ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮ ಮತ್ತು ಅವಳ ಚಾದರ!

Last Updated 17 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಕೆ.ಎಸ್. ಶುಭ್ರತಾ
ಆ ದಿನ ಬೆಳಗ್ಗೆ ಆರು ಘಂಟೆಗಷ್ಟೇ ನಾನು ಟ್ರೇನ್‌ನಲ್ಲಿ ಬಂದು ಮನೆ ಸೇರಿದ್ದೆ.  ಒಂದೂವರೆ ವರ್ಷದ ನನ್ನ ಎರಡನೇಯ ಮಗ ಸುಧನ್ವ ಮೊದಲ ಬಾರಿ ಇಷ್ಟು ದಿನಗಳ ಮಟ್ಟಿಗೆ ನನ್ನ ಬಿಟ್ಟು ಇದ್ದಿದ್ದು.  ಆಗಲೇ ಮನೆಗೆ ಬಂದು ಇಳಿದು ಸುಧಾರಿಸಿಕೊಳ್ಳುವಷ್ಟರಲ್ಲಿ ನನ್ನ ಅಮ್ಮನ ಫೋನು.  

‘ನಿನ್ನ ನೋಡಿದಾಕ್ಷಣ ನಿನ್ನ ಮಗ ಹೇಗೆ ಪ್ರತಿಕ್ರಿಯಿಸಿದ?’ ಎಂದು ಪ್ರಶ್ನೆ.  ನಿಜವಾಗಿ ಹೇಳಬೇಕೆಂದರೆ, ನಿದ್ದೆಯಲ್ಲಿಯೇ ಇದ್ದ ನನ್ನ ಮಗನನ್ನು ಎಬ್ಬಿಸಿದೆ ನಾನು. ನಿದ್ದೆಗಣ್ಣಿನಲ್ಲಿಯೇ, ‘ಮಮ್ಮೀ’ ಎಂದು ಅಪ್ಪಿಕೊಂಡು ಮತ್ತೆ ಮಲಗಿಬಿಟ್ಟ ಅವನು.  
 
ಇದನ್ನು ಅಮ್ಮನಿಗೆ ಹೇಳಿದಾಗ ಏನೋ ನಿರಾಳ ಭಾವನೆ ಅಮ್ಮನಿಗೆ.  ಈ ಸಂವಾದವನ್ನು, ನನ್ನ ಮಗನ ವರ್ತನೆಯನ್ನು, ನನ್ನ ಮನೋವೈದ್ಯಕೀಯ ಮನಸ್ಸು ವಿಶ್ಲೇಷಿಸತೊಡಗಿತು.  
 
ಸಿಗ್ಮಂಡ್ ಫ್ರಾಯ್ಡ್‌ ಮೊದಲ ಬಾರಿ ತಾಯಿ-ಮಗುವಿನ ಸಂಬಂಧದ ಕುರಿತು ಮಾತನಾಡಿದವನು. ಬಾಲ್ಯದಲ್ಲಿ ಮಗುವಿನ ದೈಹಿಕ ಮತ್ತು ಲೈಂಗಿಕ ಅವಶ್ಯಕತೆಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾದಾಗ ಭವಿಷ್ಯದ ಜೀವನದಲ್ಲಿ ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ ಮತ್ತು ಈ ಅವಶ್ಯಕತೆಗಳ ಕಾರಣದಿಂದಾಗಿ ಮಗು ತಾಯಿಯ ಮೇಲೆ ಅವಲಂಬಿತವಾಗಿರುತ್ತದೆ ಎಂಬುದನ್ನು ತಿಳಿಸಿದ.
 
ನಂತರದಲ್ಲಿ ಬಂದ ಜಾನ್ ಬೌಲ್ಬಿ ಎಂಬ ಮನಃಶಾಸ್ತ್ರಜ್ಞ ಬಾಂಧವ್ಯ (Attachment) ಬಗ್ಗೆ ಇನ್ನೊಂದು ಸಿದ್ಧಾಂತ ನೀಡಿದ. ಲಂಡನ್‌ನಲ್ಲಿ ನಡೆದ ಬಾಂಬ್ ಸ್ಫೋಟ ಒಂದರಲ್ಲಿ ಹಲವಾರು ಮಕ್ಕಳು ತಂದೆ-ತಾಯಿ ಕಳೆದುಕೊಂಡು ಅನಾಥಾಶ್ರಮ ಸೇರಿದ್ದರು.

ಈ ಮಕ್ಕಳಿಗೆ ಅಲ್ಲಿ ಊಟ, ಮನೆ, ವಾರ್ಡನ್ ಇತರೆ ಸೌಕರ್ಯಗಳಿದ್ದರೂ ಅವರು ಒಂಟಿತನ ಅನುಭವಿಸುವುದನ್ನು ಗಮನಿಸಿ ಬಾಲ್ಯದಲ್ಲಿ ತಾಯಿ-ಮಗು ಬಾಂಧವ್ಯದ ಕುರಿತು ತನ್ನ ಸಿದ್ಧಾಂತ ನೀಡಿದ. ಕೇವಲ ದೈಹಿಕ ಅವಶ್ಯಕತೆಗಳಲ್ಲದೆ, ಅದಕ್ಕೂ ಮೇಲಿನ ಭಾವನಾತ್ಮಕ ಅವಶ್ಯಕತೆ ತಾಯಿಯಿಂದ ಪೂರೈಕೆ ಆಗಬೇಕು ಎಂದು ತಿಳಿಸಿದ.
 
ವಿಚಿತ್ರ ಪರಿಸ್ಥಿತಿ ವಿಧಾನ (Strange Situation Procedure) ಎಂದೇ ಖ್ಯಾತವಾಗಿರುವ ಮೇರಿ ಐನ್ಸ್‌ವರ್ತ್ ಎಂಬ ಮನಃಶಾಸ್ತ್ರಜ್ಞಳ ಈ ಅಧ್ಯಯನ ಅತ್ಯಂತ ಅರ್ಥಪೂರ್ಣವಾಗಿದೆ.  ಈ ಅಧ್ಯಯನದಲ್ಲಿ ಒಂದರಿಂದ ಒಂದೂವರೆ ವರ್ಷಗಳ ಮಕ್ಕಳು ಮತ್ತು ಅವರ ತಾಯಂದಿರ ನಡುವೆ ಇರುವ ಬಾಂಧವ್ಯದ ಬಗ್ಗೆ ತಾನು ಗಮನಿಸಿದ್ದನ್ನು ದಾಖಲಿಸಿದಳು.

ಒಂದು ರೂಮಿನಲ್ಲಿ ತಾಯಿ-ಮಗು, ನಂತರ ತಾಯಿ-ಮಗು-ಅಪರಿಚಿತ ವ್ಯಕ್ತಿ, ಮಗು-ಅಪರಿಚಿತ ವ್ಯಕ್ತಿ, ಅನಂತರದಲ್ಲಿ ತಾಯಿ ಮತ್ತೆ ಬಂದು ಮಗುವಿನ ಜೊತೆ ಸೇರಿದಾಗ, ಮಗುವಿನ ವರ್ತನೆಯ ಬದಲಾವಣೆಗಳನ್ನು ಗಮನಿಸಿ ಬೇರೆ ಬೇರೆ ರೀತಿಯ ಬಾಂಧವ್ಯಗಳನ್ನು ವಿವರಿಸಿದಳು.

ತಾಯಿ ತನ್ನ ಮಗುವನ್ನು ಬಿಟ್ಟು ದೂರು ಹೋದಾಗ, ಮಗು ಅಳುವುದು, ತಾಯಿಗಾಗಿ ಹುಡುಕುವುದು, ತಾಯಿ ಮರಳಿದಾಕ್ಷಣ ಸಂತಸ ವ್ಯಕ್ತಪಡಿಸುವುದು, ‘ಸುರಕ್ಷಿತ ಬಾಂಧವ್ಯ’ದ (Secure attachment) ಸಂಕೇತ.
 
ತಾಯಿ ಮರಳಿದಾಕ್ಷಣ ಕೆಲವು ಕ್ಷಣಗಳ ಕಾಲ ಸಿಟ್ಟು ತೋರಿಸುವುದು, ತಾಯಿಯ ಹತ್ತಿರ ಹೋಗದೇ ಇರುವುದು, ಸ್ವಲ್ಪ ಸಮಯದ ನಂತರ ಹೋಗುವುದು, ‘ಅಸುರಕ್ಷಿತ ಆತಂಕ’ (Insecure anxious) ಬಾಂಧವ್ಯ. ಅದೇ ಮಗುವನ್ನು ಬಿಟ್ಟು ತಾಯಿ ಹೊರಹೋದಾಕ್ಷಣ, ಯಾವುದೇ ರೀತಿಯ ಬೇಸರ ವ್ಯಕ್ತಪಡಿಸದೇ ತನಗೇನೂ ಆಗಿಲ್ಲ ಎಂಬಂತೆ ಇರುವುದು ‘ಅಸುರಕ್ಷಿತ ಪಲಾಯನ ಬಾಂಧವ್ಯ’ದ (Insecure avoidant) ಲಕ್ಷಣ.
 
ನನ್ನ ಅಮ್ಮ ಮನಃಶಾಸ್ತ್ರಜ್ಞಳಲ್ಲದಿದ್ದರೂ, ನಾನು ಮನೆಗೆ ತಿರುಗಿ ಬಂದಾಗ, ನನ್ನ ಮಗನ ವರ್ತನೆಯಲ್ಲಿ ಈ ಬಾಂಧವ್ಯದ ಸಂಕೇತವನ್ನೇ ಹುಡುಕುತ್ತಿದ್ದಳೋ ಏನೋ? ಅದಕ್ಕೇ ನನ್ನ ಭಾವನೆಯಲ್ಲಿ, ಪ್ರತಿ ತಾಯಿಯೂ ತನ್ನ ಮಗುವಿನ ಮನಃಶಾಸ್ತ್ರಜ್ಞಳೇ ಎಂದರೆ ತಪ್ಪಲ್ಲ. ತನ್ನ ಮಗುವಿನ ಮನಸ್ಸನ್ನು ಎಲ್ಲರಿಗಿಂತ ಚೆನ್ನಾಗಿ ಅರಿತವಳೇ. ನನಗೆ ಎರಡು ಮಕ್ಕಳು.

ಇಬ್ಬರಿಗೂ ಇರುವುದೇನೋ ಎರಡು ವರ್ಷಗಳ ವ್ಯತ್ಯಾಸ, ಆದರೆ ಸ್ವಭಾವ ಅಜಗಜಾಂತರ. ಮೊದಲನೆಯ ಸುಮೇರುವಿಗೆ ಮೂರೂವರೆ ವರ್ಷ. ನಾನು ಪುಟ್ಟವಳಿದ್ದಾಗ, ನನ್ನ ಅಮ್ಮನ ಚಾದರವನ್ನು ಉಪಯೋಗಿಸುತ್ತಿದ್ದೆ. ನಾನು ಮದುವೆಯಾಗಿ ಮಗು ಆಗುವ ತನಕ ಅದನ್ನೇ ಹೊದ್ದುಕೊಳ್ಳುತ್ತಿದ್ದೆ. ನನ್ನ ಮೊದಲ ಮಗನಿಗೆ ಎದೆಹಾಲು ಬಿಡಿಸಿದ್ದು ಒಂದೂವರೆ ವರ್ಷಕ್ಕೆ. ಆ ಸಮಯದಿಂದ ಅದೇನೋ ಗೊತ್ತಿಲ್ಲ, ಆ ಚಾದರ ಇಟ್ಟುಕೊಂಡೇ ಮಲಗುವ ಅಭ್ಯಾಸ.

ಮಲಗುವಾಗ ಬಾಯಿಗೆ ಬೆರಳು ಮತ್ತು ಮೂಗಿಗೆ ಚಾದರದ ವಾಸನೆ. ಚಾದರ ಇದ್ದರೆ ಮಾತ್ರ ಬಾಯಿಗೆ ಬೆರಳು. ಬೆರಳಲ್ಲಿ ಏನು ಬರುತ್ತೋ ಎಂದರೆ ‘ಹಾಲು’ ಎಂದು ನಗುತ್ತಾನೆ. ಒಂದು ದಿನ ಆ ಚಾದರದ ಕೊಳೆಯನ್ನು ನೋಡಲು ಆಗದೇ, ತೊಳೆದವು. ಆವತ್ತಿನ ಗಲಾಟೆ ನೋಡಿ ಸಾಕಾಗಿ ಹೋಯಿತು. ಚಾದರ ‘ರಫ್’ ಆಗಿದೆ ಎಂದು ದೂರು.

ಹೇಗೋ ಚಾದರವನ್ನು ಮತ್ತೆ ಮುದ್ದೆ ಮಾಡಿ,  ಮಗನನ್ನು ಮುದ್ದು ಇನ್ನೊಂದು ದಿನ, ಆ ಚಾದರದ ಬದಲು, ನನ್ನ ಎರಡನೆಯ ಮಗ ಸುಧನ್ವನಿಗೆ ಹೊದಿಸುವ ಇನ್ನೊಂದು ಚೆಂದದ ‘ಸ್ಪೈಡರ್‌ಮ್ಯಾನ್’ ರಜಾಯಿ ಇವನಿಗೆ ಕೊಟ್ಟರೆ, ‘ಮಮ್ಮೀ, ಈ ಚಾದರಕ್ಕೆ ಸುಧನ್ವನ ವಾಸನೆಯಿದೆ’ ಎನ್ನಬೇಕೇ? ನನಗಂತೂ ಎರಡೂ ಚಾದರದ ವಾಸನೆಗಳಲ್ಲಿ ವ್ಯತ್ಯಾಸ ಕಂಡಿಲ್ಲ.

ಯಾರಿಗೆ ಗೊತ್ತು? ಇದರ ಬಗ್ಗೆಯೂ ಇನ್ಯಾವುದಾದರೂ ಮನಃಶಾಸ್ತ್ರಜ್ಞರು ಸಿದ್ಧಾಂತ ಪ್ರಕಟಿಸುತ್ತಾರೇ ಏನೋ? ನನ್ನ ತಾಯಿ ಹೊದ್ದುಕೊಳ್ಳುತ್ತಿದ್ದ ಚಾದರ ನನಗೆ ಪ್ರಿಯವಾಗಿ, ನಾನು ಹಲವಾರು ವರ್ಷಗಳು ಹೊದ್ದು, ಈಗ ನನ್ನ ಮಗನಿಗೆ ಪ್ರಿಯವಾಗಬೇಕಾದರೆ, ಇದು ಯಾವ ಬಾಂಧವ್ಯವಿರಬಹುದು? ನನ್ನ ಸ್ನೇಹಿತರೆಲ್ಲಾ ಹೇಳುತ್ತಾರೆ, ಮಗುವಿಗೆ ಬೆರಳು ಚೀಪುವುದನ್ನು ಬಿಡಿಸು ಎಂದು. ನನಗೂ ತಿಳಿದಿದೆ, ನನ್ನ ಮಗನಿಗೆ ಸುಲಭವಾಗಿ ಬೆರಳು ಚೀಪುವುದನ್ನು ಬಿಡಿಸಬಹುದು.

ಚಾದರ ಮಾಯ ಮಾಡಿದರೆ ಸಾಕು. ಚಾದರವನ್ನು ಕ್ಷಣದಲ್ಲಿ ಮಾಯ ಮಾಡಬಹುದು, ಆದರೆ ಅಜ್ಜಿ-ತಾಯಿ-ಮಗುವಿನ ಬಾಂಧವ್ಯ?!  ಇದೆಲ್ಲದರ ಮಧ್ಯೆ ನನಗೋ ಕೆಲವು ತಿಂಗಳಿನಿಂದ ನಿದ್ರೆಯೇ ಸರಿಯಾಗಿ ಬರುತ್ತಿಲ್ಲ. ಅದಕ್ಕೇ ನನ್ನ ಅಮ್ಮನಿಗೆ ಹೊಸ ಚಾದರವೊಂದನ್ನು ಕೊಟ್ಟು ‘ಸ್ವಲ್ಪ ದಿನಗಳ ಕಾಲ ನೀನು ಹೊದ್ದು ನನಗೆ ಕೊಡು’ ಎಂದು ಹೇಳಿದ್ದೇನೆ.
 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT