ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ನೀಡಲು ಬ್ಯಾಂಕ್‌ ಹಿಂದೇಟು

Last Updated 18 ಮಾರ್ಚ್ 2017, 9:39 IST
ಅಕ್ಷರ ಗಾತ್ರ

ದೇವನಹಳ್ಳಿ: ರಾಜ್ಯದಲ್ಲಿ ಸರ್ಕಾರ 160 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಿ ಮೂರು ತಿಂಗಳು ಉರುಳಿವೆ. ಇದರ ನಡುವೆ ಕೃಷಿಕರು, ರೈತರಿಗೆ ಸಾಲ ನೀಡಲು ಬ್ಯಾಂಕುಗಳು ಹಿಂದೇಟು ಹಾಕುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಬರಗಾಲದ ಸುಳಿಯಲ್ಲಿ ಎರಡು ವರ್ಷಗಳಿಂದ ಸಿಲುಕಿದ ರೈತರ ಆತ್ಮಹತ್ಯೆ ತೀವ್ರವಾಗಿ ಹೆಚ್ಚಾಗಿದೆ. ರೈತರು ಬ್ಯಾಂಕ್‌ ಸಾಲದ ಜತೆಗೆ ವ್ಯೆಯಕ್ತಿಕ ಬಂಡವಾಳವನ್ನು ನೆಚ್ಚಿನ ಮಣ್ಣಿನ ಮಡಿಲಿಗೆ ಹಾಕಿ ಬೆಳೆಯ ನಿರೀಕ್ಷೆಯಲ್ಲೇ  ಉಳಿದಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರ ಗರಿಷ್ಠ ಮುಖಬೆಲೆಯ ನೋಟು ರದ್ದತಿಯಂಥ ಆಘಾತಕಾರಿ ಆದೇಶ ನೀಡಿತು. ನವಂಬರ್ ತಿಂಗಳಿಂದ ಪ್ರಸ್ತುತ ಮಾರ್ಚ್ ಆರಂಭದವರೆಗೂ ಅತ್ಯಂತ ಕಡಿಮೆ ವಹಿವಾಟು ನಡೆಯುವಂತಾಯಿತು ಎಂದು ರೈತರೊಬ್ಬರು ವಿವರಿಸಿದರು.

ಕೃಷಿ ಉತ್ಪನ್ನಗಳ ಮೌಲ್ಯ ಬೀದಿಗಿಳಿಯಿತು. ಖರೀದಿಸುವವರಿಲ್ಲದೆ ಮಾರುಕಟ್ಟೆ ಬಿಕೋ ಎಂದವು– ಇದು ರೈತರ ಮನದಾಳದ ನೋವಿನ ಮಾತು.

ಸಾವಿರಾರು ಎಕರೆಯಲ್ಲಿ ಬೆಳೆದ ತರಕಾರಿ ಉತ್ಪನ್ನಗಳು ಬಿತ್ತನೆ ನೆಲದಲ್ಲೇ ಉಳಿದವು. ಬಹುತೇಕ ತರಕಾರಿ ಬಲೆ 50 ಪೈಸೆಯಿಂದ ₹5 ದಾಟಲಿಲ್ಲ ಎಂದು ರೈತ ಸಂಘದ ಪದಾಧಿಕಾರಿಯೊಬ್ಬರು ಹೇಳುತ್ತಾರೆ. ಹಿಂಗಾರು ಬೆಳೆ ಉಳಿಸುವ ಹರಸಾಹಸಕ್ಕೆ ಅನೇಕ ರೈತರು ಖಾಸಗಿ ಟ್ಯಾಂಕರ್ ಮೂಲಕ ಫಸಲಿಗೆ ನೀರುಣಿಸಿದರು.

ರೈತರ ಬೆಳೆಗಾಗಿ ಸಾಲ, ದಿನದ ವಹಿವಾಟುವಿಗಾಗಿ ಕೈಸಾಲ, ಸಹಕಾರ ಸಂಘ ಮತ್ತು ರಾಷ್ಟ್ರೀಕೃತ ಬ್ಯಾಂಕಿನ ಸಾಲ, ಜಮೀನು ದಾಖಲೆ ಅಡವಿಟ್ಟು ಸಾಲ, ಅಧಿಕ ಬಡ್ಡಿ, ಬೆಳೆ ಪಡೆಯುವ ಖಾತರಿ ಇಲ್ಲ ಎಂಬುದನ್ನು ಅರಿತಿರುವ ಬ್ಯಾಂಕುಗಳು, ಖಾಸಗಿ ಲೇವಾದೇವಿಗಾರ ಸಂಸ್ಥೆಗಳು ಚಿನ್ನಾಭರಣ ಅಡವಿಗೆ ಮಾತ್ರ ಸಾಲ ನೀಡುತ್ತಿವೆ. ಕೃಷಿ ಉತ್ಪನ್ನಗಳಿಗೆ ಸಾಲ ನೀಡಲು ಮುಂದಾಗುತ್ತಿಲ್ಲ ಎಂದು ಆರೋಪಿಸುತ್ತಾರೆ.

ರಾಷ್ಟ್ರೀಯ ಅಪರಾಧಗಳ ದಾಖಲಾತಿ ಬ್ಯೂರೋ ದೇಶದ ಆತ್ಮಹತ್ಯೆಗಳ ಬಗ್ಗೆ ಜನವರಿ 2017ರಲ್ಲಿ ನಡೆದ 49ನೇ ವಾರ್ಷಿಕ ವರದಿಯಲ್ಲಿ ಪ್ರಕಟಿಸಿರುವ ಮಾಹಿತಿಯಂತೆ 1995ರಿಂದ 2014ರ ವರೆಗೆ ರೈತರ ಮತ್ತು ಕೃಷಿ ಕಾರ್ಮಿಕರ ಆತ್ಮಹತ್ಯೆಗಳ ಸಂಖ್ಯೆ ಮೂರು ಲಕ್ಷಕ್ಕಿಂತ ಹೆಚ್ಚು ಎಂದಿದೆ.

ದೇಶದಲ್ಲಿ 2015ರಲ್ಲಿ 8,007 ರೈತರು, 4,575 ಕೃಷಿ ಕಾರ್ಮಿಕರು. 2014ಕ್ಕೆ ಹೋಲಿಸಿದರೆ 2015ರ ರೈತರ ಆತ್ಮಹತ್ಯೆ ಪ್ರಕರಣ ಶೇ 2ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 1500ಕ್ಕಿಂತ ಹೆಚ್ಚಿದೆ. ಇದು ದೇಶದಲ್ಲಿ ಎರಡನೆಯ ಸ್ಥಾನ ಎಂದು ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೆ. ಎಸ್. ಹರೀಶ್ ವಿವರ ನೀಡಿದ್ದಾರೆ.

ನಾಲ್ಕಾರು ವರ್ಷಗಳಿಂದ ಸಾಲ ಪಡೆದ ರೈತರು ಬರಗಾಲದಿಂದ ತತ್ತರಿಸುತ್ತಿದ್ದು ಈ ಸಾಲವನ್ನು ಸರ್ಕಾರ ಬಜೆಟ್‌ನಲ್ಲಿ ಯಾಕೆ ಮನ್ನಾ ಮಾಡಲಿಲ್ಲ ಎಂಬ ಪ್ರಶ್ನೆಯನ್ನು ಸಹಕಾರ ಸಂಘದ ನಿರ್ದೇಶಕ ಎ. ಶಿವರಾಮಯ್ಯ ಮುಂದಿಡುತ್ತಾರೆ.

ಕೇಂದ್ರ ಸರ್ಕಾರ ರಾಜ್ಯದತ್ತ, ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡುತ್ತಿವೆ. ರಾಜ್ಯ ಸರ್ಕಾರ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆಯ ಮೊತ್ತವನ್ನು ಬರದ ನೆಪದಲ್ಲಿ ಕಡಿಮೆ ಮಾಡಿದೆ.

ಸಾಲ ಪಡೆದವರಿಗೆ ಮಾರ್ಚ್ ಏಪ್ರಿಲ್ ವರೆಗೆ ಸಾಲದ ಬಡ್ಡಿ ಬೇಡ ನಂತರ ಪಾವತಿಸುವಂತೆ ಆದೇಶ ನೀಡಿದೆ, ಬೇಸಿಗೆಯ ಈ ಎರಡು ತಿಂಗಳ ನಂತರವು ಯಾವ ಬೆಳೆ ಉತ್ಪನ್ನ ಮಾಡಿ ರೈತ ಸಾಲ ಮರುಪಾವತಿಸಬೇಕು ಎಂದು ಅವರು ಕೇಳುತ್ತಾರೆ.

ಇಂಥ ಅಸಂಬದ್ಧ ಭರವಸೆಯಿಂದ ರೈತರ ಬದುಕು ಹಸನಾಗಲು ಹೇಗೆ ಸಾಧ್ಯ? ಎಂದು ಅವರು ಬೇಸರ ವ್ಯಕ್ಯಪಡಿಸುತ್ತಾರೆ. ಫೆಬ್ರುವರಿ 2017ರಂದು ಕೇಂದ್ರ ಬಜೆಟ್‌ನಲ್ಲಿ 10 ಲಕ್ಷ ಕೋಟಿ ನಿಗದಿ ಮಾಡಿ ಶೇ 7ರ ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ತಿಳಿಸಿದೆ.

ಸಕಾಲದಲ್ಲಿ ಪಾವತಿಸಿದರೆ ಶೇಕಡಾ ಮೂರರಷ್ಟು ಬಡ್ಡಿ ರಿಯಾಯಿತಿ ನೀಡುವುದಾಗಿ ಘೋಷಿಸಿರುವುದು ಉತ್ತಮ ಬೆಳವಣಿಗೆ ಎಂದು ರೈತ ಸಂಘ ರಾಜ್ಯ ಉಪಾಧ್ಯಕ್ಷ ವೆಂಕಟನಾರಾಯಣ ಸ್ವಾಮಿ ಹೇಳುತ್ತಾರೆ.ಕೃಷಿಸಾಲಕ್ಕಾಗಿ ಮೀಸಲಿಟ್ಟ ಅನುದಾನ ಸಂಪೂರ್ಣವಾಗಿ ರೈತರಿಗೆ ವಿತರಣೆಯಾದರೆ ಬಜೆಟ್ ಘೋಷಣೆಗೆ ಅರ್ಥ ಬರುತ್ತದೆ ಎನ್ನುತ್ತಾರೆ.

**

ರಾಷ್ಟ್ರೀಕೃತ ಬ್ಯಾಂಕುಗಳೇ ರೈತರಿಗೆ ಸಾಲ ನೀಡಲು ಹಿಂದೇಟು ಹಾಕಿದರೆ ಯೋಜನೆ ಸಫಲತೆ ಹೇಗೆ ಸಾಧ್ಯ. ಸಾಲ ಕೊಡುವಂತೆ ಬ್ಯಾಂಕುಗಳಿಗೆ ಸರ್ಕಾರ ಸೂಚಿಸಬೇಕು.
-ವೆಂಕಟನಾರಾಯಣ ಸ್ವಾಮಿ, 
ರೈತ ಸಂಘ ರಾಜ್ಯ ಉಪಾಧ್ಯಕ್ಷ

**

– ವಡ್ಡನಹಳ್ಳಿ ಭೊಜ್ಯಾ ನಾಯ್ಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT