ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಾಂತರ ಭಾಗದಲ್ಲಿ ಕನ್ನಡದ ಅರಿವು

Last Updated 15 ಮಾರ್ಚ್ 2017, 8:46 IST
ಅಕ್ಷರ ಗಾತ್ರ

ವಿಜಯಪುರ: ತಾಯಿನಾಡು, ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸುವುದು ಮುಖ್ಯ.  ಕನ್ನಡಕ್ಕೆ ಧಕ್ಕೆ ಬಂದಾಗ ಜೀವನ ಮುಡುಪಾಗಿಟ್ಟಾದರೂ  ಕನ್ನಡ ಅಭಿವೃದ್ಧಿಗೆ ಶ್ರಮಿಸುತ್ತಿರುವ ವಿಜಯಪುರದ ಕನ್ನಡ ಆಂಜಿನಪ್ಪ ಅವರ ಕನ್ನಡ ಪ್ರೇಮಕ್ಕೆ ಮನಸೋಲದವರಿಲ್ಲ.

ಪಟ್ಟಣದಲ್ಲಿ ಪೋಸ್ಟ್ ಮೆನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ವೆಂಕಟರಾಯಪ್ಪ ಪುತ್ರ ಆಂಜಿನಪ್ಪ 1952ರಲ್ಲಿ ಜನಿಸಿ,  ಪ್ರಾಥಮಿಕ/ಪ್ರೌಢಶಿಕ್ಷಣವನ್ನು ವಿಜಯಪುರದ ಸರ್ಕಾರಿ ಶಾಲೆಯಲ್ಲಿ  ಮುಗಿಸಿದ ನಂತರ ಪಿಯುಸಿ ವ್ಯಾಸಂಗಕ್ಕಾಗಿ ಚಿಕ್ಕಬಳ್ಳಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೇರುತ್ತಾರೆ. ಪದವಿಮೈಸೂರು ವಿಶ್ವವಿದ್ಯಾಲಯಲ್ಲಿ ಪೂರ್ಣಗೊಳಿಸುತ್ತಾರೆ.

ವಿದ್ಯಾರ್ಥಿಯ ಜೀವನದಿಂದಲೇ ಕನ್ನಡ ಪ್ರೇಮಿಯಾಗಿ, ಕಲಾವಿದನಾಗಿ ಶಾಲಾ – ಕಾಲೇಜು ಕಾರ್ಯಕ್ರಮಗಳಲ್ಲಿ ನಡೆದ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸೈನಿಸಿಕೊಂಡು ಅವರು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಕನ್ನಡದ ಮೇರು ನಟರಾದ ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ರಾಮಕೃಷ್ಣ, ಅಶೋಕ್ ಸೇರಿದಂತೆ ಹೆಸರಾಂತ ಕಲಾವಿದರೊಂದಿಗೆ  ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರೆ. 1984 ರಲ್ಲಿ ಸಾರಿಗೆ ಇಲಾಖೆಯ ನೌಕರರಾಗಿ ಸೇವೆಗೆ ಸೇರಿ ಸಾರಿಗೆ ಇಲಾಖೆಯಿಂದ ಆಯೋಜನೆ ಮಾಡುತ್ತಿದ್ದ ಸಭೆ ಸಮಾರಂಭಗಳಲ್ಲಿ ಏಕಪಾತ್ರಾಭಿನಯ, ಭಾವಗೀತೆ ಹಾಡುವ ಮೂಲಕ ಪ್ರತಿಭಾ ಪ್ರದರ್ಶನ ತೋರುತ್ತಿದ್ದರು.

2000ರಲ್ಲಿ ಚಿತ್ರನಟ ರಾಮಕೃಷ್ಣ ಅವರ ಪ್ರೇರಣೆಯಿಂದ ದೇವನಹಳ್ಳಿ ತಾಲ್ಲೂಕಿನಲ್ಲಿನ ನಾಟಕ, ಜಾನಪದ, ಕೋಲಾಟ, ಭಜನೆ, ಬುರ್ರಕಥಾ ಮುಂತಾದ ಕಲಾ ಪ್ರಕಾರದ ಕಲಾವಿದರನ್ನು ಒಂದೆಡೆ ಕಲೆಹಾಕಿ ಕನ್ನಡ ಕಲಾವಿದರ ಸಂಘ ಸ್ಥಾಪನೆ ಮಾಡಿದ್ದಾರೆ. ಪ್ರತಿ ತಿಂಗಳ ಮೊದಲ ಮಂಗಳವಾರ ಕನ್ನಡ ಕಲಾವಿದರ ಸಂಘದಲ್ಲಿ ಕಲಾವಿದರೊಬ್ಬರನ್ನು ಸನ್ಮಾನಿಸುವಂತಹ ಕಾರ್ಯಕ್ರಮ ನಡೆಸುವ ಪರಿಪಾಠ ಮುಂದುವರಿಸಿದ್ದಾರೆ.

ವಿಜಯಪುರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಗೆ ತೆರಳಿ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ಕನ್ನಡ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಪುಸ್ತಕ  ಓದುವ ಅಭಿರುಚಿ ಬೆಳೆಸುತ್ತಿದ್ದಾರೆ.  ವಾಟಾಳ್ ನಾಗರಾಜ್ ಸೇರಿದಂತೆ ಹಲವು ಕನ್ನಡ ಪರ ಮುಖಂಡರೊಂದಿಗೆ ಸೇರಿ ಕಾವೇರಿ ನೀರಿನ ಸಮಸ್ಯೆ, ರೈತರಿಗೆ ಬೆಂಬಲ ಬೆಲೆಗಾಗಿ ನಡೆದ ಹೋರಾಟ, ಡಬ್ಬಿಂಗ್ ವಿವಾದ ಮುತಾಂದ ಹೋರಾಟಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡು ಕನ್ನಡ ಸೇವೆಗೆ ಕಾಣಿಕೆ ಸಲ್ಲಿಸುತ್ತಿದ್ದಾರೆ.

ಕನ್ನಡ ಕ್ರಿಯಾ ಸಮಿತಿಯ ಉಪಾಧ್ಯಕ್ಷರಾಗಿಯೂ ಉತ್ತಮ ಸೇವೆ ಸಲ್ಲಿಸುತ್ತಿರುವ ಅವರನ್ನು ವಿಜಯಪುರದ ಜನರು ಪ್ರೀತಿಯಿಂದ ‘ಕನ್ನಡ ಆಂಜಿನಪ್ಪ’ ಎಂದು ಕರೆಯುತ್ತಾರೆ.

**

ಕನ್ನಡ ಉಳಿವಿಗೆ ತಂಡ ರಚನೆ

ಈಚೆಗೆ ಆರಂಭಿಸಿರುವ ಕನ್ನಡಾಭಿಮಾನಿಗಳ ಸಂಘದ ಮೂಲಕ ಗ್ರಾಮಾಂತರ ಪ್ರದೇಶಗಳಿಗೆ ಭಾಷಾ ಸೊಗಡು ತಲುಪಿಸುವ ಉದ್ದೇಶದಿಂದ ಅನೇಕ ಹಳ್ಳಿಗಳಲ್ಲಿ ಯುವಜನರನ್ನು ಸಂಘಟಿಸಿ ಸಣ್ಣ ತಂಡವನ್ನಾಗಿ ಮಾಡಿ ಪುಸ್ತಕಗಳನ್ನು ವಿತರಣೆ ಮಾಡುತ್ತಿದ್ದಾರೆ.

ನೆರೆಯ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಹಾಸನ, ಮೈಸೂರು, ಬೆಂಗಳೂರು, ಗಡಿಭಾಗಗಳಾದ ಬಾಗೇಪಲ್ಲಿ, ಚೇಳೂರು, ಮುಂತಾದ ಕಡೆಗಳಲ್ಲಿ ಕನ್ನಡದ ಉಳಿವಿಗಾಗಿ ತಂಡಗಳನ್ನು ರಚನೆ ಮಾಡಿದ್ದಾರೆ.

**

–ಎಂ. ಮುನಿನಾರಾಯಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT