ಮಕ್ಕಳು ತಿನ್ನಬೇಕಾಗುತ್ತದೆ. ತಂಗಳ ಅನ್ನಕ್ಕೆ ಒಗ್ಗರಣೆ ಹಾಕಿ ಚಿತ್ರಾನ್ನ ಮಾಡಿ ಬಡಿಸುವುದು, ರಾತ್ರಿಯ ಸಾರನ್ನು ಬಿಸಿ ಮಾಡಿ ಬಡಿಸುವುದು ನಡೆಯುತ್ತಿರುತ್ತದೆ.

ಪ್ರತಿರೋಧಿಸಿದರೆ ಅಂತಹ ಮಕ್ಕಳ ಬಗ್ಗೆ ‘ಇವನ ನಡತೆ ಸರಿ ಇಲ್ಲ’ ಎಂದು ಮುಖ್ಯಸ್ಥರ ಬಳಿ ದೂರುವುದು  ಅಥವಾ ಹಾಸ್ಟೆಲಿನಿಂದ ಹೊರಹಾಕುತ್ತೇವೆಂದು ಹೆದರಿಸುವುದು ನಡೆಯುತ್ತದೆ.

ಬೆಳೆಯುವ ಮಕ್ಕಳು ಹೊಟ್ಟೆ ತುಂಬ ತಿನ್ನದೆ  ಮಜ್ಜಿಗೆಯಲ್ಲಿ ಒಂದಷ್ಟು ಅನ್ನ ತಿಂದು ಹೋಗುವ ಸಂದರ್ಭಗಳುಂಟು. ಈ ರೀತಿಯ ಅವ್ಯವಸ್ಥೆ ಪೋಷಕರ ಗಮನಕ್ಕೆ ಬಾರದಂತೆ ನೋಡಿಕೊಳ್ಳುತ್ತಾರೆ. ಮಕ್ಕಳು ಮಲಗುವ ಕೊಠಡಿಗಳು ಸಹ ಶುಚಿ ಇರುವುದಿಲ್ಲ.

ಬಹಳಷ್ಟು ಮಕ್ಕಳು ಅಲರ್ಜಿಯಿಂದ ಬಳಲುತ್ತಿರುತ್ತಾರೆ. ಬೆಟ್ಟದಷ್ಟು ಕನಸು ಕಟ್ಟಿಕೊಂಡು ತಮ್ಮ ಮಕ್ಕಳನ್ನು ತಮ್ಮಿಂದ ದೂರ ಇಟ್ಟು ಓದಿಸುತ್ತಿರುವ ತಂದೆ– ತಾಯಿಗೆ ಈ ರೀತಿಯ ಆಘಾತಗಳು ಎದುರಾದರೆ  ಹೇಗೆ?

ವಸತಿ ಶಾಲೆಗಳ ಮೇಲುಸ್ತುವಾರಿ ಹೊತ್ತವರು ಎಚ್ಚರಿಕೆ ವಹಿಸಿದರೆ ಹಾಗೂ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಿದರೆ ಇಂಥ ದುರಂತಗಳನ್ನು ತಪ್ಪಿಸಬಹುದು.
-ಸಾ.ಮ. ಶಿವಮಲ್ಲಯ್ಯ, ಸಾಸಲಾಪುರ
ಕನಕಪುರ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT