ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಯ

ಪಿಚ್ಚರ್ ನೋಡಿ
Last Updated 15 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಸುಕುಮಾರ್‌ ನಿರ್ದೇಶನದ ಮೊದಲ ಸಿನಿಮಾ ‘ಆರ್ಯ’ ಬಿಡುಗಡೆಯಾಗಿದ್ದು 2004ರಲ್ಲಿ. ಅಲ್ಲು ಅರ್ಜುನ್‌ ಮತ್ತು ಅನುರಾಧಾ ಮೆಹ್ತಾ ನಾಯಕ ನಾಯಕಿಯಾಗಿ ನಟಿಸಿದ್ದ ಈ ಸಿನಿಮಾ ತೆಲುಗು ಚಿತ್ರರಂಗದಲ್ಲಿ ಎಬ್ಬಿಸಿದ ಯಶಸ್ಸಿನ ಅಲೆ ದೊಡ್ಡದು.

ಒರಿಯಾ, ತಮಿಳು, ಬಂಗಾಳಿ ಭಾಷೆಗಳಲ್ಲಿ ರೀಮೇಕ್‌ ಆಗಿರುವ ಈ ಸಿನಿಮಾ ಹಿಂದಿ, ಮಲಯಾಳಂ ಸೇರಿದಂತೆ ಹಲವು ಭಾಷೆಗಳಿಗೆ ಡಬ್‌ ಕೂಡ ಆಗಿದೆ.

ನವಿರು ಪ್ರೇಮ, ತಿಳಿ ಹಾಸ್ಯ, ಅದನ್ನು ಕದಡಲು ಕೇಡಿಗಳ ದಂಡು ಈ ನಿರ್ದಿಷ್ಟ ಸೂತ್ರಗಳನ್ನೇ ಇಟ್ಟುಕೊಂಡು ರೂಪಿತವಾಗಿದ್ದರೂ ಅದನ್ನು ಹೇಳುವ ಕ್ರಮದಲ್ಲಿಯೇ ಆರ್ಯ ಇಷ್ಟವಾಗುತ್ತದೆ. ಆರ್ಯ ಗೀತಾಳನ್ನು ಪ್ರೇಮಿಸುತ್ತಿದ್ದಾನೆ. ಆದರೆ ಗೀತಾ ಈಗಾಗಲೇ ಅಜಯ್‌ ಎಂಬ ಇನ್ನೊಬ್ಬ ಹುಡುಗನ ಪ್ರೇಮ ನಿವೇದನೆಗೆ ಒಪ್ಪಿಗೆ ಸೂಚಿಸಿದ್ದಾಳೆ.

ಅವನು ಶ್ರೀಮಂತ, ರಾಜಕಾರಣಿಯ ಮಗ. ಅವನಿಗೆ ಅಂತಸ್ತಿನ ವಿಷಯದಲ್ಲಿ ಯಾವ ರೀತಿಯಲ್ಲಿಯೂ ಸಾಟಿಯಾಗದ ಆರ್ಯ, ತನ್ನ ಒಳ್ಳೆಯತನದಿಂದಲೇ ಗೀತಾಳ ಮನಸನ್ನು ಗೆದಿಯುತ್ತಾನೆ. ತನ್ನ ಪ್ರೀತಿಯ ನದಿ ದಿಕ್ಕು ಬದಲಿಸಿರುವುದು ತಿಳಿದಿದ್ದರೂ ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲಾಗದ ಪರಿಸ್ಥಿತಿ ಗೀತಾಳದು.

ಪ್ರೇಮದ ಸೂಚನೆಗಳು, ಮುಗ್ಧತೆಯ ಸೆಳೆತ, ತುಂಟತನ, ಸೌಂದರ್ಯ, ಲವಲವಿಕೆ ಎಲ್ಲವನ್ನೂ ನಿರ್ದೇಶಕರು ಹದವಾಗಿ ಬೆರೆಸಿ ‘ಆರ್ಯ’ ಸಿನಿಮಾ ಕಟ್ಟಿದ್ದಾರೆ. ಸುಮಧುರ ಹಾಡುಗಳು ಈ ಸಿನಿಮಾದ ಇನ್ನೊಂದು ಪ್ರಮುಖ ಧನಾತ್ಮಕ ಅಂಶ. ಅನುರಾಧಾ ಅವರ ಸ್ನಿಗ್ಧ ಚೆಲುವು, ಅಲ್ಲು ಅರ್ಜುನ್‌ ಚೈತನ್ಯ ಎರಡೂ ಪೈಪೋಟಿಗೆ ಬಿದ್ದಿವೆ.

ಖಳನ ಪಾತ್ರದಲ್ಲಿಯೂ ದ್ವೇಷಿಸಲಾಗಷ್ಟು ಮುದ್ದಾಗಿರುವ ಶಿವ ಬಾಲಾಜಿ ಅವರನ್ನೂ ಮರೆಯಲಾಗುವುದಿಲ್ಲ. ಸಿನಿಮಾ ಬಿಡುಗಡೆಯಾದಾಗ ‘ಅ ಅಂಟೆ ಅಮಲಾಪುರ...’ ಎಂಬ ಹಾಡು ಪಡ್ಡೆ ಹುಡುಗರ ಹೆಜ್ಜೆ ಕುಣಿತಕ್ಕೆ ಒದಗಿಬರುವ ಸಾರ್ವಕಾಲಿಕ ಗೀತೆಯಾಗಿತ್ತು. ಜತೆಗೆ ‘ಯೇದೋ ಪ್ರಿಯರಾಗಂ’ ಎಂಬ ಗೀತೆಯಲ್ಲಿನ ಮಾಧುರ್ಯ ಇಂದಿಗೂ ಹಲವು ಪ್ರೇಮಿಗಳ ಎದೆಯಲ್ಲಿ ನೆಲೆನಿಂತಿದೆ.

ಮುಂದೆ ಅಲ್ಲು ಅರ್ಜುನ್‌ ಅವರನ್ನೇ ನಾಯಕರನ್ನಾಗಿಸಿಕೊಂಡು ‘ಆರ್ಯ 2’ ಎಂಬ ಇನ್ನೊಂದು ಸಿನಿಮಾವೂ ಬಂತು. ಇಂದಿಗೂ ಅಲ್ಲು ಅರ್ಜುನ್‌ ಅವರನ್ನು ಅನೇಕ ಅಭಿಮಾನಿಗಳು ಗುರ್ತಿಸುವುದು ‘ಆರ್ಯ’ನಾಗಿಯೇ ಎಂದರೆ ಆ ಸಿನಿಮಾದ ಪ್ರಭಾವ ಎಷ್ಟಿದೆ ಎಂದು ಊಹಿಸಬಹುದು. ಯೂ ಟ್ಯೂಬ್‌ನಲ್ಲಿ goo.gl/FHqXlt ಕೊಂಡಿ ಬಳಸಿ ಈ ಸಿನಿಮಾ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT