ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಯಿ ಚೆನ್ನಾಗಿದ್ದರೆ ದೇಹವೂ ಚೆನ್ನ

ದಂತಕ್ಷಯವು ವಿಶ್ವದ ಅಸಾಂಕ್ರಾಮಿಕ ರೋಗ
Last Updated 17 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ತಂಗಿಯ ಪುಟ್ಟ ಮಗನಿಗೆ ಹುಟ್ಟುಹಬ್ಬದ ಶುಭ ಹಾರೈಸಲು ಕರೆ ಮಾಡಿದ್ದೆ. ಹಾಗೆಯೇ ಮಾತನಾಡುತ್ತ ‘ಶಾಲೆಗೆ ಚಾಕೊಲೇಟ್ ತೆಗೆದುಕೊಂಡು ಹೋಗ್ತಿದಿಯಾ ಪುಟ್ಟಾ?’ ಎಂದು ಕೇಳಿದ್ದೆ. ಅದಕ್ಕೆ ಅವನು ‘ಇಲ್ಲ ದೊಡ್ಡಮ್ಮ, ಶಾಲೆಗೆ ಚಾಕೊಲೇಟ್ ತರೋ ಹಾಗೆ ಇಲ್ಲ; ಅದನ್ನು ತಿನ್ನೋದ್ರಿಂದ ಹಲ್ಲು ಹುಳುಕಾಗುತ್ತೇ ಅಂತ ನಮ್ಮ ಮ್ಯಾಮ್ ಹೇಳಿದ್ದಾರೆ’ ಎಂದಿದ್ದ. ಪುಟ್ಟ ಪೋರನೂ ಬಾಯಿಯ ಆರೋಗ್ಯದ ಬಗ್ಗೆ ಮಾತನಾಡಿದ್ದ!
 
ಹೌದು, ಬಾಯಿಯ ಸ್ವಚ್ಛತೆ ಹಾಗೂ ಆರೋಗ್ಯ, ವ್ಯಕ್ತಿಯ ಪರಿಪೂರ್ಣ ಆರೋಗ್ಯವನ್ನು ನಿರ್ಧರಿಸುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಹಾಗೆಯೇ, ದಂತಕ್ಷಯ ಹಾಗೂ ಬಾಯಿಯ ಇನ್ನಿತರ ಆರೋಗ್ಯ ಸಮಸ್ಯೆಗಳು ಶರೀರದ ಇತರ ಭಾಗಗಳ ಕಾರ್ಯದಕ್ಷತೆಯ ಮೇಲೆಯೂ ಪರಿಣಾಮ ಬೀರಬಹುದು. ಹಾಗಾಗಿಯೇ ನಾವು ಇಂದು ಬಾಯಿ ಹಾಗೂ ಹಲ್ಲುಗಳ ಆರೋಗ್ಯ ನಿರ್ಲಕ್ಷಿಸುವಂತಿಲ್ಲ. ಎಳೆಯ ವಯಸ್ಸಿನಿಂದಲೇ  ಬಾಯಿಯ ಆರೋಗ್ಯದೆಡೆಗೆ ಗಮನ ಕೊಡುವುದು ಅವಶ್ಯವಾಗಿದೆ.
 
ಅದಕ್ಕೆಂದೇ ಅಂತರರಾಷ್ಟ್ರೀಯ ದಂತ ಒಕ್ಕೂಟವು ಪ್ರತಿ ವರ್ಷವೂ ವಿಶ್ವದಾದ್ಯಂತ ಆರೋಗ್ಯದಿನವನ್ನು ಆಚರಿಸುವ ಬಗ್ಗೆ ಒತ್ತು ಕೊಟ್ಟಿದೆ. ಪ್ರತಿ ವರ್ಷವೂ ಮಾರ್ಚ್ 20ರಂದು ವಿಶ್ವದಾದ್ಯಂತ ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ.

ಈ ಆಚರಣೆಯ ಮುಖ್ಯ ಉದ್ದೇಶಗಳು – ಸಾರ್ವಜನಿಕರಲ್ಲಿ ಬಾಯಿಯ ಸ್ವಚ್ಛತೆ-ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು, ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಮತ್ತು ಅದರ ಮಹತ್ವವೇನು ಎಂಬುದನ್ನು  ತಿಳಿಸುವುದು ಮತ್ತು ಈ ಬಗ್ಗೆ ಆರೋಗ್ಯ ಶಿಕ್ಷಣವನ್ನು ಕೊಡುವುದು.

‘ಆರೋಗ್ಯಕರ ಬಾಯಿಯೊಂದಿಗೆ ಜೀವಿಸಿ’ – ಇದು ಈ ಬಾರಿಯ ವಿಶ್ವ ಬಾಯಿಯ ಆರೋಗ್ಯದಿನದ ಧ್ಯೇಯವಾಕ್ಯ. ಇದು ಪ್ರತಿಯೊಬ್ಬ ವ್ಯಕ್ತಿಗೆ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಕರೆ ನೀಡುತ್ತದೆ. ವಿಶ್ವದಾದ್ಯಂತ ಎಲ್ಲ ದಂತ ಆರೋಗ್ಯಸಂಸ್ಥೆಗಳು ಈ ನಿಟ್ಟಿನಲ್ಲಿ ಅಂದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ.
 
ಬಾಯಿಯಲ್ಲಿ ಕಂಡು ಬರುವ ಆರೋಗ್ಯ ಸಮಸ್ಯೆಗಳು: ದಂತಕ್ಷಯ, ವಸಡಿನಲ್ಲಿ ರಕ್ತಸ್ರಾವ, ನಾಲಗೆಯಲ್ಲಿ, ತುಟಿಯ, ಕೆನ್ನೆಯ ಅಥವಾ ಗಲ್ಲದ ಒಳಭಾಗದಲ್ಲಿ ಹುಣ್ಣು, ಕೆಂಪು ಅಥವಾ ಬಿಳಿ ಬಣ್ಣದ ಬಿಲ್ಲೆ ಮುಂತಾದುವುವೇ ಬಾಯಿಯಲ್ಲಿ ಕಾಣಿಸಬಹುದಾದ ಆರೋಗ್ಯ ಸಮಸ್ಯೆಗಳು. ದಂತಕ್ಷಯವು ವಿಶ್ವದ ಬಹು ಮುಖ್ಯ ಅಸಾಂಕ್ರಾಮಿಕ ರೋಗಗಳಲ್ಲೊಂದು ಎಂದೇ ಹೇಳಬಹುದು. ವಿಶ್ವದಾದ್ಯಂತ ಶೇ. 90ರಷ್ಟು ಜನರು ತಮ್ಮ ಜೀವಿತಾವಧಿಯಲ್ಲಿ ದಂತ ಕ್ಷಯದ ಸಮಸ್ಯೆಯಿಂದ ಬಳಲುತ್ತಾರೆ. 
 
ದಂತಕ್ಷಯಕ್ಕೆ ಸಕ್ಕರೆ ಅಂಶವಿರುವ ಆಹಾರವೇ ಮುಖ್ಯ ಕಾರಣ. ಸಕ್ಕರೆ ಅಂಶವಿರುವ ಆಹಾರವನ್ನು ಸೇವಿಸಿದಾಗ ಅಥವಾ ಪಾನೀಯಗಳನ್ನು ಕುಡಿದಾಗ, ಬಾಯಿಯಲ್ಲಿರುವ ಸೂಕ್ಷ್ಮಾಣುಗಳು ಸಕ್ಕರೆ ಅಂಶದೊಂದಿಗೆ ಬೆರೆತು ಆಮ್ಲದಂತಹ ವಸ್ತುಗಳನ್ನು ಬಿಡುಗಡೆ ಮಾಡುತ್ತವೆ.

ಇವು ಹಲ್ಲುಗಳ ಹೊರ ಕವಚಕ್ಕೆ ಹಾನಿ ಮಾಡುತ್ತದೆ. ಹಾಗಾಗಿಯೆ ನಾವು ಪದೇ ಪದೇ ಸಕ್ಕರೆ ಅಂಶವಿರುವ ಆಹಾರವನ್ನು ಸೇವಿಸಿದಾಗ ನಮ್ಮ ದಂತಕವಚವು ಪುನಃ ಪುನಃ ಆಮ್ಲದಂತಹ ವಸ್ತುಗಳ ದಾಳಿಗೆ ತುತ್ತಾಗಿ, ದುರ್ಬಲಗೊಳ್ಳುತ್ತದೆ. ನಂತರದ ಹಂತದಲ್ಲಿ ಹಲ್ಲುಗಳಲ್ಲಿ ರಂಧ್ರ ಉಂಟಾಗಿ ದಂತಕುಳಿಯೂ ಆಗಬಹುದು.
 
ಇಂದಿಗೂ ಅನೇಕ ದೇಶಗಳಲ್ಲಿ ಶಾಲಾಮಕ್ಕಳ ಗೈರುಹಾಜರಿಗೆ ದಂತಕ್ಷಯ ಹಾಗೂ ಹಲ್ಲುನೋವು ಮುಖ್ಯ ಕಾರಣವಾಗಿದೆ. ದಂತಕ್ಷಯ ಹಾಗೂ ಬಾಯಿಯ ಅನಾರೋಗ್ಯವು ವ್ಯಕ್ತಿಯು ಮನಸ್ಸುಪೂರ್ತಿಯಾಗಿ ಬಾಯಿ ತುಂಬಾ ನಗಲು, ಅಲ್ಲದೆ ಇತರರೊಂದಿಗೆ ಆತ್ಮವಿಶ್ವಾಸದಿಂದ ಮಾತನಾಡಲು ಅಡ್ಡಿಯನ್ನೂ ಉಂಟುಮಾಡುತ್ತದೆ. ಇದರಿಂದ ವ್ಯಕ್ತಿಯು ಮಾನಸಿಕವಾಗಿಯೂ ಕುಗ್ಗಿ ಹೋಗುತ್ತಾನೆ.
 
ವಿಶ್ವದಲ್ಲಿ ಎಂಟನೇ ಶ್ರೇಣಿಯಲ್ಲಿರುವ ಬಾಯಿಯ ಕ್ಯಾನ್ಸ್‌ರ್ ಸಾಮಾನ್ಯವಾಗಿ ಬಾಯಿಹುಣ್ಣು, ನಾಲಗೆಯ ಅಥವಾ ತುಟಿಗಳ ಒಳಭಾಗದಲ್ಲಿ ಗಾಯ/ಸಣ್ಣ ಗಡ್ಡೆ/ಗುಳ್ಳೆಗಳ ರೂಪದಲ್ಲಿ ಕಾಣಿಸಿಕೊಳ್ಳಬಹುದು. ಬಾಯಿಯ ಅಸ್ವಚ್ಛತೆ, ಅತಿಯಾದ ತಂಬಾಕು ಸೇವನೆ, ಧೂಮಪಾನ, ಅತಿಯಾದ ಮದ್ಯಸೇವನೆ, ಮುಂತಾದುವು ಈ ಸಮಸ್ಯೆಗಳಿಗೆ ಪ್ರಮುಖ ಕಾರಣಗಳು.

ಶೇ.50ರಷ್ಟು ಒಸಡಿನ ಆರೋಗ್ಯ ಸಮಸ್ಯೆಗಳಿಗೆ ಅತಿಯಾದ ತಂಬಾಕು ಸೇವನೆಯೇ ಕಾರಣವಾಗಿದೆ. ಆಹಾರದಲ್ಲಿ ಪೋಷಕಾಂಶಗಳ ಕೊರತೆಯೂ ಬಾಯಿಯ ಅನಾರೋಗ್ಯಕ್ಕೆ ಕಾರಣವಾಗಬಹುದು.ಬಹಳಷ್ಟು ಬಾಯಿಯ ಹಾಗೂ ಹಲ್ಲುಗಳ ಆರೋಗ್ಯ ಸಮಸ್ಯೆಗಳನ್ನು, ನಿಯಮಿತವಾದ ಹಾಗೂ ಕ್ರಮಬದ್ಧವಾದ ಹಲ್ಲುಗಳ ಸ್ವಚ್ಛತಾ ಕ್ರಮವನ್ನು ರೂಢಿಸಿಕೊಂಡರೆ ತಡೆಯಬಹುದು ಎನ್ನುತ್ತಾರೆ ದಂತತಜ್ಞರು.

ಇದು ಜೀವನದ ಎಲ್ಲ ಹಂತಗಳಲ್ಲಿಯೂ ಅನ್ವಯವಾಗುತ್ತದೆ. ಮಕ್ಕಳಿಂದ ವಯೋವೃದ್ಧರವರೆಗೂ ಹಲ್ಲು-ಬಾಯಿಯನ್ನು ಸ್ವಚ್ಛವಾಗಿ ಇರಿಸಿಕೊಳ್ಳುವುದು ಬಹು ಮುಖ್ಯ. ಏಕೆಂದರೆ ಅನಾರೋಗ್ಯಕರ ಬಾಯಿ-ಹಲ್ಲುಗಳು ದೇಹದ ಇತರೆ ಕಾಯಿಲೆಗಳಿಗೂ ಮೂಲವಾಗಬಹುದು. 
ಡಾ. ವಿನಯ ಶ್ರೀನಿವಾಸ್
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT