ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರಡಿ ಮನೇಲಿ ಕ್ಯಾಮೆರಾ ಸಾಮು!

Last Updated 15 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಜಟ್ಟಿಗಳನ್ನು ರೂಪಿಸುವ ಗರಡಿಮನೆಗೆ ಗ್ರಾಮೀಣ ಸಮಾಜದಲ್ಲಿ ವಿಶೇಷ  ಮಹತ್ವವಿದೆ. ಆದರೆ ಆಧುನೀಕತೆಯ ಬಿರುಗಾಳಿಗೆ ಸಿಲುಕಿ ಕುಸ್ತಿ ಎನ್ನುವ ಕಲೆಯೇ ಮರೆಯಾಗುತ್ತಿರುವಾಗ ಗರಡಿಮನೆಗೆ ಸ್ಥಾನವೆಲ್ಲಿ? ಹೀಗೆ ಗರಡಿಮನೆಯೆಂಬ ನಶಿಸುತ್ತಿರುವ ಸಂಸ್ಕೃತಿಯ ಬೇರಿನ ಜಾಡನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವ ಪ್ರಯತ್ನ ಪ್ರದೀಪ್‌ ಕೆ.ಎಸ್‌. ಅವರದು.

ಸಾಂಪ್ರದಾಯಿಕ ಕುಸ್ತಿಕಲೆಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಿಂಬಿಸುವ ಅವರ ಛಾಯಾಚಿತ್ರಗಳು, ಗರಡಿ ಕಲೆ ನಿಧಾನಕ್ಕೆ ವಿಸ್ಮೃತಿಗೆ ಸರಿಯುತ್ತಿರುವ ವಿಷಾದವನ್ನೂ ಹಿಡಿದಿಡುವಂತಿವೆ.

ಅದು ಮಂದ ಬೆಳಕಿನ ಅಡಿಯಲ್ಲಿ ಚಾಚಿಕೊಂಡಿರುವ ಹಜಾರ. ವಿಚಿತ್ರ–ವಿಶಿಷ್ಟ ಘಮಲನ್ನು ಅಡರುವ ಕೆಮ್ಮಣ್ಣು ಮಟ್ಟಸವಾಗಿ ಹರಡಿದೆ. ಆ ಮಣ್ಣಿನಲ್ಲಿ ದಶಕಗಳ ಕಾಲದ ರೋಚಕ ಕಥೆಗಳಿವೆ. ಎಷ್ಟೋ ಬಲಿಷ್ಠ ದೇಹಗಳು ಅದರಲ್ಲಿ ಉರುಳಾಡಿವೆ. ಜಗಜಟ್ಟಿಗಳ ಸೋಲು–ಗೆಲುವಿನ ನಿರ್ಧಾರಕ ನೆಲ – ಅದು ಅಖಾಡ. ಒಂದು ಮೂಲೆಯಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಾಗಿ ಕುಳಿತಿರುವ ಮೂರು ಕಲ್ಲುಗಳು. ಇನ್ನೊಂದೆಡೆ ದೇಹದ ಕಸರತ್ತಿಗೆ ಬೇಕಾದ ತೂಕದ ಸಲಕರಣೆಗಳು.

ದೇಹದಂಡನೆಗೆ ಒಡ್ಡಿಕೊಳ್ಳಲು ಪಕ್ಕದಲ್ಲಿ ಪುಟ್ಟ ಪಡಸಾಲೆ. ಇನ್ನೊಂದು ದಿಕ್ಕಿನಲ್ಲಿ ಮಣ್ಣಿನ ದಿಬ್ಬದಿಂದಲೇ ಮೂರ್ತವೆತ್ತ ದೈವ.ಒಳಗೆ ಪ್ರವೇಶಿಸಿದೊಡನೆ ದೇವಾಲಯದೊಳಗೆ ಕಾಲಿಟ್ಟ ಅನುಭವ. ಜೊತೆಗೆ, ‘ಒಂದು ಕೈ ನೋಡಿಯೇ ಬಿಡೋಣ’ ಎಂದು ದೇಹವನ್ನು ಕಸರತ್ತಿಗೆ ಒಡ್ಡಿಕೊಳ್ಳಲು ಪ್ರೇರಣೆ ನೀಡುವ ಈ ಜಾಗವೇ ಗರಡಿಮನೆ!

ಕುಸ್ತಿ ಸ್ಪರ್ಧೆಗಳಿಗೆ ಕಟ್ಟಾಳುಗಳನ್ನು ತಯಾರು ಮಾಡುವ ಗರಡಿಮನೆಗಳು ಆಧುನೀಕರಣದ ಭರಾಟೆಯಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಆದರೆ ಕ್ಷಿಪ್ರ ನಗರೀಕರಣದ ನಡುವೆಯೂ ಜೀವ ಉಳಿಸಿಕೊಂಡಿರುವ ಗರಡಿಮನೆಗಳಿವೆ. ಅವುಗಳಲ್ಲಿ ಹಳೆಯ ಸಂಪ್ರದಾಯವೂ ಇದೆ, ಆಧುನಿಕ ಕಸರತ್ತುಗಳ ಒಲವೂ ಅಲ್ಲಿ ಇಣುಕುತ್ತಿದೆ.

ಇತಿಹಾಸದ ಪುಟ ಸೇರುವ ಅಂಚಿನಲ್ಲಿರುವ ಗರಡಿಮನೆಯೆಂಬ ಕೌತುಕಮಯ ಜಗತ್ತಿನ ಒಳಹೊಕ್ಕು, ಅಲ್ಲಿನ ಸೂಕ್ಷ್ಮ ಸಂಗತಿಗಳನ್ನು ಛಾಯಾಚಿತ್ರಗಳಲ್ಲಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ ಛಾಯಾಗ್ರಾಹಕ ಪ್ರದೀಪ್‌ ಕೆ.ಎಸ್‌.

ವೃತ್ತಿಯ ಸಲುವಾಗಿ ಬೆಂಗಳೂರಿನ ಪೇಟೆಯಲ್ಲಿನ ಗರಡಿಮನೆಯೊಳಗೆ ಕಾಲಿಟ್ಟ ಪ್ರದೀಪ್‌, ಕಳೆದ ಆರು ವರ್ಷಗಳಿಂದ ಸಾಮು ಮಾಡುವ ಮನೆಯನ್ನೇ ತಮ್ಮ ಅಧ್ಯಯನದ ಕ್ಷೇತ್ರವನ್ನಾಗಿಸಿಕೊಂಡಿದ್ದಾರೆ. ಗರಡಿಮನೆಯೊಳಗಿನ ಸಂಪ್ರದಾಯ, ಪದ್ಧತಿ, ಆಚರಣೆಗಳು, ಅಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಸಹಜವಾಗಿ ಸೆರೆ ಹಿಡಿಯುವ ಉದ್ದೇಶ ಅವರದು.

‘ನಗರೀಕರಣದ ನಡುವೆ ಅಸ್ತಿತ್ವ ಉಳಿಸಿಕೊಂಡಿರುವ ಜಾನಪದ ಆಚರಣೆಗಳನ್ನು ದಾಖಲಿಸುವ ನನ್ನ ಯೋಜನೆಯ ಭಾಗವಿದು. ನಗರೀಕರಣ ಮತ್ತು ಹಳೆಯ ಸಾಂಪ್ರದಾಯಿಕ ಆಚರಣೆಗಳ ಸಂಬಂಧ ಮತ್ತು ಸಂಘರ್ಷ ಎರಡೂ ಇಲ್ಲಿವೆ’ ಎನ್ನುವ ಅವರ ಗರಡಿಮನೆ ಅನುಭವಗಳನ್ನು ಅವರದೇ ಮಾತಿನಲ್ಲಿ ಕೇಳಬೇಕು.
***
‘‘ಒಂದು ಸ್ಥಳಕ್ಕೆ ಒಮ್ಮೆ ಭೇಟಿ ನೀಡಿದರೆ ಸಾಕಷ್ಟು ಚಿತ್ರಗಳನ್ನು ಸೆರೆಹಿಡಿಯಬಹುದು; ಗರಡಿಮನೆಯಂತಹ ಪುಟ್ಟ ಸ್ಥಳದಲ್ಲಿ ಒಂದಷ್ಟು ಚಿತ್ರಗಳನ್ನು ತೆಗೆಯಲು ಆರು ವರ್ಷ ಬೇಕೇ? ಇಂಥದ್ದೊಂದು ಪ್ರಶ್ನೆ ಎದುರಾಗಬಹುದು. ಆದರೆ, ಗರಡಿಮನೆಯೆಂಬುದು ಗೋಡೆಯೊಳಗಿನ ಪುಟ್ಟ ಜಾಗವಾದರೂ, ಅದರ ಜಗತ್ತು ಬಹುದೊಡ್ಡದು. ಅಲ್ಲಿನ ಪ್ರತಿ ಪ್ರಕ್ರಿಯೆಯನ್ನೂ ಮನಸಿಗೆ ತೃಪ್ತಿಯಾಗುವಂತೆ ಚಿತ್ರಗಳಲ್ಲಿ ದಾಖಲಿಸುವುದು ಶ್ರಮದ ಕೆಲಸ.

ಇದು ನನ್ನ ಆಸಕ್ತಿಯ ವಿಷಯವಾಗಿದ್ದರೂ, ಇತಿಹಾಸದ ದಾಖಲೀಕರಣವಾಗಿಯೂ ಮಹತ್ವದ್ದು. ಹೀಗಾಗಿ ಆರು ವರ್ಷ ಮಾತ್ರವಲ್ಲ, ಇನ್ನಷ್ಟು ವರ್ಷಗಳು ಗರಡಿಮನೆಯೊಳಗೆ ಕಾಲಿಟ್ಟಾಗಲೂ ಹೊಸ ಹೊಸ ಅಂಶಗಳು ನನ್ನ ಕ್ಯಾಮೆರಾಕ್ಕೆ ಸಿಗುತ್ತಲೇ ಇರುತ್ತವೆ.

ನೂರಾರು ಗರಡಿಮನೆಗಳಿದ್ದ ಬೆಂಗಳೂರಿನಲ್ಲಿ ಈಗ ಬೆರಳಣಿಕೆಯಷ್ಟು ಗರಡಿಮನೆಗಳಿವೆ. ಅವುಗಳಲ್ಲಿ ಈಗಲೂ ಸಕ್ರಿಯವಾಗಿರುವುದು ಎರಡು ಮೂರು ಮಾತ್ರ. ಈ ಗರಡಿಮನೆಗಳೂ ತಮ್ಮ ಮೂಲ ಸ್ವರೂಪವನ್ನು ಸಂಪೂರ್ಣವಾಗಿ ಉಳಿಸಿಕೊಂಡಿಲ್ಲ.

ಅವುಗಳೀಗ ಮಲ್ಟಿಜಿಮ್‌ಗಳಾಗಿವೆ. ಒಂದೆಡೆ ಗರಡಿಮನೆಯ ಸಾಂಪ್ರದಾಯಿಕ ದೇಹದಂಡನೆಯ ವಿಧಾನಗಳಿದ್ದರೆ, ಇನ್ನೊಂದೆಡೆ ಆಧುನಿಕ ಶೈಲಿಯ ಜಿಮ್‌ ಪರಿಕರಗಳು. ನಗರೀಕರಣದ ನಡುವೆಯೂ ಅವು ತಮ್ಮ ಅಸ್ತಿತ್ವ ಉಳಿಸಿಕೊಂಡಿರುವುದು ಸಾಧಾರಣ ಸಂಗತಿಯೇನಲ್ಲ.



ಚಿಕ್ಕಂದಿನಿಂದಲೂ ನನಗೆ ಧಾರ್ಮಿಕ ಆಚರಣೆಗಳ ಕುರಿತು ಆಸಕ್ತಿ. ಆ ಆಚರಣೆಯ ಮಹತ್ವವನ್ನು ತಿಳಿದುಕೊಳ್ಳುವ ಪರಿಪಾಠ ಆಗಿನಿಂದಲೇ ಬೆಳೆದುಬಂದದ್ದು. ವೃತ್ತಿಯ ಸಲುವಾಗಿ ಕ್ಯಾಮೆರಾ ಹಿಡಿದಾಗ ನನ್ನೊಳಗಿನ ಒಲವಿಗೆ ಇನ್ನೊಂದು ಆಯಾಮ ದೊರಕಿತು.

ಭಿನ್ನ ಆಸಕ್ತಿಗಳು ಪೂರಕವಾಗಿ ಬೆಸೆಯುವುದು ಅಪರೂಪ. ದೈವಾರಾಧನೆ, ದಸರಾ, ಹುಲಿವೇಷ ಮುಂತಾದ ಜಾನಪದ ಮತ್ತು ಧಾರ್ಮಿಕ ಆಚರಣೆಗಳು ಸಹ ನನ್ನ ಆಲ್ಬಂನೊಳಗೆ ಸೇರಿಕೊಂಡರೂ, ಗರಡಿಮನೆಗೆ ವಿಶೇಷ ಆದ್ಯತೆ.

ಗರಡಿ ಮನೆ ಕುರಿತು ಅನೇಕರು ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ಆದರೆ ನನ್ನ ಗಮನ ಅಲ್ಲಿನ ಪೂಜಾ ವೈಖರಿ ಹಾಗೂ ಆಚರಣಾ ವಿಧಾನಗಳನ್ನು ಹೆಚ್ಚು ಕೇಂದ್ರೀಕರಿಸಿದೆ. ಗರಡಿಯಲ್ಲಿ ಸಾಮು ಮಾಡುವವರು ಕಾಲು ತೊಳೆದು ಒಳಪ್ರವೇಶಿಸುವುದು, ಹಿರಿಯರಿಗೆ ನಮಸ್ಕರಿಸುವುದು, ಪೂಜಾ ಕ್ರಮಗಳನ್ನು ಅನುಸರಿಸುವುದು, ಮುಂತಾದ ಅಲ್ಲಿನ ಆಚರಣೆಗಳು ನನ್ನ ಕುತೂಹಲ ಕೆರಳಿಸಿವೆ.

ಗರಡಿಮನೆಗೆ ಸೇರಿಕೊಂಡ ತಕ್ಷಣ ಕಸರತ್ತು ನಡೆಸಲು ಅವಕಾಶ ನೀಡುವುದಿಲ್ಲ. ಮೊದಲು ಅವರಲ್ಲಿ ಅದರ ಕುರಿತು ಭಕ್ತಿ ಗೌರವ ಮೂಡಿಸಲಾಗುತ್ತದೆ. ಅವರಲ್ಲೊಂದು ಅಧ್ಯಾತ್ಮ ಭಾವ ಮೂಡಿಸಿದ ಬಳಿಕವೇ ದೇಹದಂಡನೆಗೆ ಅನುಮತಿ.

ಪ್ರತಿಯೊಂದಕ್ಕೂ ಇಲ್ಲಿ ಕ್ರಮಗಳಿವೆ. ಅವುಗಳ ಪಾಲನೆ ಇಂದಿಗೂ ಕಟ್ಟುನಿಟ್ಟಾಗಿ ನಡೆಯುತ್ತಿದೆ. ಇಲ್ಲಿನ ಮಣ್ಣಿಗೆ ಅರಿಶಿಣ, ತುಪ್ಪ ಮುಂತಾದವುಗಳನ್ನು ಪೂಜೆಯ ವೇಳೆ ಹಾಕುತ್ತಾರೆ. 50–60 ವರ್ಷಗಳಿಂದ ಅಲ್ಲಿಯೇ ಇರುವ ಮಣ್ಣಿನಲ್ಲಿ ಔಷಧೀಯ ಗುಣವಿರುತ್ತದೆ. ಹೀಗಾಗಿ ಆ ಮಣ್ಣಿನಲ್ಲಿ ಹೊರಳಾಡಿದವರಿಗೆ ರೋಗ ರುಜಿನಗಳು ಬರುವುದಿಲ್ಲ. ಈಗಲೂ ಗರಡಿ ನಂಟಿನ ಅನೇಕ ಹಿರಿಯರು ಗಟ್ಟಿಮುಟ್ಟಾಗಿದ್ದಾರೆ. ಅವರು ನನ್ನನ್ನೂ ಸಲೀಸಾಗಿ ಎತ್ತಿ ಹಾಕಬಲ್ಲರು. ಅದು ಗರಡಿಮನೆಯಲ್ಲಿನ ಮಣ್ಣಿನ ಶಕ್ತಿ.

ಸಹಜತೆಗೆ ಆದ್ಯತೆ
ಬೆಂಗಳೂರಿನಲ್ಲಿನ ಗರಡಿಮನೆಗಳಿಗೆ ನಿರಂತರವಾಗಿ ಭೇಟಿ ನೀಡುತ್ತಿರುವುದರಿಂದ ನನಗೆ ಅಲ್ಲಿನ ಜನರು ಮತ್ತು ಪದ್ಧತಿಗಳು ಪರಿಚಿತ. ಅಲ್ಲಿನ ಕಸರತ್ತು, ಕುಸ್ತಿಗಳನ್ನು ನಾಟಕೀಯವಾಗಿ ಸೆರೆಹಿಡಿಯಲು ಹೋಗಿಲ್ಲ. ಅಲ್ಲಿನ ಪ್ರತಿ ಅಂಶಗಳೂ ಸಹಜವಾಗಿ ಮೂಡಿಬರಬೇಕು ಎನ್ನುವುದು ನನ್ನ ಉದ್ದೇಶ. ಫ್ಲ್ಯಾಶ್‌ ಬಳಸದೆ ಅಲ್ಲಿರುವ ನೈಸರ್ಗಿಕ ಬೆಳಕಿನಲ್ಲಿ ಚಿತ್ರ ತೆಗೆಯಲು ಪ್ರಯತ್ನಿಸುತ್ತೇನೆ. ಅಲ್ಲಿನ ಚಿತ್ರಣ ಯಥಾವತ್ತಾಗಿ ಸಿಗಬೇಕು.

ಛಾಯಾಗ್ರಹಣ ಎನ್ನುವುದು ಸುಂದರವಾಗಿ ಕಾಣಿಸುವಷ್ಟಕ್ಕೆ ಸೀಮಿತವಲ್ಲ. ಛಾಯಾಚಿತ್ರ ನಮ್ಮನ್ನು ಆ ಸ್ಥಳಕ್ಕೆ ಕರೆದೊಯ್ಯಬೇಕು. ಗರಡಿಮನೆಯ ಅಖಾಡದಲ್ಲಿ ಓಡಾಡಿದ ಅನುಭವ ಸಿಗಬೇಕು. ಇಲ್ಲಿ ಚಿತ್ರದ ಚೌಕಟ್ಟು, ಬೆಳಕು, ಬಣ್ಣದ ಸೌಂದರ್ಯಕ್ಕಿಂತ ಅದರಲ್ಲಿನ ಭಾವದ ಸೌಂದರ್ಯ ಮುಖ್ಯ.
ನಾನು ಛಾಯಾಗ್ರಹಣ ಶುರುಮಾಡಿದ್ದು, ಹಳೆಯ ‘1000ಡಿ’ ಕ್ಯಾಮೆರಾದಿಂದ. ಮುಂದೆ ‘ಟೈಮ್‌ಔಟ್‌’ ನಿಯತಕಾಲಿಕೆಯವರು ‘5ಡಿ’ ಕ್ಯಾಮೆರಾದ ಮೊದಲ ಮಾಡೆಲ್‌ ನೀಡಿದರು. ಇದುವೆರಗೂ ಯಾವ ಚಿತ್ರಕ್ಕೂ ಫ್ಲ್ಯಾಶ್‌ ಬಳಸಿಲ್ಲ.

ನನಗೆ ಬೇಕಾದಂತೆ ವ್ಯಕ್ತಿಗಳನ್ನು ಬಲವಂತವಾಗಿ ನಿಲ್ಲಿಸಿ ಚಿತ್ರ ತೆಗೆಯುವುದಿಲ್ಲ. ನಾನು ಬಯಸುವುದು ಕ್ಯಾಂಡಿಡ್‌ ಚಿತ್ರಗಳನ್ನು. ಗರಡಿ ಮನೆಗೆ ಐದಾರು ವರ್ಷದಿಂದ ಹೋಗುತ್ತಿರುವುದರಿಂದ ಅಲ್ಲಿನವರು ಸ್ನೇಹಿತರಾಗಿದ್ದಾರೆ. ನಾನು ಚಿತ್ರ ತೆಗೆಯುತ್ತಿರುವಾಗ ಅದು ಅವರ ಗಮನಕ್ಕೆ ಬರುವುದಿಲ್ಲ. ಹಾಗಾಗಿ ಸಹಜ ಚಿತ್ರಗಳು ಸಿಗುತ್ತವೆ. ಎಷ್ಟೋ ಚಿತ್ರಗಳು ನಾನು ಬಯಸಿದಂತೆ ಸಿಗುವುದಿಲ್ಲ. ಅದಕ್ಕೆ ಮತ್ತೆ ಮತ್ತೆ ಪ್ರಯತ್ನಿಸಬೇಕು.

ಹೊಸಬರೊಬ್ಬರು ಗರಡಿಮನೆಗೆ ದಾಖಲಾದಾಗ ನಡೆಯುವ ಪ್ರಕ್ರಿಯೆಗಳನ್ನು ಸೆರೆಹಿಡಿಯಲು ನನಗೆ ಇಂದಿಗೂ ಸಾಧ್ಯವಾಗಿಲ್ಲ. ಗುದ್ದಲಿಯಿಂದ ಮಣ್ಣನ್ನು ಅಗೆಯುವಂತಹ ಕೆಲಸಗಳನ್ನು ಅಲ್ಲಿನ ವಿದ್ಯಾರ್ಥಿಗಳಿಗೆ ನೀಡುತ್ತಾರೆ. ಆಗ ದಣಿದ ಅವರ ದೇಹದಿಂದ ಬರುವ ಬೆವರಿನ ಚಿತ್ರಕ್ಕಾಗಿ ಪ್ರಯತ್ನಿಸುತ್ತಲೇ ಇದ್ದೇನೆ. ಆದರೆ ಈವರೆಗೆ ಆ ಕ್ಷಣ ಸಿಕ್ಕಿಲ್ಲ. ಎಷ್ಟು ವರ್ಷಗಳಾದರೂ ಅದಕ್ಕಾಗಿ ಕಾಯುವ ತಾಳ್ಮೆ ನನ್ನದು. ಎಲ್ಲವನ್ನೂ ಬೇಗನೆ ಮುಗಿಸಬೇಕೆಂಬ ಅವಸರವಿಲ್ಲ. ಏಕೆಂದರೆ ಇದು ಯಾವುದೇ ವ್ಯಾವಹಾರಿಕ ದೃಷ್ಟಿಯಿಂದ ಮಾಡುತ್ತಿರುವ ಕೆಲಸವಲ್ಲ. ನನ್ನ ಅಧ್ಯಯನದ ಆಸಕ್ತಿಯಷ್ಟೇ ಇಲ್ಲಿರುವುದು.

ಮೊದಲೇ ಹೇಳಿದಂತೆ ಈಗಿನ ಗರಡಿಮನೆಗಳು ಅಸ್ತಿತ್ವ ಉಳಿಸಿಕೊಳ್ಳಲು ಹೊಸತನಕ್ಕೆ ಒಗ್ಗಿಕೊಳ್ಳಲೇಬೇಕಾಗಿದೆ. ಹೀಗಾಗಿ ‘ಮಲ್ಟಿ ಜಿಮ್‌’ ಸ್ವರೂಪ ಪಡೆದುಕೊಂಡಿವೆ. ಮುಂದೆ ಈ ಗರಡಿಮನೆಗಳು ಚರಿತ್ರೆಯಾಗಬಹುದು. ಪೇಟೆಯ ದೊಡ್ಡ ಗರಡಿಯಲ್ಲಿ ಹೈದರಾಲಿ ಅಭ್ಯಾಸ ನಡೆಸುತ್ತಿದ್ದನಂತೆ. ಅದರ ಬಗ್ಗೆ ಕೇಳಿ ತಿಳಿದುಕೊಂಡಿದ್ದೇನೆ. ಈಗ ಆ ಗರಡಿಯಿಲ್ಲ. ಅದರ ಚಿತ್ರಗಳೂ ಸಿಗುವುದಿಲ್ಲ.

ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ನಡೆದ ಛಾಯಾಚಿತ್ರ ಪ್ರದರ್ಶನಕ್ಕಾಗಿ ಚಿತ್ರದುರ್ಗದ ಗಣೇಶ ದೇವಸ್ಥಾನದ ಬಳಿ ಇರುವ ಕಲ್ಲಿನ ಗರಡಿಮನೆಯ ಚಿತ್ರ ತೆಗೆದಿದ್ದೆ. ಆ ಗರಡಿಮನೆಯ ಒಳಗೆ ಹೋಗಲು ಚಿಕ್ಕದೊಂದು ಬಾಗಿಲು ಇದೆ. ಅತಿ ದಪ್ಪಗಿದ್ದವರಿಗೆ ಒಳಹೋಗಲು ಸಾಧ್ಯವೇ ಇಲ್ಲ. ಒಳಗೆ ಚಿಕ್ಕದೊಂದು ಬೆಳಕಿನ ಕಿಂಡಿ ಮಾತ್ರ. ಹೀಗಾಗಿ ಕಸರತ್ತು ನಡೆಸುವವರು ಬೇಗನೆ ಬೆವರು ಹರಿಸುತ್ತಿದ್ದರು. ಈಗ ಸ್ಟೀಮ್‌ ಬಾತ್‌ ಪರಿಕಲ್ಪನೆ ಇದೆ. ಆಗ ಅದು ಸಹಜ ಶ್ರಮದ ಪದ್ಧತಿಯಾಗಿತ್ತು. ಈಗ ಆ ಗರಡಿಮನೆಯ ಒಳಗೆ ಹೋಗಲು ಸಾಧ್ಯವಿಲ್ಲ. ಹೀಗಾಗಿ ಅದರ ಹೊರಭಾಗದ ಚಿತ್ರ ತೆಗೆದು ಪ್ರದರ್ಶನಕ್ಕೆ ಬಳಸಿದ್ದೆ.

ಇತಿಹಾಸದಲ್ಲಿ ಕರಗಿಹೋಗಿರುವ ಗರಡಿಗಳನ್ನು ಹುಡುಕುವುದು ಸುಲಭವಲ್ಲ. ಸಿಕ್ಕರೂ ಅವು ಪಳೆಯುಳಿಕೆಗಳಷ್ಟೆ. ಆದರೆ ಉಸಿರು ಹಿಡಿದುಕೊಂಡಿರುವ ಗರಡಿಗಳಾದರೂ ತಮ್ಮತನವನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಮುನ್ನ ಚಿತ್ರಗಳ ರೂಪದಲ್ಲಿ ದಾಖಲಿಸಿಕೊಳ್ಳಬೇಕು. ಅವುಗಳ ವಿಡಿಯೊ ದಾಖಲೀಕರಣದ ಉದ್ದೇಶವೂ ಇದೆ.  ‌

ವಿನ್ಯಾಸದಿಂದ ಕ್ಯಾಮೆರಾದತ್ತ...
ಮೂಲತಃ ಹಾಸನದವರಾದ ಪ್ರದೀಪ್‌, ಬೆಳೆದಿದ್ದು, ಓದಿದ್ದು ಬೆಂಗಳೂರಿನಲ್ಲಿ. ಬಿ.ಎಸ್‌ಸಿ. ಪದವಿ ಮುಗಿಸಿದ ಬಳಿಕ ‘ಟೈಮ್‌ಔಟ್‌’ ಎಂಬ ನಗರ ಕೇಂದ್ರಿತ ಅಂತರರಾಷ್ಟ್ರೀಯ ನಿಯತಕಾಲಿಕೆಗೆ ವಿನ್ಯಾಸಗಾರರಾಗಿ ಸೇರಿಕೊಂಡರು. ಲೇಖನಗಳ ವಿನ್ಯಾಸಕ್ಕೆ ಅಗತ್ಯವಾದಂತೆ ಛಾಯಾಚಿತ್ರಗಳ ಸ್ವರೂಪವನ್ನು ಬದಲಿಸುವ ಸ್ವಾತಂತ್ರ್ಯ ಅವರಿಗಿತ್ತು. ಛಾಯಾಗ್ರಹಣದೆಡೆಗೆ ಆಸಕ್ತಿ ಮೂಡಲು ಕಾರಣವಾಗಿದ್ದೇ ಈ ಉದ್ಯೋಗ. ‘ನಾನೂ ಏಕೆ ಚಿತ್ರ ತೆಗೆಯಬಾರದು’ ಎಂದೆನಿಸಿತು. ಛಾಯಾಗ್ರಹಣದ ಮೂಲತತ್ವಗಳನ್ನು ತಾವೇ ಕಲಿತುಕೊಂಡರು.

ಅವರು ಕೆಲಸ ಮಾಡುತ್ತಿದ್ದ ನಿಯತಕಾಲಿಕೆಯಲ್ಲಿ ‘ಬೆಂಗಳೂರು ಬೀಟ್‌’ ಎಂಬ ವಿಭಾಗವಿತ್ತು. ಬೆಂಗಳೂರಿನ ಬೀದಿಗಳು, ಟ್ರಾಫಿಕ್‌, ಸಣ್ಣ ಪೇಟೆಗಳ ಕುರಿತು ಮಾಹಿತಿ ನೀಡುವ ಚಿತ್ರಗಳು ಅದರಲ್ಲಿ ಪ್ರಕಟವಾಗುತ್ತಿದ್ದವು. ಅದಕ್ಕಾಗಿ ಚಿತ್ರ ತೆಗೆಯಲು ಕ್ಯಾಮೆರಾ ಕೈಗೆತ್ತಿಕೊಂಡು ಪೇಟೆ ಬೀದಿಗಳನ್ನು ಸುತ್ತಾಡತೊಡಗಿದ ಅವರಲ್ಲಿ ಕುತೂಹಲ ಮೂಡಿಸಿದ್ದು – ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಇನ್ನೂ ಹಳೆಯತನ ಉಳಿಸಿಕೊಂಡು ಬಂದಿರುವ ಕರಗ, ಪರಿಷೆಯಂತಹ ಕಲೆ, ಆಚರಣೆಗಳು.

ಕಥೆ ಹೇಳುವ ಚಿತ್ರಗಳ ಅನ್ವೇಷಣೆಯಲ್ಲಿ ಅವರಿಗೆ ಅನೇಕ ಹಳೆಯ ವಸ್ತುಗಳು ಹೊಸ ರೂಪದಲ್ಲಿ ದೊರೆತವು. ಅವುಗಳಲ್ಲಿ ಮೊದಲಿಗೆ ಕಂಡಿದ್ದು, ಬೆಂಗಳೂರನ್ನು ಉಂಗುರದಂತೆ ಸುತ್ತುವರಿದ ಬೆಟ್ಟಗಳು ಮತ್ತು ಅವುಗಳಲ್ಲಿನ ದೇವಸ್ಥಾನಗಳು. ಪೇಟೆಯ ಬೀದಿಗಳ ಮಧ್ಯೆ ಇದ್ದ ಗರಡಿಮನೆಗಳು ವಿಸ್ಮಯ ಮೂಡಿಸಿದವು. ಅವುಗಳ ಕುರಿತು ಅಲ್ಲಿನವರಿಂದ ಮಾಹಿತಿ ಪಡೆದಂತೆ ಇನ್ನಷ್ಟು ಆಸಕ್ತಿ ಹುಟ್ಟಿಕೊಂಡಿತು.

ಈಗ ಸ್ವತಂತ್ರ, ವೃತ್ತಿಪರ ಛಾಯಾಗ್ರಾಹಕರಾಗಿರುವ ಪ್ರದೀಪ್‌, ಗರಡಿಮನೆಗಳು ಸಂಪೂರ್ಣ ಇತಿಹಾಸ ಸೇರಿಕೊಳ್ಳುವ ಮುನ್ನ ಅವುಗಳನ್ನು ಚಿತ್ರಪಟಗಳ ರೂಪದಲ್ಲಿಯಾದರೂ ಉಳಿಸಿಕೊಳ್ಳಬೇಕು ಎಂಬ ಪ್ರಯತ್ನದಲ್ಲಿದ್ದಾರೆ. ಗರಡಿಮನೆಯಲ್ಲಿನ ಕುಸ್ತಿ, ಅಭ್ಯಾಸಗಳಿಗಿಂತಲೂ ಅವರ ಗಮನ ಇರುವುದು ಅಲ್ಲಿನ ಆಚರಣೆಗಳ ಬಗ್ಗೆ. ಧಾರ್ಮಿಕ ಆಚರಣೆಗಳನ್ನು ಚಿತ್ರಿಸುತ್ತಿದ್ದ ಅವರು, ಈಗ ಅದರಲ್ಲಿನ ಬದಲಾವಣೆಗಳನ್ನೂ ಗ್ರಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT