ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪದ ಸನ್ನಿಧಿಯಲ್ಲಿ...

‘ನಾನು ನಾನೇ’ ಆಗಿ ಬದುಕಲು ಹಂಬಲಿಸುವ ಅಪರೂಪದ ಹುಡುಗಿ ದೀಪಾ ಸನ್ನಿಧಿ
Last Updated 16 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಮುಖದ ಬಟ್ಟಲಲ್ಲಿ ಸಣ್ಣಗೆ ಹೊಯ್ದಾಡುತ್ತ ಬೆಳಗುತ್ತಿರುವ ದೀಪದ ಕುಡಿಗಳಂಥ ಕಣ್ಣುಗಳು, ತುಸುವೇ ವಕ್ರಗೊಂಡರೂ ಎದುರಿನವರ ಎದೆಯಲ್ಲಿ ವಿದ್ಯುತ್ ಹರಿಸಬಲ್ಲ ತುಟಿಗಳು, ತಿದ್ದಿ ತೀಡಿ ರೂಪಿಸಿದ ನಂತರ ತನ್ನ ಕಣ್ಣೇ ಬೀಳಬಹುದೆಂಬ ಭಯಕ್ಕೆ ಎಡಗೆನ್ನೆಯ ಮೇಲೆ ಬ್ರಹ್ಮ ನಾಜೂಕಾಗಿ ಇಟ್ಟ ದೃಷ್ಟಿಬೊಟ್ಟಿನಂಥ ಮಚ್ಚೆ.

ಇನ್ನೇನು ಸೂರ್ಯ ಉದಯಿಸುವ ಕ್ಷಣಮುಂಚಿನ ದಿಗಂತದಂಚಿನಂತೆ ಹೊಳೆಯುವ ಕೆನ್ನೆಗಳು. ಕಣ್ಣದೃಷ್ಟಿಯೂ ಸರ್ರನೇ ಜಾರಿಬಿಡುವಷ್ಟು ನುಣುಪಾಗಿ ನೆತ್ತಿಯಿಂದ ಇಳಿದು ಎದೆಯ ಮೇಲೆ ಮಿದುವಾಗಿ ಹರವಿಕೊಂಡ ಕೂದಲು...
 
ಊಹೂಂ. ಈ ದೀಪದ ಹುಡುಗಿಯ ಬೆಡಗಿನ ಬಗ್ಗೆ ಎಷ್ಟೇ ವರ್ಣಿಸಿದರೂ, ಬುಡದ ನೆರಳಲ್ಲಿ ಅವರ ವ್ಯಕ್ತಿತ್ವದ ಇನ್ನೊಂದು ಮುಖ ಕಾಣದೆ ಹಾಗೇ ಉಳಿದುಬಿಡುತ್ತದೆ. ಇದೊಂದು ಬಗೆಯಲ್ಲಿ ಮಧ್ಯಂತರದ ನಂತರದ ಸಿನಿಮಾದಂತೆ. ಊಹಿಸಿರದ ತಿರುವುಗಳೆಲ್ಲ ಅಡಗಿರುವುದು ಅದರಾಚೆಯೇ. ದೀಪಾ ಸನ್ನಿಧಿ! 
 
ಇವರನ್ನು ‘ಸಾರಥಿ’ಯ ಸಹವರ್ತಿಯಾಗಿ ಸ್ವಾಗತಿಸಿದ್ದೇವೆ. ‘ಪರಮಾತ್ಮ’ದಲ್ಲಿ ಸುಮ್ ಸುಮ್ನೆ ನಗುವ ಪರಮ ಪೊಸೆಸಿವ್ ಹುಡುಗಿಯಾಗಿ ಪುನೀತ್ ಭುಜ ಕಚ್ಚಿದಾಗ ನಾಯಕನ ಜಾಗದಲ್ಲಿ ನಾವೇ ನಿಂತು ಪುಲಕಗೊಂಡಿದ್ದೇವೆ. ಈ ನಡುವೆ ತಮಿಳಿನ ಸಿನಿಮಾಗಳಲ್ಲೂ ಮಿಂಚಿಬಂದರಂತೆ ಎಂಬ ಸುದ್ದಿ ಕೇಳಿ ಖುಷಿಪಟ್ಟಿದ್ದೇವೆ.
 
‘ಚೌಕ’ದಲ್ಲಿ ಶುಕ್ರಿಯಾ ಎಂದು ಬುರ್ಕಾದೊಳಗಿನ ತಣ್ಣನೆ ಕಣ್ಣುಗಳಲ್ಲೇ ನಕ್ಕಿದ್ದನ್ನು ಕಂಡು ಅಚ್ಚರಿಗೊಂಡಿದ್ದೇವೆ. ಇನ್ನೇನು ಬಿಡುಗಡೆಗೆ ಸಜ್ಜಾಗಿರುವ ‘ಚಕ್ರವರ್ತಿ’ಯ ಪಟ್ಟದರಸಿಯಾಗಿ ಹೇಗೆ ಕಾಣಿಸಿಕೊಳ್ಳಬಹುದು ಎಂಬ ಕುತೂಹಲವನ್ನೂ ಎದೆಯಲ್ಲಿಟ್ಟುಕೊಂಡು ಕಾಯುತ್ತಿದ್ದೇವೆ... 
 
 
ದರ್ಶನ್, ಪುನೀತ್‌, ಯಶ್‌ ಅವರಂಥ ಸೂಪರ್ ಸ್ಟಾರ್‌ಗಳ ಸಿನಿಮಾಗಳಲ್ಲಿಯೇ ಮಿಂಚಿ ಸೈ ಎನಿಸಿಕೊಂಡಿರುವ ದೀಪಾ ಸನ್ನಿಧಿ ಅವರಿಗೆ ಜನಪ್ರಿಯತೆ ಮತ್ತು ಕೈತುಂಬ ಅವಕಾಶ ಎರಡೂ ಇವೆ. ಆದರೆ ‘ಸಾರಥಿ’ಯಿಂದ ಹಿಡಿದು ‘ಚೌಕ’ದವರೆಗೆ ಅವರು ವರ್ಷಕ್ಕೊಂದೊಂದೇ ಸಿನಿಮಾ ಮಾಡುತ್ತ ಬಂದಿದ್ದಾರೆ.

ಹಾಗೆಂದು ಅವರೇನೂ ತುಂಬಾ ಚ್ಯೂಸಿ ಅಲ್ಲ. ಸಿಕ್ಕ ಸಿಕ್ಕ ಅವಕಾಶಗಳನ್ನು ಬಾಚಿಕೊಂಡು ನಿರಂತರವಾಗಿ ಜನರೆದುರು ಕಾಣಿಸಿಕೊಳ್ಳುತ್ತಿರಬೇಕು ಎಂಬ ಹಪಹಪಿಯೂ ಅವರಿಗಿಲ್ಲ. ‘ಸಾಧ್ಯವಾದಷ್ಟೂ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳುವುದಕ್ಕಿಂತ  ಬಂದ ಅವಕಾಶಗಳಲ್ಲಿ ನನಗೆ ಹೊಂದುವಂಥ ಕಥೆ, ಚಿತ್ರತಂಡ ಸಿಕ್ಕಿದಾಗ ಅದರಲ್ಲಿ ನಟಿಸುವುದು ನನಗೆ ಹೆಚ್ಚು ಕಂಫರ್ಟ್‌ ಅನಿಸುತ್ತದೆ’ ಎನ್ನುತ್ತಾರೆ ದೀಪಾ.

‘ಸಿನಿಮಾ-ನಟನೆ ನನ್ನ ಬದುಕಿನ ಒಂದು ಭಾಗ ಅಷ್ಟೇ. ಅದೇ ಬದುಕು ಎಂದು ಖಂಡಿತ ನಾನು ಪರಿಗಣಿಸಿಲ್ಲ. ಸಿನಿಮಾದ ಹೊರತಾಗಿ ಏನು ಮಾಡಬಹುದು ಎಂಬ ಹುಡುಕಾಟ ನಡೆಸುತ್ತಲೇ ಇರುತ್ತೇನೆ’ ಎಂದು ತುಂಬ ಸ್ಪಷ್ಟವಾಗಿ ಹೇಳಲ್ಲ ದಿಟ್ಟೆ ಅವರು. ಹಾಗೆಂದು ಸಿನಿಮಾರಂಗ ಬಿಟ್ಟು ಹೋಗುವ ಆಲೋಚನೆಯೂ ಅವರಿಗಿಲ್ಲ.

ಸಿನಿಮಾದ ಹೊರತಾಗಿಯೂ ಇರುವ ತಮ್ಮ ಖಾಸಗಿ ಬದುಕನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಿಕೊಳ್ಳಬೇಕು ಎನ್ನುವುದು ಅವರ ಹಂಬಲ. ಹಾಗಾಗಿಯೇ ಅವರಿಗೆ ಇಂಥದ್ದೇ ಪಾತ್ರಗಳಲ್ಲಿ ನಟಿಸಬೇಕು ಎಂಬ ಕನಸೇನೂ ಇಲ್ಲ. ‘ತನಗೆ ಬಂದ ಪಾತ್ರಗಳಲ್ಲಿ ಒಳ್ಳೆಯದನ್ನು ಆಯ್ಕೆ ಮಾಡಿಕೊಂಡು ನಟಿಸುತ್ತಾ ಹೋಗ್ತೀನಿ’ ಎನ್ನುತ್ತಾರೆ ಅವರು.

ಅಲ್ಲದೇ ‘ಒಳ್ಳೆಯ ಪಾತ್ರ’ ಎನ್ನುವುದು ನಮ್ಮ ಆಯ್ಕೆಯಷ್ಟನ್ನೇ ಅವಲಂಬಿಸಿರುವುದಿಲ್ಲ ಎಂಬ ಅರಿವೂ ಅವರಿಗಿದೆ. ‘ಯಾವುದೋ ಒಂದು ಪಾತ್ರ ಚೆನ್ನಾಗಿದೆ ಅಂದುಕೊಂಡಿರುತ್ತೇವೆ. ಕೊನೆಗೂ ಸಿನಿಮಾ ಹಿಟ್‌ ಆದರೆ ಮಾತ್ರ ಆ ಪಾತ್ರಕ್ಕೆ ಗುರುತು ಸಿಗುವುದು. ಹಿಟ್‌ ಆಗದೇ ಇದ್ದರೆ ಆ ಪಾತ್ರ ಕಳೆದುಹೋಗಿಬಿಡುತ್ತದೆ. ಹೀಗೆ ಒಂದು ಪಾತ್ರದ ಯಶಸ್ಸು ಅನೇಕ ಸಂಗತಿಗಳನ್ನು ಅವಲಂಬಿಸಿರುತ್ತದೆ’ ಎಂದು ಅವರು ವಿವರಿಸುತ್ತಾರೆ.

ತೆರೆಯಮೇಲೆ ಪಟ್‌ ಪಟಾಕಿಯಂತೆ ಮಾತನಾಡುತ್ತ, ನಗುವಿನಲ್ಲೂ ಮುನಿಸಿನಲ್ಲೂ ಹುಡುಗರ ಎದೆಯಲ್ಲಿ ಜೋಕಾಲಿ ತೂಗುವ ದೀಪಾ, ಸ್ವಭಾವತಃ ಅಂತರ್ಮುಖಿ. ಮೌನಿ. ಆಪ್ತಸ್ನೇಹಿತರ ಪುಟ್ಟ ಬಳಗದ ಹೊರತಾಗಿ ಬೇರೆಯವರ ಜತೆ ಬೆರೆಯುವುದು ತುಂಬಾ ಕಡಿಮೆ.

ಈಗಲೂ ಅವರ ಸ್ನೇಹಿತರು ‘ನೀನು ಸಿನಿಮಾರಂಗ ಪ್ರವೇಶಿಸಿದ್ದನ್ನು ನಂಬಲೇ ಸಾಧ್ಯವಾಗುತ್ತಿಲ್ಲ’ ಎಂದು ಅಚ್ಚರಿಯಿಂದ ಹೇಳುತ್ತಿರುತ್ತಾರಂತೆ. ‘ತಮ್ಮ ಖಾಸಗಿ ಆಸಕ್ತಿಗಳಿಗೂ ಸಿನಿಮಾಗಳಿಗೂ ಸಂಬಂಧವೇ ಇಲ್ಲ. ಅವೆರಡರ ನಡುವೆ ಶೇ.5ರಷ್ಟೂ ಹೋಲಿಕೆ ಇರುವುದಿಲ್ಲ’ ಎನ್ನುತ್ತಾರೆ ದೀಪಾ.

‘ಒಂದು ಸಿನಿಮಾ ಚಿತ್ರೀಕರಣದ ಅವಧಿ ಮತ್ತು ಅದರ ಪ್ರಮೋಶನ್‌ ಸಮಯದಲ್ಲಿ ಮಾತ್ರ ನಾನು ಚಿತ್ರರಂಗಕ್ಕೆ ಸಂಬಂಧಿಸಿದವಳು. ಆ ಸಮಯವನ್ನು ಬಿಟ್ಟರೆ ಬಣ್ಣದ ಲೋಕದಿಂದ ಪೂರ್ತಿ ಸಂಪರ್ಕ ಕಡಿದುಕೊಂಡುಬಿಡುತ್ತೇನೆ.

ನಾನು ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂಬ ಅರಿವೇ ಇಲ್ಲದವಳ ಹಾಗೆ ಬದುಕುತ್ತಿರುತ್ತೇನೆ. ನನ್ನ ಹವ್ಯಾಸಗಳಲ್ಲಿ ತೊಡಗಿಕೊಳ್ಳುತ್ತೇನೆ. ಮತ್ತೆ ಸಿನಿಮಾ ಸೆಟ್‌ಗೆ ಹೋದಾಗ ಅಥವಾ ಹೊರಗಡೆ ಯಾರೋ ಗುರ್ತಿಸಿದಾಗ ಮಾತ್ರ ನಾನು ನಟಿ ಎಂಬ ಅರಿವಾಗುತ್ತದೆ ಅಷ್ಟೆ’ ಎಂದು ತಮ್ಮ ಖಾಸಗಿ ಬದುಕನ್ನು ಅವರು ವಿವರಿಸುತ್ತಾರೆ.

ಅಂದಹಾಗೆ ದೀಪಾ ಅವರೊಳಗೆ ಒಬ್ಬ ಲೇಖಕಿಯೂ ಇದ್ದಾರೆ. ಓದು ಮತ್ತು ಬರವಣಿಗೆ ಅವರ ಖಾಸಗಿ ಬದುಕಿನ ಬಹುಮುಖ್ಯ ಭಾಗ. ಇಂಗ್ಲಿಷ್‌ನಲ್ಲಿ ಕವಿತೆ, ಸಣ್ಣಕಥೆಗಳನ್ನು ಬರೆಯುತ್ತಿರುತ್ತಾರೆ. ಕೈತೋಟ ನಿರ್ಮಾಣ ಮಾಡುವುದೂ ಅವರ ಇನ್ನೊಂದು ಹವ್ಯಾಸ.

‘ನಾನು ಓದುವುದು ಬರೆಯುವುದು ವೃತ್ತಿಜೀವನದ ಅನುಕೂಲಕ್ಕಾಗಿ ಖಂಡಿತವಾಗಿ ಅಲ್ಲ’ ಎಂದು ಸ್ಪಷ್ಟವಾಗಿ ಹೇಳುವ ದೀಪಾ, ಬರವಣಿಗೆಯನ್ನು ನೆಚ್ಚಿಕೊಂಡ ಕಾರಣವನ್ನು ವಿವರಿಸುವುದು ಹೀಗೆ:‘ನಾನು ಅಷ್ಟೊಂದು ಸೋಷಿಯಲ್ ಅಲ್ಲ. ಮನಸ್ಸಿನ ಭಾವನೆಗಳನ್ನು ಮಾತಿನಲ್ಲಿ ಅಭಿವ್ಯಕ್ತಿ ಮಾಡುವುದು ಕಷ್ಟ ನನಗೆ. ಅದಕ್ಕೆ ಅಕ್ಷರಗಳ ಸಖ್ಯ ಹೆಚ್ಚು ನೆಮ್ಮದಿ ನೀಡುತ್ತದೆ. ಸುರಕ್ಷಿತ ಅನಿಸುತ್ತದೆ. ಓದು ಎನ್ನುವುದು ನನಗೆ ಎಷ್ಟೋ ಜನರ ಜೀವನವನ್ನು–ಭಾವನೆಗಳನ್ನು ನಾನು ಬದುಕುವ, ಅನುಭವಿಸುವ ಅವಕಾಶ. ಅದರಿಂದ ಕಲಿಯುವುದು ಸಾಕಷ್ಟಿದೆ’.

ಸಮಯ ಸಿಕ್ಕಾಗೆಲ್ಲ ಕವಿತೆ, ಕಥೆಗಳನ್ನು ಬರೆಯುವ ಅವರು, ಇದುವರೆಗೆ ಎಲ್ಲಿಯೂ ಪ್ರಕಟಿಸಿಲ್ಲ. ಅವುಗಳನ್ನು ಪ್ರಕಟಿಸಬೇಕು ಎಂಬ ಆಸೆಯೂ ಅವರಿಗಿಲ್ಲ. ನಟನೆಯ ವಿಷಯಕ್ಕೆ ಬರುವುದಾದರೆ ಸ್ಟಾರ್‌ ನಟರ ಜತೆ ಮಾತ್ರ ನಟಿಸುವ ನಟಿ ಎಂಬ ಪ್ರಭಾವಳಿ ಅವರನ್ನು ಸುತ್ತಿಕೊಂಡಿದೆ. ಆರಂಭದಲ್ಲಿಯೇ ದರ್ಶನ್‌, ಪುನೀತ್‌, ಯಶ್‌, ಗಣೇಶ್‌ ಅವರಂಥ ಸ್ಟಾರ್‌ಗಳ ಜತೆ ನಟಿಸಲು ಅವಕಾಶ ಸಿಕ್ಕಿದ್ದು ಕಾರಣ.
 
ಆದರೆ ಸ್ವತಃ ದೀಪಾ ಅಂತಹ ಯಾವ ನಿಬಂಧನೆಗಳನ್ನೂ ಹಾಕಿಕೊಂಡಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಹೊಸಬರ ತಂಡದೊಂದಿಗೆ ಕೆಲಸ ಮಾಡಬೇಕು ಎಂಬ ಆಸೆ ಇದೆ. ಒಳ್ಳೆಯ ಕಥೆ, ಪಾತ್ರ, ಚಿತ್ರತಂಡ ಸಿಕ್ಕರೆ ಹೊಸಬರ ಜೊತೆಗೆ ಕೆಲಸ ಮಾಡಲು ಯಾವುದೇ ಹಿಂಜರಿಕೆ ಇಲ್ಲದೇ ಒಪ್ಪಿಕೊಳ್ಳುತ್ತೇನೆ’ ಎಂದು ನೇರವಾಗಿಯೇ ಹೇಳುತ್ತಾರೆ. ಇದಕ್ಕೆ ಪೂರಕವಾಗಿ ಅವರೀಗ ಒಪ್ಪಿಕೊಂಡಿರುವ ‘ಮಾಂಜಾ’ ಮತ್ತು ‘ಗರುಡ’ ಸಿನಿಮಾಗಳೆರಡೂ ಹೊಸಬರೇ ಮಾಡುತ್ತಿರುವುದು.
 
‘ನಾವು ಎಷ್ಟೇ ಹೇಳಿದ್ರೂ ನಟಿಯರಿಗೆ ಸ್ಕ್ರೀನ್‌ ಸ್ಪೇಸ್‌ ಕಮ್ಮಿಯೇ ಇರುತ್ತದೆ. ನಮಗೆ ಬಂದ ಪಾತ್ರಗಳಲ್ಲಿ ಬೆಸ್ಟ್‌ ಅನಿಸಿದ್ದನ್ನು ಆಯ್ಕೆ ಮಾಡಿಕೊಳ್ಳಬೇಕಷ್ಟೆ. ಪಾತ್ರದ ಜತೆಗೆ ಚಿತ್ರತಂಡವೂ ಅಷ್ಟೇ ಮುಖ್ಯವಾಗುತ್ತದೆ. ಕೆಲವು ಸಲ ಪಾತ್ರಕ್ಕೆ ಅಷ್ಟೊಂದು ಮಹತ್ವ ಇಲ್ಲದಿದ್ದಾಗಲೂ ಚಿತ್ರತಂಡದ ಜೊತೆ ನೆಮ್ಮದಿಯಾಗಿ ಕೆಲಸ ಮಾಡಲು ಸಾಧ್ಯ ಎನಿಸಿದಾಗ ಅಂಥ ಸಿನಿಮಾಗಳನ್ನು ಒಪ್ಪಿಕೊಂಡಿರುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT