ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾವಂತ ಎಂದರೆ ಯಾರು?

ಬೆಳದಿಂಗಳು
Last Updated 15 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನಮ್ಮದು ಜ್ಞಾನಯುಗ. ಎಲ್ಲರಿಗೂ ಜ್ಞಾನದ ದಾಹ. ಇದಕ್ಕೆ ಸಾಕ್ಷ್ಯ ಏನು ಎಂದರೆ ನಮ್ಮ ಶಿಕ್ಷಣಸಂಸ್ಥೆಗಳು. ನಮ್ಮ ಸಮಾಜದಲ್ಲಿ ಯಾವ ಕಾಲಕ್ಕೂ ಇರದಷ್ಟು ಶಾಲಾ–ಕಾಲೇಜುಗಳು ಇಂದು ತಲೆ ಎತ್ತಿವೆ. ನಮ್ಮ ಜನರಿಗೂ ಶಿಕ್ಷಣದ ಹಿರಿಮೆ ಏನೆಂದು ಗೊತ್ತಾದಂತಿದೆ.

ಆದುದರಿಂದಲೇ ಲಕ್ಷಾಂತರ ರೂಪಾಯಿಗಳನ್ನು ಸುರಿದು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಉಮೇದು ತೀವ್ರವಾಗಿದೆ. ಶಿಕ್ಷಣವನ್ನು ಜೀವನದ ಅನಿವಾರ್ಯ ಎಂದು ನಾವೆಲ್ಲರೂ ಭಾವಿಸಿಕೊಂಡಿರುವುದರಿಂದಲೇ ಅದು ಒಂದು ಉದ್ಯಮವಾಗಿದೆ ಎನ್ನುವುದು ಸುಳ್ಳಲ್ಲ.

ಇಲ್ಲಿ ಒಂದು ಪ್ರಶ್ನೆ ಏಳುತ್ತದೆ. ಶಿಕ್ಷಣ ಎಂದರೇನು? ಅದರ ಗುರಿಯೇನು?
ಶಿಕ್ಷಣವೇ ಉದ್ಯಮವಾಗಿದೆ ಎನ್ನುವುದನ್ನು ಒಪ್ಪಿಕೊಂಡರೆ ಅದು ತನ್ನ ದಿಟವಾದ ರೂಪ–ಸ್ವರೂಪಗಳನ್ನು ಕಳೆದುಕೊಂಡಿದೆ ಎನ್ನುವುದನ್ನೂ ಒಪ್ಪಿಕೊಳ್ಳಲೇಬೇಕಾಗುತ್ತದೆ. ಆದರೆ ಶಿಕ್ಷಣ ಎನ್ನುವುದು ಉದ್ಯಮಕ್ಕೆ ಒಗ್ಗುವಂಥ ಕಚ್ಚಾವಸ್ತುವಲ್ಲ. ಅದರ ಮೂಲಲಕ್ಷಣವನ್ನು ನೋಡಿದಾಗ ಇದು ಸ್ಪಷ್ಟವಾಗುತ್ತದೆ.

ಶಿಕ್ಷಣದ ಉದ್ದೇಶ ವಿದ್ಯೆಯನ್ನು ಕಲಿಸುವುದು, ವಿದ್ಯಾವಂತರನ್ನಾಗಿಸುವುದು. ಹೀಗಾಗಿ ‘ಶಿಕ್ಷಣ’ ಎನ್ನುವ ವ್ಯವಸ್ಥೆ ಅರ್ಥವಾಗಬೇಕಾದರೆ ಮೊದಲು ‘ವಿದ್ಯೆ’ ಎಂದರೆ ಏನು? ‘ವಿದ್ಯಾವಂತ ಯಾರು? ಎಂದು ಆಲೋಚಿಸಬೇಕಾಗಿದೆ. ನಮ್ಮನ್ನು ಅಜ್ಞಾನದಿಂದ ಯಾವುದು ಪಾರು ಮಾಡುತ್ತದೆಯೋ ಅದೇ ಜ್ಞಾನ, ವಿದ್ಯೆ ಎಂಬ ಸರಳಾರ್ಥದಿಂದ ಮೊದಲುಗೊಂಡು, ಅತ್ಯಂತ ಗಹನಾರ್ಥದವರೆಗೆ ವಿದ್ಯೆಯನ್ನು ಕುರಿತು ಹೇಳಲಾಗಿದೆ.

ಜೀವನ ಎಂದರೆ ಏನೆಂದು ಕಲಿಸುವ ತಿಳಿವಳಿಕೆಯೇ ವಿದ್ಯೆ; ಅಂಥ ವ್ಯವಸ್ಥೆಯೇ ಶಿಕ್ಷಣ ಎಂಬ ಒಕ್ಕಣೆಗಳೂ ಇವೆ. ಈ ಲಕ್ಷಣದ ಸಾರವಾಗಿ– ಯಾರು ಜೀವನವನ್ನು ಕಂಡುಕೊಂಡಿದ್ದಾರೋ ತಿಳಿದುಕೊಂಡಿದ್ದಾರೋ ಅವರು ವಿದ್ಯಾವಂತರು ಎನ್ನಬಹುದು. ಹಾಗಾದರೆ ನಮ್ಮ ಇಂದಿನ ಶಿಕ್ಷಣವ್ಯವಸ್ಥೆ ಇಂಥ ಅರಿವನ್ನು ನೀಡುತ್ತಿದೆಯೆ? ನಾವು ಯೋಚಿಸಬೇಕಾದ ವಿಷಯವಿದು.

ನಮ್ಮ ಸಮಾಜವನ್ನಾಗಲೀ ಜೀವನವನ್ನಾಗಲೀ ಗಮನಿಸಿದಾಗ ಈ ಪ್ರಶ್ನೆಗೆ ‘ಇಲ್ಲ’ ಎಂಬ ಉತ್ತರವೇ ಅನಿವಾರ್ಯವಾಗುತ್ತದೆ. ಹಾಗಾದರೆ ನಾವು ಶಿಕ್ಷಣದ ಮೂಲೋದ್ದೇಶದಿಂದ ದೂರ ಸರಿದದ್ದು ಯಾವಾಗ? ಹೀಗೆ ಸರಿಯಬೇಕಾದ ಒತ್ತಡವಾದರೂ ಏಕೆ ನಿರ್ಮಾಣವಾಯಿತು? ಇವನ್ನೂ ನಾವಿಂದು ಯೋಚಿಸಬೇಕಾಗಿದೆ.

ನಮ್ಮ ದೇಶದಲ್ಲಿ ವೇದಕಾಲದಿಂದಲೇ ವಿದ್ಯೆಯ ಬಗ್ಗೆಯೂ ಶಿಕ್ಷಣವ್ಯವಸ್ಥೆಯ ಬಗ್ಗೆಯೂ ತುಂಬ ಚಿಂತನೆ ನಡೆಸಿರುವುದು ತಿಳಿಯುತ್ತದೆ. ಅಂದಿನ ವಾಙ್ಮಯಗಳಲ್ಲಿ ಇದಕ್ಕೆ ಧಾರಾಳವಾದ ನಿದರ್ಶನಗಳು ಸಿಗುತ್ತವೆ. ತೈತ್ತೀರೀಯ ಉಪನಿಷತ್ತಿನಲ್ಲಿ ಈ ಎಲ್ಲ ಚಿಂತನೆಗಳು ಸಾರವಾಗಿ ಹರಳುಗಟ್ಟಿರುವುದನ್ನು ಕಾಣಬಹುದು.

ಅಂದಿನ ಶಿಕ್ಷಣವ್ಯವಸ್ಥೆಯಾದ ಗುರುಕುಲಗಳ ಉದ್ದೇಶ ಏನು ಎಂಬುದನ್ನು ಅಲ್ಲಿ ಮನಮುಟ್ಟುವಂತೆ ವರ್ಣಿಸಲಾಗಿದೆ. ‘ಅಂದಿನ ಸಾಮಾಜಿಕ ವ್ಯವಸ್ಥೆಗೆ ಆ ಮಾದರಿ ಸರಿ ಇದ್ದಿರಬಹುದು; ಅದು ಇಂದಿಗೂ ಪ್ರಸ್ತುತವಾಗಬಹುದೆ?’ ಎಂದು ಯಾರಾದರೂ ಪ್ರಶ್ನಿಸಬಹುದು. ಆದರೆ ಅಂದಿನ ವಾಙ್ಮಯಗಳಲ್ಲಿ ವಿದ್ಯೆಯ ಮೂಲಸ್ವರೂಪವನ್ನೂ ಶಿಕ್ಷಣದ ಮೂಲಗುರಿಯನ್ನೂ ಗಹನವಾಗಿ ಚರ್ಚಿಸಲಾಗಿದೆ. ವಿದ್ಯೆಯ ಹೃದಯದ ಬಗ್ಗೆ ಚಿಂತನೆ ನಡೆದಿದೆ. ವಿದ್ಯಾವಂತನ ಸಾರ್ಥಕತೆ ಹೇಗೆ ಎನ್ನುವುದರ ಬಗ್ಗೆ ಅಪಾರ ಒಳನೋಟಗಳಿವೆ.

ನಮ್ಮ ಶಾಲೆಗಳು ಅಥವಾ ಗುರುಕುಲಗಳು ಹುಲ್ಲಿನ ಮಾಡೋ ಅಥವಾ ಕಾಂಕ್ರಿಟ್‌ ಕಟ್ಟಡವೋ ಎನ್ನುವುದಕ್ಕಿಂತಲೂ ಅಲ್ಲಿ ಏನನ್ನು ಕಲಿಸುತ್ತಿದ್ದೇವೆ ಎನ್ನುವುದೇ ಮುಖ್ಯವಾಗಬೇಕಲ್ಲವೆ? ಇಂಥ ಸಂಸ್ಥೆಗಳಿಂದ ‘ವಿದ್ಯಾವಂತ’ನಾಗಿ ಹೊರಬಂದವನು ಜೀವನವನ್ನು ಹೇಗೆ ಅರ್ಥಮಾಡಿಕೊಂಡಿದ್ದಾನೆ? ಹೇಗೆ ಬದುಕುತ್ತಿದ್ದಾನೆ? ಅವನಿಗೂ ಸಮಾಜಕ್ಕೂ ಯಾವ ರೀತಿಯ ನಂಟನ್ನು ಹೊಂದಿದ್ದಾನೆ?– ಎನ್ನುವುದು ಮುಖ್ಯವಾಗಬೇಕಲ್ಲವೆ? ಈಗ ನಮ್ಮ ಮುಂದಿರುವ ದೊಡ್ಡ ಪ್ರಶ್ನೆ ಎಂದರೆ: ‘ವಿದ್ಯಾವಂತ ಯಾರು?’
–ಹಾರಿತಾನಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT