ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘‘ದುಃಖದಿಂದ ಅತ್ತಿದ್ದೇ ನೆನಪಿಲ್ಲ...

Last Updated 16 ಮಾರ್ಚ್ 2017, 19:30 IST
ಅಕ್ಷರ ಗಾತ್ರ
- ನೀವು ದಕ್ಷಿಣ ಭಾರತದವರಾದರೂ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳಲು ಇಷ್ಟೊಂದು ತಡವಾಗಿದ್ದು ಏಕೆ?
ನಾನು ಆಂಧ್ರಪ್ರದೇಶದವನು. ತೆಲುಗು ನನ್ನ ಮಾತೃಭಾಷೆ. ನಾನು ಚಿಕ್ಕವನಿರುವಾಗಲೇ ನಮ್ಮ ಕುಟುಂಬ ಮುಂಬೈಗೆ ಹೋಗಿ ನೆಲೆಸಿತು. ಅಲ್ಲೇ ಈ ಮಿಮಿಕ್ರಿ, ಡಾನ್ಸ್ ಹಾಗೂ ಸಿನಿಮಾ ನಟನೆ ಆರಂಭವಾಗಿದ್ದು.

ಸ್ಟೇಜ್ ಷೋ ಮತ್ತು ಸಿನಿಮಾದಲ್ಲಿ ನಾನು ಜನಪ್ರಿಯನಾದ ಕಾಲದಿಂದಲೂ ತೆಲುಗು, ತಮಿಳು ಹಾಗೂ ಮಲಯಾಳಂನಿಂದ ಅವಕಾಶಗಳು ಬರುತ್ತಲೇ ಇದ್ದವು. ಅದರಲ್ಲೂ ತೆಲುಗಿನಲ್ಲಿ ವಿಪರೀತ. ನಾನು ಆಂಧ್ರಕ್ಕೆ ಹೋದಾಗ, ಅಲ್ಲಿಯ ಜನ ‘ತೆಲುಗಿನವರಾಗಿ ನೀವ್ಯಾಕೆ ತೆಲುಗು ಸಿನಿಮಾಗಳಲ್ಲಿ ನಟಿಸುವುದಿಲ್ಲ’ ಎಂದು ಕೋಪದಿಂದ ಕೇಳಿದ್ದುಂಟು.
 
ಬಾಲಿವುಡ್‌ ಚಿತ್ರಗಳಲ್ಲಿ ಮತ್ತು ಷೋಗಳಲ್ಲಿ ಬ್ಯುಸಿಯಾಗಿದ್ದರಿಂದ ಇತ್ತ ಬರಲಾಗಿರಲಿಲ್ಲ. ಈಗ ಕನ್ನಡದ ‘ಗರ’ ಚಿತ್ರದ ಮೂಲಕ ಇತ್ತ ಕಾಲಿಟ್ಟಿದ್ದೇನೆ. ಮುಂದೆ ಮನಸ್ಸು ಒಪ್ಪುವ ಪಾತ್ರಗಳು ಬಂದರೆ, ಖಂಡಿತಾ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸುತ್ತೇನೆ.
 
- ಇದಕ್ಕೂ ಮುನ್ನ ತುಳು ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದಿರಿ?
ಮೂರೂವರೆ ವರ್ಷದ ಹಿಂದೆ ತುಳುವಿನ ‘ರಂಗ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದೆ. ದಕ್ಷಿಣ ಕನ್ನಡ ಭಾಗದಿಂದ ಬಂದು ಮುಂಬೈನಲ್ಲಿ ನೆಲೆಸಿರುವ ಅನೇಕ ಕನ್ನಡಿಗ ಸ್ನೇಹಿತರು ನನಗಿದ್ದಾರೆ. ಅವರ ಒಡನಾಟದಿಂದಾಗಿ ನಾನು ತುಳು ಭಾಷೆಯನ್ನು ಸರಾಗವಾಗಿ ಮಾತನಾಡಬಲ್ಲೆ. ಆ ಭಾಗದ ಸ್ನೇಹಿತರೊಬ್ಬರ ಒತ್ತಾಸೆ ಮತ್ತು ಸ್ನೇಹಕ್ಕಾಗಿ ಆ ಚಿತ್ರದಲ್ಲಿ ನಟಿಸಿದ್ದೆ. 
 
- ಸಿನಿಮಾ ನಂಟು ಆರಂಭವಾಗಿದ್ದು ಹೇಗೆ?
ನಮ್ಮದು ಬಡ ಕುಟುಂಬ. ಮುಂಬೈನ ಧಾರಾವಿಯಲ್ಲಿ ನಮ್ಮ ವಾಸ. ತಂದೆ ಕೂಲಿ ಕಾರ್ಮಿಕ. ಐವರು ಮಕ್ಕಳ ಪೈಕಿ ನಾನೇ ಹಿರಿಯವನು. ಆರ್ಥಿಕ ಮುಗ್ಗಟ್ಟಿನಿಂದಾಗಿ 7ನೇ ತರಗತಿಯಲ್ಲಿದ್ದಾಗ ಶಾಲೆ ಬಿಟ್ಟು ಕೆಲಸ ಮಾಡತೊಡಗಿದೆ. 12ನೇ ವಯಸ್ಸಿನಲ್ಲಿರುವಾಗಲೇ ಬಾಲಿವುಡ್‌ ನಟರ ಧ್ವನಿ ಅನುಕರಿಸಿ ಮಿಮಿಕ್ರಿ ಮಾಡತೊಡಗಿದೆ. ಜೊತೆಗೆ, ಹಾಡುಗಳಿಗೆ ನೃತ್ಯವನ್ನೂ ಮಾಡುತ್ತಿದ್ದೆ.

ನಂತರ, ಹಾಸ್ಯ ಷೋಗಳ ಮೂಲಕ ಹೆಸರು ಮಾಡಿದ್ದ ಕಲ್ಯಾಣ್‌ಜೀ ಮತ್ತು ಆನಂದ್‌ಜೀ ಅವರ ಸಂಪರ್ಕಕ್ಕೆ ಬಂದು, ಅವರೊಂದಿಗೆ ಹಾಸ್ಯ ಷೋಗಳಲ್ಲಿ ಭಾಗವಹಿಸತೊಡಗಿದೆ. ದೇಶದಾದ್ಯಂತ ಅವರ ಜೊತೆ ಸುತ್ತಿ ಜನರನ್ನು ನಗಿಸಿದೆ. ಹೊರದೇಶಗಳಿಗೂ ಹೋಗಿ ಬಂದೆ.

ಆಗ ನನ್ನ ಹಾಸ್ಯ ಎಷ್ಟು ಜನಪ್ರಿಯವಾಗಿತ್ತೆಂದರೆ, 19982ರಲ್ಲಿ ನನ್ನ ಹಾಸ್ಯದ ಆಡಿಯೊ ಕ್ಯಾಸೆಟ್ ಹೊರಬಂದಿತ್ತು. ಜೊತೆಗೆ, ಸಿನಿಮಾರಂಗದವರಿದ್ದ ವೇದಿಕೆಯಲ್ಲಿ ಷೋಗಳನ್ನು ನಡೆಸಿಕೊಡತೊಡಗಿದೆ. ಆಗ ಚಿತ್ರರಂಗದ ಕೆಲವರು ನನ್ನನ್ನು ಗುರುತಿಸಿ ಹಾಸ್ಯ ಪಾತ್ರಗಳನ್ನು ನೀಡತೊಡಗಿದರು. 
 
ಜತೆಗೆ ಷೋಗಳು ನಡೆಯುತ್ತಿದ್ದವು. ಆದರೆ, 1992ರಲ್ಲಿ ತೆರೆಕಂಡ ‘ಬಾಜಿಗರ್’ ಚಿತ್ರದ ಬಾಬೂಲಾಲ್ ಪಾತ್ರ ನನಗೆ ತುಂಬಾ ಹೆಸರು ತಂದುಕೊಟ್ಟಿತು. ಅಲ್ಲಿಂದ ಆರಂಭವಾದ ಸಿನಿಮಾದಲ್ಲಿ ಹೆಚ್ಚು ಬ್ಯುಸಿಯಾದೆ. ನನ್ನ ನಟನೆಗೆ ಅನೇಕ ಪ್ರಶಸ್ತಿ–ಪುರಸ್ಕಾರಗಳು ಸಹ ಬಂದಿವೆ.

- ಬಾಲಿವುಡ್‌ ಚಿತ್ರಗಳಲ್ಲೂ ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಕಾಣೆಯಾಗಿದ್ದೀರಿ. ಯಾಕೆ?
ಚಿತ್ರರಂಗಕ್ಕೆ ಬಂದಾಗಿನಿಂದ ಎಂದಿಗೂ ಅವಕಾಶಗಳ ಕೊರತೆ ಎದುರಿಸಿಲ್ಲ. ಪಾತ್ರಗಳ ಆಯ್ಕೆಯಲ್ಲಿ ನಾನು ತುಂಬಾ ಚೂಸಿ. ಮನಸ್ಸಿಗೆ ತಟ್ಟದ ಯಾವ ಪಾತ್ರವನ್ನೂ ಒಪ್ಪಿಕೊಳ್ಳುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ನನ್ನನ್ನು ಅರಸಿಕೊಂಡು ಬರುತ್ತಿದ್ದ ಪಾತ್ರಗಳೆಲ್ಲಾ ಡಬಲ್ ಮೀನಿಂಗ್ ಸಂಭಾಷಣೆ ಇರುವವು ಆಗಿದ್ದವು.

ಇದು ಸಿನಿಮಾದಿಂದ ಸ್ವಲ್ಪ ಕಾಲ ದೂರ ಉಳಿಯಲು ಕಾರಣ. ಇದುವರೆಗೆ ನಾನು ಅಂತಹ ಡೈಲಾಗ್‌ಗಳನ್ನು ಹೇಳಿಲ್ಲ, ಮುಂದೆಯೂ ಹೇಳುವುದಿಲ್ಲ. ಅದಕ್ಕಾಗಿಯೇ ಬಂದ ಅವಕಾಶಗಳನ್ನು ನಯವಾಗಿಯೇ ತಿರಸ್ಕರಿಸಿ, ದೇಶ–ವಿದೇಶಗಳಲ್ಲಿ ಸ್ಟ್ಯಾಂಡ್‌ ಅಪ್ ಕಾಮಿಡಿ ಷೋಗಳನ್ನು ಮಾಡಿಕೊಂಡು ಬರುತ್ತಿದ್ದೇನೆ. ನನ್ನ ಷೋಗಳಲ್ಲೂ ದ್ವಂದ್ವಾರ್ಥಕ್ಕೆ ಅವಕಾಶ ಇಲ್ಲ. ಹಾಗಾಗಿಯೇ, ನನ್ನ ಷೋಗೆ ಜನ ಈಗಲೂ ಕಿಕ್ಕಿರಿದು ಸೇರುತ್ತಾರೆ.

- ನಿಮ್ಮ ಪ್ರಕಾರ ಆರೋಗ್ಯಕರ ಹಾಸ್ಯವೆಂದರೆ ಹೇಗಿರಬೇಕು?
ದ್ವಂದ್ವಾರ್ಥ ಸಂಭಾಷಣೆಯ ಹಾಸ್ಯ ಕೆಲವರಿಗೆ ಇಷ್ಟವಾದರೆ, ಮತ್ತೆ ಕೆಲವರಿಗೆ ಇರಿಸುಮುರಿಸು ತರುತ್ತದೆ. ಆರೋಗ್ಯಕರ ಹಾಸ್ಯ ಎಲ್ಲರನ್ನೂ ಸೆಳೆಯುತ್ತದೆ. ಅಲ್ಲದೆ, ಅದು ನೀಡುವ ಸಂದೇಶವೂ ಪರಿಣಾಮಕಾರಿಯಾಗುತ್ತದೆ. ಡಬಲ್ ಮೀನಿಂಗ್‌ನಲ್ಲಿ ನಗು ತರಿಸಬಹುದೇ ಹೊರತು, ಸಂದೇಶ ಕೊಡಲಾಗದು.

ಸಮಾಜಕ್ಕೂ ಅದು ಅಷ್ಟು ಒಳ್ಳೆಯದಲ್ಲ. ಆರೋಗ್ಯಕರ ಹಾಸ್ಯ ಮಾಡುವವರಿಗೆ ಹೆಚ್ಚು ಓದುಗಾರಿಕೆ ಜೊತೆಗೆ ಆಲೋಚನಾ ಶಕ್ತಿಯೂ ಇರಬೇಕು. ಮ್ಯಾನರಿಸಂ ಕೂಡ ಅತ್ಯಗತ್ಯ. ನಮ್ಮ ಸುತ್ತಮುತ್ತ ನಡೆಯುವ ಆಗುಹೋಗುಗಳಲ್ಲಿರುವ ಹಾಸ್ಯವನ್ನು ಹೆಕ್ಕಿ ತೆಗೆಯುವ ಸಾಮರ್ಥ್ಯವಿರುವವರು ಮಾತ್ರ ಜನರನ್ನು ನಗಿಸಬಲ್ಲರು.

- ಎಂತಹವರನ್ನೂ ನಗಿಸಬಲ್ಲ ನೀವು, ಎಂದಾದರೂ ಅತ್ತಿದ್ದುಂಟಾ?
ಸಂತಸದ ಕ್ಷಣಗಳಿಗೆ ನನ್ನ ಕಣ್ಣುಗಳಿಂದ ನೀರು ಬಂದಿದೆಯೇ ಹೊರತು, ನೋವು ಅಥವಾ ದುಃಖಕ್ಕೆ ಕಣ್ಣೀರು ಬಂದಿದ್ದು ನೆನಪಿಲ್ಲ. ಎಷ್ಟೋ ವರ್ಷಗಳ ನಂತರ ಆತ್ಮೀಯ ಸ್ನೇಹಿತರನ್ನು, ಸಹೋದರರನ್ನು ಅಥವಾ ಕುಟುಂಬ ಸದಸ್ಯರನ್ನು ಭೇಟಿಯಾದಾಗ ಆ ಸಂಭ್ರಮಕ್ಕೆ ಕಣ್ಣೀರು ಬಂದಿದೆ. ಸಾವು–ನೋವು ಅಥವಾ ದುರಂತದ ಸಂದರ್ಭಗಳಲ್ಲಿ ನನಗೆ ಅಳು ಬರುವುದೇ ಇಲ್ಲ. ಇದು ಒಂದು ರೀತಿಯಲ್ಲಿ ನನ್ನ ದೌರ್ಬಲ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT