ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ನಾಲಿಗೆ ಹೇಳುವುದೇನು?

ಆಚಾರದ ಜೊತೆಗೆ ಆರೋಗ್ಯವೂ ಇದ್ದಲ್ಲಿ ನಾಲಿಗೆಯ ಆರೋಗ್ಯ ಪರಿಪೂರ್ಣ
Last Updated 14 ಮಾರ್ಚ್ 2017, 19:30 IST
ಅಕ್ಷರ ಗಾತ್ರ
‘ನಾಲಿಗೆ ಒಳ್ಳೆಯದಿದ್ದಲ್ಲಿ ನಾಡೆಲ್ಲಾ ಒಳ್ಳೆಯದು’ ಎಂಬುದು ಗಾದೆಮಾತು.  ಹೌದು. ಮನುಷ್ಯ ದೇಹಾರೋಗ್ಯದಲ್ಲಿ ನಾಲಿಗೆಯದ್ದು ಪ್ರಮುಖ ಪಾತ್ರ. ಹಲ್ಲು ಮತ್ತು ವಸಡುಗಳ ಆರೋಗ್ಯಕ್ಕೆ ತೋರುವಷ್ಟು ಕಾಳಜಿಯನ್ನು ನಾಲಿಗೆಗೂ ತೋರಬೇಕೆನ್ನುತ್ತಾರೆ ವೈದ್ಯರು. ‘ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು’ ಎಂದು ದಾಸರು ಹೇಳಿದ್ದಾರೆ. ಆಚಾರದ ಜೊತೆಗೆ ಆರೋಗ್ಯವೂ   ಇದ್ದಲ್ಲಿ ನಾಲಿಗೆಯ ಆರೋಗ್ಯ ಪರಿಪೂರ್ಣವಾಗಬಲ್ಲದು. ಅಂಥ ನಾಲಿಗೆಯ ಕುರಿತ ಆರೋಗ್ಯ ಮಾಹಿತಿ ಇಲ್ಲಿದೆ. 
 
– ಮೈಗೆ ಹುಷಾರಿಲ್ಲದಿದ್ದಾಗ ವೈದ್ಯರು ನಾಲಿಗೆ ತೋರಿಸಿ ಎಂದು ಹೇಳುವುದೇಕೆ?
ರೋಗಿಯ ನಾಲಿಗೆಯನ್ನು ಪರಿಶೀಲಿಸುವುದರಿಂದ ರೋಗ ಲಕ್ಷಣಗಳು ಗೋಚರಿಸಿ, ಏನು ಕಾಯಿಲೆ ಎಂದು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ ಕಾಯಿಲೆ ಯಾವ  ಹಂತದಲ್ಲಿದೆ ಎಂಬುದನ್ನೂ ಪತ್ತೆ ಹಚ್ಚಬಹುದು.
 
– ನಾಲಿಗೆ ಬಣ್ಣ ಏನನ್ನು ಸೂಚಿಸುತ್ತದೆ?
ಆರೋಗ್ಯವಂತ ನಾಲಿಗೆ ಗುಲಾಬಿ ಬಣ್ಣದಿಂದ ಕೂಡಿದ್ದು, ಸಣ್ಣಸಣ್ಣ ಗಂಟುಗಳನ್ನು (ಪಾಪಿಲ್ಲೆ) ಹೊಂದಿರುತ್ತದೆ. ನಾಲಿಗೆಗೆ ನೋವಾಗಿದ್ದರೆ, ಅದರ ಬಣ್ಣ ಬದಲಾಗಿದ್ದರೆ ಅದು ರೋಗದ ಸೂಚನೆಯನ್ನು ನೀಡುತ್ತದೆ.
 
– ಬಿಳಿ ನಾಲಿಗೆ: ನಾಲಿಗೆ ಬಿಳಿ ಬಣ್ಣದಿಂದ ಕೂಡಿದ್ದರೆ, ಬಾಯಿಯೊಳಗೆ ಯೀಸ್ಟ್ ಸೋಂಕು ಉಂಟಾಗಿದೆ ಎಂದರ್ಥ. ಸಕ್ಕರೆ ಕಾಯಿಲೆ, ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿರುವವರ ನಾಲಿಗೆ ಬಿಳಿ ಬಣ್ಣದಿಂದ ಕೂಡಿರುತ್ತದೆ. ಕೆಲವೊಮ್ಮೆ ಆ್ಯಂಟಿಬಯಾಟಿಕ್ ಸೇವನೆಯಿಂದಲೂ ನಾಲಿಗೆ ಬಿಳಿ ಬಣ್ಣಕ್ಕೆ ತಿರುಗುವುದುಂಟು.
 
– ಕೆಂಪು ನಾಲಿಗೆ: ನಾಲಿಗೆ ಕೆಂಬಣ್ಣದಿಂದ ಕೂಡಿದ್ದರೆ  ಫೋಲಿಕ್ ಆ್ಯಸಿಡ್‌, ವಿಟಮಿನ್ ಬಿ–12 ಕೊರತೆ ಇದೆ ಎಂದರ್ಥ. ಕೆಲವು ಬಾರಿ ತೀವ್ರ ಜ್ವರದಿಂದ ಬಳಲುತ್ತಿರುವಾಗಲೂ ನಾಲಿಗೆ ಕೆಂಬಣ್ಣದಿಂದ ಕೂಡಿರುತ್ತದೆ.
 
– ಕಪ್ಪು ನಾಲಿಗೆ: ಸಿಗರೇಟು ಸೇದುವವರು, ಬಾಯಿಯನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವವರ ನಾಲಿಗೆ ಕಪ್ಪುಬಣ್ಣದಿಂದ ಕೂಡಿರುತ್ತದೆ. ಇದು ಅನಾರೋಗ್ಯಕರ ಸ್ಥಿತಿಯನ್ನು ಸೂಚಿಸುತ್ತದೆ.
 
– ಬಾಯಿಯ ಆರೋಗ್ಯದಲ್ಲಿ ನಾಲಿಗೆಯ ಪಾತ್ರವೇನು? 
ಬಾಯಿಯ ಆರೋಗ್ಯದಲ್ಲಿ ನಾಲಿಗೆಯದ್ದು ಪ್ರಮುಖ ಪಾತ್ರ.  ಹಲ್ಲು, ವಸಡು ಸ್ವಚ್ಛವಾಗಿಟ್ಟುಕೊಳ್ಳುವುದರ ಜತೆಗೆ ನಾಲಿಗೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅಗತ್ಯ. ನಾಲಿಗೆ ಸ್ವಚ್ಛವಾಗಿರದಿದ್ದಲ್ಲಿ ಬ್ಯಾಕ್ಟೀರಿಯಾಗಳು ಹುಟ್ಟಿ, ಅವು ಬಾಯಿಯ ಮೂಲಕ ಹೊಟ್ಟೆಯೊಳಗೆ ಪ್ರವೇಶಿಸಿ, ಇಡೀ ದೇಹದ ಆರೋಗ್ಯ ವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಇರುತ್ತದೆ.
 
ನಾಲಿಗೆಯ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ನಾಲಿಗೆಯನ್ನು ಸ್ವಚ್ಛಗೊಳಿಸಲು ‘ಟಂಗ್ ಕ್ಲೀನರ್’ ಬಳಸಬೇಕು. ಇದು ತೆಳುವಾದ ಮೃದುವಾದ ದಾರದಿಂದ ಮಾಡಲ್ಪಟ್ಟಿದ್ದು, ನಾಲಿಗೆಯ ಮೇಲ್ಪದರವನ್ನು ಮೃದುವಾಗಿ ಸ್ವಚ್ಛಗೊಳಿಸುತ್ತದೆ. ನಾಲಿಗೆಯನ್ನು ಸ್ವಚ್ಛಗೊಳಿಸಿದ ಬಳಿಕ ಟಂಗ್ ಕ್ಲೀನರ್ ಅನ್ನು ಬಿಸಿನೀರಿನಲ್ಲಿ ಅದ್ದಿ ತೊಳೆಯಬೇಕು. 
 
ಮುಂಜಾನೆ ಹಲ್ಲುಜ್ಜಿದ ಬಳಿಕ ನಾಲಿಗೆಯ ಸ್ವಚ್ಛತೆಯ ಕಡೆಗೂ ಗಮನ ಹರಿಸಬೇಕು. ಅಂತೆಯೇ ರಾತ್ರಿ ಮಲಗುವ ಮುನ್ನ ಬಾಯಿ ಮತ್ತು ನಾಲಿಗೆಯನ್ನು ಸ್ವಚ್ಛಗೊಳಿಸಿ ಮಲಗುವುದು ಆರೋಗ್ಯಕ್ಕೆ ಉತ್ತಮ. 
 
ಉಸಿರಾಟದ ತೊಂದರೆ
ಬಾಯಿಯ ಮೂಲಕ ಬ್ಯಾಕ್ಟೀರಿಯಾ ದೇಹದೊಳಗೆ ಸೇರಿ ಶ್ವಾಸಕೋಶಗಳಲ್ಲಿ ಸೋಂಕು ಉಂಟು ಮಾಡುತ್ತದೆ. ಇದರಿಂದ ಶ್ವಾಸಕೋಶ ಮತ್ತು ಉಸಿರಾಟದ ಸಮಸ್ಯೆಗಳು ಕಾಣಿಸುತ್ತವೆ.

– ಕೆಲವರಿಗೆ ಬಾಯಿ ಹುಣ್ಣುಗಳಾಗುವುದು ಸಹಜ. ಸಾಮಾನ್ಯವಾಗಿ ಔಷಧಿ ಪಡೆದರೆ ಒಂದೆರೆಡು ವಾರಗಳಲ್ಲಿ ಈ ಹುಣ್ಣು ವಾಸಿಯಾಗುತ್ತದೆ. ವಿಟಮಿನ್‌ ಕೊರತೆ ಇರುವವರಲ್ಲಿ ಬಾಯಿಹುಣ್ಣಾಗುತ್ತದೆ.
– ನಾಲಿಗೆಯಲ್ಲಿ ಎರಡು ವಾರಗಳಿಗೂ ಹೆಚ್ಚು ಕಾಲ ನೋವು ಮತ್ತು ಹುಣ್ಣು ಇದ್ದರೆ ಅದು ಬಾಯಿ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು.
– ಬಾಯಿ ಆರೋಗ್ಯ ಕಾಪಾಡಿಕೊಳ್ಳದಿರುವವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಸಂಭವ ಹೆಚ್ಚು.
– ಬಾಯಿ ಮತ್ತು ವಸಡಿನಲ್ಲಿ ಸೋಂಕುಳ್ಳ ಮಹಿಳೆಯರಲ್ಲಿ ಅವಧಿಪೂರ್ವ ಶಿಶು ಜನನ ಸಾಧ್ಯತೆ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT