ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂತರಿಕ ಗರ್ಭಾಶಯ ವೀರ್ಯದಾನ

ಪುಸ್ತಕ ರೂಪದಲ್ಲಿ ಅಂಕುರ
Last Updated 17 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಡಾ. ಎಸ್.ಎಸ್. ವಾಸನ್, ಆ್ಯಂಡ್ರೊಲಜಿಸ್ಟ್, info@manipalfertility.com
ಮಗುವಿಗಾಗಿ ಹಂಬಲಿಸುತ್ತಿದ್ದರೂ ಹಲವು ಕಾರಣಗಳಿಂದ ಗರ್ಭ ಫಲಿಸದೇ ಇರುವ ಉದಾಹರಣೆಗಳು ಲೆಕ್ಕವಿಲ್ಲದಷ್ಟಿವೆ. ಆದರೆ ಅವುಗಳಿಗೆ ಪರಿಹಾರಗಳೂ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟಿವೆ. ಸದ್ಯದ ಪರಿಸ್ಥಿತಿಯಲ್ಲೂ  ಫಲವಂತಿಕೆಯ ಸಮಸ್ಯೆ ಎದುರಿಸುತ್ತಿರುವವರಿಗೆ ಪರಿಹಾರದ  ರೂಪದಲ್ಲಿರುವುದು ಇನ್‌ಟ್ರಾಯುಟೆರಿನ್ ಇನ್‌ಸೆಮಿನೇಷನ್ ಚಿಕಿತ್ಸೆ. 
 
ಏನಿದು ಇನ್‌ಟ್ರಾಯುಟೆರಿನ್ ಇನ್‌ಸೆಮಿನೇಷನ್?
ಆಂತರಿಕ ಗರ್ಭಾಶಯ ವೀರ್ಯದಾನ ಎಂಬ ಈ ಚಿಕಿತ್ಸೆಯಲ್ಲಿ ಪತಿಯ ವೀರ್ಯವನ್ನು ಸಂಸ್ಕರಿಸಿ, ಉತ್ತಮ ಗುಣಮಟ್ಟದ ವೀರ್ಯಾಣುಗಳನ್ನಷ್ಟೇ ಆರಿಸಿಕೊಂಡು ಪತ್ನಿಯ ಗರ್ಭಕೋಶಕ್ಕೆ ವರ್ಗಾಯಿಸುವುದು. ಆ ಮೂಲಕ ಗರ್ಭಧಾರಣೆಯನ್ನು ಸಾಧ್ಯವಾಗಿಸುವುದು ಈ ಚಿಕಿತ್ಸೆಯ ಪ್ರಕ್ರಿಯೆ.
 
ಗರ್ಭಧಾರಣೆಗೆ ಅಡ್ಡಿಯಾಗುವ ಸಾಕಷ್ಟು ಕಾರಣಗಳು ಇವೆ. ಆ ಕಾರಣಗಳ ಮೇಲೂ ಚಿಕಿತ್ಸೆಯ ಫಲ ಅವಲಂಬಿತವಾಗಿರುತ್ತದೆ.  ಅಂಡೋತ್ಪತ್ತಿ ಸಮಸ್ಯೆ, ಎಂಡೋಮೀಟ್ರಿಯಾಸಿಸ್, ವಿವರಿಸಲಾಗದ ಬಂಜೆತನ, ವೀರ್ಯಾಣು ಪ್ರಮಾಣದ ಸಮಸ್ಯೆ – ಇಂಥ ಸಮಸ್ಯೆಗಳಿದ್ದಲ್ಲಿ, ಆಂತರಿಕ ಗರ್ಭಾಶಯ ವೀರ್ಯದಾನ ಚಿಕಿತ್ಸೆ ಪರಿಣಾಮಕಾರಿಯಾಗಬಲ್ಲದು. 
 
ಆದರೆ ಮುಚ್ಚಿದ ಅಂಡಾಣುವಾಹಿನಾಳ, ವೀರ್ಯಾಣುವಿನ ಕೊರತೆ, ಎಂಡೋಮೀಟ್ರಿಯಾಸಿಸ್‌ನ ಗಂಭೀರ ಸಮಸ್ಯೆ ಇದ್ದ ಸಮಯದಲ್ಲಿ  ಐಯುಐ ಚಿಕಿತ್ಸೆ ಉತ್ತಮ ಆಯ್ಕೆಯಾಗಿರುವುದಿಲ್ಲ. ಆಗ  ಐವಿಎಫ್(ಕೃತಕ ಗರ್ಭಧಾರಣೆ)ಯೇ ಉತ್ತಮ ಆಯ್ಕೆ ಎನ್ನಿಸಿಕೊಳ್ಳುತ್ತದೆ.
 
ಈ ಚಿಕಿತ್ಸೆಯು ‘ಅಕಾರಣ/ವಿವರಿಸಲಾಗದ ಫಲವಂತಿಕೆ ಸಮಸ್ಯೆ’ಗೆ ಪರಿಣಾಮಕಾರಿ ಮಾರ್ಗವಾಗಬಲ್ಲದು. ವೀರ್ಯಾಣುಗಳ ಸಂಖ್ಯೆ ಸಹಜವಾಗಿದ್ದರೂ, ಅಂಡಾಣುವಾಹಿನಿ ಮುಕ್ತವಾಗಿದ್ದರೂ, ಎಂಡೋಮೀಟ್ರಿಯಾಸಿಸ್‌ನ ಸಮಸ್ಯೆ ಇಲ್ಲದಿದ್ದರೂ, ಅಂಡೋತ್ಪತ್ತಿಯಲ್ಲೂ ಯಾವುದೇ ಸಮಸ್ಯೆ ಕಂಡುಬರದಿದ್ದರೂ ಫಲವಂತಿಕೆ ಸಿದ್ಧಿಸದೇ ಇರುವುದನ್ನು ‘ಅಕಾರಣ ಅಥವಾ ವಿವರಿಸಲಾಗದ ಫಲವಂತಿಕೆ ಸಮಸ್ಯೆ’ ಇದೆ ಎಂದು ಪರಿಗಣಿಸುತ್ತೇವೆ. ಆಗ ಈ ಚಿಕಿತ್ಸೆಯು ನೆರವಾಗಬಲ್ಲದು.
 
ಚಿಕಿತ್ಸೆಯ ಪ್ರಕ್ರಿಯೆ:  ವೀರ್ಯದ ಮಾದರಿಯನ್ನು ಸಂಗ್ರಹಿಸಿ ದುರ್ಬಲ ವೀರ್ಯಾಣುಗಳನ್ನು ಬೇರ್ಪಡಿಸಿ, ಆರೋಗ್ಯಕರ, ಉತ್ತಮ ಗುಣಮಟ್ಟದ ವೀರ್ಯಾಣುಗಳನ್ನಷ್ಟೇ ಆರಿಸಿಕೊಂಡು ಲ್ಯಾಬೊರೇಟರಿಯಲ್ಲಿ  ಸಂಸ್ಕರಿಸಲಾಗುತ್ತದೆ. ಸಂಸ್ಕರಿತ ವೀರ್ಯದ ಮಾದರಿಯನ್ನು ನಳಿಕೆಯಲ್ಲಿ ಗರ್ಭಕಂಠದ ಮೂಲಕ ಗರ್ಭಕೋಶಕ್ಕೆ ವರ್ಗಾಯಿಸಲಾಗುತ್ತದೆ.
 
ಈ ಚಿಕಿತ್ಸೆಯು ಫಲ ನೀಡುವಲ್ಲಿ, ಚಿಕಿತ್ಸೆಯ ಪ್ರಮಾಣವೂ ಪ್ರಮುಖ ಪಾತ್ರ ವಹಿಸುತ್ತದೆ. ಹಲವು ಸಿಟ್ಟಿಂಗ್‌ಗಳು ಈ ಚಿಕಿತ್ಸೆಯಲ್ಲಿ, ಕೆಲವರಿಗೆ ಒಂದೇ ಸುತ್ತಿನ ಚಿಕಿತ್ಸೆಯಲ್ಲಿ  ಗರ್ಭ ಧರಿಸುವ ಸಾಧ್ಯತೆ ಶೇ.10–15 ರಷ್ಟು.  ಒಂದಕ್ಕಿಂತ ಹೆಚ್ಚು ಸುತ್ತಿನ ಚಿಕಿತ್ಸೆಗೆ ಒಳಪಟ್ಟಷ್ಟು, ಗರ್ಭಧಾರಣೆಯ ಸಾಧ್ಯತೆಯನ್ನೂ ಹೆಚ್ಚಿಸಿಕೊಳ್ಳಬಹುದು.
 
ನಾಲ್ಕು ಸುತ್ತಿನ ಚಿಕಿತ್ಸೆಯಲ್ಲಿ, ಗರ್ಭಧಾರಣೆ ತಲುಪುವ ಸಾಧ್ಯತೆಯ ಮಟ್ಟವು ಶೇ. 40–50 ಹೆಚ್ಚಿರುತ್ತದೆ. ಈ  ಚಿಕಿತ್ಸೆ ಮೂಲಕ ಗರ್ಭಧಾರಣೆಯ ಯಶಸ್ಸು ಕೆಲವು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ವೀರ್ಯಾಣುವಿನ ಮಾದರಿ (ಐವತ್ತು ಲಕ್ಷಕ್ಕಿಂತ ಕಡಿಮೆ ಚಲನಶೀಲ ವೀರ್ಯಾಣುವಿದ್ದರೆ) ಈ ಚಿಕಿತ್ಸೆ ಫಲಕಾರಿಯಾಗುವುದಿಲ್ಲ. ಜೊತೆಗೆ  ಗರ್ಭಧಾರಣೆ ಬಯಸುವ ಮಹಿಳೆಯ ವಯಸ್ಸು, ಆಕೆಯ ಅಂಡಾಳುವಾಹಿಯ ಸ್ಥಿತಿಗತಿಯೂ ಗಣನೆಗೆ ಬರುತ್ತದೆ. 
 
ಮಹಿಳೆಯರ ವಯಸ್ಸು ಕಡಿಮೆ ಇದ್ದಷ್ಟೂ ಈ ಚಿಕಿತ್ಸೆಯೂ ಬೇಗ ಫಲಿಸುತ್ತದೆ. ಮೂವತ್ತೈದು ವರ್ಷದ ಒಳಗಿನ ಮಹಿಳೆಯರಲ್ಲಿ ಶೇ. 10–15ರಷ್ಟು ಸಾಧ್ಯತೆಯಿದ್ದರೆ, 35–40 ವರ್ಷದ ಮಹಿಳೆಯರಲ್ಲಿ ಇದರ ಪ್ರಮಾಣ ಶೇ.10ಕ್ಕೂ ಕಡಿಮೆ ಇರುತ್ತದೆ. ನಲವತ್ತು ದಾಟಿದ ಮಹಿಳೆಯರಲ್ಲಿ ಈ ಸಾಧ್ಯತೆ ಶೇ. 3ರಷ್ಟಿರುತ್ತದೆ.

ಆದರೆ ಕೆಲವೊಂದು ಪ್ರಕರಣಗಳಲ್ಲಿ ಈ ಲೆಕ್ಕಾಚಾರವನ್ನೂ ಮೀರಿ, ಈ ಚಿಕಿತ್ಸೆಗೆ ಒಳಪಟ್ಟು ಗರ್ಭ ಧರಿಸಿದ ಉದಾಹರಣೆಗಳು ಸಾಕಷ್ಟಿವೆ. ಇದು ಚಿಕಿತ್ಸೆಯ ಹಂತಗಳ ಮೇಲೆ ಅವಲಂಬಿತವೂ ಆಗಿರುತ್ತದೆ. ಮೂರ್ನಾಲ್ಕು ಸಿಟಿಂಗ್‌ಗಳ ನಂತರವೂ ಗರ್ಭಧಾರಣೆಯಾಗಲಿಲ್ಲ ಎಂದರೆ ಬೇರೆ ಆಯ್ಕೆಯ ಕುರಿತು ಯೋಚಿಸಬೇಕಾಗುತ್ತದೆ.  
 
ಪುಸ್ತಕ ರೂಪದಲ್ಲಿ ಅಂಕುರ : ಬೆಲೆ: ₹250– 10% off ₹225
ಬಂಜೆತನ ಪುರುಷರಿಗೂ ಕಾಡುತ್ತದೆಯೇ? ಫಲವಂತಿಕೆಯ ಕುರಿತು ಮಾಹಿತಿ ನೀಡುವ ಅಂಕಣ ‘ಅಂಕುರ’ ಇದೀಗ ಪುಸ್ತಕ ರೂಪದಲ್ಲಿ ಲಭ್ಯ. ತಜ್ಞ ವೈದ್ಯ ಎಸ್‌.ಎಸ್‌. ವಾಸನ್‌ ದಾಂಪತ್ಯ ಜೀವನ ಮತ್ತು ಜೀವಾಂಕುರದ ಒಳ ಹೊಳಹುಗಳನ್ನು ಸರಳವಾಗಿ ತಿಳಿಸಿದ್ದಾರೆ.

ಆಕರ್ಷಕ ರೇಖಾಚಿತ್ರಗಳಿರುವ ಈ ಪುಸ್ತಕ ನವಕರ್ನಾಟಕ ಪ್ರಕಾಶನದಲ್ಲಿ ಮಾರಾಟಕ್ಕೆ ಲಭ್ಯ ಇದೆ. ನವಕರ್ನಾಟಕ ಪುಸ್ತಕ ಮಳಿಗೆಯ ಸಂಪರ್ಕಕ್ಕೆ: 080 22203106 / 22161914

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT