ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಳಿ ಹಬ್ಬ: ಎಲ್ಲೆಲ್ಲೂ ಬಣ್ಣದ ಚಿತ್ತಾರ

ಗಮನ ಸೆಳೆದ ಮಡಿಕೆ ಒಡೆಯುವ ಸ್ಪರ್ಧೆ
Last Updated 14 ಮಾರ್ಚ್ 2017, 6:17 IST
ಅಕ್ಷರ ಗಾತ್ರ

ರಾಯಚೂರು: ನಗರದ ವಿವಿಧೆಡೆ ಹೋಳಿ ಹುಣ್ಣಿಮೆ ನಿಮಿತ್ತ ಭಾನುವಾರ ರಾತ್ರಿ ಕಾಮನ ದಹನ ಹಾಗೂ ಪೂಜೆಗಳನ್ನು ಮುಗಿಸಿ, ಸೋಮವಾರ ಬೆಳಿಗ್ಗೆಯಿಂದಲೆ ಜನರು ಬಣ್ಣದ ಆಟದಲ್ಲಿ ಮಿಂದೆದ್ದರು.

ಬಡಾವಣೆಗಳಲ್ಲಿ, ರಸ್ತೆಗಳಲ್ಲಿ ಹೋಗುತ್ತಿದ್ದ ಜನರ ಮುಖ ಹಾಗೂ ವಸ್ತ್ರವೆಲ್ಲವೂ ವೈವಿಧ್ಯಮಯ ಬಣ್ಣದಲ್ಲಿ ಮುಳುಗಿದ್ದವು. ಯುವಕರು ಗುಂಪು ಕಟ್ಟಿಕೊಂಡು ಬೈಕ್‌ ಮೂಲಕ ಸಂಚರಿಸಿ ತಮ್ಮ ಗೆಳೆಯರ ಮನೆಗಳಿಗೆ ಹೋಗಿ ಬಣ್ಣ ಹಚ್ಚಿ ಸಂಭ್ರಮಿಸಿದರು. ಬಡಾವಣೆಗಳಲ್ಲಿ ಮಕ್ಕಳು, ಮಹಿಳೆಯರು ಹಾಗೂ ಯುವತಿಯರು ಪರಸ್ಪರ ಬಣ್ಣ ಎರಚಿ ಸಂತೋಷ ಹಂಚಿಕೊಳ್ಳುತ್ತಿರುವುದು ವಿಶೇಷವಾಗಿತ್ತು. ಮಕ್ಕಳು ಪಿಚಕಾರಿ ಹಿಡಿದು ನಿಂತಿದ್ದರು. ಮಾರ್ಗದಲ್ಲಿ ಸಂಚರಿಸುತ್ತಿದ್ದ ಜನರಿಗೆ ಬಣ್ಣ ಹಾಕಿ ಖುಷಿಪಟ್ಟರು. ಮಹಿಳೆಯರು ಪುಡಿಬಣ್ಣವನ್ನು ಮುಖಕ್ಕೆ ಬಳಿದುಕೊಂಡಿದ್ದರು.

ಭಂಗಿಕುಂಟ, ಜವಾರಗಲ್ಲಿ, ಮಡ್ಡಿಪೇಟೆ, ಮಂಗಳವಾರ ಪೇಟೆ, ತಿಮ್ಮಾಪುರ ಪೇಟೆ, ಜವಾಹರ ನಗರ, ವಾಸವಿ ನಗರ, ಅಮರಖೇಡ ಬಡಾವಣೆ, ನೇತಾಜಿ ನಗರ, ಮೋಚಿವಾಡಾ, ಜಹಿರಾಬಾದ್‌ ಹಾಗೂ ಮಾಣಿಕನಗರದಲ್ಲೆಡೆ ಸಂತೋಷ, ಸಂಭ್ರಮ ಎದ್ದು ಕಾಣುತ್ತಿತ್ತು.

ಕೆಲವು ಬಡಾವಣೆಗಳಲ್ಲಿ ಹೋಳಿ ಹುಣ್ಣಿಮೆ ನಿಮಿತ್ತ ವಾದ್ಯ ವ್ಯವಸ್ಥೆ ಮಾಡಿದ್ದರು. ವಾದ್ಯಗಳ ನಾದಕ್ಕೆ ಯುವಕರು ಸಾಮೂಹಿಕ ನೃತ್ಯ ಮಾಡುತ್ತಿರುವುದು ಗಮನ ಸೆಳೆಯಿತು. ಮಧ್ಯಾಹ್ನದ ನಂತರ ಬಣ್ಣ ಆಡುವ ಸಂಭ್ರಮಕ್ಕೆ ತೆರೆಬಿದ್ದಿತು.

ಬಣ್ಣದೋಕುಳಿಯ ದಿನದಂದು ಬಹುತೇಕ ಅಂಗಡಿ ಮುಂಗಟ್ಟುಗಳು ಸ್ವಯಂ ಬಂದ್‌ ಆಗಿದ್ದವು. ಜನನಿಬಿಡ ಆಗಿರುತ್ತಿದ್ದ ಸ್ಟೇಷನ್‌ ರಸ್ತೆ, ನೇತಾಜಿ ರಸ್ತೆ, ಸರಾಫ್‌ ಬಜಾರ್‌ ಹಾಗೂ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ವೃತ್ತದಲ್ಲಿ ಅಂಗಡಿಗಳು ತೆರೆದಿರಲಿಲ್ಲ. ವಾಹನಗಳ ಸಂಚಾರವು ವಿರಳವಾಗಿತ್ತು. ಮಧ್ಯಾಹ್ನದವರೆಗೂ ಪ್ರಮುಖ ರಸ್ತೆಗಳಲ್ಲಿ ಸರ್ಕಾರಿ ಬಸ್‌ಗಳು ಮಾತ್ರ ಸಂಚರಿಸಿದವು.

ಪೊಲೀಸರು ಅಲ್ಲಲ್ಲಿ ಬಿಗಿ ಬಂದೋಬಸ್ತ್‌ ವ್ಯವಸ್ಥೆ ಮಾಡಿದ್ದರು. ಪ್ರಮುಖ ಬಡಾವಣೆಗಳಲ್ಲಿ ಹಾಗೂ ಪ್ರಮುಖ ವೃತ್ತಗಳಲ್ಲಿ ಪೊಲೀಸರ ತಂಡಗಳನ್ನು ನಿಯೋಜಿಸಲಾಗಿತ್ತು.

ಉಪ್ಪಾರವಾಡಿಯಲ್ಲಿ ಸಂಭ್ರಮ: ನಗರದ ಉಪ್ಪಾರವಾಡಿಯಲ್ಲಿ ಹೋಳಿ  ಹುಣ್ಣಿಮೆ ನಿಮಿತ್ತ ಉಪ್ಪಾರ ಸಮುದಾಯದಿಂದ ಬಣ್ಣದೋಕುಳಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಎರಡು ದಿನಗಳಿಂದ ವಿವಿಧ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಶನಿವಾರ ರಾತ್ರಿ ಕಾಮದಹನಕ್ಕೆ ರಂಗಪೂಜೆ ನೆರವೇರಿಸಲಾಯಿತು. ಭಾನುವಾರ ರಾತ್ರಿ ಬಡಾವಣೆಯ ಜನರೆಲ್ಲ ಜಮಾಯಿಸಿ ಪುರೋಹಿತ ಸೂಗೂರಯ್ಯರ ನೇತೃತ್ವದಲ್ಲಿ ಕಾಮದಹನ ಕಾರ್ಯಕ್ರಮ ನೆರವೇರಿಸಲಾಯಿತು.

ಸೋಮವಾರ ಬೆಳಿಗ್ಗೆ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ಪ್ರಾಂಗಣದಲ್ಲಿ ಮಡಿಕೆ ಒಡೆಯುವ ಸ್ಪರ್ಧೆ ಆಯೋಜಿಸಲಾಗಿತ್ತು. ಯುವಕರು, ಮಹಿಳೆಯರು, ಮಕ್ಕಳು ಸೇರಿ ಬಡಾವಣೆ ನಿವಾಸಿಗಳೆಲ್ಲ ಸಂಭ್ರಮದಿಂದ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ದೇವಸ್ಥಾನ ಸಮಿತಿ ಅಧ್ಯಕ್ಷ ಯು. ಚಂದ್ರಮೌಳಿ, ಕಾರ್ಯದರ್ಶಿ  ಎಂ.ಚಂದ್ರಶೇಖರ್‌ ಹಾಗೂ ಸದಸ್ಯರು ಇದ್ದರು.

ಹೋಳಿ– ಗುಂಪು ಘರ್ಷಣೆ: 20 ಮಂದಿ ಬಂಧನ
ರಾಯಚೂರು:
ತಾಲ್ಲೂಕಿನ ಕಲ್ಮಲಾ ಗ್ರಾಮದಲ್ಲಿ ಹೋಳಿ ಹಬ್ಬದ ನಿಮಿತ್ತ ಬಣ್ಣ ಎರಚುವ ವಿಚಾರದಲ್ಲಿ ಎರಡು ಗುಂಪಿನ ನಡುವೆ ಘರ್ಷಣೆ ನಡೆದಿದ್ದು, 16 ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ.

ಘಟನೆಯ ಸಂಬಂಧ ಎರಡು ಗುಂಪಿಗೆ ಸೇರಿದ ಒಟ್ಟು 20 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಗ್ರಾಮದಲ್ಲಿ ಮುಂಜಾಗೃತಾ ಕ್ರಮವಾಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಕುರುಬ ಜನಾಂಗಕ್ಕೆ ಸೇರಿದ ಶಿವಪುತ್ರ ಹಾಗೂ ಇತರರು ಸೇರಿದಂತೆ 20 ಮಂದಿ ಹಾಗೂ ಪರಿಶಿಷ್ಟ ಜನಾಂಗಕ್ಕೆ ಸೇರಿದ ಕರಿಲಿಂಗ ಹಾಗೂ ಇತರರು ಸೇರಿದಂತೆ 10 ಮಂದಿಯ ವಿರುದ್ಧ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT