ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜಿನಲ್ಲಿ ಆಸನ ಕಲಿಯುವ ‘ಯೋಗ’

Last Updated 18 ಮಾರ್ಚ್ 2017, 6:46 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇವರು ನಿತ್ಯವೂ ಮುಂಜಾನೆ ಕಾಲೇಜಿಗೆ ಬರುತ್ತಾರೆ. ಪಾಠ ಕಲಿಯು­ವುದಕ್ಕಲ್ಲ; ಆಸನಗಳನ್ನು ಅಭ್ಯಾಸ ಮಾಡಿ ದೈಹಿಕ-ಮಾನಸಿಕ ಆರೋಗ್ಯ ಸುಧಾರಿಸಿಕೊಳ್ಳಲು. ಪಠ್ಯ ಚಟುವಟಿ­ಕೆಗಳು ಆರಂಭವಾಗು­ವುದಕ್ಕೂ ಸುಮಾರು ಎರಡು ತಾಸು ಮುನ್ನ ಅವರು ಸೂರ್ಯ ನಮಸ್ಕಾರ ಮಾಡಿರುತ್ತಾರೆ. ವಿವಿಧ ಆಸನಗಳನ್ನು ಪ್ರಾಯೋಗಿಕವಾಗಿ ಮಾಡಿರುತ್ತಾರೆ. ಇಂಥ ಅಪರೂಪದ ತರಗತಿಗಳು ನಡೆಯುತ್ತಿರುವುದು ನಗರದ ರಾಜನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ.

ಪಠ್ಯದ ಜೊತೆ ಯೋಗ ಕಲಿಸುವ ಇರಾದೆಯಿಂದ ಈ ಕಾಲೇಜು ಸಿದ್ಧಪಡಿಸಿದ ಯೋಗ ಪಠ್ಯ ಕ್ರಮ ಯಶಸ್ಸು ಕಂಡಿದೆ. ಮೂರು ತಿಂಗಳ ಯೋಗ ಸರ್ಟಿಫಿಕೆಟ್ ಕೋರ್ಸ್‌ನ ಮೊದಲ ತಂಡದ ತರಗತಿಗಳು ಎರಡು ತಿಂಗಳು ಪೂರೈಸಿದ್ದು ಇದೇ 23ರಂದು ಪ್ರಮಾಣಪತ್ರ ವಿತರಣೆ ನಡೆಯಲಿದೆ.

ದೈಹಿಕ ಶಿಕ್ಷಣದ ಸ್ನಾತಕೋತ್ತರ ಪದವಿಯಲ್ಲಿ ಯೋಗವನ್ನೇ ವಿಶೇಷವಾಗಿ ಅಧ್ಯಯನ ಮಾಡಿರುವ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಸೋಮಶೇಖರ ಪಟ್ಟಣಶೆಟ್ಟಿ ಅವರ ಮುತುವರ್ಜಿ ಮತ್ತು ಸಹಜ ಜೀವನ ಶೈಲಿ ರೂಢಿಸಿಕೊಂಡು ಬಂದಿರುವ ಪ್ರಾಚಾರ್ಯೆ ಡಾ.ಗೀತಾ ಎಚ್.ಜಿ ಅವರ ಆಸಕ್ತಿ ಈ ಕಾಲೇಜಿನಲ್ಲಿ ಇಂಥ ವಿಶೇಷ ಕೋರ್ಸ್‌ ಆರಂಭವಾಗಲು ಕಾರಣ ಎಂದು ಯೋಗಪಟುಗಳು ಹೇಳುತ್ತಾರೆ.

‘ಸಾರ್ವಜನಿಕವಾಗಿ ಮತ್ತು ಕಾಲೇಜುಗಳಲ್ಲಿ ಯೋಗ ತರಬೇತಿ ನೀಡುತ್ತಿರುವ ನನಗೆ ನಮ್ಮ ಕಾಲೇಜಿನಲ್ಲಿ ಯೋಗವನ್ನು ಪಠ್ಯಕ್ರಮವಾಗಿ ಯಾಕೆ ರೂಪಿಸಬಾರದು ಎಂಬ ಯೋಚನೆ ಬಂತು. ಪ್ರಾಚಾರ್ಯರಿಗೆ ವಿಷಯ ತಿಳಿಸಿದಾಗ ವಿಳಂಬ ಮಾಡದೆ ಒಪ್ಪಿಗೆ ಸೂಚಿಸಿದರು. ಹೀಗಾಗಿ ಕೋರ್ಸ್‌ ಸುಲಲಿತವಾಗಿ ಆರಂಭವಾಯಿತು’ ಎಂದು ಕೋರ್ಸ್‌ ಆರಂಭವಾದ ಬಗೆಯನ್ನು ಪಟ್ಟಣಶೆಟ್ಟಿ ವಿವರಿಸಿದರು.

‘ಪ್ರತಿನಿತ್ಯ ಬೆಳಿಗ್ಗೆ 7.30ರಿಂದ 8.30ರ ವರೆಗೆ ತರಗತಿ ಇರುತ್ತದೆ. ಒಟ್ಟು 60 ಮಂದಿ ಕೋರ್ಸ್‌ಗೆ ಹೆಸರು ನೊಂದಾಯಿಸಿದ್ದು ನಿತ್ಯವೂ ಕನಿಷ್ಠ 40 ಮಂದಿ ಕಡ್ಡಾಯವಾಗಿ ಹಾಜರಾಗುತ್ತಾರೆ. ಸೂರ್ಯ ನಮಸ್ಕಾರದಿಂದ ಶುರು ಮಾಡಿ ಮೂಲ ಆಸನಗಳನ್ನು ಹೇಳಿಕೊಡ­ಲಾಗುತ್ತದೆ. ಮುಂದು­ವರಿಸಲು ಆಸಕ್ತಿ ಇರುವವರು ಕೋರ್ಸ್‌ ಅವಧಿ ಮುಗಿದ ನಂತರವೂ ತರಗತಿಗೆ ಬರಬಹುದು’ ಎಂದು ಅವರು ತಿಳಿಸಿದರು.

‘ಪ್ರಾಥಮಿಕವಾಗಿ ಕಲಿಯಬೇಕಾದ ಎಂಟಕ್ಕೂ ಹೆಚ್ಚು ಆಸನಗಳನ್ನು ಹೇಳಿಕೊಡಲಾಗುತ್ತದೆ. ಇದರೊಂದಿಗೆ ಧ್ಯಾನದ ಸೂತ್ರಗಳನ್ನೂ ಕಲಿಸಿಕೊಡ­ಲಾಗುತ್ತದೆ. ದೇಹಕ್ಕೆ ವ್ಯಾಯಾಮ ಸಿಗುವುದರೊಂದಿಗೆ ಏಕಾಗ್ರತೆ ಹೆಚ್ಚಲು ಮತ್ತು ಮನಸ್ಸಿನ ಬಲ ವೃದ್ಧಿಯಾಗಲು ಸಹಕಾರಿಯಾಗುವಂತೆ ಪಠ್ಯಕ್ರಮವನ್ನು ರೂಪಿಸಲಾಗಿದೆ. ಜಿಲ್ಲೆಯ ಬೇರೆ ಯಾವುದೇ ಕಾಲೇಜಿನಲ್ಲಿ ಇಂಥ ಕೋರ್ಸ್ ನಡೆಯುತ್ತಿರುವುದರ ಬಗ್ಗೆ ನನಗೆ ಅರಿವಿಲ್ಲ’ ಎನ್ನುತ್ತಾರೆ ಪಟ್ಟಣಶೆಟ್ಟಿ.

ಪದವಿ ಕಲಿಯುವ ಹಂತದಲ್ಲಿ ದೇಹ ಚೆನ್ನಾಗಿ ಬಳುಕುತ್ತದೆ. ಈ ಹಂತ ಕಳೆದರೆ ಆಸನಗಳನ್ನು ಕಲಿಯುವುದು ಸುಲಭವಲ್ಲ. ದೇಹ ಮತ್ತು ಮನಸ್ಸು ಕಲಿಕೆಗೆ ಒಗ್ಗಿಕೊಳ್ಳಲು ಆಸನಗಳು ನೆರವಾಗಬಲ್ಲವು. ಆಸನಗಳನ್ನು ಚೆನ್ನಾಗಿ ಕಲಿತರೆ ವಿಶ್ವವಿದ್ಯಾಲಯದ ಯೋಗ ಸ್ಪರ್ಧೆಗೂ ಹೋಗುವ ಅವಕಾಶವಿದೆ. ಉತ್ತಮ ಸಾಧನೆ ಮಾಡಿದರೆ ರಾಷ್ಟ್ರಮಟ್ಟದಲ್ಲೂ ಹೆಸರು ಮಾಡುವ ಸಾಧ್ಯತೆ ಇದೆ. ಯೋಗ ಪಠ್ಯಕ್ರಮ ರೂಪಿಸಿದ್ದರಲ್ಲಿ ವಿದ್ಯಾರ್ಥಿಗಳನ್ನು ಈ ಸ್ಪರ್ಧೆಗೆ ಸಜ್ಜುಗೊಳಿಸುವ ಉದ್ದೇಶವೂ ಇದೆ’ ಎಂದು ಅಭಿಪ್ರಾಯಪಟ್ಟರು.

ತೂಕ ಗಣನೀಯವಾಗಿ ಕಡಿಮೆಯಾಗಿದೆ
ಯೋಗ ಕಲಿಯಲು ಆರಂಭಿಸಿ­ದಾಗಿನಿಂದ ದೇಹ ಹಾಗೂ ಮನಸ್ಸಿನ ಭಾರ ಕಡಿಮೆಯಾಗಿದೆ ಎಂದು ವಿದ್ಯಾರ್ಥಿಗಳು ಅಭಿಪ್ರಾಯಪಡುತ್ತಾರೆ.

‘ನನ್ನ ತೂಕ ಈಗ ತುಂಬ ಕಡಿಮೆಯಾಗಿದೆ. ಹೀಗಾಗಿ ದೇಹ ಹಗುರ ಆದಂತೆ ಅನಿಸುತ್ತದೆ. ಏಕಾಗ್ರತೆ ಮತ್ತು ನೆನಪಿನ ಶಕ್ತಿ ತುಂಬ ಹೆಚ್ಚಿದೆ. ಆಗಾಗ ಕಾಡುತ್ತಿದ್ದ ಬೆನ್ನುನೋವು ಮತ್ತು ತಲೆನೋವು ಮಾಯವಾಗಿದೆ. ಯೋಗ ಕೋರ್ಸ್‌ ಬದುಕಿನ ದಿಕ್ಕನ್ನೇ ಬದಲಿಸಿದೆ ಎನ್ನಬಹುದು. ಯೋಗ ಮುಂದುವರಿಸಲು ಬಯಸಿದ್ದೇನೆ’ ಎಂದು ಬಿ.ಎಸ್ಸಿ ವಿದ್ಯಾರ್ಥಿನಿ ಶಿಲ್ಪಾ ಪ್ರೇಮನಾಥ ಚಾಂದ್‌ ಗೋಡೆ ತಿಳಿಸಿದರು.

‘ಕೇವಲ ಎರಡು ತಿಂಗಳಲ್ಲಿ ನನ್ನ ತೂಕ ನಾಲ್ಕು ಕೆಜಿ ಇಳಿದಿದೆ. ಮೊದಲೆಲ್ಲ ಬೆಳಿಗ್ಗೆ ಏಳುವಾಗ ಕೈಕಾಲು ನೋವು, ಬೆನ್ನು ನೋವು ಕಾಡುತ್ತಿತ್ತು. ಯಾವುದರಲ್ಲೂ ಆಸಕ್ತಿ ಇರಲಿಲ್ಲ. ತರಗತಿಯಲ್ಲಿ ಅರ್ಧ ದಿನಕ್ಕಿಂತ ಹೆಚ್ಚು ಕುಳಿತುಕೊಳ್ಳಲು ಮನಸ್ಸು ಒಪ್ಪುತ್ತಿರಲಿಲ್ಲ. ಈಗ ಎಲ್ಲವೂ ಬದಲಾಗಿದೆ’ ಎಂಬುದು ಗೌರಜ್ ಕುಮಾರ ಕೊರವ ಅವರ ಅಭಿಪ್ರಾಯ.

**

ಮನಸ್ಸಿನ ಕಡಿವಾಣಕ್ಕೆ ಸಹಕಾರಿ...

‘ನಾನು ಕಳೆದ 38 ವರ್ಷಗಳಿಂದ ಯೋಗ ಮಾಡುತ್ತಿದ್ದೇನೆ. ಹೀಗಾಗಿ ಆರೋಗ್ಯ ಸಮಸ್ಯೆ ಹೇಳಿಕೊಂಡು ದವಾಖಾನೆ ಕಡೆಗೆ ಹೋಗುವ ಅಗತ್ಯ ಉಂಟಾಗಲಿಲ್ಲ.

ದೈಹಿಕ ಆರೋಗ್ಯಕ್ಕೂ ಮನಸ್ಸಿಗೆ ದುಷ್ಟ ವಿಚಾರಗಳು ನುಸುಳದಂತೆ ಮಾಡುವುದಕ್ಕೂ ಯೋಗ ಸಹಕಾರಿ ಎಂಬುದನ್ನು ಸ್ವಂತ ಅನುಭವದಿಂದ ಕಂಡುಕೊಂಡಿದ್ದೇನೆ. ಈ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಯೋಗ ತರ­ಬೇತಿ ತುಂಬ ಅನುಕೂಲ ಆಗಲಿದೆ. ಶೈಕ್ಷಣಿಕ ಸಾಧನೆಗೆ ಮತ್ತು ಆರೋಗ್ಯಕರ ಜೀವನ ನಡೆಸಲು ಯೋಗ ಅವರಿಗೆ ಸಹಕಾರಿಯಾದರೆ ಈ ತರಬೇತಿ ಕಾರ್ಯಕ್ರಮ ಸಫಲ­ವಾದಂತೆ’ ಎಂದು ಕಾಲೇಜಿನ ಪ್ರಾಚಾರ್ಯೆ–ಡಾ.ಗೀತಾ ಜಿ.ಎಚ್ ಹೇಳಿದರು.

**

ಎರಡು ತಿಂಗಳಲ್ಲಿ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಪೂರಕ ದೈಹಿಕ-ಮಾನಸಿಕ ಸ್ಥಿತಿ ನಿರ್ಮಾಣ­ವಾಗಿದೆ. ಇದು ಅವರ ಬದುಕಿಗೆ ನೆರವಾಗಲಿದೆ ಎಂಬ ನಂಬಿಕೆ ಇದೆ.
-ಸೋಮಶೇಖರ ಪಟ್ಟಣಶೆಟ್ಟಿ,
ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT