ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಇಷ್ಟವಾಗುವ ಗೋಧಿ ರೆಸಿಪಿಗಳು...

Last Updated 17 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ತರಕಾರಿ ಕೊತ್ತು ಪರಾಟ
ಬೇಕಾಗುವ ಸಾಮಗ್ರಿಗಳು:  200 ಗ್ರಾಂ ಗೋಧಿಹಿಟ್ಟು, 1 ಚಹಾ ಚಮಚದಷ್ಟು ಸಾಸಿವೆ ಮತ್ತು ಜೀರಿಗೆ, 15 ಎಲೆ ಕತ್ತರಿಸಿದ ಕರಿಬೇವು, 1 ದಪ್ಪ ಈರುಳ್ಳಿ ಮತ್ತು 2 ದಪ್ಪ ಟೊಮೊಟೊ, ಚಪ್ಪಟೆಯಾಗಿ ಕತ್ತರಿಸಿದ 1 ಮಧ್ಯಮಗಾತ್ರದ ಕ್ಯಾರೆಟ್‌, ಬೀನ್ಸ್‌ ಸ್ವಲ್ಪ, ಚಿಟಿಕೆ ಅರಿಶಿಣಪುಡಿ, 1 ಚಹಾ ಚಮಚದಷ್ಟು ಶುಂಠಿ, ಎರಡು ದೊಡ್ಡ ಚಮಚದಷ್ಟು ಕೊತ್ತಂಬರಿ ಸೊಪ್ಪು ಕತ್ತರಿಸಿದ್ದು, 1 ದೊಡ್ಡ ಚಮಚದಷ್ಟು ಕತ್ತರಿಸಿದ ಬೆಳ್ಳುಳ್ಳಿ, ಒಂದು ದೊಡ್ಡ ಚಮಚದಷ್ಟು ಗರಂ ಮಸಾಲಾ, ತುಪ್ಪ 100 ಎಂಎಲ್‌, ಉಪ್ಪು ರುಚಿಗೆ ತಕ್ಕಷ್ಟು.  
ತಯಾರಿಸುವ ವಿಧಾನ: ಉಪ್ಪು, ಗೋಧಿಹಿಟ್ಟಿನ ಪುಡಿ ಮತ್ತು ನೀರು ಮಿಶ್ರಣ ಮಾಡಿ ಹಿಟ್ಟು ತಯಾರಿಸಿ. ಸ್ವಲ್ಪ ಹೊತ್ತು ಹಿಟ್ಟನ್ನು ಹಾಗೆಯೇ ಬದಿಯಲ್ಲಿಡಿ. ಹಿಟ್ಟನ್ನು ನಾಲ್ಕು ಸಮಾನ ಭಾಗಗಳನ್ನಾಗಿ ಮಾಡಿ. ಹಿಟ್ಟನ್ನು ಮಡಚಿ ಬಿಸಿ ತವಾದಲ್ಲಿ ತುಪ್ಪದ ಜೊತೆಗೆ ಗರಿ ಗರಿ ಆಗುವ ತನಕ ಬೇಯಿಸಿ. ಬಾಣಲೆಯಲ್ಲಿ ಎಣ್ಣೆ ಬೇಯಿಸಿ ಹಾಗೂ ಅದಕ್ಕೆ ಜೀರಿಗೆ, ಸಾಸಿವೆ ಹಾಗೂ ಕರಿಬೇವಿನ ಸೊಪ್ಪು ಹಾಕಿರಿ.

ನಂತರ ಈರುಳ್ಳಿ ಬೆರೆಸಿ ಅದು ಬಂಗಾರದ ಬಣ್ಣಕ್ಕೆ ಬರುವ ತನಕ ಬೇಯಿಸಿ. ಆಮೇಲೆ ಶುಂಠಿ, ಕತ್ತರಿಸಿದ ಟೊಮೊಟೊ ಹಾಕಿ ಬೇಯಿಸಿ. ಇಷ್ಟಾದ ಮೇಲೆ ಮಸಾಲೆಗಳನ್ನು ಹಾಕಿ ಪೂರ್ತಿಯಾಗಿ ಬೇಯಿಸಿ. ಈಗ ಕಚ್ಚಾ ಮಸಾಲೆ ಸಿದ್ಧವಾಗುತ್ತದೆ. ಪರೋಟಗಳನ್ನು ಉದ್ದದ ತುಂಡುಗಳನ್ನಾಗಿ ಕತ್ತರಿಸಿ ಹಾಗೂ ಮತ್ತು ಅದಕ್ಕೆ ತಯಾರಿಸಿದ ಮಿಶ್ರಣ ಬೆರೆಸಿ ಸುತ್ತಿರಿ. ಅದಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ ಮತ್ತು ಸ್ವಲ್ಪ ನಿಂಬೆ ಹುಳಿ ಚಿಮುಕಿಸಿದರೆ ತರಕಾರಿ ಕೊತ್ತು ಪರೋಟ ರೆಡಿ.  
 
ಆಲೂ ಪರಾಟ
ಬೇಕಾಗುವ ಸಾಮಗ್ರಿಗಳು:
200 ಗ್ರಾಂ ಗೋಧಿಹಿಟ್ಟು, ಎರಡು ದೊಡ್ಡ ಗಾತ್ರದ ಆಲೂಗಡ್ಡೆ (ಬೇಯಿಸಿ ಕಿವುಚಿದ್ದು), 1 ದಪ್ಪ ಈರುಳ್ಳಿ, 1 ಚಹಾ ಚಮಚದಷ್ಟು ಸಾಸಿವೆ, ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು. 

ತಯಾರಿಸುವ ವಿಧಾನ: ಉಪ್ಪು, ಗೋಧಿಹಿಟ್ಟು ಮತ್ತು ನೀರು ಬೆರೆಸುತ್ತಾ ಹಿಟ್ಟು ತಯಾರಿಸಿ. ಹಿಟ್ಟು ಕಲೆಸಿದ ನಂತರ ಅದನ್ನು ಬದಿಯಲ್ಲಿ ಹಾಗೆಯೇ ಇರಿಸಿ. ಆಲೂಗಡ್ಡೆಯನ್ನು ಬೇಯಿಸಿ. ಅದನ್ನು ತಣ್ಣಗೆ ಮಾಡಿ, ಸಿಪ್ಪೆ ತೆಗೆಯಿರಿ ಮತ್ತು ಹಗುರವಾಗಿ ಕಿವುಚಿರಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಮತ್ತು ಅದಕ್ಕೆ ಜೀರಿಗೆ, ಸಾಸಿವೆ ಮತ್ತು ಕರಿಬೇವಿನ ಸೊಪ್ಪು ಬೆರೆಸಿ ನಂತರ ಅದಕ್ಕೆ ಈರುಳ್ಳಿ ಹಾಕಿರಿ.

ಕಂದುಬಣ್ಣಕ್ಕೆ ಬರುವ ತನಕ ಬೇಯಿಸಿ ಆಮೇಲೆ ಅದಕ್ಕೆ ಕಿವುಚಿದ ಆಲೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟನ್ನು ನಾಲ್ಕು ಸಮ ಭಾಗಗಳನ್ನಾಗಿ ವಿಂಗಡಿಸಿ. ಅದರಲ್ಲಿ ಆಲೂಗಡ್ಡೆಯನ್ನು ತುಂಬಿ 10 ನಿಮಿಷ ಹಾಗೆಯೇ ಇರಿಸಿ. ಉಂಡೆಗಳನ್ನು ಬೇಕಾದ ದಪ್ಪದಲ್ಲಿ ಚಪ್ಪಟೆಯಾಗಿ ಮಾಡಿ ಹಾಗೂ ತುಪ್ಪದ ಜೊತೆಗೆ ತವಾದಲ್ಲಿ ಬೇಯಿಸಿ. ಮಕ್ಕಳ ಸ್ಕೂಲ್‌ ಟಿಫಿನ್‌ ಬಾಕ್ಸ್‌ಗೆ ಹಾಕಿಕೊಡಿ.
 
 
ಓಮ-ಬಾಳೆಹಣ್ಣು ಪೂರಿ
ಬೇಕಾಗುವ ಸಾಮಗ್ರಿಗಳು: 200 ಗ್ರಾಂ ಗೋಧಿಹಿಟ್ಟು, 5 ಸಣ್ಣ ಬಾಳೆಹಣ್ಣುಗಳು, 1 ಚಹಾ ಚಮಚದಷ್ಟು ಓಮ ಮತ್ತು ಜೇನುತುಪ್ಪ,  ರುಚಿಗೆ ತಕ್ಕಂತೆ ಉಪ್ಪು.

ತಯಾರಿಸುವ ವಿಧಾನ: ಉಪ್ಪು, ಓಮ ಮತ್ತು ಸಂಪೂರ್ಣ ಗೋಧಿ ಹಿಟ್ಟು ಮತ್ತು ನೀರು ಬೆರೆಸುತ್ತಾ ಹಿಟ್ಟು ತಯಾರಿಸಿ. ಹಿಟ್ಟನ್ನು ಸ್ವಲ್ಪ ಹೊತ್ತು ಹಾಗೆಯೇ ಬದಿಯಲ್ಲಿ ಇರಿಸಿ. ಹಿಟ್ಟನ್ನು 6 ಸರಿಸಮಾನ ಭಾಗಗಳನ್ನಾಗಿ ಮಾಡಿಟ್ಟುಕೊಂಡು ಚಪ್ಪಟೆ ಮಾಡಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಪೂರಿ ಚೆನ್ನಾಗಿ ಬೇಯುತ್ತಾ ಬಂಗಾರದ ಬಣ್ಣಕ್ಕೆ ಬರುವ ತನಕ ಬೇಯಿಸಿ. ಕತ್ತರಿಸಿದ ಬಾಳೆಹಣ್ಣು ಮತ್ತು ಜೇನಿನಿಂದ ಮಿಶ್ರಣ ತಯಾರಿಸಿ. ಅದನ್ನು ಪೂರಿ ಜೊತೆಗೆ ರೋಲ್‌ ಮಾಡಿ. ಮಕ್ಕಳಿಗೆ ಕೊಡಿ. ದೊಡ್ಡವರಿಗೂ ಇಷ್ಟವಾಗುತ್ತದೆ.

ಮಸಾಲೆ ಚಪಾತಿ
ಬೇಕಾಗುವ ಸಾಮಗ್ರಿಗಳು: 
2 ಕಪ್‌ ಗೋಧಿಹಿಟ್ಟು, 1 ಕಪ್‌ ನೀರು, 1 ದೊಡ್ಡ ಚಮಚದಷ್ಟು ಎಣ್ಣೆ, 1 ದಪ್ಪ ಈರುಳ್ಳಿ ಮತ್ತು ಟೊಮೊಟೊ, 2 ಹಸಿಮೆಣಸು, ಒಂದು ದೊಡ್ಡ ಚಮಚದಷ್ಟು ಕೊತ್ತಂಬರಿ ಸೊಪ್ಪು, ಒಂದು ಚಿಟಿಕೆ ಅರಿಶಿಣಪುಡಿ, 1 ಚಹಾ ಚಮಚದಷ್ಟು ಮೆಣಸಿನಪುಡಿ ಮತ್ತು ಜೀರಿಗೆ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಮೊದಲಿಗೆ ಪದಾರ್ಥಗಳನ್ನು ಮಿಶ್ರ ಮಾಡುತ್ತಾ ಚಪಾತಿಗೆ ತಯಾರಿಸುವ ರೀತಿಯಲ್ಲಿ ಹಿಟ್ಟನ್ನು ಕಲೆಸಬೇಕು. ಹಿಟ್ಟು ಕಲೆಸಿದ ನಂತರ 15 ನಿಮಿಷಗಳವರೆಗೆ ಹಾಗೆಯೇ ಇರಿಸಿ. ಆಮೇಲೆ ತಲಾ 30 ಗ್ರಾಂ ಉಂಡೆಗಳನ್ನಾಗಿ ಮಾಡಿ ಹಿಟ್ಟನ್ನು ಪ್ರತ್ಯೇಕವಾಗಿರಿಸಿ.

ಅವುಗಳನ್ನು ಲಟ್ಟಣಿಕೆಯಿಂದ ಚಪ್ಪಟೆಯಾಗಿ ಮಾಡಿ ನಾನ್ ಸ್ಟಿಕ್ ಪ್ಯಾನ್‌ನಲ್ಲಿ ಬೇಯಿಸಿ. ಅದಕ್ಕೆ ತುಪ್ಪ ಅಥವಾ ಎಣ್ಣೆಯನ್ನು ತೆಳುವಾಗಿ ಬೆರೆಸಿ ಮತ್ತು ಎರಡು ಬದಿಯೂ ಕಂದುಬಣ್ಣಕ್ಕೆ ಬರುವಂತೆ ಬೇಯಿಸಬೇಕು. ಅಲ್ಲಿಗೆ ಮಸಾಲ ಚಪಾತಿ ರೆಡಿ. ಮಕ್ಕಳಿಗೆ ಕೊಟ್ಟರೆ ಅವರು ಇದನ್ನು ತುಂಬ ಇಷ್ಟಪಟ್ಟು ತಿನ್ನುತ್ತಾರೆ.
 
ಗೋಧಿ ದೋಸೆ
ಬೇಕಾಗುವ ಸಾಮ್ರಗಿಗಳು:
  ಎರಡು ಕಪ್‌ ಆಶೀರ್ವಾದ್ ಗೋಧಿಹಿಟ್ಟು, ಮೂರು ಕಪ್‌ ನೀರು, ಎಣ್ಣೆ , 1 ದಪ್ಪ ಟೊಮೊಟೊ ಮತ್ತು ಈರುಳ್ಳಿ,  2 ಹಸಿ ಮೆಣಸು, ಕೊತ್ತಂಬರಿ (2 ದೊಡ್ಡ ಚಮಚದಷ್ಟು), ಕತ್ತರಿಸಿದ ಶುಂಠಿ (1 ಚಹಾ ಚಮಚದಷ್ಟು), ಜೀರಿಗೆ, ಉಪ್ಪು ರುಚಿಗೆ ತಕ್ಕಷ್ಟು. 

ತಯಾರಿಸುವ ವಿಧಾನ: ಮೊದಲಿಗೆ ಗೋಧಿಹಿಟ್ಟು ತೆಗೆದುಕೊಂಡು ನೀರಿನಲ್ಲಿ ಮಿಶ್ರ ಮಾಡಬೇಕು ಹಾಗೂ ಯಾವುದೇ ಉಬ್ಬುಗಳಿಲ್ಲದಂತೆ ಚೆನ್ನಾಗಿ ಕಿವುಚಿ ಕದರಬೇಕು. ಅದಕ್ಕೆ ಕತ್ತರಿಸಿಟ್ಟುಕೊಂಡ ಈರುಳ್ಳಿ, ಟೊಮೊಟೊ, ಕೊತ್ತಂಬರಿ, ಶುಂಠಿ, ಜೀರಿಗೆ ಮತ್ತು ಉಪ್ಪು ಬೆರೆಸಬೇಕು. ಹಿಟ್ಟು ಸುರಿದು ಬೀಳುವ ರೀತಿಯಲ್ಲಿ ತೆಳ್ಳಗಿರಬೇಕು ಎಂಬುದು ನೆನಪಿರಲಿ.

ಆಮೇಲೆ, ನಾನ್‌ಸ್ಟಿಕ್ ಫ್ಲಾಟ್ ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಅದನ್ನು ಚೆನ್ನಾಗಿ ಬಿಸಿ ಮಾಡಿ. ಒಂದು ಸೌಟ್ ಹಿಟ್ಟನ್ನು ಅದಕ್ಕೆ ಸುರಿಯಿರಿ. ಸೌಟಿನ ಹಿಂಭಾಗವನ್ನು ಉಪಯೋಗಿಸಿ ಉರುಟಾಗಿ ಹಿಟ್ಟನ್ನು ಪ್ಯಾನ್‌ನಲ್ಲಿ ಹರಡಿ. ಒಂದು ಬದಿ ಗರಿ ಗರಿ ಮತ್ತು ಬಂಗಾರದ ಕೆಂಪುಬಣ್ಣಕ್ಕೆ ಬರುವಂತೆ ಅದನ್ನು ಬೇಯಿಸಬೇಕು. ಅಲ್ಲಿಗೆ ಗೋಧಿ ದೋಸೆ ತಯಾರು. ತೆಂಗಿನಕಾಯಿ ಚಟ್ನಿ ಜೊತೆಗೆ ಮಕ್ಕಳಿಗೆ ತಿನ್ನಲು ನೀಡಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT