ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಪಂಚಾಯಿತಿಯಲ್ಲಿ ಜೈವಿಕ ಇಂಧನ ವನ

Last Updated 17 ಮಾರ್ಚ್ 2017, 9:22 IST
ಅಕ್ಷರ ಗಾತ್ರ

ತುಮಕೂರು: ‘ರಾಜ್ಯದ ಎಲ್ಲ 6000 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಜೈವಿಕ ಇಂಧನ ಸಸಿ ನೆಡಲು ತೀರ್ಮಾನಿಸಲಾಗಿದೆ’ ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರೊ.ಬಸವರಾಜ ರಾಮನಾಳ್‌ ಹೇಳಿದರು.

ನಗರದ ಎಸ್‌ಐಟಿ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಜೈವಿಕ ಇಂಧನ– ಅವಕಾಶಗಳು ಮತ್ತು ಸವಾಲುಗಳು ಕುರಿತ ರಾಷ್ಟ್ರಮಟ್ಟದ ಎರಡು ದಿನಗಳ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

‘ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ, ಅರಣ್ಯ ಹಾಗೂ ಬಂಜರು ಭೂಮಿಯಲ್ಲಿ ಸಸಿ ನೆಡಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಈ ವರ್ಷ ಮಂಡಳಿಯಲ್ಲಿ ₹ 2 ಕೋಟಿ ಬಜೆಟ್‌ ನಿಗದಿ ಮಾಡಲಾಗಿದೆ. ಜೈವಿಕ ಇಂಧನದ ಸಸಿ ಬೆಳೆಸುವ ರೈತರಿಂದ ಬೀಜ ಖರೀದಿಸಲು 33 ಬೀಜ ಸಂಗ್ರಹ ಕೇಂದ್ರ ತೆರೆಯಲಾಗುವುದು’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ಕೆ.ಜಿ.ಶಾಂತಾರಾಮ್‌ ಮಾತನಾಡಿ, ‘ಜೈವಿಕ ಇಂಧನದ ಗಿಡ ಬೆಳೆಸಲು ಹೆಚ್ಚು ಪ್ರಾಧಾನ್ಯತೆ ಕೊಡಲಾಗಿದೆ. ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಗಳನ್ನು ಘಟಕಗಳನ್ನಾಗಿ ಪರಿಗಣಿಸಿ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ’ ಎಂದು ಹೇಳಿದರು.
‘2017–18ರಲ್ಲಿ 70 ಸಾವಿರ ಗಿಡ ನೆಡಲು ತೀರ್ಮಾನಿಸಲಾಗಿದೆ. ಕಳೆದ ವರ್ಷ 81 ಸಾವಿರ ಗಿಡ ನೆಡಲಾಗಿತ್ತು. ಈಗ ಸಿದ್ದಗಂಗಾ ಮಠದಲ್ಲಿ ಶ್ರೀಗಳ ಜನ್ಮ ದಿನೋತ್ಸವ ಅಂಗವಾಗಿ 10 ಸಾವಿರ ಗಿಡ ನೆಡಲಾಗುವುದು. ಅದೇ ರೀತಿ ತೋಟಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ನೂರಾರು ಎಕರೆ ಜಾಗದಲ್ಲಿ ಸಸಿ ನೆಡಲಾಗುವುದು’ ಎಂದರು.

‘ರೈತರಲ್ಲಿ ಜೈವಿಕ ಇಂಧನ ಸಸಿಗಳ ಮಹತ್ವದ ಬಗ್ಗೆ ಅರಿವು ಮೂಡಿಸುವ ಜತೆಗೆ ಉತ್ತಮ ಮಾರುಕಟ್ಟೆ ಸೌಲಭ್ಯ ಕಲ್ಪಿಸಬೇಕು’ ಎಂದು ಹೇಳಿದರು.

ಪೆಟ್ರೋಲಿಯಂ, ನೈಸರ್ಗಿಕ ಅನಿಲ ಸಚಿವಾಲಯದ ಜೈವಿಕ ಇಂಧನ ಕಾರ್ಯಪಡೆ ಅಧ್ಯಕ್ಷ ವೈ.ಬಿ.ರಾಮಕೃಷ್ಣ ಮಾತನಾಡಿ, ‘ಸರ್ಕಾರದ ನೆರವು, ಜಿಲ್ಲೆಗಳಲ್ಲಿ ಅಧಿಕಾರಿಗಳ ಸಹಕಾರ ಸಿಗದಿದ್ದ ಕಾರಣ ಜೈವಿಕ ಇಂಧನ ಅಭಿವೃದ್ಧಿ ಕಾರ್ಯಕ್ರಮ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಕಾರ್ಯಕ್ರಮದ ಮೇಲೆ ನಿಗಾ ವಹಿಸಿದರೆ ಮಾತ್ರ ಜೈವಿಕ ಇಂಧನ ಕಾರ್ಯಕ್ರಮ ಯಶಸ್ವಿ ಆಗಲಿದೆ’ ಎಂದರು.

‘ಕಾರ್ಯಕ್ರಮದಲ್ಲಿ ಜನರ ಸಹಭಾಗಿತ್ವ ಅಗತ್ಯ. ಮಂಡಳಿಯಲ್ಲಿ ಸಾಕಷ್ಟು ಹಣವಿದೆ. ನರೇಗಾ ಯೋಜನೆಯಡಿ ಸಸಿ ನೆಡಲು ಕಳೆದ ಮೂರು ವರ್ಷದಲ್ಲಿ 187 ಕೋಟಿ ವ್ಯಯಿಸಲಾಗಿದೆ. ಪ್ರತಿ ಪಂಚಾಯಿತಿ ಮಟ್ಟದಲ್ಲಿ ಬೀಜ ಸಂಗ್ರಹ ಕೇಂದ್ರ ಆರಂಭಿಸಲು ರಾಷ್ಟ್ರೀಯ ಜೀವನೋಪಾಯ ಮಿಶನ್‌ನಡಿ ನೆರವು ಪಡೆಯಲು ಅವಕಾಶವಿದೆ’ ಎಂದರು.
‘ಜೈವಿಕ ಇಂಧನ ಅಭಿವೃದ್ಧಿಗೆ ಮುಂದೆ ಬರುವ ಉದ್ದಿಮೆದಾರರಿಗೆ ನಬಾರ್ಡ್ ವತಿಯಿಂದ ಸಾಲ ಸೌಲಭ್ಯ ನೀಡಲಾಗುವುದು. ಈ ಸಂಬಂಧದ ಪ್ರಸ್ತಾವ ರಾಜ್ಯಮಟ್ಟದ ಬ್ಯಾಂಕರ್ಸ್‌ ಸಮಿತಿ ಮುಂದಿದೆ. ಒಪ್ಪಿಗೆ ದೊರೆತರೆ ಸುಲಭವಾಗಿ ಸಾಲ ಸೌಲಭ್ಯ ಒದಗಿಸಬಹುದು’ ಎಂದು ಹೇಳಿದರು.

‘2– 3 ವರ್ಷದಲ್ಲಿ ಜೈವಿಕ ಇಂಧನ ಅಭಿವೃದ್ಧಿ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡಿದೆ. ಮುಂದಿನ 20 ವರ್ಷಗಳಿಗೆ ಅನುಕೂಲ ಆಗುವ ಯೋಜನೆಯ ರೂಪುರೇಷ ಅಂತಿಮಗೊಳಿಸಲಾಗಿದೆ’ ಎಂದರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ.ಸುರೇಶ್‌, ಡಾ.ಉಮಾಶಂಕರ್‌ ಇದ್ದರು.

**

ಜೈವಿಕ ಇಂಧನ ಸಸಿಗಳು
ಹೊಂಗೆ, ಬೇವು, ಜತ್ರೋಪ, ಸಿಮರೂಬಾ, ಹಿಪ್ಪೆ, ಸುರಹೊನ್ನೆ-  ಇವುಗಳನ್ನು ಜೈವಿಕ ಇಂಧನ, ಗ್ಲಿಸರಿನ್‌, ಸೋಪು ತಯಾರಿಕೆಗೆ ಬಳಸಲಾಗುತ್ತದೆ.

**

ಪ್ರಯೋಗಾಲಯ ಸ್ಥಾಪನೆ
‘ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ)1 ರಿಂದ 5 ಸಾವಿರ ಲೀಟರ್ ಸಾಮರ್ಥ್ಯದ ಜೈವಿಕ ಇಂಧನ ಪರೀಕ್ಷೆ ಪ್ರಯೋಗಾಲಯ ಆರಂಭಿಸಲಾಗುವುದು’ ಎಂದು ಬಸವರಾಜ ರಾಮನಾಳ್‌ ಹೇಳಿದರು.

‘ಪ್ರತಿ ಜಿಲ್ಲೆಯಲ್ಲಿ ಜೈವಿಕ ಇಂಧನ ತೋಟಗಳನ್ನು ಬೆಳೆಸಲಾಗುವುದು. ತುಮಕೂರಿನಲ್ಲಿ 3 ಲಕ್ಷ ಸಸಿ ನೆಟ್ಟು ಪೋಷಿಸುವುದಾಗಿ ಇಲ್ಲಿನ ಜಿಲ್ಲಾ ಪಂಚಾಯಿತಿ ಸಿಇಒ ಭರವಸೆ ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT