ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಜರ್‌ ಇತಿಹಾಸ

ರೋಮನ್‌ ರಾಜ ಲೂಸಿಯಸ್‌ ಟಾರ್ಕಿನಿಯಸ್‌ ಪ್ರಿಸ್ಕಸ್‌ ರೇಜರ್‌ ಪರಿಚಯಿಸಿದಾತ
Last Updated 15 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ದೇಹದ ವಿವಿಧ ಭಾಗಗಳಲ್ಲಿ ಬೆಳೆಯುವ ಅನವಶ್ಯಕ ಕೂದಲುಗಳನ್ನು ತೆಗೆಯುವುದು ಸ್ವಚ್ಛತೆ ಮತ್ತು ದೇಹದ ಆರೋಗ್ಯದ ದೃಷ್ಟಿಯಿಂದ ಯಾವತ್ತಿಗೂ ಒಳ್ಳೆಯದು. ಈಗಿನ ಕಾಲದಲ್ಲಿ ಕೂದಲು ತೆಗೆಯಲು ಅಥವಾ ಕ್ಷೌರ ಮಾಡಲು ಬಹಳಷ್ಟು ಸಾಧನಗಳಿವೆ. 

ಮಾಮೂಲಿ ಬ್ಲೇಡ್‌, ಅತ್ಯಾಧುನಿಕ ರೇಜರುಗಳು, ಟ್ರಿಮ್ಮರ್‌ಗಳು, ಶೇವರ್‌ಗಳು... ಹೀಗೆ ಹಲವು ಹತ್ಯಾರುಗಳಿವೆ. ಲಿಂಗಭೇದ ಇಲ್ಲದೇ ಎಲ್ಲರೂ ಇವುಗಳನ್ನು ಬಳಸುತ್ತಾರೆ. ಆದರೂ, ಇವುಗಳನ್ನು ಹೆಚ್ಚಾಗಿ ಬಳಸುವುದು ಪುರುಷರೇ. ಕಾರಣ ಅವರ ಗಡ್ಡ. ಬೇಡ ಬೇಡ ಎಂದರೂ ಮುಖದಲ್ಲಿ ಬೆಳೆಯುವ ಕೂದಲುಗಳನ್ನು ತೆಗೆಯುವ ಅನಿವಾರ್ಯ ಗಂಡಸರಿಗೆ (ಈಗ ಗಡ್ಡ ಬಿಡುವುದೇ ಒಂದು ಫ್ಯಾಷನ್‌. ಆದರೆ, ಅದಕ್ಕೆ ವ್ಯವಸ್ಥಿತ ರೂಪಕೊಡಲು ರೇಜರ್‌ ಅಥವಾ ಟ್ರಿಮ್ಮರ್‌ ಬೇಕೇ ಬೇಕು).

ಸುಧಾರಿತ ರೇಜರ್‌ನ ಆವಿಷ್ಕಾರ ಆಗಿದ್ದು ತೀರಾ ಇತ್ತೀಚೆಗೆ. ಅಂದರೆ, ಒಂದೂ ಕಾಲು ಶತಮಾನಗಳ ಹಿಂದೆ. ಅದಕ್ಕಿಂತ ಮೊದಲು ಗಡ್ಡ ಅಥವಾ ಅನಗತ್ಯ ಕೂದಲುಗಳನ್ನು ತೆಗೆಯಲು ಮಾನವ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ರೇಜರ್‌/ಬ್ಲೇಡ್‌ನ ಇತಿಹಾಸ ಅಚ್ಚರಿಗಳ ಕಂತೆ. ಅದು ಬೆಳೆದು ಬಂದ ಹಾದಿ ನಿಜಕ್ಕೂ ಅದ್ಭುತ. ಈ ಜಗತ್ತನ್ನು ಬದಲಾಯಿಸಿದ ಆವಿಷ್ಕಾರಗಳಲ್ಲಿ ರೇಜರ್‌ ಕೂಡ ಒಂದು. ಈ ಬರಹ, ಅದರ ಚರಿತ್ರೆಯ ಬಗೆಗಿನ ಸಂಕ್ಷಿಪ್ತ ಇಣುಕು ನೋಟ.

ಒಂದು ಕಡೆ ನೆಲೆ ನಿಂತು ಬದುಕಲು ಆರಂಭಿಸಿದ ಮಾನವ, ಬರುಬರುತ್ತಾ ಹೆಚ್ಚು ಅರಿವಿಗೆ ತನ್ನನ್ನು ತಾನೇ ತೆರೆದುಕೊಂಡ. ಆರೋಗ್ಯ, ಸ್ವಚ್ಛತೆ ಬಗ್ಗೆಯೂ ಆತನಲ್ಲಿ ತಿಳಿವು ಮೂಡಿತು. ತನ್ನ  ಸ್ವತಃ ದೇಹದ ಸ್ವಚ್ಛತೆ ಕಾಪಾಡಲು ಏನೆಲ್ಲಾ ಬೇಕೋ ಅದನ್ನೆಲ್ಲವನ್ನೂ ಮಾಡಿದ. ವಾತಾವರಣಕ್ಕೆ ತಕ್ಕಂತೆ ತನ್ನ ದೇಹವನ್ನು ಒಗ್ಗಿಸಿಕೊಂಡ. ಉದಾಹರಣೆಗೆ, ಹಿಮ ಯುಗದಲ್ಲಿ ಮುಖದಲ್ಲಿ ಬೆಳೆಯುತ್ತಿದ್ದ ಕೂದಲು ಅವನಿಗೆ ಕಿರಿಕಿರಿ ಮಾಡುತ್ತಿತ್ತು.

ಅದಕ್ಕೆ ಕೈಯಿಂದಲೇ ಅದನ್ನು ಕೀಳಲು ಆರಂಭಿಸಿದ. ಇದು ನಡೆದದ್ದು ಲಕ್ಷ ಕೋಟಿ ವರ್ಷಗಳ ಹಿಂದೆ. ಕಪ್ಪೆ ಚಿಪ್ಪು, ಚಕಮುಕಿ ಕಲ್ಲು, ಶಾರ್ಕ್‌ ಮೀನಿನ ಹಲ್ಲು ಮುಂತಾದ ನೈಸರ್ಗಿಕವಾಗಿ ಲಭ್ಯವಾಗಿರುತ್ತಿದ್ದ ವಸ್ತುಗಳನ್ನೇ ಇದಕ್ಕೆ ಬಳಸಿದ. ಇವೆಲ್ಲವೂ ಪುರಾತನ ಕಾಲದ ಗುಹೆಗಳಲ್ಲಿ ಚಿತ್ರಗಳ ಮೂಲಕ ಬಿಂಬಿತವಾಗಿದೆ.

ಜಗತ್ತಿನಲ್ಲಿ ನಾಗರಿಕತೆ ಬೆಳೆಯುವ ಹೊತ್ತಿಗೆ ಮಾನವನ ಜೀವನ ಸಾಕಷ್ಟು ಸುಧಾರಿಸಿತ್ತು. ಆ ಕಾಲದ ಮಾನವನಿಗೆ ದೇಹದ ಸ್ವಚ್ಛತೆಯ ಬಗೆಗಿನ ಕಾಳಜಿ ಮೊದಲಿಗಿಂತ ಹೆಚ್ಚೇ ಇತ್ತು. ಲೋಹದ ಬಳಕೆಯ ಅರಿವಿನ ಕಾಲ ಅದು. ಚಿನ್ನ, ತಾಮ್ರದಂತಹ ಲೋಹದಿಂದ ಮಾಡಿದ ಹರಿತ ಕತ್ತಿಯನ್ನು ಕ್ಷೌರಕ್ಕೆ ಬಳಸುತ್ತಿದ್ದರು. ಕ್ರಿ.ಪೂ 4ನೇ ಸಹಸ್ರಮಾನದಲ್ಲಿ ಪುರಾತನ ಈಜಿಪ್ಟ್‌ನಲ್ಲಿ ಇವುಗಳ ಬಳಕೆ ಹೆಚ್ಚಾಗಿತ್ತು.

ಆ ಕಾಲದ ಆಡಳಿತಗಾರರ ಸಮಾಧಿಗಳಲ್ಲಿ ಇವುಗಳ ಅವಶೇಷಗಳು ಪತ್ತೆಯಾಗಿವೆ. ಲೋಹಗಳಿಂದ ಮಾಡಿದ ಕಚ್ಚಾ ರೇಜರುಗಳ ನಡುವೆಯೂ ಜ್ವಾಲಾಮುಖಿಯಿಂದ ಉತ್ಪತ್ತಿಯಾದ ನಯವಾದ ಕಲ್ಲುಗಳನ್ನು ಇತರ ಕೆಲವು ಸಂಸ್ಕೃತಿಗಳು ಬ್ಲೇಡ್‌ಗಳ ರೂಪದಲ್ಲಿ ಬಳಸುತ್ತಿದ್ದವು.

ಈಜಿಪ್ಟ್‌ನಲ್ಲಿ ಆರಂಭವಾದ ಸುಧಾರಿತ ರೇಜರುಗಳ ಬಳಕೆ ಪುರಾತನ ರೋಮ್‌ಗೂ ಹಬ್ಬಿತು. ರೋಮನ್‌ ರಾಜ ಲೂಸಿಯಸ್‌ ಟಾರ್ಕಿನಿಯಸ್‌ ಪ್ರಿಸ್ಕಸ್‌ ಕ್ರಿ.ಪೂ 6ನೇ ಶತಮಾನದಲ್ಲಿ ತನ್ನ ಜನರಿಗೆ ರೇಜರ್‌ಗಳನ್ನು ಪರಿಚಯಿಸಿದ.

ಕ್ರಿ.ಪೂ 4ನೇ ಶತಮಾನದಲ್ಲಿ ಅಲೆಕ್ಸಾಂಡರ್‌ ದಿ ಗ್ರೇಟ್‌ ತನ್ನ ಸೈನಿಕರಿಗೆ ಗಡ್ಡ ತೆಗೆಯಲು ಸೂಚಿಸಿದ್ದ. ಶತ್ರುಗಳ ಜೊತೆ ಹೊಡೆದಾಡುವಾಗ, ಅವರು ಗಡ್ಡ ಹಿಡಿಯುವುದನ್ನು ತಪ್ಪಿಸಲು ಈ ಆದೇಶ ನೀಡಿದ್ದನಂತೆ!  ಆ ಸಂದರ್ಭದಲ್ಲಿ ಬಳಕೆಯಲ್ಲಿದ್ದದು ಕಬ್ಬಿಣದ ರೇಜರ್‌. ಕಬ್ಬಿಣದ ತುಂಡಿನ ಒಂದು ಬದಿಯನ್ನು ಹರಿತ ಮಾಡಿ ಅದನ್ನೇ ಬ್ಲೇಡ್ ಆಗಿ ಬಳಸುತ್ತಿದ್ದರು.

ಈ ಸಾಧನ, ಆ ಕಾಲದಲ್ಲಿ ಸಿರಿವಂತರ ಸೊತ್ತಾಗಿತ್ತು. ಸಾಮಾನ್ಯ ಜನರು ಜ್ವಾಲಾಮುಖಿಯ ನೊರೆಯಿಂದ ಉತ್ಪತ್ತಿಯಾದ ನುಣುಪಾದ ಗಾಜಿನ ಕಲ್ಲನ್ನು ಗಡ್ಡಕ್ಕೆ ಉಜ್ಜುತ್ತಾ ಕೂದಲು ತೆಗೆಯುತ್ತಿದ್ದರು! (ಅವರು ಎಷ್ಟು ನೋವು ತಿನ್ನುತ್ತಿದ್ದರು ಎಂಬುದನ್ನು ಊಹಿಸಿ).

ಮಧ್ಯಕಾಲೀನ ಯುಗದಲ್ಲಿ ರೇಜರ್‌ ಬಳಕೆಯಲ್ಲಿ ಹೆಚ್ಚಿನ ಬದಲಾವಣೆಯಾಗಲಿಲ್ಲ. ಕ್ರಿ.ಶ 18ನೇ ಶತಮಾನದವರೆಗೂ ಸುಧಾರಿತ ಬ್ಲೇಡ್‌ಗಳ ತಯಾರಿಕೆಗೆ ಜನರು ಹೆಚ್ಚು ತೋರಲಿಲ್ಲ. ಜನರು ಗಡ್ಡ ತೆಗೆಸಬೇಕಾಗಿದ್ದರೆ, ಕ್ಷೌರ ಮಾಡಿಸಬೇಕಿದ್ದರೆ ಕ್ಷೌರಿಕರನ್ನೇ ಅವಲಂಬಿಸಿದ್ದರು. 1762ರಲ್ಲಿ ಮೊದಲ ಸುರಕ್ಷಿತ ರೇಜರ್‌ ಅನ್ನು ಅಭಿವೃದ್ಧಿಪಡಿಸಲಾಯಿತು. ಆದರೆ, ಅದು ಜನಪ್ರಿಯವಾಗಲಿಲ್ಲ.

1828ರಲ್ಲಿ ಇಂಗ್ಲೆಂಡ್‌ನ ಶೆಫೀಲ್ಡ್‌ನಲ್ಲಿ ಈ ರೇಜರ್‌ ಅನ್ನು ಪರಿಚಯಿಸಿದ ನಂತರ, ಅದು ಪ್ರಸಿದ್ಧಿಗೆ ಬಂತು. ಇದು ಸ್ವಲ್ಪ ಪ್ರಮಾಣದಲ್ಲಿ ಆಧುನಿಕ ರೇಜರ್‌ (ತಿರುಗಣೆ ತಿರುಗಿಸಿ ಬ್ಲೇಡ್ ಅಳವಡಿಸುವುದು) ಹೋಲುತ್ತಿತ್ತು.

1880ರಲ್ಲಿ ಕ್ಯಾಂಫೆ ಸೋದರರು ಇನ್ನಷ್ಟು ಸುಧಾರಿತ ರೇಜರ್‌ಗೆ ಪೇಟೆಂಟ್ ಪಡೆದರು. ಇದರಲ್ಲಿ ಬ್ಲೇಡ್‌ನ ಒಂದು ಬದಿ ಮಾತ್ರ ಹರಿತವಾಗಿರುತ್ತಿತ್ತು. ಪ್ರತಿ ಬಾರಿ ಕ್ಷೌರ ಮಾಡಿದ ನಂತರ ಬ್ಲೇಡ್‌ ಅನ್ನು ಹರಿತ ಮಾಡಬೇಕಾಗುತ್ತಿತ್ತು. ಗಾತ್ರದಲ್ಲಿ ಸಣ್ಣದಾಗಿದ್ದ ಈ ರೇಜರ್‌ ಸೆಟ್‌ ಅನ್ನು ಪುಟ್ಟ ಪೆಟ್ಟಿಗೆಯಲ್ಲಿ ಇಟ್ಟುಕೊಳ್ಳಬಹುದಾಗಿತ್ತು.

ಆಧುನಿಕವಾದ, ಬಳಸಿ ಎಸೆಯಬಹುದಾಗಿದ್ದ ರೇಜರ್‌/ಬ್ಲೇಡ್ ರೂಪುಗೊಂಡಿದ್ದು 20ನೇ ಶತಮಾನದಲ್ಲಿ. ಸೇಲ್ಸ್‌ಮ್ಯಾನ್‌ ಆಗಿದ್ದ ಕಿಂಗ್‌ ಕ್ಯಾಂಪ್‌ ಜಿಲ್ಲೆಟ್‌ ಎಂಬುವವರು 1895ರಲ್ಲಿ ಕ್ಯಾಂಫೆ ಸೋದರರು ರೂಪಿಸಿದ್ದ ರೇಜರ್‌ ಅನ್ನು ಇನ್ನಷ್ಟು ಸುಧಾರಿಸಿ, ಬ್ಲೇಡ್‌ನ ಎರಡೂ ಅಲಗುಗಳನ್ನು ಹರಿತಗೊಳಿಸಿ, ಶೇವ್‌ ಮಾಡಿದ ನಂತರ ಅದನ್ನು ಎಸೆಯುವ (ಯೂಸ್‌ ಆಂಡ್‌ ಥ್ರೋ) ಯೋಚನೆಯನ್ನು ಹರಿಯಬಿಟ್ಟರು. ಈ ಉಪಾಯದ ಅಡಿಯಲ್ಲಿ ರೂಪಿತಗೊಂಡ ರೇಜರ್‌ ಭಾರಿ ಯಶಸ್ಸು ಕಂಡಿತು. ಜಿಲ್ಲೆಟ್‌ ಅವರ ಅದೃಷ್ಟವನ್ನೂ ಖುಲಾಯಿಸಿತು.

ಯೋಚನೆ ಚೆನ್ನಾಗಿತ್ತು. ಆದರೆ, ಬಳಸಿದ ನಂತರ ವಿಲೇವಾರಿ ಮಾಡಬಹುದಾದ ಬ್ಲೇಡ್‌ ತಯಾರಿಸುವುದು ಅಷ್ಟು ಸುಲಭವಾಗಿರಲಿಲ್ಲ. ಇದಕ್ಕಾಗಿ ಜಿಲ್ಲೆಟ್‌, ಎಂಐಟಿ ಪ್ರೊಫೆಸರ್‌ ವಿಲಿಯಂ ನಿಕರ್‌ಸನ್‌ ಅವರ ನೆರವು ಪಡೆದರು.

ಹೆಚ್ಚು ಇಂಗಾಲ ಹೊಂದಿದ್ದ ಉಕ್ಕಿನಿಂದ ತೆಳ್ಳನೆಯ ಬ್ಲೇಡ್‌ ತಯಾರಿಸಲು ವಿಲಿಯಂ ನೆರವಾದರು. 1903ರ ಹೊತ್ತಿಗೆ ಅತ್ಯಾಧುನಿಕ, ಬ್ಲೇಡ್‌ಗಳನ್ನು ಅವರು ಅಮೆರಿಕದ ಮಾರುಕಟ್ಟೆಗೆ ಬಿಟ್ಟರು. ಅದು ಹೆಚ್ಚು ಜನಪ್ರಿಯವಾಯಿತಲ್ಲದೇ, ಜಿಲ್ಲೆಟ್‌ ಅವರಿಗೆ ಸಾಕಷ್ಟು ಲಾಭವನ್ನೂ ತಂದುಕೊಟ್ಟಿತು.

ಇದರ ನಡುವೆಯೇ ವಿದ್ಯುತ್‌ ಚಾಲಿತ ರೇಜರ್‌ ಅಭಿವೃದ್ಧಿಪಡಿಸುವ ಪ್ರಯತ್ನಗಳು ನಡೆದವು. 1928ರಲ್ಲಿ ನಿವೃತ್ತ ಸೇನಾ ಕರ್ನಲ್‌ ಜೇಕಬ್‌ ಶಿಕ್‌ ಎಂಬುವವರು ಮೊದಲ ಎಲೆಕ್ಟ್ರಿಕ್‌ ರೇಜರ್‌ ತಯಾರಿಸಿದರು. 1931ರ ಹೊತ್ತಿಗೆ ಅದು ಜನಪ್ರಿಯಗೊಂಡು ಲಕ್ಷಾಂತರ ರೇಜರ್‌ಗಳು ಮಾರಾಟವಾದವು.
ಎರಡನೇ ಮಹಾಯುದ್ಧದ ನಂತರ ರೇಜರ್‌ ಉದ್ಯಮದಲ್ಲಿ ಕ್ರಾಂತಿಯೇ ನಡೆಯಿತು.

ಹಲವು ಕಂಪೆನಿಗಳು ಸಾಮಾನ್ಯ ಮತ್ತು ಎಲೆಕ್ಟ್ರಿಕ್‌ ರೇಜರ್‌ಗಳ ತಯಾರಿಕೆಗೆ ಪೈಪೋಟಿ ನಡೆಸಿದವು. 1960ರಲ್ಲಿ ಕಿಂಗ್‌ ಕ್ಯಾಂಪ್‌ ಜಿಲ್ಲೆಟ್‌ ಸ್ಥಾಪಿಸಿರುವ ಜಿಲ್ಲೆಟ್‌ ಕಂಪೆನಿ ತುಕ್ಕು ಹಿಡಿಯದ ಉಕ್ಕಿನ ಬ್ಲೇಡ್‌ ತಯಾರಿಸಿತು. ಹೆಚ್ಚು ಹರಿತ, ಸುದೀರ್ಘ ಬಾಳಿಕೆ ಬರುತ್ತಿದ್ದ ಈ ಬ್ಲೇಡ್‌ಗಳು ಬಳಕೆದಾರಸ್ನೇಹಿಯಾಗಿ ಜನಮನ್ನಣೆ ಗಳಿಸಿತು. 1971ರಲ್ಲಿ ಅದೇ ಕಂಪೆನಿ ಎರಡು ಬ್ಲೇಡ್‌ಗಳನ್ನು ಹೊಂದಿದ್ದ ರೇಜರ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿತು. ನಂತರ ಅದೇ ಮಾದರಿಯಲ್ಲಿ ಇತರ ಕಂಪೆನಿಗಳು ರೇಜರ್‌ ತಯಾರಿಕೆ ಆರಂಭಿಸಿದವು.

ಈಗ ಇನ್ನೂ ಹೆಚ್ಚು ಬ್ಲೇಡ್‌ಗಳನ್ನು ಹೊಂದಿರುವ ಮತ್ತು ಬಳಕೆ ಸ್ನೇಹಿಯಾಗಿರುವ ರೇಜರ್‌ಗಳು ಮಾರುಕಟ್ಟೆಯಲ್ಲಿವೆ. ಆಧುನಿಕ ರೇಜರ್‌ಗಳ ಭರಾಟೆಯ ನಡುವೆ, ಎರಡು ಅಲಗು ಹರಿತವಾಗಿರುವ ಬ್ಲೇಡ್ ಬಳಸುವ ಸಾಮಾನ್ಯ ರೇಜರ್‌ಗಳ ಜನಪ್ರಿಯತೆ ಮಾಸಿಲ್ಲ.   –ಸೂರ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT