ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಕುಸಿಯುತ್ತಿದೆ ಅಂತರ್ಜಲ ಮಟ್ಟ

Last Updated 18 ಮಾರ್ಚ್ 2017, 6:23 IST
ಅಕ್ಷರ ಗಾತ್ರ

ಕಾರವಾರ: ಭೌಗೋಳಿಕವಾಗಿ ಕರಾವಳಿ, ಮಲೆನಾಡು ಹಾಗೂ ಅರೆಬಯಲು ಸೀಮೆಯನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಇನ್ನೊಂದೆಡೆ ಜೀವಜಲವಾಗಿರುವ ಅಂತರ್ಜಲ ಮಟ್ಟ ಕೂಡ ಕುಸಿಯುತ್ತಿದೆ.

ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಇಳಿಮುಖ ಆಗಿರುವ ಕುರಿತು ಹಿರಿಯ ಭೂ ವಿಜ್ಞಾನಿಗಳ ಅಧ್ಯಯನ ವರದಿ ಬೆಳಕು ಚೆಲ್ಲಿದೆ. ಏಳು ವರ್ಷಗಳ ಹಿಂದೆ 7.18 ಮೀಟರ್‌ನಷ್ಟಿದ್ದ ಅಂತರ್ಜಲ ಮಟ್ಟದ ಸರಾಸರಿ ಈಗ 8.40 ಮೀಟರ್‌ ಆಗಿದೆ. ಅಂದರೆ 1.22 ಮೀಟರ್‌ ಅಂತರ್ಜಲ ಕುಸಿದಿದೆ. ಹಳಿಯಾಳದಲ್ಲಿ ಅತಿ ಹೆಚ್ಚು 5 ಮೀಟರ್‌ಗಿಂತ ಅಧಿಕವಾಗಿ ಕುಸಿದಿದೆ. ಇನ್ನೂ ಶಿರಸಿ 2 ಮೀ.ನಿಂದ 5 ಮೀ., ಮುಂಡಗೋಡ 1 ರಿಂದ 2 ಮೀ., ಅಂಕೋಲಾ, ಭಟ್ಕಳ, ಹೊನ್ನಾವರ, ಕಾರವಾರ, ಕುಮಟಾ ಸಿದ್ದಾಪುರ ಹಾಗೂ ಜೊಯಿಡಾ ಒಂದು ಮೀಟರ್‌ ಒಳಗೆ ಕುಸಿತವಾಗಿದೆ.

ಬತ್ತುತ್ತಿವೆ ಬಾವಿಗಳು: ಅಂತರ್ಜಲ ಮಟ್ಟ ಕಡಿಮೆ ಆಗುತ್ತಿರುವುದರಿಂದ ಬೇಸಿಗೆಯಲ್ಲಿ ಅನೇಕ ಬಾವಿಗಳು ಬತ್ತುತ್ತಿವೆ. ಕೊಳವೆ ಬಾವಿಗಳಲ್ಲೂ ನೀರಿನ ಇಳುವರಿ ಕಡಿಮೆಯಾಗಿದೆ. ಇನ್ನೂ ಕರಾವಳಿ ಪ್ರದೇಶದ ಕೆಲ ಬಾವಿಗಳಲ್ಲಿ ಉಪ್ಪು ನೀರು ಸೇರಿ ಬಳಕೆಗೆ ನಿಷ್ಪ್ರಯೋಜಕವಾಗಿದೆ. ಇದರಿಂದ ಜನರು ಕುಡಿಯುವ ನೀರಿಗೆ ಪರಿತಪಿಸುವಂತಾಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಜಿಲ್ಲಾಡಳಿತ ಮಾಡುತ್ತಿರುವ ವೆಚ್ಚ ಕೂಡ ದುಬಾರಿಯಾಗುತ್ತಿದ್ದು, ಈ ಬಾರಿ ₹ 2.88 ಕೋಟಿ ವ್ಯಯ ಮಾಡುತ್ತಿದೆ.

‘ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂತರ್ಜಲ ಏರಿಳಿತ ಅಧ್ಯಯನ ಮಾಡಲು ಒಟ್ಟು 106 ಆಯ್ದ ಸ್ಥಳಗಳಲ್ಲಿ ಬಾವಿ ಮತ್ತು ಕೊಳವೆ ಬಾವಿಗಳನ್ನು ಗುರುತಿಸಲಾಗಿದೆ. ಇಂತಹ ಬಾವಿಗಳಿಂದ ಪ್ರತಿ ತಿಂಗಳ ಎರಡನೇ ವಾರದಿಂದ ಕೊನೆಯ ದಿನದವರೆಗೆ ಅಂತರ್ಜಲ ಮಟ್ಟವನ್ನು ದಾಖಲಿಸಲಾಗುತ್ತದೆ. ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಶೇ 28 ರಷ್ಟು ಮಳೆ ಪ್ರಮಾಣ ಕಡಿಮೆಯಾಗಿದ್ದು, ಇದು ಅಂತರ್ಜಲದ ಮಟ್ಟ ಕುಸಿಯಲು ಕಾರಣವಾಗಿದೆ’ ಎಂದು ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂವಿಜ್ಞಾನಿ ಎಂ.ಪಿ.ಇಟ್ನಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ಕುಸಿತಕ್ಕೆ ಕಾರಣವೇನು?: ‘ಮಳೆ ನೀರಿನಿಂದ ನೈಸರ್ಗಿಕವಾಗಿ ಆಗುತ್ತಿದ್ದ ಬಾವಿಗಳ ಮರುಪೂರಣ ಇತ್ತೀಚಿನ ದಿನಗಳಲ್ಲಿ ಆಗುತ್ತಿಲ್ಲ. ನಗರ ಪ್ರದೇಶಗಳ ವಿಸ್ತರಣೆ, ಕೆರೆಗಳ ಒತ್ತುವರಿ ಹಾಗೂ ಕೆರೆಯಲ್ಲಿ ತುಂಬಿದ ಹೂಳನ್ನು ತೆಗೆಯದೇ ಇರುವುದು, ಅನವಶ್ಯಕ ನೀರಿನ ಬಳಕೆ ಹೀಗೆ ಹಲವು ಕಾರಣ ಗಳಿಂದ ಬಾವಿಗಳಿಗೆ ಮರುಪೂರಣ ಆಗದೇ ಅಂತರ್ಜಲ ಮಟ್ಟ ಕುಸಿಯುತ್ತಿದೆ’ ಎನ್ನುತ್ತಾರೆ ಅವರು.

**

ಕೆಲ ಕೊಳವೆ ಬಾವಿಗೆ ಅನುಮತಿ ಬೇಕು
ಉತ್ತರ ಕನ್ನಡ ಜಿಲ್ಲೆಯಲ್ಲಿ ತೋಡು ಬಾವಿ/ಕೊಳವೆ ಬಾವಿ ಗಳು ಕೊರೆಯಲು ಯಾವುದೇ ಅನುಮತಿ ಬೇಕಾಗಿಲ್ಲ. ಆದರೆ ಸಾರ್ವಜನಿಕ ಕುಡಿಯುವ ನೀರಿನ ಮೂಲಗಳಿಂದ 500 ಮೀಟರ್‌ ಅಂತರದಲ್ಲಿ ಹೊಸದಾಗಿ ತೋಡು ಬಾವಿ/ಕೊಳವೆ ಬಾವಿ ಕೊರೆ ಯುವ ಮುನ್ನ ಜಿಲ್ಲಾ ಅಂತರ್ಜಲ ಸಮಿತಿ ಪರವಾನಗಿ ಪಡೆಯು ವುದನ್ನು ಜಿಲ್ಲಾ ಅಂತರ್ಜಲ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿ ಕಾರಿ ಎಸ್‌.ಎಸ್‌. ನಕುಲ್‌ ಅವರು ಕಡ್ಡಾಯಗೊಳಿಸಿದ್ದಾರೆ ಎಂದು ಎಂ.ಪಿ.ಇಟ್ನಾಳ್‌ ತಿಳಿಸಿದರು.

**

ಜಿಲ್ಲೆಯಲ್ಲಿ ವರ್ಷದಿಂದ ವರ್ಷ ಮಳೆ ಕಡಿಮೆಯಾಗುತ್ತಿದ್ದು, ಬಾವಿಗಳಿಗೆ ಮಳೆ ನೀರು ನೈಸರ್ಗಿಕವಾಗಿ ಮರಪೂರಣ ಆಗದೇ ಇರುವುದೇ ಅಂತರ್ಜಲ ಮಟ್ಟ ಕುಸಿಯಲು ಕಾರಣ.
–ಎಂ.ಪಿ.ಇಟ್ನಾಳ್, ಹಿರಿಯ ಭೂವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT