ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆ ಜೋಡಿಸಿ’

ಆಧಾರ್‌ ಜೋಡಣೆ ಮಾಡದಿದ್ದಲ್ಲಿ ಬೆಳೆಹಾನಿ ಪರಿಹಾರ ಇಲ್ಲ
Last Updated 14 ಮಾರ್ಚ್ 2017, 6:58 IST
ಅಕ್ಷರ ಗಾತ್ರ

ಹಾನಗಲ್: ‘ಕಳೆದ ಬಾರಿಯ ಮುಂಗಾರು ಹಂಗಾಮಿನ ಬೆಳೆಹಾನಿಯ ಪರಿಹಾರದ ಮೊತ್ತ ನೇರವಾಗಿ ಫಲಾನುಭವಿ ರೈತರ ಖಾತೆಗೆ ಜಮೆ ಮಾಡುವ ಪ್ರಕ್ರಿಯೆ ಮಂಗಳವಾರದಿಂದ ಚಾಲನೆ ಪಡೆಯಲಿದ್ದು, ಸಂಬಂಧಿಸಿದ ರೈತರು ತಮ್ಮ ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆಯನ್ನು ಜೋಡಿಸುವುದು ಕಡ್ಡಾಯವಾಗಿದೆ’ ಎಂದು ತಹಶೀಲ್ದಾರ್‌ ಶಕುಂತಲಾ ಚೌಗಲಾ ಹೇಳಿದ್ದಾರೆ.

ಸೋಮವಾರ ಸುದ್ಧಿಗಾರರಿಗೆ ಮಾಹಿತಿ ನೀಡಿದ ಅವರು, ‘ಆಧಾರ್‌ ಆಧಾರಿತ ನಗದು ವರ್ಗಾವಣೆ (ಎ.ಇ.ಪಿ.ಎಸ್‌) ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದಿದೆ. ಹೀಗಾಗಿ ಫಲಾನುಭವಿ ರೈತರು ಬೆಳೆಹಾನಿ ವರದಿ ಸಮಯದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸಲ್ಲಿಸಿದ ಬ್ಯಾಂಕ್‌ ಖಾತೆಗೆ ಈಗ ತಮ್ಮ ಆಧಾರ್‌ ಲಿಂಕ್‌ ಮಾಡಬೇಕು’ ಎಂದು ಅವರು ವಿವರಿಸಿದರು.

2016–17 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಹಾನಿ ಪರಿಹಾರ ವಿತರಣೆಗಾಗಿ ಸರ್ಕಾರ ‘ಪರಿಹಾರ’ ಎನ್ನುವ ತಂತ್ರಾಂಶ ಸಿದ್ಧಪಡಿಸಿದೆ. ಬೆಳೆಹಾನಿ ಅನುಭವಿಸಿದ ಎಲ್ಲ ರೈತರ ವರದಿಯನ್ನು ಈ ತಂತ್ರಾಂಶದ ಮೂಲಕ ಅಪ್‌ಲೋಡ್‌ ಮಾಡಲಾಗಿದೆ ಎಂದರು.

ಇಲಾಖೆಯ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿವೆ, ಈಗ ರೈತರು ತಮ್ಮ ಖಾತೆಗೆ ಆಧಾರ್‌ ಲಿಂಕ್‌ ಮಾಡುವುದಷ್ಟೇ ಬಾಕಿ ಉಳಿದಿದೆ, ಬೆಳೆಹಾನಿ ಪರಿಹಾರಕ್ಕೆ ಅರ್ಹರಾದ ರೈತರ ಪೈಕಿ ಕೆಲವರು ಈಗಾಗಲೇ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಮಾಡಿದ್ದಾರೆ, ಅಂತಹವರಿಗೆ ಮಂಗಳವಾರ ಪರಿಹಾರ ಮೊತ್ತ ಜಮೆಯಾಗಲಿದೆ ಎಂದು ಹೇಳಿದರು.

‘ಆಧಾರ್‌ ಲಿಂಕ್‌ ಬಗ್ಗೆ ಸುಮಾರು 2 ತಿಂಗಳಿನಿಂದ ರೈತರಿಗೆ ತಿಳಿವಳಿಕೆ ನೀಡುವ ಕೆಲಸವನ್ನು ಮಾಡಲಾಗಿದೆ, ಆದರೆ, ಎಲ್ಲ ರೈತರು ಆಧಾರ್‌ ಲಿಂಕ್‌ ಮಾಡಿಸಿಲ್ಲ, ಆಧಾರ್‌ ಜೋಡಣೆ ಮಾಡದಿದ್ದಲ್ಲಿ ಬೆಳೆಹಾನಿ ಪರಿಹಾರ ಸಿಗಲು ಸಾಧ್ಯವಿಲ್ಲ’ ಎಂದು ತಹಶೀಲ್ದಾರ್‌ ಚೌಗಲಾ ಸ್ಪಷ್ಟಪಡಿಸಿದರು.

ಇದಕ್ಕೂ ಆಧಾರ್‌ ಕಡ್ಡಾಯ: ಸಂಧ್ಯಾ ಸುರಕ್ಷಾ ವಿಧವಾ ವೇತನ, ಮನಸ್ವಿನಿ, ಮೈತ್ರಿ, ಅಂಗವಿಕಲರ ವೇತನ, ನಿರ್ಗತಿಕರ ವೇತನ, ಇಂದಿರಾ ಗಾಂಧಿ ವೃದ್ಧಾಪ್ಯ ವೇತನದಂತಹ ಪಿಂಚಣಿ ಸವಲತ್ತುಗಳು ಇನ್ನು ಮುಂದೆ ಎಂ.ಓ (ಮನಿ ಆರ್ಡರ್‌) ಮೂಲಕ ಸಿಗುವುದಿಲ್ಲ, ಈ ಯೋಜನೆಗಳ ಫಲಾನುಭವಿಗಳು ಈಗಾಗಲೇ ಬ್ಯಾಂಕ್‌ ಖಾತೆ ಹೊಂದಿದ್ದರೆ ಆಧಾರ್‌ ಲಿಂಕ್‌ ಮಾಡಿಸಿಕೊಳ್ಳಬೇಕು, ಬ್ಯಾಂಕ್‌ ಖಾತೆ ಹೊಂದಿಲ್ಲದ ಫಲಾನುಭವಿ ಆಧಾರ್‌ ಸಹಿತ                 ಬ್ಯಾಂಕ್‌ ಖಾತೆಯನ್ನು ತೆರೆಯಬೇಕು. ಏಪ್ರಿಲ್‌ 1 ರಿಂದ ಎಲ್ಲ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ಪಿಂಚಣಿ ಮೊತ್ತ ಜಮೆಯಾಗಲಿದೆ ಎಂದು ತಹಶೀಲ್ದಾರ್‌ ಶಕುಂತಲಾ ಚೌಗಲಾ ಹೇಳಿದ್ದಾರೆ.

ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಮಾಡದಿದ್ದರೆ ಅಂತಹ ರೈತರಿಗೆ ಪರಿಹಾರದ ಮೊತ್ತ ಕೈಗೆಟುಕಲಾರದು
- ಶಕುಂತಲಾ ಚೌಗಲಾ, ತಹಶೀಲ್ದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT