ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಜನಶೀಲ ಸ್ವಾತಂತ್ರ್ಯಕ್ಕೆ ತಡೆ ಹೇರುವುದು ಸಲ್ಲದು

Last Updated 17 ಮಾರ್ಚ್ 2017, 20:16 IST
ಅಕ್ಷರ ಗಾತ್ರ

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಸಿನಿಮಾ ಸೆಟ್ ಮೇಲೆ ಮಹಾರಾಷ್ಟ್ರದ ಕೊಲ್ಹಾಪುರದ ಬಳಿ ದಾಳಿ ನಡೆಸಿ ಸಿನಿಮಾಕ್ಕೆ ಸಂಬಂಧಿಸಿದ ವೇಷಭೂಷಣ ಹಾಗೂ ಕುದುರೆಗಳ ಆಹಾರ ಸಾಮಗ್ರಿಗಳನ್ನು ಹಾಳುಗೆಡವಲಾಗಿದೆ. ಇದು ನೀಡುವ ಸಂದೇಶ ಸ್ಪಷ್ಟ ಮತ್ತು ಕಳವಳಕಾರಿಯಾದುದು.

ರಜಪೂತರ ಇತಿಹಾಸವನ್ನು ತಪ್ಪಾಗಿ ಚಿತ್ರಿಸಲಾಗುತ್ತಿದೆ ಎಂದು ಆರೋಪಿಸಿ ಜನವರಿ ತಿಂಗಳಲ್ಲಿ ರಾಜಸ್ತಾನದ ಜೈಗಡ ಕೋಟೆಯಲ್ಲಿ ಚಿತ್ರತಂಡದ ಮೇಲೆ ದಾಳಿ ನಡೆದಿತ್ತು. ಚಿತ್ರನಿರ್ದೇಶಕ ಬನ್ಸಾಲಿ ಮೇಲೂ ಹಲ್ಲೆ ನಡೆದಿತ್ತು. ಈಗ ಕೊಲ್ಹಾಪುರದಲ್ಲೂ ಚಿತ್ರೀಕರಣ ತಾಣದಲ್ಲಿ ವಿಧ್ವಂಸಕ ಕೃತ್ಯ ಎಸಗಿರುವುದು ಖಂಡನೀಯ.

ಕಾನೂನು ಕೈಗೆತ್ತಿಕೊಂಡು ಹಿಂಸಾಚಾರ ನಡೆಸುವುದು ಹಾಗೂ ತಮ್ಮದೇ ಅಸಹಿಷ್ಣು ದೃಷ್ಟಿಕೋನಗಳನ್ನು ಹೇರಲು ಪ್ರಯತ್ನಿಸುವುದಕ್ಕೆ ಪ್ರಜಾಪ್ರಭುತ್ವದಲ್ಲಿ ಯಾವುದೇ ಮಾನ್ಯತೆ ಇಲ್ಲ ಎಂಬುದನ್ನು ಮೊದಲು ಅರಿಯಬೇಕು.

ಅದರಲ್ಲೂ ರಾಜಸ್ತಾನದಲ್ಲಿ ಈ ಚಿತ್ರ ಬಿಡುಗಡೆಗೆ ಮೊದಲು ಅದನ್ನು ಶ್ರೀ ರಾಷ್ಟ್ರೀಯ ರಜಪೂತ್ ಕರ್ಣಿ ಸೇನಾ (ಎಸ್‌ಆರ್ಆರ್‌ಕೆಎಸ್) ಸಂಘಟನೆಯ ಸಮಿತಿ ಹಾಗೂ ಸಮಾಜದ ಇತರ ಜ್ಞಾನವಂತ ಸದಸ್ಯರ ಎದುರು ಪ್ರದರ್ಶಿಸಿ ಅವರ ಆಕ್ಷೇಪಗಳಿಗೆ ದನಿ ನೀಡಲು ಅವಕಾಶ ನೀಡಬೇಕು ಎಂದು ರಾಜಸ್ತಾನದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ಅರುಣ್ ಚತುರ್ವೇದಿ ಅವರು ಹೇಳಿರುವುದಂತೂ ಆಕ್ಷೇಪಾರ್ಹವಾದುದು.

ರಜಪೂತ್ ಸಮುದಾಯದ ಮುಖಂಡರು ಈ ಚಿತ್ರವನ್ನು ನೋಡಿದ ಬಳಿಕವಷ್ಟೇ ಬಿಡುಗಡೆಗೆ ರಾಜಸ್ತಾನದಲ್ಲಿ ಅನುಮತಿ ನೀಡುವುದಾಗಿ ರಾಜಸ್ತಾನದ ಮತ್ತೊಬ್ಬ ಸಚಿವ ಪುಷ್ಪೇಂದ್ರ ಸಿಂಗ್ ಅವರೂ ಹೇಳಿದ್ದಾರೆ. ಚುನಾಯಿತ ಪ್ರತಿನಿಧಿಗಳು ಹೇಳಿಕೆಗಳನ್ನು ನೀಡುವಾಗ ಹೆಚ್ಚಿನ ಹೊಣೆಗಾರಿಕೆ ಪ್ರದರ್ಶಿಸುವುದು ಅಗತ್ಯ.

ಅಷ್ಟೇ ಅಲ್ಲ, ವಿಶ್ವ ಪಾರಂಪರಿಕ ತಾಣ ಚಿತ್ತೋರಗಡ ಕೋಟೆಯ ಪದ್ಮಿನಿ ಮಹಲ್‌ನಲ್ಲಿ  ರಜಪೂತ ರಾಣಿ ಪದ್ಮಾವತಿಯ ಪ್ರತಿಬಿಂಬವನ್ನು ದೆಹಲಿ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿಗೆ ತೋರಿಸಲಾಗಿದ್ದ ಕನ್ನಡಿಗಳು ಎಂದು ನಂಬಲಾದ ಎರಡು ಕನ್ನಡಿಗಳನ್ನು ರಜಪೂತ್ ಕರ್ಣಿ ಸೇನಾ ಕಾರ್ಯಕರ್ತರು ಇತ್ತೀಚೆಗೆ ಹಾಳುಗೆಡವಿದ್ದರು. 

ಚಿತ್ರದಲ್ಲಿ ಏನಿರಬೇಕು, ಏನಿರಬಾರದು ಎಂಬಂತಹ ಷರತ್ತುಗಳನ್ನು ಹೇರಲು ಯಾವುದೇ ಗುಂಪುಗಳಿಗೂ ಅಧಿಕಾರವಿಲ್ಲ. ಅದು, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಕೆಲಸ ಎಂಬುದನ್ನು ಮೊದಲು ಮನಗಾಣಬೇಕು. ಹೀಗಾಗಿ ಯಾವ ತರಹದ ಸಿನಿಮಾಗಳನ್ನು ಮಾಡಬೇಕು, ಯಾವುದನ್ನು ಜನ ನೋಡಬೇಕು ಎಂಬುದನ್ನು ನಿರ್ಧರಿಸಲು ಹೊರಗಿನ ಶಕ್ತಿಗಳಿಗೆ ಅವಕಾಶ ನೀಡಬೇಕೆಂದು ಹೇಳುವುದು ಸರಿಯಲ್ಲ.

ಇದು ಹೀಗೇ ಮುಂದುವರಿದಲ್ಲಿ ಇತರ ಗುಂಪುಗಳೂ ಇನ್ನೂ ಹೆಚ್ಚಿನ ಬೇಡಿಕೆ ಮುಂದಿಡಲು ಶುರುಮಾಡುತ್ತವೆ. ಭಯೋತ್ಪಾದನೆ ವಿರುದ್ಧ ಹಾಡಿದ ಮುಸ್ಲಿಂ ಯುವತಿ ಹಾಗೂ ಹಿಂದೂ ಭಕ್ತಿ ಗೀತೆಯನ್ನು  ಹಾಡಿದ ಮತ್ತೊಬ್ಬ ಮುಸ್ಲಿಂ ಯುವತಿಯ ವಿರುದ್ಧ ಫತ್ವಾ ಹೊರಡಿಸಿರುವಂತಹ ಅನಪೇಕ್ಷಣೀಯ ಘಟನೆಗಳೂ ನಮ್ಮ ಸುತ್ತ ನಡೆಯುತ್ತಿವೆ.

ಧರ್ಮ ಮತ್ತು ಸಂಸ್ಕೃತಿ ಮೇಲೆ ಹಲ್ಲೆ ನಡೆಯುತ್ತಿದೆ ಎಂದು ಭಾವಿಸಿಕೊಂಡು ಧಾರ್ಮಿಕ ಗುಂಪುಗಳ ದಾಂದಲೆಗಳೂ ಅಲ್ಲಲ್ಲಿ ನಡೆಯುತ್ತಲೇ ಇರುತ್ತವೆ. ಆದರೆ ಇಂತಹ ನಡಾವಳಿಗಳು ಪ್ರಜಾಪ್ರಭುತ್ವದ ಅಂತಃಸತ್ವವನ್ನು ಕುಗ್ಗಿಸುತ್ತವೆ. ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ.

ಇದಕ್ಕೆ ಕಾರಣ ಅದು ಜಪಿಸುತ್ತಿರುವ ಅಭಿವೃದ್ಧಿ ಮಂತ್ರ. ಅಭಿವೃದ್ಧಿ ಎಂದರೆ ರಸ್ತೆ, ನೀರು, ವಿದ್ಯುತ್, ಮೊಬೈಲ್ ಫೋನ್, ಇ–ವಾಲಟ್ ಮಾತ್ರವಲ್ಲ ಸೃಜನಶೀಲ ಸ್ವಾತಂತ್ರ್ಯವೂ ಸೇರುತ್ತದೆ. ಸಂವಿಧಾನದತ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿಗಳು ಅಭಿವೃದ್ಧಿ  ಪರವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT