ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸ್ವಾಧೀನ ಉತ್ಸಾಹ ಉಡುಗದಿರಲಿ...

ಹೊಸ ತಿದ್ದುಪಡಿಯ ಪ್ರಯೋಜನಗಳು
Last Updated 15 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಗಾರಿಕಾ ಅಭಿವೃದ್ಧಿ ಮಂಡಳಿ (ಕೆ.ಐ.ಎ.ಡಿ.ಬಿ) ರೈತರಿಂದ ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ಕೈಗಾರಿಕೆಗಳಿಗೆ ಲೀಜ್ ಕಮ್ ಸೇಲ್ ಆಧಾರದಲ್ಲಿ ಹಂಚಿಕೆ ಮಾಡುವ ನಿಯಮದಲ್ಲಿ ರಾಜ್ಯ ಸಚಿವ ಸಂಪುಟವು ಮಹತ್ವದ ತಿದ್ದುಪಡಿ ತಂದಿದೆ. ಈ ಹಿಂದೆ ಕೆ.ಐ.ಎ.ಡಿ.ಬಿ 99 ವರ್ಷಗಳ ಅವಧಿಗೆ ಗುತ್ತಿಗೆ ಕೊಡುವ ಬಗ್ಗೆ ಕಾನೂನು ಜಾರಿಯಲ್ಲಿ ಇತ್ತು.

ಈ ಹೊಸ ತಿದ್ದುಪಡಿಯಿಂದ 15 ವರ್ಷದ ಒಳಗೆ ಯೋಜನೆ ಪೂರ್ಣಗೊಂಡರೆ ಆ ದಿನದಿಂದ ಅನ್ವಯವಾಗವಂತೆ ಉದ್ದಿಮೆ ಸಂಸ್ಥೆಗೆ ಕ್ರಯ ಪತ್ರ ಮಾಡಿಕೊಡಲಾಗುವುದು. ಇದರಿಂದ ಕೈಗಾರಿಕೆಯು ಭೂಮಿಯ ಸಂಪೂರ್ಣ ಒಡೆತನ ಹೊಂದುವುದು. ಇದು ನಿಜಕ್ಕೂ ವೈಜ್ಞಾನಿಕ ನಿಲುವು. ಮೊದಲಿನ ನಿಯಮ ಪ್ರಕಾರ 99 ವರ್ಷ ತುಂಬ ದೀರ್ಘವಾಗಿತ್ತು. ಉದ್ದಿಮೆಗಳಿಗೆ ಲಾಭ ಮಾಡಲು ಈ ಬದಲಾವಣೆ ತರಲಾಗಿದೆ ಎಂದು ಕೆಲವರು ಆರೋಪಿಸುತ್ತಿರುವುದು ಸರಿಯಲ್ಲ. ವೈಜ್ಞಾನಿಕವಾಗಿ ವಾಸ್ತವದ ಬೆಳಕಿನಲ್ಲಿ ನೋಡಿದರೆ ಇದು ಸರಿಯಾದ ಕ್ರಮವಾಗಿದೆ.  
 
ಕೈಗಾರಿಕೆಗಳಿಗೆ ಭೂಮಿ ಪಡೆಯುವುದು ತೀರ ಕಠಿಣವಾದ ಕೆಲಸ. ನಿರ್ದಿಷ್ಟ  ಪ್ರದೇಶದಲ್ಲಿ ಕೈಗಾರಿಕಾ ಘಟಕ ಅಸ್ತಿತ್ವಕ್ಕೆ ಬರಲಿದೆ  ಎಂಬುದು ಗೊತ್ತಾಗುತ್ತಲೇ   ಸಮಯ ಸಾಧಕರು, ಹೋರಾಟಗಾರರು,  ಮಧ್ಯವರ್ತಿಗಳು ಮತ್ತು ಮೋಜು ನೋಡುವವರು ಸಹಜವಾಗಿಯೇ ಹುಟ್ಟಿಕೊಳ್ಳುತ್ತಾರೆ. ಭೂಮಿ ಮಾರಾಟ ಮಾಡಲು ಭೂಮಾಲೀಕರ ಬಳಿ ಸರಿಯಾದ ದಾಖಲೆಗಳು ಇರುವುದಿಲ್ಲ. 3-4 ತಲೆಮಾರುಗಳಿಂದ ವಾರಸಾ ಆಗಿರುವುದಿಲ್ಲ.  

ಸಹೋದರರ ನಡುವೆ ಮೌಖಿಕ ಭೂಮಿ ಹಂಚಿಕೆಯಾಗಿರುತ್ತದೆ. ಆದರೆ ಅದನ್ನು ‘ಭೂಮಿ ಕೇಂದ್ರ’ದಲ್ಲಿ ದಾಖಲಿಸಿರುವುದಿಲ್ಲ. ಬಹಳಷ್ಟು ರೈತರು ಈ ಭೂಮಿಯ ಆಧಾರದ ಮೇಲೆ ಬ್ಯಾಂಕಗಳಲ್ಲಿ ಸಾಲ ಪಡೆದಿರುತ್ತಾರೆ. ಅದು ಕೆಲವು ಸಂದರ್ಭದಲ್ಲಿ ಕುಟುಂಬದ ಇತರ ಸದಸ್ಯರಿಗೆ ತಿಳಿದಿರುವುದಿಲ್ಲ.

ಭೂಮಿಯ ಕ್ಷೇತ್ರ ಮಾಹಿತಿ ಸರಿಯಾಗಿರುವುದಿಲ್ಲ. ಕೋರ್ಟ್‌ನಲ್ಲಿ ವ್ಯಾಜ್ಯಗಳಿರುತ್ತವೆ. ಇವುಗಳನ್ನೆಲ್ಲ ಸರಿಪಡಿಸಿದ ನಂತರವೇ ಭೂಮಿ ಖರೀದಿಗೆ ಒಪ್ಪಿಗೆ ದೊರೆಯುತ್ತದೆ. ಇದನ್ನೆಲ್ಲ ನಿಭಾಯಿಸುವಲ್ಲಿ ಉದ್ದಿಮೆ ಸ್ಥಾಪಿಸುವವರ ಉತ್ಸಾಹವೇ ಕುಗ್ಗಿ ಹೋಗಿರುತ್ತದೆ. ಬಹಳ ಸಮಯವೂ ವ್ಯರ್ಥವಾಗುತ್ತದೆ. 
 
ನನಗೆ  ಸುಮಾರು 3 ದಶಕಗಳಿಂದ ಕೈಗಾರಿಕೆಗೆ ಭೂಮಿ ಖರೀದಿಸುವ ಕೆಲಸದ ಉಸ್ತುವಾರಿ ವಹಿಸಿದ ಅನುಭವವಿದೆ. ಒಂದು ಉದಾಹರಣೆ ಹೇಳುವುದಾದರೆ ಒಂದು  ಕಾರ್ಖಾನೆ ಸ್ಥಾಪನೆಗೆ ರಾಜ್ಯ ಕೈಗಾರಿಕಾ ಉನ್ನತ ಸಮಿತಿ 160 ಎಕರೆ ಭೂಮಿ ಖರೀದಿಸಲು ಅನುಮತಿ ನೀಡಿತ್ತು.  

ಕಾರ್ಖಾನೆಯ ಮಾಲೀಕರು ನೇರವಾಗಿ ರೈತರ ಮನ ಒಲಿಸಿ ಅವರ ಒಪ್ಪಿಗೆ ಪಡೆದು 140 ಎಕರೆ ಭೂಮಿ ಖರೀದಿಸಿದರು ಆದರೆ, ಮಧ್ಯದಲ್ಲಿ ಇದ್ದ ಇಬ್ಬರು ರೈತರು 20 ಎಕರೆ ಭೂಮಿ ಕೊಡಲು ಒಪ್ಪದ್ದರಿಂದ ಆ ಕಾರ್ಖಾನೆ ಕಟ್ಟುವ ಕೆಲಸ ನಿಂತು ಹೋಗಿದೆ. ಈ 20 ಎಕರೆ ಭೂಮಿ ಪಡೆಯುವುದಕ್ಕೆ  ಕೆಐಎ ಡಿಬಿ ಮೂಲಕ ಆಡಳಿತ ಮಂಡಳಿಯವರು ಪ್ರಯತ್ನಿಸುತ್ತಿದ್ದಾರೆ. ಈ ನಡುವೆ ಭೂ ಮಾಲಿಕರು ಕೋರ್ಟ ಕಟ್ಟೆ ಏರಿದ್ದಾರೆ. ಇದು ಇತ್ಯರ್ಥವಾಗುವದಕ್ಕೆ ಎಷ್ಟು ವರ್ಷಗಳು ಬೇಕಾಗುವುದೋ ಗೊತ್ತಿಲ್ಲ.   
 
ನಾಡಿನ ಚಿಂತಕರು, ಸಾಹಿತಿಗಳು, ಬರಹಗಾರರು, ತಾವು ರೈತರ ಪರ, ಜನಪರ ಎಂದು ತೋರಿಸಿಕೊಳ್ಳಲು ಧಾವಿಸುತ್ತಾರೆ.  ಇನ್ನು ರೈತರು ಬದುಕುವುದೇ ಸಾಧ್ಯವಿಲ್ಲ. ರೈತರು ಭೂಮಿ ಕಳೆದುಕೊಂಡು ಕೂಲಿಗಳಾಗುತ್ತಾರೆ. ಆಹಾರ ಭದ್ರತೆಗೆ ಧಕ್ಕೆಯಾಗುತ್ತದೆ. ಹೊಲ ಮಾರಿ ಬಂದ ಹಣವನ್ನು ಹಳ್ಳಿ ರೈತರು ಮಜಾ ಮಾಡಿ ಹಾಳುಮಾಡಿಕೊಂಡು ದಿವಾಳಿ ಏಳುತ್ತಾರೆ. ಹೀಗೆ ಅನೇಕ ರೀತಿಯ ತರ್ಕ ಮಾಡಿ ಕಾಲ್ಪನಿಕ ಸಮಸ್ಯೆಗಳನ್ನು ಬಿಂಬಿಸಿ ದೊಡ್ಡ ಭಯ ಸೃಷ್ಟಿಸುತ್ತಾರೆ.
ಭಯಪಡಬೇಕಿಲ್ಲ
 
ಬಹುತೇಕ ಜನತೆಗೆ ಗೋತ್ತಾಗಿದೆಯೋ ಇಲ್ಲವೋ. ದೇಶದಲ್ಲಿ ಈಗ ಸ್ಥಾಪಿಸಲು ಉದ್ದೇಶಿಸಿರುವ ಎಲ್ಲ ಸಣ್ಣ ಹಾಗೂ ದೊಡ್ಡ ಕೈಗಾರಿಕೆಗಳಿಗೆ ಬೇಕಾಗುವ  ಒಟ್ಟು ಭೂಮಿ ಪ್ರಮಾಣ ಸಾಗುವಳಿ ಜಮೀನಿನ ಶೇ 0.02  ಭಾಗ ಮಾತ್ರ.  ಅಂದರೆ 10 ಸಾವಿರ ಎಕರೆಗೆ 2 ಎಕರೆ ಮಾತ್ರ ಕೈಗಾರಿಕೆಗೆ ಬೇಕು.

ದೇಶದ ಒಟ್ಟು ಸಾಗುವಳಿ ಕ್ಷೇತ್ರಕ್ಕೆ ಹೋಲಿಸಿದರೆ ಇದು ತೀರ ಅಲ್ಪ. ಆಹಾರ ಭದ್ರತೆಗೆ ಯಾವುದೇ ತೊಂದರೆ ಇಲ್ಲ. ಕೃಷಿಗೂ ಅನೇಕ ರೀತಿಯಲ್ಲಿ ಉದ್ದಿಮೆಗಳು ನೆರವಾಗುತ್ತವೆ. ಕೃಷಿ ಆಧಾರಿತ ಉದ್ದಿಮೆಗಳು ಹೆಚ್ಚಿನ ಸಂಖ್ಯೆಯಲ್ಲಿ ತಲೆ ಎತ್ತುತ್ತಿವೆ. ಇದು ಒಳ್ಳೆಯ ಬೆಳವಣಿಗೆ.  
 
ಒಂದು ಸಕ್ಕರೆ ಸಮೂಹ ಘಟಕಕ್ಕೆ ಅಂದರೆ ಸಕ್ಕರೆ,  ವಿದ್ಯುತ್‌, ಡಿಸ್ಟಿಲರಿ ಘಟಕಗಳನ್ನು ಕಟ್ಟಲು ಹೆಚ್ಚೆಂದರೆ ಒಟ್ಟು 200 ಎಕರೆ ಭೂಮಿ ಸಾಕು. ಆದರೆ, ಒಂದು ಕಾರ್ಖಾನೆ ಒಂದು ತಾಲ್ಲೂಕಿನ ವ್ಯಾಪ್ತಿಯಲ್ಲಿ ಬೆಳೆದ ಕಬ್ಬು ಖರೀದಿಸಿ ಸಕ್ಕರೆ ಮಾಡುತ್ತದೆ. ರೈತ ಬೆಳೆದ ಕಬ್ಬು ಮಾರಾಟ ಮಾಡಲು ಸಕ್ಕರೆ ಕಾರ್ಖಾನೆ ಅವಶ್ಯ ಬೇಕು. ಹಾಗೆಯೇ ಕಾರ್ಖಾನೆಗೆ ಅವಶ್ಯವಿರುವ ಭೂಮಿಯನ್ನು ರೈತರು ಒದಗಿಸಲೇಬೇಕು. 
 
ಪರಿಸರ ಕಾಳಜಿ ಅವಶ್ಯ
ಕೈಗಾರಿಕೆಗಳು ಬರುವುದರಿಂದ ಪರಿಸರದ ಮೇಲೆ ವಿಪರೀತ ಪರಿಣಾಮ ಉಂಟಾಗುತ್ತದೆ ಎಂಬ ವಾದ ಇದೆ. ಇದು ಒಪ್ಪಬೇಕಾದ ಸಂಗತಿ. ಆದರೆ, ಆಧುನಿಕ ತಂತ್ರಜ್ಞಾನ ಬಹಳ ಬೆಳೆದಿದೆ.   
 
ಕಲ್ಮಶ ನೀರು ಶುದ್ಧೀಕರಿಸುವ ತಂತ್ರಜ್ಞಾನ ಬೆಳೆದಿದೆ. ಇದಕ್ಕೆ ಹೆಚ್ಚು ವೆಚ್ಚ ತಗಲುತ್ತದೆ. ಆದರೆ ಇದನ್ನು ಕಡ್ಡಾಯ ಮಾಡಬೇಕು. ಉದ್ದಿಮೆದಾರರು ಜನರ ಆರೋಗ್ಯ ದೃಷ್ಟಿಯಿಂದ ಎಲ್ಲ ಮುನ್ನೆಚ್ಚರಿಕೆ ವಹಿಸುವುದು ಅವಶ್ಯ. 
 
ರೈತ ವರ್ಗಕ್ಕೆ ಭೂಮಿಯ ಬಗ್ಗೆ ಅಪಾರ ಪ್ರೀತಿ ಭಕ್ತಿ ಇದೆ. ಭೂಮಿಯನ್ನು ಭೂಮಾತೆ ಎಂದು ಪೂಜಿಸುತ್ತಾರೆ. ತಾವು ಹೊಲದಲ್ಲಿ ಬೆಳೆದ ಬೆಳೆಯನ್ನು ಪೂಜೆ ಮಾಡಿ ಅದರ ಮೊದಲ ಸ್ವಲ್ಪ ಫಸಲನ್ನು ತನ್ನ ಹಳ್ಳಿಯ ದೇವಸ್ಥಾನಕ್ಕೆ, ಮಠಕ್ಕೆ ಕೊಟ್ಟು ಸಂಭ್ರಮಿಸುತ್ತಾರೆ.

ಭೂಮಿ ರೈತರ ಪಾಲಿಗೆ ಭೌತಿಕ ನೆಲವಲ್ಲ. ಅದು ಭಾವನಾತ್ಮಕ ಸಂಬಂಧ ಹೊಂದಿದ ಸಂಪತ್ತು. ಆದರೆ ಭೂಮಿ ಒಂದು ವ್ಯವಹಾರಿಕ ವಸ್ತು ಕೂಡ ಹೌದು. ಭೂಮಿ ಖರೀದಿ ಮತ್ತು ಮಾರಾಟ ಸದಾ ನಡೆಯುತ್ತಿದೆ. ಭೂಮಿ ನೋಂದಣಿ ಕಚೇರಿಗಳಲ್ಲಿ ಪ್ರತಿ ದಿನ ಭೂಮಿ ಮಾರಾಟ ಹಾಗೂ ಖರೀದಿ ವ್ಯವಹಾರಗಳು ನಡೆಯುತ್ತಿವೆ. 
 
ಈ ಕಾರಣಕ್ಕೆ, ರಾಜಕೀಯದಿಂದ ಒಂದಿಷ್ಟು ದೂರನಿಂತು ಪೂರ್ವನಿರ್ಧರಿತ ಮನಸ್ಥಿತಿ ಬಿಟ್ಟು, ದೇಶದ ಸಮಗ್ರ ಉನ್ನತಿ ದೃಷ್ಟಿಯಿಂದ ತರ್ಕಬದ್ಧವಾಗಿ ಆಲೋಚಿಸಿದರೆ ಭೂಸ್ವಾಧೀನ ಅನಿವಾರ್ಯ ಮತ್ತು ಉದ್ದಿಮೆಗಳಿಗಾಗಿ ಭೂಸ್ವಾಧೀನ ಸರಳಗೊಳಿಸುವುದು ಅತ್ಯಂತ ಅವಶ್ಯವೆಂಬುದು ಸ್ಪಷ್ಟವಾಗುತ್ತದೆ.
 
ಉದ್ದಿಮೆಗಳನ್ನು ಕಟ್ಟಲು ಸರಿಯಾದ ಸ್ಥಳದ ಆಯ್ಕೆ ಮಾಡಬೇಕಾಗುತ್ತದೆ. ಉದ್ದಿಮೆಗಳಿಗೆ ಸಮೀಪದಲ್ಲಿ ಸಾಕಷ್ಟು ಕಚ್ಚಾ ವಸ್ತು ಪೂರೈಕೆಯಾಗಬೇಕು. ಸಾರಿಗೆ ಸಂಪರ್ಕ ಸಮಪರ್ಕವಾಗಿ ಇರಬೇಕು. ವಿದ್ಯುತ್, ನೀರು ಸಾಕಷ್ಟು ದೊರಕಬೇಕು.

ಕಾರ್ಖಾನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ದುಡಿಯುವ ಕೈಗಳು ಕೆಲಸಕ್ಕೆ ಬರಬೇಕು. ಇಂಥ ಸೂಕ್ತ ನಿವೇಶನ ಗುರುತಿಸಿ ಕಾರ್ಖಾನೆಗಳನ್ನು ಕಟ್ಟಿದರೆ ಮಾತ್ರ ಅಂಥ ಕೈಗಾರಿಕೆಗಳು ಚೆನ್ನಾಗಿ ನಡೆಯುತ್ತವೆ. 
 
ನಿರುದ್ಯೋಗ ದೇಶವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ. ಪ್ರತಿಭಾವಂತರನ್ನು ಯುವಜನರನ್ನು ಉದ್ಯಮೀಕರಣದತ್ತ ಕರೆದೊಯ್ಯುವ ಮೂಲಕ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇದೆಲ್ಲದರ ಮಧ್ಯೆ ಸ್ವಂತ ಉದ್ಯಮ ಆರಂಭಿಸಬೇಕು. ಸ್ವಾವಲಂಬಿ ಆಗಬೇಕು ಎಂಬ ಕನಸಿನ ಬಹಳಷ್ಟು ಪ್ರತಿಭಾವಂತರು ನಮ್ಮ ನಡುವೆ ಇದ್ದಾರೆ. ಭೂಮಿ ಪಡೆಯುವ ಪ್ರತಿಕೂಲ ಸನ್ನಿವೇಶಗಳು ಎದುರಾದರೆ ಅವರು ಹುಮ್ಮಸು ಕಳೆದುಕೊಳ್ಳುತ್ತಾರೆ.
 
ಮುಂಬರುವ ದಿನಗಳಲ್ಲಿ 55 ಕೋಟಿ ಯುವಕರಿಗೆ ಅಗತ್ಯವಾದ ಉದ್ಯೋಗ ಸೃಷ್ಟಿಸಬೇಕಾಗಿದೆ. ರಾಷ್ಟ್ರೀಯ ಕೈಗಾರಿಕಾ ನೀತಿ ರೂಪಿಸಲಾಗಿದೆ. ಆ ಮೂಲಕ ದೇಶದ ಕೈಗಾರಿಕೆ ಕ್ಷೇತ್ರಕ್ಕೆ ಹೊಸ ಯುವ ಉದ್ಯಮಿಗಳನ್ನು ಸೇರ್ಪಡೆಗೊಳಿಸುವುದು ಅಗತ್ಯವಾಗಿದೆ. 
 
ಕೈಗಾರಿಕೆಗೆ ಭೂಮಿ ಪಡೆಯುವುದನ್ನು ಚೀನಾ ಅತ್ಯಂತ ಸರಳಗೊಳಿಸಿದೆ. ಸರಕಾರವೇ ಕೈಗಾರಿಕೆಗಳಿಗೆ ಬೇಕಾದ ಭೂಮಿ   ನಿಗದಿಪಡಿಸುತ್ತದೆ. 200 ದಿನಗಳಲ್ಲಿ ಉದ್ದಿಮೆ ಸ್ಥಾಪನೆಗೆ ಬಿಟ್ಟು ಕೊಡಲಾಗುತ್ತದೆ. ಭೂಮಿ ಕೊಟ್ಟವರಿಗೂ ಇದೇ ಅವಧಿಯಲ್ಲಿ ಪುನರ್ ವಸತಿ ಕಲ್ಪಿಸಲಾಗುತ್ತದೆ.  
 
ಜನಪ್ರತಿನಿಧಿಗಳು, ರೈತರು ತೆರೆದ ಮನಸ್ಸಿನಿಂದ ಚರ್ಚಿಸಿ ಕೈಗಾರಿಕೆಗಳ ಸ್ಥಾಪನೆಗೆ ಮತ್ತು ಅವುಗಳಿಗೆ ಬೇಕಾಗುವ ಭೂಮಿ ಒದಗಿಸುವುದಕ್ಕೆ ಸರಳ ನಿಯಮಗಳನ್ನು ರಚಿಸಿ, ಪಾಲಿಸುವುದು  ಅಗತ್ಯವಾಗಿದೆ.
 
ಕೈಗಾರಿಕೆಗೆ ಭೂಮಿ  ಒದಗಿಸುವ ಕಾನೂನಿನ ವಿವರ
ಮುಖ್ಯಮಂತ್ರಿ  ಅಧ್ಯಕ್ಷತೆಯ ಉನ್ನತಮಟ್ಟದ ಸಮಿತಿ  ಸಭೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಅನುಮತಿ ನೀಡಲಾಗುತ್ತದೆ. ಅದಕ್ಕೆ ಬೇಕಾಗುವ ಭೂಮಿ ಖರೀದಿಸಲು ಒಪ್ಪಿಗೆಯನ್ನು ಕೂಡ ಅನುಮತಿ ಪತ್ರದಲ್ಲಿ ದಾಖಲಿಸಲಾಗುತ್ತದೆ. ಉದಾಹರಣೆಗೆ ಸಕ್ಕರೆ ಕಾರ್ಖಾನೆ ಒಂದನ್ನು ಕಟ್ಟಲು 200 ಎಕರೆ ಭೂಮಿ ಬೇಕು. ಕಾರ್ಖಾನೆಯ ಆಡಳಿತ ಮಂಡಳಿಯವರು ತಿಳಿಸಿದ ಪ್ರದೇಶದಲ್ಲಿ 200 ಎಕರೆ ಭೂಮಿ ಖರೀದಿಸಲು ಸರಕಾರ ಅನುಮತಿ ನೀಡುತ್ತದೆ.

ಈ 200 ಎಕರೆ ಭೂಮಿಯಲ್ಲಿ 160 ಎಕರೆ ಭೂಮಿ ಅಂದರೆ ಶೇ 80ರಷ್ಟು ಭೂಮಿಯನ್ನು ಕಾರ್ಖಾನೆಯ ಆಡಳಿತ ಮಂಡಳಿಯವರೇ ರೈತರ ಮನ ಒಲಿಸಿ ಖರೀದಿಸಬೇಕು. ಉಳಿದ ಶೇ 20ರಷ್ಟು  ಭೂಮಿ ಮಾತ್ರ ಕೆಐಎಡಿಬಿ ನಿಯಮಾನುಸಾರ ವಶಪಡಿಸಿಕೊಳ್ಳುತ್ತದೆ. ಇದು ಅತ್ಯಂತ ದೀರ್ಘ ಪ್ರಕ್ರಿಯೆ. ಇದೆಲ್ಲ ಮುಗಿಯಲು 3-4 ವರ್ಷ ಕಳೆಯುತ್ತವೆ. ಮುಂದೆ ಕೈಗಾರಿಕೆಗಾಗಿ ಭೂಮಿ ಪರಿವರ್ತನೆ ಪ್ರಕ್ರಿಯೆ ನಡೆಯುತ್ತದೆ. ಕೈಗಾರಿಕೆ ಉದ್ದೇಶಕ್ಕೆ ನಿಯಮ 109 ರ ಪ್ರಕಾರ ಭೂ ಪರಿವರ್ತನೆಗೆ ಕೂಡ ಅನೇಕ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅಧಿಕಾರಿಗಳ ಕಾಟ, ವಿಳಂಬ ನೀತಿ ಎಲ್ಲವನ್ನೂ ಕಾರ್ಖಾನೆಯವರು ಸಹಿಸಿಕೊಳ್ಳಬೇಕಾಗುತ್ತದೆ.

ದೇಶದ ಸರ್ವತೋಮುಖ ಅಭಿವೃದ್ಧಿಗೆ ಕೈಗಾರಿಕೆಗಳು ಬೇಕು ಎನ್ನುವುದನ್ನು ಎಲ್ಲರೂ ಒಪ್ಪಲೇಬೇಕು.  ನಿಮಗೊಂದು ಇತ್ತೀಚಿನ ರೋಚಕ ಉದಾಹರಣೆ ಹೇಳಬಯಸುತ್ತೇನೆ. ವಿಜಯಪುರ ಜಿಲ್ಲೆಯ ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣ ಕಾಲಕ್ಕೂ ಬಹಳ ವಿರೋಧ, ಪ್ರತಿಭಟನೆಗಳು ನಡೆದವು. ಆಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಕಾಂಗ್ರೆಸ್ ವಿರೋಧಿ ಪಕ್ಷವಾಗಿತ್ತು. ಕಾಂಗ್ರೆಸ್ ನಾಯಕರು, ಶಾಸಕರು ಕೂಡಗಿ ಉಷ್ಣಸ್ಥಾವರ ವಿರೋಧಿಸಿ ಪಾದಯಾತ್ರೆ ಮಾಡಿದರು. 2014 ರ ಚುನಾವಣೆ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಬಿ.ಜೆ.ಪಿ ವಿರೋಧಿ ಸ್ಥಾನದಲ್ಲಿ ಕುಳಿತಿದೆ.

ಕೂಡಗಿ ಸ್ಥಾವರ ವಿರೋಧಿಸಿ ಹಿಂದೆ ಪಾದಯಾತ್ರೆ ಮಾಡಿದ ಎಂ. ಬಿ ಪಾಟೀಲ ಅವರು ವಿಜಯಪುರ ಜಿಲ್ಲೆಯ ಉಸ್ತುವಾರಿ ಮಂತ್ರಿ ಆಗಿದ್ದಾರೆ. ಹಾಗೆಯೇ ಪ್ರತಿಭಟನೆ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಉಮಾಶ್ರೀ ಬಾಗಲಕೋಟ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ. ವಿರೋಧ ಪಕ್ಷವಾಗಿದ್ದಾಗ ಪ್ರತಿಭಟಿಸಿದ್ದ ಈ ಕಾಂಗ್ರೆಸ್ ನಾಯಕರು ತಾವೇ ಮುಂದೆ ನಿಂತು ಉಷ್ಣಸ್ಥಾವರ ಕಟ್ಟಿದರು.
 
ವಿರೋಧ ಪಕ್ಷದಲ್ಲಿದ್ದಾಗ ಕಾಂಗ್ರೆಸ್ಸಿಗೆ ಇದು ತಿಳಿದಿರಲಿಲ್ಲವೆ ? ಎಲ್ಲವೂ ಗೊತ್ತಿತ್ತು. ಅವರಿಗೆ ನೆಪಕ್ಕೆ ಒಂದು ಹೋರಾಟ ಬೇಕಿತ್ತು ಅಷ್ಟೆ. ರಾಜಕೀಯ ಪಕ್ಷಗಳು ಇಂಥ ದ್ವಂದ್ವ ನಿಲುವು ನಿಲ್ಲಿಸಿ ದೇಶದ ಸಮಗ್ರ ಅಭಿವೃದ್ಧಿಯ ಬಗ್ಗೆ ಚಿಂತಿಸುವುದು ಅವಶ್ಯವಿದೆ. ಗಮನಿಸಬೇಕಾದ ಇನ್ನೊಂದು ಮಹತ್ವದ ಸಂಗತಿ ಏನೆಂದರೆ, ನಾವೆಲ್ಲರೂ ಭೂ ಸ್ವಾಧೀನಕ್ಕೆ ಅನುಸರಿಸುತ್ತಿದ್ದ ಕಾಯ್ದೆ 1894ರಲ್ಲಿ ಜಾರಿಯಾಗಿದೆ. ಅಂದರೆ 129 ವರ್ಷಗಳ ಹಿಂದೆ ರಚಿಸಿದ ಕಾನೂನು. ದೇಶದ ಜನರ ಬದುಕಿನ ಕ್ರಮದಲ್ಲಿ ಈಗ ಸಾಕಷ್ಟು ಬದಲಾವಣೆಯಾಗಿದೆ. ಡಿಜಿಟಲ್ ಯುಗಕ್ಕೆ ಕಾಲಿಟ್ಟಿದ್ದೇವೆ.

ಕೃಷಿ, ಸಾರಿಗೆ, ಸಂಪರ್ಕ, ಶಿಕ್ಷಣ, ಹಣಕಾಸು, ಮನರಂಜನೆ, ಆರೋಗ್ಯ ಎಲ್ಲ ರಂಗಗಳಲ್ಲಿ ವಿಜ್ಞಾನದ ಆವಿಷ್ಕಾರಗಳಿಂದ ಕ್ರಾಂತಿಕಾರಕ ಬದಲಾವಣೆಗಳಾಗಿವೆ. ಇಂದಿನ ನಾಗರಿಕರ ಅವಶ್ಯಕತೆಗಳನ್ನು ತ್ವರಿತವಾಗಿ ಸಾಕಷ್ಟು ಪ್ರಮಾಣದಲ್ಲಿ ಪೂರೈಸುವುದು ಬೃಹತ್ ಉದ್ದಿಮೆಗಳಿಂದ ಮಾತ್ರ ಸಾಧ್ಯ. ನಮಗೆ ಸಿಮೆಂಟ್, ಉಕ್ಕು, ವಿದ್ಯುತ್, ಔಷಧ, ವಾಹನಗಳು, ತೈಲ ಸಂಪರ್ಕ ಸಾಧನಗಳು ಈಗ ನಿತ್ಯ ಅವಶ್ಯಕ ವಸ್ತುಗಳಾಗಿವೆ. ಇವುಗಳ ತಯಾರಿಕೆಗಾಗಿ ನಾವು ಕೈಗಾರಿಕೆಗಳನ್ನು ಆಶ್ರಯಿಸಲೇಬೇಕಾದ ಅನಿವಾರ್ಯತೆ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT