ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನದಾತರ ಪ್ರತಿಭಟನೆ: ಎಂಟನೇ ದಿನಕ್ಕೆ ಅನಿರ್ದಿಷ್ಟಾವಧಿ ಧರಣಿ

Last Updated 18 ಮಾರ್ಚ್ 2017, 5:49 IST
ಅಕ್ಷರ ಗಾತ್ರ

ಹೊಸಪೇಟೆ: ರೈತರ ಕೃಷಿ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ ಬಣ) ನೇತೃತ್ವದಲ್ಲಿ ರೈತರು ನಗರದ ತಾಲ್ಲೂಕು ಕಚೇರಿ ಎದುರು ನಡೆಸುತ್ತಿರುವ ಅನಿರ್ದಿ ಷ್ಟಾವಧಿ ಧರಣಿ ಶುಕ್ರವಾರ ಎಂಟನೇ ದಿನಕ್ಕೆ ಕಾಲಿರಿಸಿದೆ.

ರೈತರು ನಡೆಸುತ್ತಿರುವ ಧರಣಿಗೆ ಶುಕ್ರ ವಾರ ಅಂಗವಿಕಲರ ಸಂಘ ಹಾಗೂ ಜೆಡಿಎಸ್‌ ತಾಲ್ಲೂಕು ಘಟಕ ಬೆಂಬಲ ಸೂಚಿಸಿದವು. ಅಂಗವಿಕಲರ ಸಂಘದ ವೆಂಕಟೇಶ, ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಶಫಿ. ಜಿ. ಬರಕಾತಿ ಅವರು ಧರಣಿಯಲ್ಲಿ ಭಾಗವ ಹಿಸಿ ಬೆಂಬಲ ವ್ಯಕ್ತಪಡಿಸಿದರು.

ಶಫಿ ಜಿ. ಬರಕಾತಿ ಮಾತನಾಡಿ, ಒಂದು ವಾರದಿಂದ ರೈತರು ಧರಣಿ ನಡೆಸುತ್ತಿದ್ದರೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಸ್ಥಳಕ್ಕೆ ಭೇಟಿ ನೀಡಿ ಅವರೊಂದಿಗೆ ಮಾತುಕತೆ ನಡೆಸಿಲ್ಲ. ಇದು ಸರಿಯಾದ ವರ್ತನೆ ಅಲ್ಲ. ಅನ್ನದಾತರನ್ನು ಈ ರೀತಿ ಕಡೆಗಣಿಸುವುದು ಸರಿಯಲ್ಲ ಎಂದರು.

ಸತತ ಬರಗಾಲದಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರ ನೆರವಿಗೆ ಬರುವುದು ಅಧಿಕಾರದಲ್ಲಿ ಇರುವವರ ಕರ್ತವ್ಯ. ಆದರೆ, ಅವರನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಇರುವುದು ದುರದೃಷ್ಟಕರ. ರೈತರ ತಾಳ್ಮೆ ಪರೀಕ್ಷೆ ಮಾಡಿ, ದೊಡ್ಡ ಅನಾಹುತಕ್ಕೆ ಎಡೆಮಾಡಿಕೊಡುವ ಬದಲು ಕೂಡಲೇ ಅವರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಂ. ಪ್ರಕಾಶ್‌ ಮಾತನಾಡಿ, ಗುರುವಾರದಿಂದ ಧರಣಿ ಸ್ಥಳದಲ್ಲೇ ಆಹಾರ ತಯಾರಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಬೇಡಿಕೆ ಈಡೇರುವವರೆಗೆ ಯಾವುದೇ ಕಾರಣಕ್ಕೂ ಸ್ಥಳದಿಂದ ಕದಲುವುದಿಲ್ಲ ಎನ್ನುವ ಸಂದೇಶ ಈ ಮೂಲಕ ರವಾನಿಸಿದ್ದೇವೆ ಎಂದರು.

ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸರ್ಕಾರ ರೈತರನ್ನು ಭೇಟಿಯಾಗಿ ಕನಿಷ್ಠ ಸೌಜನ್ಯಕ್ಕಾದರೂ ಮಾತನಾಡಿಸಿಲ್ಲ. ಇದು ಉದ್ಧಟತದ ಪರಮಾವಧಿ. ಹೀಗೇ ನಡೆದು ಕೊಂಡರೆ ಮುಂಬರುವ ಚುನಾವಣೆಯಲ್ಲಿ ರೈತರು ಪಾಠ ಕಲಿಸಲಿದ್ದಾರೆ ಎಂದರು.

ಸತತ ಮೂರು ವರ್ಷಗಳಿಂದ ಬರಗಾಲ ಇರುವುದರಿಂದ ರೈತ ಕಂಗಾಲಾಗಿದ್ದಾನೆ. ಹಾಗಾಗಿ ಕೂಡಲೇ ಸಾಲ ಮನ್ನಾ ಮಾಡ ಬೇಕು. ಎಲ್ಲ ರೈತರಿಗೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಪರ

ಶುರಾಮ್‌, ಸಂಘದ ಉಪಾಧ್ಯಕ್ಷ ಕೆ. ಬಾಬುನಾಯ್ಕ, ಬಳ್ಳಾರಿ ಜಿಲ್ಲಾ ಅಧ್ಯಕ್ಷ ದೇವರಮನಿ ಮಹೇಶ್‌, ಜಿಲ್ಲಾ ಉಪಾಧ್ಯಕ್ಷ ಎನ್‌.ಕಾಳಿದಾಸ್‌, ಹುಲುಗೆಮ್ಮ, ಷಣ್ಮುಖಪ್ಪ,  ವೀರಭದ್ರ, ಎನ್‌.ವೆಂಕಟೇಶ್‌ ಇದ್ದರು.

**

ಬರಗಾಲದಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಅವರ ನೆರವಿಗೆ ಬರುವುದು ಅಧಿಕಾರದಲ್ಲಿ ಇರುವವರ ಕರ್ತವ್ಯ
-ಶಫಿ ಬರಕಾತಿ, ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT