ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಸೇರಿಯನ್ ಹಾದಿಯಲ್ಲಿದೆ ಹಡೆಯಲಾರದ ಸ್ಥಿತಿ!

ಶೇ. 41ರಷ್ಟು ಮಕ್ಕಳು ಸಿಸೇರಿಯನ್ ಮೂಲಕವೇ ಹುಟ್ಟುತ್ತಿದ್ದಾರೆ ಎನ್ನುತ್ತದೆ ಇತ್ತೀಚಿಗೆ ಪ್ರಕಟವಾದ ನಾಲ್ಕನೆಯ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷಾ ವರದಿ
Last Updated 17 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಸೇರಿಯನ್ ಮೂಲಕ ಮಗು ಹುಟ್ಟುವುದೇ ಸಹಜ ಎನ್ನುವಷ್ಟರ ಮಟ್ಟಿಗೆ ನಾವು ಮುಂದುವರಿದಿದ್ದೇವೆ! ಇಂದು ಪಶ್ಚಿಮ ಬಂಗಾಳದ ಖಾಸಗಿ ಆಸ್ಪತ್ರೆಯಲ್ಲಿ ಶೇ.71ರಷ್ಟು ಮಕ್ಕಳು ಹುಟ್ಟುವುದು ಸಿಸೇರಿಯನ್ ಮೂಲಕ. ಅದನ್ನೂ ಮೀರಿ ನಿಂತಿದೆ ತೆಲಗಾಂಣ; ಅಲ್ಲಿ ಶೇ.75ರಷ್ಟು ಮಕ್ಕಳು ಹುಟ್ಟುವುದು ಸಿ–ಸೆಕ್ಸೆನ್ ಅಥವಾ ಸಿಸೇರಿಯನ್ ಮೂಲಕವೇ.

ಒಟ್ಟು ಭಾರತದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಶೇ. 41ರಷ್ಟು ಮಕ್ಕಳು ಸಿಸೇರಿಯನ್ ಮೂಲಕವೇ ಹುಟ್ಟುತ್ತಿದ್ದಾರೆ ಎನ್ನುತ್ತದೆ ಇತ್ತೀಚಿಗೆ ಪ್ರಕಟವಾದ ನಾಲ್ಕನೆಯ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷಾ ವರದಿ (National Family Health Survey - 4). ಇದು ಖಾಸಗಿ ಆಸ್ಪತ್ರೆಯ ವಿಚಾರವಾದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.12ರಷ್ಟು ಮಾತ್ರ ಮಕ್ಕಳು ಸಿಸೇರಿಯನ್ ಮೂಲಕ ಹುಟ್ಟುವುದಾಗಿದೆ.
 
‘ಇದಕ್ಕೆ ಕಾರಣ ಹಣ’ ಎಂದು ಸುಲಭವಾಗಿ ಅರ್ಥೈಸಬಹುದು. ಶೇ. 10–15ಕ್ಕಿಂತ ಹೆಚ್ಚು ಯಾವುದೇ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಹೆರಿಗೆಯಾದರೆ ಅದಕ್ಕೆ ಹಣದ ದುರಾಸೆ ಕಾರಣವಾಗಿರುತ್ತದೆ –ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ. ಅಂಥ ಆಸ್ಪತ್ರೆಗಳನ್ನು ವಿಚಾರಣೆಗೆ ಒಳಪಡಿಸಬೇಕು ಮತ್ತು ಕಾನೂನು ಕ್ರಮ ಜರುಗಿಸಬೇಕಾಗುವುದು ಎಂದೂ ಅದು ಸೂಚಿಸಿದೆ.  ಹೆರಿಗೆ ಸಾಂಸ್ಥಿಕ ವ್ಯವಸ್ಥೆ, ಅಂದರೆ ಆಸ್ಪತ್ರೆಗಳಲ್ಲಿ ನಡೆಯಬೇಕು.

ತಾಯಿಯ ಮರಣ ತಡೆಗಟ್ಟುವುದು ಮತ್ತು ಶಿಶುವಿನ ಆರೋಗ್ಯ ಕಾಪಾಡುವುದು ಇದರ ಉದ್ದೇಶ ಎಂದು ವಿಶ್ವ ಆರೋಗ್ಯ ಸಂಸ್ಥೆಯೂ ಸೇರಿದಂತೆ ಜಗತ್ತಿನ ಎಲ್ಲ ದೇಶಗಳು ಮತ್ತು ಸಂಘ–ಸಂಸ್ಥೆಗಳು ಹೇಳುತ್ತವೆ. ಉದ್ದೇಶವೇನೋ ಸರಿ; ಆದರೆ ಆಸ್ಪತ್ರೆ ಹೆರಿಗೆ ಹೆಚ್ಚಾದಂತೆಲ್ಲಾ ಸಿಸೇರಿಯನ್ ಹುಟ್ಟು ಹೆಚ್ಚಾಗುತ್ತಾ ಸಾಗುತ್ತಿರುವುದು ದುರಂತವೇ ಸರಿ.
 
ಇತ್ತೀಚಿಗೆ ವೈದ್ಯರೊಬ್ಬ ದೃಶ್ಯ ಮಾದ್ಯಮದ ಚರ್ಚೆಯಲ್ಲಿ ಸಿಸೇರಿಯನ್ ಬಗ್ಗೆ ಹೇಳಿದ್ದು ಹೀಗೆ: ‘ನಾವು ಸಿಸೇರಿಯನ್ ಹೆರಿಗೆಯ ಅಡ್ವಾನ್‌ಟೇಜ್ (ಲಾಭ) ಏನು ಮತ್ತು ಸಹಜ ಹೆರಿಗೆಯ ಲಾಭ ಏನು ಎಂಬುದನ್ನು ವಿವರಿಸುತ್ತೇವೆ. ಅದರ ಆಯ್ಕೆ ಅವರಿಗೆ ಬಿಟ್ಟದ್ದು!’ Basically doctor-patient communication is asymmetrical. ಎಂದರೆ, ‘ಇದು ತಾಂತ್ರಿಕ ವಿಷಯ.

ಹೀಗಾಗಿ ವೈದ್ಯರು ನಾವು ಹೇಳುವುದನ್ನು ಹೇಳಿದ್ದೇವೆ, ಉಳಿದದ್ದು ನಿಮಗೆ ಬಿಟ್ಟದ್ದು ‘ಎಂದರೆ ಸಾಕಲ್ಲವೇ? ಕೇಂದ್ರದ ಮಹಿಳಾ ಮತ್ತು ಮಕ್ಕಳ ಮಂತ್ರಿ ಮೇನಕಾ ಗಾಂಧಿ ಖಾಸಗಿ ಆಸ್ಪತ್ರೆಯವರು ಸಿಸೇರಿಯನ್ ಅಂಕಿ–ಆಂಶಗಳನ್ನು ಸಾರ್ವಜನಿಕರಿಗೆ ಕಾಣುವಂತೆ ಫಲಕದಲ್ಲಿ ಪ್ರಕಟಿಸಬೇಕು ಎಂದು ಇತ್ತೀಚಿಗೆ ಹೇಳಿರುವುದು ಸ್ವಾಗತಾರ್ಹ ಕ್ರಮ. 
 
ಸಹಜ ಹೆರಿಗೆಯನ್ನೇ ಏಕೆ ಹೆಚ್ಚಾಗಿ ಪ್ರೋತ್ಸಾಹಿಸಬೇಕು– ಎಂಬ ಪ್ರಶ್ನೆ ಇಲ್ಲಿ ಉದ್ಭವವಾಗುವುದು. ಸಹಜವಾಗಿ ಹುಟ್ಟುವ ಮಕ್ಕಳು ಆರೋಗ್ಯವಂತರಾಗುವುದಕ್ಕೆ ಹತ್ತಾರು ಸ್ವಾಭಾವಿಕ ಕಾರಣಗಳಿವೆ. ಹುಟ್ಟಿದ ಅರ್ಧ ಗಂಟೆಯಲ್ಲಿ ತಾಯಿಯ ಹಾಲು ಕುಡಿಯಲು ಅವಕಾಶ, ಶ್ವಾಸಕೋಶದ ಸುಭದ್ರತೆ, ಇಡೀ ಜೀವನಕ್ಕೆ ಆರೋಗ್ಯ ಕೊಡುವ ಸೂಕ್ಷ್ಮಜೀವಿಗಳನ್ನು ತಾಯಿಯ ಜನನಾಂಗದಿಂದ ಬಳುವಳಿಯಾಗಿ ಪಡೆಯುವುದಾಗಿದೆ.

ಈ ಸೂಕ್ಷ್ಮಜೀವಿಗಳು ನಮ್ಮ ಆರೋಗ್ಯವನ್ನು ಹತ್ತು ಹಲವು ರೀತಿಯಲ್ಲಿ ಕಾಪಾಡುತ್ತವೆ. ಇವುಗಳು ನಮ್ಮ ಕರುಳನ್ನು ಅವರಿಸಿಕೊಂಡು ದೇಹಕ್ಕೆ ಬೇಕಾದ ಅನೇಕ ರಾಸಾಯನಿಕಗಳನ್ನು ಉತ್ಪತ್ತಿ ಮಾಡುತ್ತವೆ. ಹೀಗೆ ಬಳುವಳಿಯಾಗಿ ಬಂದಂಥ ಜೀವಕೋಶಗಳೇ ನಮ್ಮ ದೇಹದ ಜೀವಕೋಶಗಳಿಗಿಂತ ಶೇ.90ರಷ್ಟು ಹೆಚ್ಚಿನ ಸಂಖ್ಯೆಯಲ್ಲಿರುತ್ತವೆ. ಹೀಗಾಗಿಯೇ ನಾವು ನಮ್ಮದೇ ದೇಹದಲ್ಲಿ ‘ಅತಿಥಿ’ಯಂತೆ ಇರುತ್ತೇವೆ ಎನ್ನುವುದು.

‘Micribiome far outnumbers our own genome.’ ಇತ್ತೀಚಿಗೆ ಆಮೆರಿಕದಲ್ಲಿ ಸಿಸೇರಿಯನ್ ಮೂಲಕ ಹುಟ್ಟಿದ ಮಕ್ಕಳಿಗೆ ತಾಯಿಯ ಜನನಾಂಗದಿಂದ ಸೂಕ್ಷ್ಮಜೀವಿಗಳನ್ನು ತೆಗೆದು ಹುಟ್ಟಿದ ಮಗುವಿನ ದೇಹದ ಮೇಲೆ ಬಳಿಯುವುದಾಗಿದೆ! ಆ ಸೂಕ್ಷ್ಮಜೀವಿಗಳಿಂದ ಸಹಜವಾಗಿ ದೊರೆಯುವ ಪ್ರಯೋಜನಗಳನ್ನು ಪಡೆಯವುದು ಈ ಕೃತಕ ವಿಧಾನದ ಉದ್ದೇಶ. 
 
ಸಿಸೇರಿಯನ್ ಬಗ್ಗೆ ಇನ್ನೊಂದು ವರದಿ ಪಿಎನ್‌ಎಎಸ್(PNAS) ನಿಯತಕಾಲಿಕದಲ್ಲಿ ಇತ್ತೀಚಿಗೆ ಫ಼ಿಲಿಪ್ ಮಿಟರೋಕರ್ ಮತ್ತು ಇತರರು ಪ್ರಕಟಮಾಡಿದ್ದಾರೆ.  ಫ಼ಿಲಿಪ್ ತಂಡದ ಪ್ರಕಾರ ಮೂರರಿಂದ ನಾಲ್ಕು ಪೀಳಿಗೆ ಮಕ್ಕಳು ಸಿಸೇರಿಯನ್ ಮೂಲಕವೇ ಹುಟ್ಟಿದಲ್ಲಿ ಮುಂದೆ ಆ ಪೀಳಿಗೆಯ ಮಹಿಳೆಯರು ಸಹಜವಾಗಿ ಮಕ್ಕಳನ್ನು ಹಡೆಯಲು ಸಾಧ್ಯವಾಗದೇ ಹೋಗಬಹುದು! ಅವರ ಪ್ರಕಾರ ಈ ರೀತಿಯೇ ಹುಟ್ಟುವ ಮಕ್ಕಳ ತಲೆ ದೊಡ್ಡದಾಗಿದ್ದು, ಅದು ಪೀಳಿಗೆಯಿಂದ ಪೀಳಿಗೆಗೆ ಹಾಗೆಯೇ ಮುಂದುವರೆಯುತ್ತದೆ.

ಆದರೆ ಅದೇ ಪೀಳಿಗೆಯ ಮಹಿಳೆಯರ ಶ್ರೋಣಿಯ (pelvic portion) ಭಾಗ ಕಿರಿದಾಗಿಯೇ ಇಳಿಯುತ್ತದೆ. ಇದು ಅಂಥ ಮಹಿಳೆಯು ಮಕ್ಕಳನ್ನು ಹಡೆಯಲು ಸಾಧ್ಯವಾಗದೇ ಹೋಗಬಹುದು. ಇದು ಮೂರೇ ಪೀಳಿಗೆಯಲ್ಲಿ ಉಂಟಾಗಬಹುದಾದ ಎಪಿಜೆನೆಟಿಕ್ ಎವುಲೂಶನ್. ಇದನ್ನು ತಾಂತ್ರಿಕತೆ ತಂದೊಡ್ಡುವ ತಾಪತ್ರಯ ಎನ್ನಲೂಬಹುದು.

ಸಹಜ ವಿಕಾಸನಕ್ಕೆ ಸಾವಿರಾರು ವರ್ಷಗಳು ಬೇಕಾಗುತ್ತವೆ. ಸಂಸ್ಕೃತಿ ಹುಟ್ಟುಹಾಕುವ ವಿಕಸನಕ್ಕೂ ಸಾವಿರಾರು ವರ್ಷ ಬೇಕು. ಉದಾಹರಣೆಗೆ, ನಾವು ವಯಸ್ಕರಾಗಿಯೂ ಹಾಲನ್ನು ಇಂದು ಜೀರ್ಣಿಸಿಕೊಳ್ಳುತ್ತಿದ್ದೇವೆ. ಇದು ನಾವು ಸುಮಾರು ಹದಿನೈದು ಸಾವಿರ ವರ್ಷ ಅಭ್ಯಾಸ ಮಾಡಿದುದರ ಫಲ. ಆದರೆ ಇತ್ತೀಚಿನ ತಾಂತ್ರಿಕ ಹಸ್ತಕ್ಷೇಪದಿಂದ ನಮ್ಮ ವಿಕಸನದ ಹಾದಿಯೇ ಬದಲಾಗುತ್ತಿದೆಯೆ? ಗಾಂಧಿ ಹೇಳಿದ ಪ್ರಕಾರ ದಿಕ್ಕು ತಪ್ಪಿದ ವೇಗವನ್ನು ಅಪ್ರಸ್ತುತ ಎನ್ನಬಹುದೇ? 
ಕೆ. ಸಿ. ರಘು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT