ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಮುಂದೆ ಪೋಷಕರ ಪ್ರತಿಭಟನೆ

Last Updated 14 ಮಾರ್ಚ್ 2017, 5:19 IST
ಅಕ್ಷರ ಗಾತ್ರ

ಹುಳಿಯಾರು: ‘ನಾಲ್ವರ ಸಾವಿಗೆ ಕಾರಣವಾಗಿರುವ ಶಾಲೆ ಆಡಳಿತ ಮಂಡಳಿ ಸ್ಥಳಕ್ಕೆ ಬಂದು ಮಕ್ಕಳ ಸಾವಿಗೆ ಕಾರಣ ತಿಳಿಸಬೇಕು’ ಎಂದು ಒತ್ತಾಯಿಸಿ ತಿಮ್ಮನಹಳ್ಳಿಯ ಮೃತ ವಿದ್ಯಾರ್ಥಿಗಳ ಪೋಷಕರು ಹಾಗೂ ಕೆಲ ಗ್ರಾಮಸ್ಥರು ವಿದ್ಯಾವಾರಿಧಿ ಶಾಲೆ ಆವರಣದಲ್ಲಿ ಪ್ರತಭಟನೆ ನಡೆಸಿದರು.

ಬೆಳಿಗ್ಗೆ ಮೃತ ವಿದ್ಯಾರ್ಥಿಗಳಾದ ಶ್ರೇಯಸ್ ಹಾಗೂ ಅಕಾಂಕ್ಷ ಪಲ್ಲಕ್ಕಿ ಪೋಷಕರು ಹಾಗೂ ಕೆಲ ಗ್ರಾಮಸ್ಥರು ಶಾಲೆಗೆ ಬಂದು ಪ್ರತಿಭಟನೆ ಮಾಡಿದರು.

ವಿದ್ಯಾರ್ಥಿಗಳ ಸಾವು ಸಂಭವಿಸಿ 5 ದಿನ ಕಳೆದಿದ್ದರೂ ಆಡಳಿತ ಮಂಡಳಿಯವರು ಪೋಷಕರಿಗೆ ಸಾಂತ್ವನ ಹೇಳದೇ ತಲೆಮರೆಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೇಜವಾಬ್ದಾರಿ ಶಾಲೆ: ಇಲ್ಲಿ ಯಾವುದೇ ಜವಾಬ್ದಾರಿಯುತ ವ್ಯಕ್ತಿ ಇಲ್ಲ. ಆದರೂ ಶಾಲೆ ಮತ್ತೆ ಆರಂಭಿಸಿದ್ದಾರೆ. ಉಳಿದ ಮಕ್ಕಳಿಗೆ ಮತ್ತೆ ಅನಾಹುತವಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಮೃತ ವಿದ್ಯಾರ್ಥಿ ಶ್ರೇಯಸ್ ತಂದೆ ಯೋಗೀಶ್ ಮಾತನಾಡಿ, ‘ಶಾಲಾ ಆಡಳಿತ ಮಂಡಳಿ  ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಘಟನೆ ನಡೆದು ಐದಾರು ಗಂಟೆಗಳ ಸಮಯ ವಿಳಂಬವಾಗಿ ಪೋಷಕರಿಗೆ ಸುದ್ದಿ ಮುಟ್ಟಿಸಿದ್ದಾರೆ. ಅವಘಡ ಸಂಭವಿಸಿ 5 ದಿನ ಕಳೆದರೂ ಮಾನವೀಯತೆಯಿಂದಾದರೂ ಪೋಷಕರಿಗೆ ಸಾಂತ್ವನ ಹೇಳಿಲ್ಲ’ಎಂದು ದೂರಿದರು.

ಮೃತ ವಿದ್ಯಾರ್ಥಿ ಶ್ರೇಯಸ್ ತಾಯಿ ರಾಧಾ, ಅಕಾಂಕ್ಷ ಪಲ್ಲಕ್ಕಿ ತಂದೆ ಲಕ್ಷ್ಮೀಕಾಂತ್, ತಾಯಿ ಕಲಾವತಿ, ತಿಮ್ಮನಹಳ್ಳಿ ಗ್ರಾಮಸ್ಥರಾದ ಜೆಸಿಪಿ ರಂಗನಾಥ್, ಗ್ರಾ.ಪಂ ಸದಸ್ಯ ಟಿ.ಆರ್.ರಾಘವೇಂದ್ರ, ಟಿ.ಎಲ್.ಬಾಲಸುಬ್ರಮಣ್ಯ, ಸುಬ್ಬಣ್ಣ, ನಟರಾಜು, ಪ್ರಭಾಕರ್, ಗೋವಿಂದರಾಜು ಇದ್ದರು. ಪಿಎಸ್ಐ ಗಳಾದ ವಿ.ಪ್ರವೀಣ್ ಕುಮಾರ್, ಮಂಜುನಾಥ್, ಮಹಾಲಕ್ಷ್ಮಮ್ಮ, ಮಧುಸೂಧನ್ ಮತ್ತು ಸಿಬ್ಬಂದಿ ಬಂದೋಬಸ್ತ್ ಕೈಗೊಂಡಿದ್ದರು.

**

4 ದಿನಗಳ ನಂತರ ಆರಂಭವಾದ ಶಾಲೆ: ಭಯದಲ್ಲೇ ನಡೆದ ತರಗತಿ

ಹುಳಿಯಾರು: ಮೂವರು ವಿದ್ಯಾರ್ಥಿಗಳು, ಭದ್ರತಾ ಸಿಬ್ಬಂದಿ ಸೇರಿ ನಾಲ್ವರ ಸಾವಿಗೆ ಕಾರಣವಾಗಿ ಕಳೆದ ನಾಲ್ಕು ದಿನಗಳಿಂದ   ಮುಚ್ಚಿದ್ದ ಪಟ್ಟಣದ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆ ಸೋಮವಾರ ಪ್ರಾರಂಭ ಗೊಂಡರೂ ಶಾಲೆಯ ವಾತಾವರಣ ಇಡೀ ದಿನ ಭಯದಿಂದ ಕೂಡಿತ್ತು.

ಪರೀಕ್ಷೆ ಸಮಯವಾಗಿದ್ದರಿಂದ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸೋಮವಾರ ಪ್ರಾರಂಭಗೊಂಡಿತು.

ಬೆಳಿಗ್ಗೆ 10 ಗಂಟೆಗೆ ಶಾಲೆ ಪ್ರಾರಂಭಗೊಂಡಾಗ ಶೇ 75ರಷ್ಟು ವಿದ್ಯಾರ್ಥಿಗಳು ಬಂದರು. ವಿಷಾಹಾರ ಸೇವಿಸಿ ಮೃತಪಟ್ಟ ತಿಮ್ಮನಹಳ್ಳಿ ವಿದ್ಯಾರ್ಥಿಗಳ ಪೋಷಕರು ಮತ್ತು ಗ್ರಾಮಸ್ಥರು ಶಾಲೆಗೆ ನುಗ್ಗಿ ಪ್ರತಿಭಟನೆ ನಡೆಸಿದರು.

ಪೋಷಕರಿಗೂ ಮತ್ತು  ಪೊಲೀಸರಿಗೂ ಮಾತಿನ ಚಕಮಕಿ ನಡೆಯಿತು. ಈ ಗಲಾಟೆಗೆ ಶಾಲಾ ಕೊಠಡಿಗಳಲ್ಲಿ ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳು ಭಯಭೀತರಾದರು. ಶಿಕ್ಷಕರೂ ಭಯದಲ್ಲೇ ಪಾಠ ಮಾಡಿದರು.

ಶಾಲೆಗೆ ಧಾವಿಸಿದ ಪೋಷಕರು: ಶಾಲೆಯಲ್ಲಿ ಪ್ರತಿಭಟನೆ ನಡೆಯುತ್ತಿದ್ದುದನ್ನು ತಿಳಿದ ಪೋಷಕರು ಶಾಲೆಯಲ್ಲಿದ್ದ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಲು ದೌಡಾಯಿಸಿದರು.

ಮಕ್ಕಳಿಗೆ ನಾವೇನು ತೊಂದರೆ ಮಾಡುವುದಿಲ್ಲ ಎಂದು ಈ ಪೋಷಕರಿಗೆ ಪ್ರತಿಭಟನಾಕಾರರು  ಭರವಸೆ ನೀಡಿದರು. ಪೊಲೀಸರು ರಕ್ಷಣೆ ನೀಡುವುದಾಗಿ ಹೇಳಿದಾಗ ಆ ಪೋಷಕರ ಆತಂಕ ಸ್ವಲ್ಪ ದೂರವಾಯಿತು. ಮತ್ತೆ ಕೆಲ ಹೊತ್ತಿನ ಬಳಿಕ ಪೋಷಕರು ಒತ್ತಾಯ ಪೂರ್ವಕವಾಗಿ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋದರು.
ಕಿರಣ್‌ಕುಮಾರ್‌ ಬಂದರೂ ಕರಗಲಿಲ್ಲ ಕೋಪ

ಜನರು ಪ್ರತಿಭಟನೆಯಿಂದ ಕದಲುವುದಿಲ್ಲ ಎಂದು ಗೊತ್ತಾದ ಮೇಲೆ ಅನಿವಾರ್ಯವಾಗಿ  ಕಿರಣ್‌ಕುಮಾರ್‌ ರಾತ್ರಿ 10ರ ಸುಮಾರಿಗೆ ಶಾಲೆಗೆ ಬಂದರು. ಪೋಷಕರನ್ನು ಸಮಾಧಾನಪಡಿಸಲು ಯತ್ನಿಸಿದರು.

‘ನಾನು ಎಲ್ಲ ರೀತಿಯ ಪ್ರಯತ್ನಪಟ್ಟೆನು. ಕ್ಷಮಿಸಿ’ ಎಂದು ಕೇಳಿಕೊಂಡರು.

ಆದರೆ ಜನರು  ಈ ಮಾತಿಗೆ ಓಗೊಡಲಿಲ್ಲ. ನಿಮ್ಮ ಪತ್ನಿ ಕವಿತಾ ಅವರನ್ನು ಸ್ಥಳಕ್ಕೆ ಕರೆಯಿಸಿ ಎಂದು ಪಟ್ಟು ಹಿಡಿದರು.

ಶಾಲೆಯ ಶುಲ್ಕವನ್ನು ಕವಿತಾ ಅವರಿಗೆ ಕಟ್ಟುತ್ತಿದ್ದೆವು. ನೀವು ಬೇಡ, ಅವರನ್ನೇ ಕರೆಯಿಸಿ ಎಂದು ಹೇಳಿದರು. ರಾತ್ರಿ 11 ಗಂಟೆಯಾದರೂ ಪ್ರತಿಭಟನೆ ಮುಂದುವರೆದಿತ್ತು. ಕಿರಣ್‌ಕುಮಾರ್‌ ಮತ್ತು ಪ್ರತಿಭಟನಾಕಾರರು ನಡುವೆ ಮಾತುಕತೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT