ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಬರಡು ಕನಸು

ನಾವು ನೋಡಿದ ಸಿನಿಮಾ/ ಎರಡು ಕನಸು
Last Updated 17 ಮಾರ್ಚ್ 2017, 13:04 IST
ಅಕ್ಷರ ಗಾತ್ರ

ಎರಡು ಕನಸು
ನಿರ್ಮಾಪಕ: ಕೆ.ಬಿ. ಅಶೋಕ್
ನಿರ್ದೇಶಕ: ಮದನ್‌ ಎ.
ತಾರಾಗಣ: ವಿಜಯರಾಘವೇಂದ್ರ, ಕಾರುಣ್ಯ ರಾಮ್‌, ಕೃಷಿ ತಾಪಂಡ

ಪ್ರಚಾರವನ್ನು ಬಯಸದೇ ಆತ್ಮತೃಪ್ತಿಗಾಗಿ ‘ಕಸ್ತೂರಿ ನಿವಾಸ’ ಅನಾಥಾಶ್ರಮವನ್ನು ನಡೆಸುತ್ತಾ, ಅಂಗವಿಕಲ, ಅನಾಥ ಮಕ್ಕಳನ್ನು, ವೃದ್ಧರನ್ನು ಸಲುಹುವ ಮುತ್ತು ಪ್ರಚಾರಪ್ರಿಯನಲ್ಲ. ಆದರೆ ದೇಶ ಕಟ್ಟುವ ಸುದ್ದಿಗಳನ್ನು ಮಾಡಬೇಕು ಎಂದು ಹೊರಡುವ ಪತ್ರಕರ್ತೆ ಶ್ರುತಿಗೆ ಅವನನ್ನು ಸಂದರ್ಶಿಸುವ ಆಸೆ. ಹೇಗೋ ಅವನ ಅನಾಥಾಶ್ರಮದೊಳಕ್ಕೆ ನುಸುಳಿ ಒಳಗಿನ ಪರಿಸರ ನೋಡಿದಾಗ, ಅವಳಲ್ಲಿ ಸಂದರ್ಶನದ ಆಸೆ ಕಮರಿ ಆ ಆಶ್ರಮದ ಸಾಂಗತ್ಯ ಒದಗಿದರೆ ಸಾಕು ಎನ್ನಿಸುತ್ತದೆ.

ಈ ನಡುವೆ ಬೆಂಗಳೂರಿಗೆ ಡ್ರಗ್‌ ಸರಬರಾಜು ಮಾಡುತ್ತಿರುವ ಹಾಲ್ಕಡ್ಡಿ ಆದಿ ತನ್ನ ವ್ಯವಹಾರಕ್ಕಾಗಿ ಅನಾಥಾಶ್ರಮದ ಅಂಗವಿಕಲ ಮಕ್ಕಳನ್ನು ಅವರಿಗೆ ಅರಿವಿಲ್ಲದ ಹಾಗೆಯೇ ಬಳಸಿಕೊಳ್ಳುತ್ತಿದ್ದಾನೆ. ಈ ವಿಷವರ್ತುಲದೊಳಕ್ಕೆ ಸಿಲುಕಿ ‘ಕಸ್ತೂರಿ ನಿವಾಸ’ದ ಮೂವರು ಬಲಿಯಾಗುತ್ತಾರೆ. ಆಶ್ರಮವೂ ರೌಡಿಗಳಿಗೆ ತುತ್ತಾಗುತ್ತದೆ. ನಾಯಕ ದುಷ್ಟರನ್ನು ಸದೆಬಡಿದು ಮುಗಿಸುವಷ್ಟರಲ್ಲಿ ಊಹೆಯಂತೆ ನಾಯಕಿಗೆ ಅವನ ಮೇಲೆ ಪ್ರೇಮ ಹುಟ್ಟುತ್ತದೆ. ಆದರೆ ನಾಯಕನಿಂದ ಪ್ರೇಮನಿರಾಕರಣೆ. ಇದಕ್ಕೆ ಕಾರಣರೂಪದಲ್ಲಿ ದ್ವಿತೀಯಾರ್ಧದಲ್ಲಿ ನಾಯಕನ ಹಳೆಯ ಬದುಕಿನ ಫ್ಲಾಶ್‌ಬ್ಯಾಕ್‌.

ಒಂದು ನಗರ, ಇನ್ನೊಂದು ಹಳ್ಳಿ – ಬೇರೆ ಬೇರೆಯದೇ ಕಥೆಯನ್ನು ಇಟ್ಟುಕೊಂಡು ಒಂದೇ ಸೂತ್ರದಲ್ಲಿ ಬಂಧಿಸಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಆ ಪ್ರಯತ್ನದಲ್ಲಿ ಅವರು ಯಶಸ್ವಿಯಾಗಿಲ್ಲ. ಇಂಟ್ರೊಡೊಕ್ಷನ್‌ ಫೈಟ್‌, ಸಾಂಗ್‌ಗಳ ಮೂಲಕ ವಿಜಯ ರಾಘವೇಂದ್ರ ಅವರಿಗೆ ಮಾಸ್‌ಲುಕ್‌ ನೀಡುವ ಪ್ರಯತ್ನವೂ ಫಲಕಾರಿಯಾಗಿಲ್ಲ. ಯಾಕೆಂದರೆ ಅದು ಅವರ ಮುಂದಿನ ಪಾತ್ರಕ್ಕೆ ಹೊಂದುವಂತಿಲ್ಲ. ಡ್ರಗ್‌್ ಮಾಫಿಯಾ ಕಥೆಯಾಗಲಿ, ಅನಾಥ ಮಕ್ಕಳ ಕಥೆಯಾಗಲಿ ಮನಸನ್ನು ಕಾಡುವಷ್ಟು ಪ್ರಭಾವಿಯಾಗಿಲ್ಲ.

ಮುತ್ತನಾಗಿ ವಿಜಯ ರಾಘವೇಂದ್ರ ಅವರದು ಸಮತೂಕದ ಅಭಿನಯ. ದ್ವಿತೀಯಾರ್ಧದಲ್ಲಿ ಬರುವ ಕಾರುಣ್ಯ ರಾಮ್‌ ಇಷ್ಟವಾಗುತ್ತಾರೆ. ನಿರೂಪಣೆಯಲ್ಲಿನ ಏಕತಾನತೆಯನ್ನು ಕೊಂಚವಾದರೂ ಮುರಿದು ನಗುವುಕ್ಕಿಸುವುದು ಕುರಿಪ್ರತಾಪ್‌ ಮತ್ತು ಪವನ್‌ ಜುಗಲ್ಬಂದಿ. ಒಂದೇ ದೃಶ್ಯದಲ್ಲಿ ಬಂದು ಹೋದರೂ ಪವನ್‌ ನೆನಪುಳಿಯುತ್ತಾರೆ.

ತೊದಲು ಮಾತಿನ ಮಕ್ಕಳ ಬಾಯಲ್ಲಿ ಪ್ರೇಮ–ಮದುವೆಯ ಮಾತುಗಳನ್ನಾಡಿಸುವುದು ಅಸಹಜವಾಗಿದೆ. ಹಳೆಯ ಸ್ನೇಹಿತೆ ಇಪ್ಪತ್ತು ವರ್ಷಗಳ ನಂತರ ಮರಳಿ ಸಿಕ್ಕಾಗ ನಾಯಕ ದುಃಖದಿಂದ ಹಾಡುವುದ್ಯಾಕೆ ಎಂದು ಅರ್ಥವಾಗುವುದಿಲ್ಲ. ತಾಂತ್ರಿಕವಾಗಿಯೂ ಸಿನಿಮಾ ಗಮನಸೆಳೆಯುವಂತಿಲ್ಲ. ಸ್ಟೀವ್‌ ಕೌಶಿಕ್‌ ಸಂಯೋಜನೆಯ ಹಾಡುಗಳಲ್ಲಿ ‘ನೂರು ಕಂಪನ..’ ಕೆಲವು ಹಳೆಯ ಜನಪ್ರಿಯ ಗೀತೆಗಳನ್ನು ದಟ್ಟವಾಗಿ ನೆನಪಿಸುತ್ತದೆ. ಉಳಿದಂತೆ ಯಾವ ಹಾಡುಗಳೂ ನೆನಪಿನಲ್ಲುಳಿಯುವುದಿಲ್ಲ.

ರಾಜಕುಮಾರ್‌ ಅವರು ಅಭಿನಯಿಸಿದ ಜನಪ್ರಿಯ ಸಿನಿಮಾ ‘ಎರಡು ಕನಸು’ ಹೆಸರನ್ನೇ ಈ ಸಿನಿಮಾಕ್ಕೂ ಇಟ್ಟಿರುವುದಕ್ಕೆ ಪ್ರಚಾರದ ಹೊರತಾದ ಯಾವ ಬಲವಾದ ಉದ್ದೇಶವೂ ಕಾಣುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT