ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೌಕಟ್ಟುಗಳನ್ನು ಮೀರುತ್ತ ದಿಗಂತವನ್ನು ಹುಡುಕುತ್ತ...

ನಾನು ಸಿನಿಮಾಕ್ಕೆ ಅಂಟಿಕೊಂಡೂ ಅಂಟಿಕೊಳ್ಳದ ವ್ಯಕ್ತಿ
Last Updated 16 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಶ್ರೀನಿವಾಸ ಪ್ರಭು, ನಟ
‘ಗೀಜಗನ ಗೂಡು’ ನನ್ನ ಮೊದಲ ಸಿನಿಮಾ. 1977ರಲ್ಲಿ ಆಗಷ್ಟೇ ಎಂ.ಎ ಮುಗಿಸಿದ್ದೆ. ಅದಾದ ನಂತರ ‘ಎನ್ಎಸ್‌ಡಿ’ಗೆ ಆಯ್ಕೆಯಾಗಿ ದೆಹಲಿಗೆ ಹೊರಟೆ. ಅಲ್ಲಿದ್ದ ಮೂರು ವರ್ಷಗಳಲ್ಲಿ ಆಗಾಗ ಬೆಂಗಳೂರಿಗೆ ಬಂದಾಗ ನಾಟಕಗಳನ್ನು ಮಾಡುತ್ತಿದ್ದೆ.

‘ಎನ್ಎಸ್‌ಡಿ’ಯಿಂದ ವಾಪಸ್ ಬಂದ ನಂತರ ರಾಜ್ಯವೆಲ್ಲ ಸುತ್ತಾಡಿ ನಾಟಕ ಮಾಡುತ್ತಿದ್ದೆ. ಬೆಂಗಳೂರಲ್ಲಿ ಇದ್ದಿದ್ದೇ ಕಡಿಮೆ. ನಂತರ ‘ದೂರದರ್ಶನ’ ಸೇರಿಕೊಂಡೆ. ನಮಗೆಲ್ಲ ಆಗ ನಾಟಕವೇ ಆತ್ಯಂತಿಕ ಗುರಿ. ಅದನ್ನೇ ಮಾಡಬೇಕು ಎಂಬ ಬದ್ಧತೆ. ಸಿನಿಮಾಕ್ಕೆ ಅಷ್ಟಾಗಿ ಯಾರೂ ಕರೆಯುತ್ತಲೂ ಇರಲಿಲ್ಲ. ಹಾಗಾಗಿ ಆರಂಭದಲ್ಲಿ ನಾನು ಸಿನಿಮಾ ಮಾಡಿದ್ದು ತೀರಾ ಕಡಿಮೆ.
 
ನನಗೆ ದೂರದರ್ಶನ ಸೇರುವ ಉತ್ಸಾಹ ಇರಲಿಲ್ಲ. ಮನೆಯವರ ಒತ್ತಾಯಕ್ಕೆ ಅಲ್ಲಿ ಹದಿನಾಲ್ಕು ವರ್ಷ ಕೆಲಸ ಮಾಡಿದೆ. ಅಲ್ಲೇ ನನ್ನ ಆಸಕ್ತಿಯ ಕೆಲಸಗಳಲ್ಲಿ ತೊಡಗಿದೆ. ನಾಟಕಗಳನ್ನು ಮಾಡಿಸಿದೆ. ಟೆಲಿ ಫಿಲ್ಮ್‌ಗಳನ್ನೂ ಮಾಡಿದೆವು. ದೂರದರ್ಶನ ಬಿಟ್ಟ ನಂತರವೂ ಸಿನಿಮಾದಲ್ಲಿ ಹೆಚ್ಚು ತೊಡಗಿಕೊಳ್ಳಲು ಪ್ರಯತ್ನಿಸಲಿಲ್ಲ.

ಬಂದ ಅವಕಾಶಗಳನ್ನು ಬಿಡಲೂ ಇಲ್ಲ. ಆಗ ನನಗೆ ಸಾಕಷ್ಟು ಆಯ್ಕೆಗಳಿದ್ದವು. ಒಂದಲ್ಲಾ ಒಂದು ಕಡೆ ಅವಕಾಶ ಇರುತ್ತಿತ್ತು. ಯಾವುದೂ ಇಲ್ಲದಿದ್ದರೆ ನನ್ನದೇ ನಾಟಕಗಳನ್ನು ಮಾಡುತ್ತಿದ್ದೆ. ಒಂದರ್ಥದಲ್ಲಿ ನಾನು ಸಿನಿಮಾಕ್ಕೆ ಅಂಟಿಕೊಂಡೂ ಅಂಟಿಕೊಳ್ಳದ ವ್ಯಕ್ತಿ.
 
ಹೆಚ್ಚಾಗಿ ಧಾರಾವಾಹಿಗಳನ್ನೇ ಮಾಡಿಕೊಂಡಿದ್ದೆ. ಸ್ವಲ್ಪ ಸಮಯದ ನಂತರದ ಮೆಗಾ ಧಾರಾವಾಹಿಗಳಲ್ಲಿ ಏಕತಾನತೆ ಕಾಡತೊಡಗಿತು. ವೈಯಕ್ತಿಕ ಬದುಕಿಗೆ ಅವಕಾಶವೇ ಇಲ್ಲದಂತಾಗಿತ್ತು. ವರ್ಷಗಟ್ಟಲೆ ನಡೆಯುವುದರಿಂದ ಆರ್ಥಿಕ ದೃಷ್ಟಿಯಿಂದ ಧಾರಾವಾಹಿ ಒಳ್ಳೆಯದು. ಆದರೆ ಅವು ಇದ್ದಲ್ಲೇ ಗಿರಕಿ ಹೊಡೆಯುತ್ತೇವೆ.

ಪಾತ್ರದ ಮಹತ್ವವೂ ಕಮ್ಮಿ. ನನಗೆ ಧಾರಾವಾಹಿಗಳ ನಿರಂತರತೆಯಿಂದಾಗಿ ಆಯಾಸ ಆಗತೊಡಗಿತು. ವಾಹಿನಿಗಳೂ ಹೊಸ ಮುಖಗಳಿಗೆ ಅವಕಾಶ ಕೊಡುವ ಧೋರಣೆ ತಳೆದವು. ಹಾಗಾಗಿ ವಿಶಿಷ್ಟ ಪಾತ್ರಗಳು ಸಿಕ್ಕಾಗ ಸಿನಿಮಾ ಮಾಡತೊಡಗಿದೆ. ಸಿನಿಮಾ ಚಿತ್ರೀಕರಣ ಬಹುಬೇಗ ಮುಗಿದುಬಿಡುತ್ತದೆ. ನಾನು ಮಾಡುವ ಪಾತ್ರಕ್ಕೆ ಹೆಚ್ಚೆಂದರೆ ಹದಿನೈದು ದಿನಗಳ ಷೆಡ್ಯೂಲ್ ಇರುತ್ತದೆ. ಅದೂ ಅಪರೂಪಕ್ಕೊಮ್ಮೆ. ಈಚೆಗೆ ಹೆಚ್ಚು ಸಿನಿಮಾಗಳನ್ನೇ ಮಾಡುತ್ತಿದ್ದೇನೆ. ಒಳ್ಳೆಯ ಅವಕಾಶಗಳೂ ಬರುತ್ತಿವೆ.
 
ಗಿರೀಶ ಕಾರ್ನಾಡರ ‘ಕಾನೂರು ಹೆಗ್ಗಡಿತಿ’ಯ ಶೇರೆಗಾರ ಪಾತ್ರ ನನಗೆ ನನಗೆ ತುಂಬಾ ಇಷ್ಟವಾಗಿದ್ದು. ಆ ಪಾತ್ರ ನನಗೆ ಒಳ್ಳೆಯ ಹೆಸರು ಮತ್ತು ತೃಪ್ತಿ ಕೊಟ್ಟಿತು. ಶಂಕರನಾಗ್ ಮತ್ತು ಜಿ.ವಿ. ಅಯ್ಯರ್ ಸಿನಿಮಾ ಬದುಕಿನ ಆರಂಭದಲ್ಲಿ ನನ್ನ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳು.
 
ಕೈಯಲ್ಲಿದ್ದದ್ದು ಕೈಗೂಡಲಿಲ್ಲ
ನಾನು ಆಡಿಸಿದ ನಾಲ್ಕೈದು ನಾಟಕಗಳನ್ನು ಸಿನಿಮಾ ಮಾಡಬೇಕು ಎಂದುಕೊಂಡರೂ ಅದ್ಯಾವುದೂ ಕೈಗೂಡಲಿಲ್ಲ. ನಾನು ಸಿನಿಮಾ ಮಾಡಬೇಕು ಎಂದುಕೊಳ್ಳುವ ಹೊತ್ತಿಗೆ ಬೇರೆಯವರು ಅದರ ಹಕ್ಕು ತೆಗೆದುಕೊಂಡಿರುತ್ತಿದ್ದರು. ಅವರು ಸಿನಿಮಾ ಮಾಡಿದಾಗ ನನ್ನ ನಾಟಕದ ಅಂಶಗಳು ಅದರಲ್ಲಿದ್ದರೂ ಅದು ನನ್ನದು ಎಂದು ಹೇಳಿಕೊಳ್ಳುವಂತಿರಲಿಲ್ಲ. ಏಕೆಂದರೆ ಅದ್ಯಾವುದೂ ನನ್ನ ಸ್ವಂತ ಕಥೆಗಳಲ್ಲ. ಬೇರೆಯವರ ಕಥೆಗಳನ್ನು ನಾಟಕ ರೂಪಕ್ಕೆ ತರುತ್ತಿದ್ದೆ.
 
ಜಿ.ಎಸ್. ಸದಾಶಿವ ಅವರ ‘ಸಿಕ್ಕು’ ನಾಟಕವನ್ನು ಸಿನಿಮಾ ಮಾಡಲಾಗದೇ ಹೋದೆ. ಜನಪ್ರಿಯ ನಾಟಕ ‘ಉದ್ಭವ’ವನ್ನು ಅನಂತನಾಗ್ ಜೊತೆ ಸಿನಿಮಾ ಮಾಡಬೇಕಿತ್ತು. ನಾನು ದೆಹಲಿಗೆ ಓಡಾಡಿಕೊಂಡಿದ್ದರಿಂದ ಆಗಲೇ ಇಲ್ಲ. ಅದನ್ನು ಕೋಡ್ಲು ರಾಮಕೃಷ್ಣ ಸಿನಿಮಾ ಮಾಡಿದರು.

‘ಬೇಲಿ ಮತ್ತು ಹೊಲ’ ಮಾಡಬೇಕಿತ್ತು. ಅದನ್ನು ರಾಮದಾಸ ನಾಯ್ಡು ಸಿನಿಮಾ ರೂಪಕ್ಕೆ ತಂದರು. ನಂತರ ವುಡ್‌ಹೌಸ್‌ನ ಒಂದು ಕಥೆ ಇಟ್ಟುಕೊಂಡು ‘ಬ್ರಹ್ಮಚಾರಿ ಶರಣಾದ’ ಎಂಬ ನಾಟಕ ಮಾಡಿದ್ದೆ. ಅದನ್ನು ಸಿನಿಮಾ ಮಾಡಬೇಕು ಎಂದುಕೊಳ್ಳುವ ಹೊತ್ತಿಗೆ ಕೆಲವು ಸ್ನೇಹಿತರು, ‘ಅದನ್ನು ನಾವು ಸಿನಿಮಾ ಮಾಡುತ್ತಿದ್ದೇವೆ, ನೀನು ದಯವಿಟ್ಟು ಮಾಡಬೇಡ’ ಎಂದರು. 
 
ಇದಕ್ಕೆಲ್ಲ ಮುಖ್ಯ ಕಾರಣ ನನ್ನ ಹಿಂಜರಿಕೆಯ ಸ್ವಭಾವ. ನಾನಾಗಿಯೇ ಬೇರೆಯವರ ಹತ್ತಿರ ಏನನ್ನಾದರೂ ಕೇಳಲು ಮುಜುಗರ. ಹೀಗೇ ಅನೇಕ ವರ್ಷಗಳನ್ನು ಕಳೆದುಬಿಟ್ಟಿದ್ದೇನೆ. ಅದೇ ಕಾರಣಕ್ಕೆ ಸಾಕಷ್ಟು ಕಳೆದುಕೊಂಡಿದ್ದೇನೆ. ಆದರೆ ಅದಕ್ಕಾಗಿ ಪಶ್ಚಾತ್ತಾಪವಿಲ್ಲ. ಏನು ಆಗಬೇಕೋ ಅದೇ ಆಗುತ್ತದೆ. ಈಗಲೂ ಒಂದಷ್ಟು ಥ್ರಿಲ್ಲರ್ ಕಥೆಗಳ ಸ್ಕ್ರಿಪ್ಟ್ ಸಿದ್ಧ ಮಾಡಿಟ್ಟುಕೊಂಡಿದ್ದೇನೆ.
 
ಈಗ ಗೌರವ, ಮರ್ಯಾದೆ ದೃಷ್ಟಿಯಿಂದ ಉದ್ಯಮದಲ್ಲಿ ಏನೂ ಕೊರತೆ ಇಲ್ಲ. ಆದರೆ ಸಂಭಾವನೆ ವಿಚಾರ ಬಂದಿದ್ದೇ ಗಂಟಲು ಕಟ್ಟಿಬಿಡುತ್ತದೆ. ಅದರಲ್ಲಿ ನಾನಿನ್ನೂ ಚೌಕಾಸಿ ಮಾಡಲು ಸಾಧ್ಯವಾಗಿಲ್ಲ. ಯಾರೋ ಬಂದು ನಟಿಸುವಂತೆ ಕೇಳುತ್ತಾರೆ. ನಾನು ಒಂದು ಮೊತ್ತ ಕೇಳುತ್ತೇನೆ. ಅವರೊಂದು ಹೇಳುತ್ತಾರೆ.

ಅದರ ಕುರಿತು ಹೆಚ್ಚು ಚರ್ಚೆಗಳಿಲ್ಲದೇ ಒಪ್ಪಿಕೊಂಡುಬಿಡುತ್ತೇನೆ. ಬಹುಶಃ ನಾನೇ ಕಡಿಮೆ ಮೊತ್ತ ಕೇಳುವುದರಿಂದ ಅವರು ‘ಮತ್ತೂ ಕಡಿಮೆ ಮಾಡಿಕೊಳ್ಳಿ’ ಎಂದು ಹೇಳುವುದೇ ಇಲ್ಲ. ಆದರೂ ಕಲಾವಿದರಿಗೆ ಮೊದಲಿಗಿಂತ ಈಗ ಒಳ್ಳೆಯ ಸಂಭಾವನೆಯೇ ಸಿಗುತ್ತಿದೆ.
 
ಹಿನ್ನೆಲೆಯಲ್ಲೇ ಇದ್ದುಕೊಂಡು...
ರವಿಚಂದ್ರನ್ ಅವರ ‘ಸಾವಿರ ಸುಳ್ಳು’ ಚಿತ್ರದಲ್ಲಿ ಸಿ.ಆರ್. ಸಿಂಹ ನಟಿಸಿದ್ದರು. ಆ ಸಿನಿಮಾದಲ್ಲಿ ರವಿಚಂದ್ರನ್‌ಗೆ ಹಿನ್ನೆಲೆ ಧ್ವನಿಯ ಹುಡುಕಾಟ ನಡೆದಿತ್ತು ನನ್ನ ‘ಹ್ಯಾಮ್ಲೆಟ್’ ನಾಟಕವನ್ನು ನೋಡಿದ್ದ ಸಿಂಹ, ಆ ಕೆಲಸಕ್ಕೆ ನನ್ನ ಹೆಸರನ್ನು ಸೂಚಿಸಿದ್ದರು. ಅಲ್ಲಿಂದ ಮುಂದೆ ರವಿಚಂದ್ರನ್‌ಗೆ ಸುಮಾರು ಇಪ್ಪತ್ತು ಸಿನಿಮಾಗಳಲ್ಲಿ ಧ್ವನಿ ನೀಡಿದ್ದೇನೆ. ಬೇರೆ ಯಾರಿಗೂ ಧ್ವನಿ ಕಲಾವಿದನಾಗಿ ಕೆಲಸ ಮಾಡಿಲ್ಲ.
 
‘ಸಾವಿರ ಸುಳ್ಳು’ ಸಮಯದಲ್ಲಿ ನಾನು ದೂರದರ್ಶನದಲ್ಲಿದ್ದೆ. ಅಲ್ಲಿದ್ದುಕೊಂಡು ಬೇರೆ ಕೆಲಸ ಮಾಡುವಂತಿರಲಿಲ್ಲ. ಹಾಗಾಗಿ ಭಾನುವಾರಗಳಲ್ಲಿ ಮಾತ್ರ ಡಬ್ಬಿಂಗ್‌ಗೆ ಹೋಗುತ್ತಿದ್ದೆ. ಅದನ್ನು ಎಲ್ಲೂ ಹೇಳಿಕೊಳ್ಳಲೂ ಇಲ್ಲ. ನಂತರ ಒಂದು ದಿನ ಸಿನಿಮಾದಲ್ಲಿ ನಟಿಸುವ ಅವಕಾಶವೂ ಬಂತು. ಅದಕ್ಕೆ ಪರವಾನಗಿ ನೀಡುವಂತೆ ದೂರದರ್ಶನ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದೆ. ಆದರೆ ಅವಕಾಶ ಸಿಗಲಿಲ್ಲ.
 
ಚೌಕಟ್ಟು ಮೀರುವ ಸಿನಿಮಾಗಳು
ಒಂದು ಸಿನಿಮಾ ಹಿಟ್ ಆದರೆ ಅಲ್ಲೊಂದು ಚೌಕಟ್ಟು ಸೃಷ್ಟಿಯಾಗುತ್ತದೆ. ಒಬ್ಬ ನಾಯಕ ಗೆಲ್ಲುತ್ತಿದ್ದರೆ ಒಂದು ಫ್ರೇಮ್ ಸೃಷ್ಟಿಯಾಗುತ್ತದೆ. ಅದನ್ನು ಮೀರುವುದೇ ಕಲಾವಿದನ ಸೃಜನಶೀಲತೆ. ಇತ್ತೀಚೆಗೆ ಕನ್ನಡ ಚಿತ್ರರಂಗ ಇಂತಹ ಚೌಕಟ್ಟನ್ನು ಮೀರುವ ಕೆಲಸ ಮಾಡುತ್ತಿದೆ.

ಕಮರ್ಷಿಯಲ್, ಆಫ್ ಬೀಟ್ ಎಂದು ನಾನು ಹೇಳುತ್ತಿಲ್ಲ. ಹಣ ಮಾಡುವ ಉದ್ದೇಶದ ಹೊರತಾಗಿಯೂ ಏನೋ ಒಂದು ವಿಚಾರವನ್ನು ದಾಟಿಸುವ ಪ್ರಯತ್ನವನ್ನು ಇಂದಿನ ಅನೇಕ ನಿರ್ದೇಶಕರು ಮಾಡುತ್ತಿದ್ದಾರೆ. ಚೌಕಟ್ಟನ್ನು ಒಡೆದು ಹೊಸತನ್ನು ಕಟ್ಟುತ್ತಿದ್ದಾರೆ. ಜನರೂ ಅದನ್ನು ಇಷ್ಟಪಟ್ಟು ನೋಡುತ್ತಿದ್ದಾರೆ.
 
ನನ್ನ ವಿಚಾರದಲ್ಲೂ ಚೌಕಟ್ಟು ಮೀರುವ ಕೆಲಸವನ್ನು ತಕ್ಕಮಟ್ಟಿಗೆ ಮಾಡಿದ್ದೇನೆ. ಸೌಮ್ಯ ಪಾತ್ರಗಳಲ್ಲದೆ ಖಳನ ಪಾತ್ರದಲ್ಲೂ ಬಣ್ಣ ಹಚ್ಚಿದ್ದೇನೆ. ಸಾಧ್ಯವಾದ ಮಟ್ಟಿಗೆ ಭಿನ್ನ ಪಾತ್ರಗಳನ್ನೇ ಆಯ್ದುಕೊಳ್ಳುತ್ತೇನೆ.
 
ಆದರೆ ಅದು ನಮ್ಮನ್ನು ಹುಡುಕಿ ಬರಬೇಕು. ಏಕೆಂದರೆ ಇಂಥದ್ದೇ ಪಾತ್ರಗಳನ್ನು ಮಾಡುತ್ತೇನೆ ಎಂದು ಹೇಳುವ ಮಟ್ಟಿಗೆ ನಾನು ಬೆಳೆದಿಲ್ಲ. ಸಿಕ್ಕ ಅವಕಾಶದಲ್ಲೇ ಎಷ್ಟು ಹೊಸತನ ನೀಡಲು ಸಾಧ್ಯ ಎಂದು ಯೋಚಿಸಬೇಕಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT