ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಬಾದ ಕಾವ್ಯ ಸಂಭ್ರಮ

ಇಸ್ಲಾಂ ಪೂರ್ವ ಅರೆಬಿಕ್ ಕಾವ್ಯದ ಚರ್ಚೆ. ಇದು ‘ವಿಶ್ವ ಕಾವ್ಯದಿನ’ (ಮಾರ್ಚ್‌ 21) ವಿಶೇಷ.
Last Updated 18 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಕನಕರಾಜ್ ಆರನಕಟ್ಟೆ
ಮೆಕ್ಕಾದಲ್ಲಿರುವ ಕಾಬಾ ಜಗತ್ತಿಗೇ ಗೊತ್ತು! ಅದು ಇಸ್ಲಾಂ ಧರ್ಮದ ಪವಿತ್ರ ಕಟ್ಟಡ! ಹದಿನೈದು ಶತಮಾನಗಳ ಹಿಂದೆ, ಇಸ್ಲಾಂ ಧರ್ಮ ಅರೇಬಿಯಾದಲ್ಲಿ ಹರಡುವ ಮುಂಚೆ ಅದೊಂದು ಕಾವ್ಯಸಂಭ್ರಮದ ತಾಣವಾಗಿತ್ತು! ನಾಟಕಕ್ಕೆ ಹೇಗೆ ಪ್ರಾಚೀನ ಗ್ರೀಕ್‌ನ ಅಥೆನ್ಸ್ ಸಂಭ್ರಮದ ಕೇಂದ್ರವಾಗಿತ್ತೋ ಹಾಗೆ ಕಾವ್ಯಕ್ಕೆ ಇಸ್ಲಾಂ ಪೂರ್ವದ ಮೆಕ್ಕಾ! 
 
ಕೆಲವು ಇತಿಹಾಸಕಾರರು ತಿಳಿಸುವಂತೆ – ಇಸ್ಲಾಂ ಪೂರ್ವದಲ್ಲಿ ಮೆಕ್ಕಾ, ಅರಬ್ ‘ಬದೂವನ್’ಗಳ (ಬುಡಕಟ್ಟುಗಳ) ಸಾಂಸ್ಕೃತಿಕ ಕೇಂದ್ರವಾಗಿ ರಾರಾಜಿಸಿದೆ. ಹತ್ತಾರು ಬದೂವಿ ಗುಂಪುಗಳು ತಮ್ಮ ತಮ್ಮ ದೇವರುಗಳ ಮೂರ್ತಿಗಳನ್ನು ಅದರೊಳಗೆ ಪ್ರತಿಷ್ಠಾಪಿಸಿದ್ದವಂತೆ. ಇದಕ್ಕಿಂತ ಬಹುಮುಖ್ಯ ವಿಚಾರವೊಂದನ್ನು ಅವುಗಳು ತಿಳಿಸುತ್ತವೆ!

ಅದು ಅರಬ್ ಕಾವ್ಯದ ಸಂಭ್ರಮವಾಗಿ ಕಾಬಾ ಶತಮಾನಗಳ ಕಾಲ ಮೆರೆದಿದೆ ಎನ್ನುವುದು. (ಈ ಕಾಲಘಟ್ಟವನ್ನು ಇಸ್ಲಾಂ ಇತಿಹಾಸಕಾರರು ‘ಅಜ್ಞಾನದ ಯುಗ’ ಎಂದು ದಾಖಲಿಸುತ್ತಾರೆ). 
 
ಇಸ್ಲಾಂ ಪೂರ್ವದ ಅರಬ್ ಬದೂವನ್‌ಗಳು ವರ್ಷದಲ್ಲೊಮ್ಮೆ ತಮ್ಮ ಕುಲದೈವಗಳ ಆಚರಣೆಗೆ ಮೆಕ್ಕಾದಲ್ಲಿ ಸೇರುತ್ತಿದ್ದರಂತೆ! ಪ್ರತಿ ಬದೂವಿಗಳಿಗೂ ಅವರದ್ದೇ ಆದ ಹತ್ತಾರು ದೇವರುಗಳು! ಒಬ್ಬೊಬ್ಬರದು ಒಂದೊಂದು ದಿನ ಆಚರಣೆ! ಈ ಆಚರಣೆಗಳ ನಡುವೆ ಪ್ರತಿ ದಿನವೂ ಕಾವ್ಯಮೇಳ! ಪ್ರತಿ ಬದೂವಿ ಗುಂಪೂ ತಮ್ಮ ತಮ್ಮ ಕವಿಗಳಿಂದ ಕಾವ್ಯಗಳ ಓದಿಸುತ್ತಿದ್ದವು.

‘ತಮ್ಮ ಕವಿಯ ಕಾವ್ಯವೇ ಶ್ರೇಷ್ಠ’ ಎಂದು ಕರೆಸಿಕೊಳ್ಳುವ ಉಮೇದು. ಅದು ಉತ್ತಮ ಕಾವ್ಯವನ್ನು ಬೆಲೆಗಟ್ಟುವ ಹಾಗೂ ಆಸ್ವಾದಿಸುವ ಅಸಲಿ ಕಸುಬಿನ ಕಾವ್ಯಕಮ್ಮಟ. ಎತ್ತ ನೋಡಿದರತ್ತ ಕಾವ್ಯಸಂಭ್ರಮ! ಅರೆಬಿಕ್ ಭಾಷೆಯ ಸುಂದರ ಸುಲಲಿತ ಪದಗಳನ್ನು ಕಾವ್ಯಾತ್ಮಕವಾಗಿ ಕಟ್ಟಿದ ಏಳು ಪದ್ಯಗಳನ್ನು ಶ್ರೇಷ್ಠ ಕಾವ್ಯಗಳೆಂದು ಆರಿಸಲಾಗುತ್ತಿತ್ತು.
 
ಅವುಗಳನ್ನು ಬಂಗಾರದ ಲೇಪನವಿರುವ ಬಟ್ಟೆಯಲ್ಲಿ ಬರೆದು ಇಸ್ಲಾಂ ಪೂರ್ವದ ಕಾಬಾದ ಗೋಡೆಗಳಲ್ಲಿ ನೇತು ಹಾಕುತ್ತಿದ್ದರಂತೆ! ಹೀಗಾಗಿಯೇ ಅರಬ್ ಸಾಹಿತ್ಯದ ಕೆಲವು ಮತ್ತು ಯುರೋಪ್‌ನ ಹಲವು ವಿದ್ವಾಂಸರು ಈ ಕಾವ್ಯಕ್ಕೆ ಜಗತ್ತಿನ ಕಾವ್ಯ ಇತಿಹಾಸದಲ್ಲಿ ಬಹುಮುಖ್ಯ ಸ್ಥಾನ ಕೊಡುತ್ತಾರೆ.
 
‘ಮು ಅಲಖಾತ್’ ಎಂದು ಕರೆಯಲ್ಪಡುವ ಈ ಇಸ್ಲಾಂ ಪೂರ್ವ ಅರೆಬಿಕ್ ಕಾವ್ಯ ಇಂದಿಗೂ ಕೆಲವು ಅರೆಬಿಕ್ ರಾಷ್ಟ್ರಗಳ ಪಠ್ಯಪುಸ್ತಕಗಳಲ್ಲಿ ಉಳಿದಿದೆ. ಯುರೋಪ್, ಅಮೆರಿಕಾಗಳ ಕೆಲವು ವಿಶ್ವವಿದ್ಯಾಲಯಗಳಲ್ಲಿ ಇದರ ಕುರಿತು ಸಂಶೋಧನೆಗಳು ನಡೆಯುತ್ತಲೇ ಇವೆ.
 
ಅವುಗಳು ತಿಳಿಸುವಂತೆ – ಐದು, ಆರನೇ ಶತಮಾನದಲ್ಲಿನ ಈ ಕಾವ್ಯದ ವಿಶೇಷ ಇರುವುದು ಇದರ ಸೆಕ್ಯುಲರ್ ಗುಣದಲ್ಲಿ! ಧರ್ಮ, ದೇವರು, ಮೌಲ್ಯ ಮುಂತಾದ ಸ್ಥಾಪಿತ ಯಥಾರ್ಥಗಳ ಬಗ್ಗೆ ಇವು ಮಾತನಾಡುವುದಿಲ್ಲ, ಬದಲಿಗೆ ಮಾನವನ ಬದುಕನ್ನು ಕೊಂಡಾಡುತ್ತವೆ.

ಈ ಕಾರಣಕ್ಕಾಗಿಯೇ ಇಸ್ಲಾಂ ಚಿಂತಕರು ಈ ಕಾಲವನ್ನು ‘ಜಹ್ಹಿಲಿಯ್ಯ’ ಎನ್ನುತ್ತಾರೆ. ಅಂದರೆ ಕಗ್ಗತ್ತಲ ಕಾಲ, ಅಜ್ಞಾನದ ಯುಗ. ಹುಟ್ಟಿದ ಶಿಶು ಹೆಣ್ಣಾಗಿದ್ದರೆ ಅದನ್ನು ಆ ಚಣವೇ ಕೊಲ್ಲಲಾಗುತ್ತಿತ್ತಂತೆ; ಹೆಣ್ಣು–ಹೆಂಡ–ಹಿಂಸೆ–ಅರಾಜಕತೆಗಳ ದುಷ್ಟ ನರ್ತನವೇ ಇಸ್ಲಾಂ ಪೂರ್ವ ಅರೇಬಿಯ ಎನ್ನುತ್ತದೆ ಇಸ್ಲಾಂ ಚಿಂತನೆ.  
 
ಐದನೇ ಶತಮಾನದ ಅರಬ್ ಬದೂವಿಗಳು ಮೂರ್ತಿ ಆರಾಧಕರು. ಪ್ರತಿ ಬದೂವನ್ ಗುಂಪುಗಳಿಗೂ ಅವರವರದೇ ಆದ ದೇವರುಗಳು ಇದ್ದಂತೆ ವಿಶಿಷ್ಟ ನಿಯಮಗಳು ಇವೆ. ಅಲೆಮಾರಿಗಳಾಗಿದ್ದ ಈ ಬದೂವಿಗಳಿಗೆ ಕೇಂದ್ರ ಅಥವಾ ಸಂಸ್ಥಾನ ಎಂಬುದಿರಲಿಲ್ಲ.
 
ಪ್ರತಿ ಬದೂವಿ ಗುಂಪಿಗೂ ಒಬ್ಬ ಮುಂದಾಳು (ಷೇಯ್‌ಕ್) ಹಾಗೂ ನಿಯಮಗಳಿದ್ದವು. ಬದೂವಿ ಗುಂಪುಗಳ ನಡುವೆ ಕೊಡು–ಕೊಳುವುದು ಇದ್ದರೂ ಕೆಲವೊಮ್ಮೆ ಹಿಂಸೆ ಭುಗಿಲೇಳುತ್ತಿತ್ತು. ಕಿರು ಯುದ್ಧಗಳು ಸಂಭವಿಸುತ್ತಿದ್ದವು.
 
ಈ ಯುದ್ಧ, ಗೆಲುವು–ಸೋಲು, ಬವಣೆ, ಖುಷಿ, ಆತಿಥ್ಯಗಳು ಮೌಖಿಕವಾಗಿ ದಾಖಲಾಗುತ್ತಿದ್ದವು. ಹೇಗೆಂದರೆ, ಪ್ರತಿ ಬದೂವಿ ಗುಂಪಿನಲ್ಲೂ ಕವಿಗಳು ಇರುತ್ತಿದ್ದರು. ತಮ್ಮ ಬದೂವಿಗಳ ಇತಿಹಾಸ, ಹೋರಾಟ, ಬದುಕುಗಳ ಬಗ್ಗೆ ಹಾಡು ಕಟ್ಟುತ್ತಿದ್ದ ಕವಿಗಳಿಗೆ ಬದೂವಿ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನವಿತ್ತು.
 
ಕಾವ್ಯ ಕಟ್ಟುವುದರಲ್ಲೂ ಪೈಪೋಟಿ! ಪ್ರತಿ ಬದೂವಿ ಗುಂಪೂ ಉತ್ತಮ ಕವಿಯನ್ನು ಹೊಂದಲು ತವಕಿಸುತ್ತಿದ್ದವು. ಆ ಕವಿಗೆ ತಮ್ಮ ಬದೂವಿ ಗುಂಪಿನಲ್ಲಿ ನಾಯಕನ ನಂತರದ ಸ್ಥಾನ ನೀಡಿ ಗೌರವಿಸಲಾಗುತ್ತಿತ್ತು! 
 
ಬದೂವಿಗಳು ವರ್ಷದ ಎಲ್ಲ ದಿನಗಳಲ್ಲೂ ಕಿತ್ತಾಡುತ್ತಿರಲಿಲ್ಲ. ಅದೊಂದು ವಸಂತ ಕಾಲ ಪ್ರತಿ ವರ್ಷವೂ ಬರುತ್ತಿತ್ತು. ವಿಸ್ತಾರ ಮರುಭೂಮಿಯಲ್ಲಿ ಹರಡಿಕೊಂಡಿದ್ದ ಬದೂವಿಗಳು ವರ್ಷಕ್ಕೊಮ್ಮೆ ಮೆಕ್ಕಾದಲ್ಲಿ ಒಂದಾಗುತ್ತಿದ್ದರು. 5–6ನೇ ಶತಮಾನದ ಮೆಕ್ಕಾ (ಇಸ್ಲಾಂ ಪೂರ್ವದ) ಒಂದು ವ್ಯಾಪಾರಿ ನಗರ ಮಾತ್ರವಲ್ಲದೆ, ಸಮಸ್ತ ಅರಬ್ ಬದೂವನ್ ದೈವಗಳ ಕೇಂದ್ರವಾಗಿತ್ತು.
 
ಅಂದಿನ ಮೆಕ್ಕಾದ ಕಾಬಾ ಸುಮಾರು 360 ದೇವರುಗಳ ಮೂರ್ತಿಗಳನ್ನು ಹೊಂದಿತ್ತು ಎನ್ನಲಾಗುತ್ತದೆ. ಹುಬಲ್, ಶಮ್ಸ್, ಮನತ್, ದುಶಾರ, ಅಲ್ ಉಜ – ಹೀಗೆ, ಹಲವು ಹೆಣ್ಣು ಗಂಡು ದೈವಗಳು. ಮುಖ್ಯವಾಗಿ ಕಾಬಾ ಹುಬಲ್ ದೇವರಿಗೆ ಮುಡಿಪಾಗಿದ್ದಿದೆ. ಇಲ್ಲೊಂದು ಸ್ವಾರಸ್ಯಕರ ವಿಷಯವೊಂದನ್ನು ಹೇಳಿ ಇಸ್ಲಾಂ ಪೂರ್ವ ಅರಬ್ ಕಾವ್ಯಕ್ಕೆ ಬರುತ್ತೇನೆ. 
 
ಇಸ್ಲಾಂ ಅರೇಬಿಯಾದಲ್ಲಿ ಹರಡಿದ ಸಮಯ, ಹಲವು ಬದೂವಿ ಸಮೂಹಗಳು ತಮ್ಮ ತಮ್ಮ ದೇವರುಗಳನ್ನು ತೊರೆದು ಇಸ್ಲಾಂ ಧರ್ಮ ಸ್ವೀಕರಿಸುತ್ತಾರೆ. ತಮ್ಮ ಕುಲದೈವಗಳ ಮೂರ್ತಿಗಳನ್ನು ನಾಶಪಡಿಸುತ್ತಾರೆ. ಇಸ್ಲಾಂ ಮೂರ್ತಿ ಪೂಜೆಯನ್ನು ನಿಷೇಧಿಸುವ ಕಾರಣ, ಅನೇಕ ಬುಡಕಟ್ಟುಗಳು ತಮ್ಮ ಆಚರಣೆಗಳಿಂದ ಹೊರಬಂದು ಮೂರ್ತಿ ಆರಾಧನೆಯನ್ನು ಸಂಪೂರ್ಣವಾಗಿ ಕೈಬಿಡುತ್ತಾರೆ.

ಆದರೆ ಬದೂವಿ ಗುಂಪೊಂದು ತಮ್ಮ ಆಚರಣೆ, ದೇವರುಗಳ ಬಿಡಲು ಒಪ್ಪದೆ ತಮ್ಮ ಕುಲದೈವದ ಮೂರ್ತಿಯನ್ನು ಎತ್ತಿಕೊಂಡು ಓಡಿಹೋಗುತ್ತಾರೆ. ಆ ಬದೂವಿಗಳ ದೈವದ ಹೆಸರು ಮನಾತ್. ಆ ಗುಂಪು ಮತ್ತು ಮೂರ್ತಿ ಸುಮಾರು ಶತಮಾನಗಳು ಸಿಗಲೇ ಇಲ್ಲವಂತೆ. ಮುಂದೆ ಕಾಲಾನುಕ್ರಮದಲ್ಲಿ ಇಸ್ಲಾಂ ಬೆಳೆದು ಅರೇಬಿಯಾ, ಆಫ್ರಿಕಾ, ಏಷ್ಯಾಗಳಲ್ಲಿ ಪಸರಿಸಿಕೊಳ್ಳುತ್ತದೆ.

ಈ ನಡುವೆ ಓಡಿಹೋದ ಬದೂವಿ ಗುಂಪಿನ ಕಥೆಯೂ ತಲತಲಾಂತರವಾಗಿ ಉಳಿಯುತ್ತಲೇ ಹೋಗುತ್ತದೆ. 10ನೇ ಶತಮಾನದಲ್ಲಿ ಮಧ್ಯ ಏಷ್ಯಾದಿಂದ ಹಿಂದೂಸ್ತಾನದ ಕಡೆ ಸೈನ್ಯವೆತ್ತಿ ಬರುವ ಮಹಮೂದ್ ಘಜ್ನಿ ‘ಸೋಮನಾಥ ದೇವಾಲಯ’ದ ವಿಷಯ ತಿಳಿಯುತ್ತದೆ.  

ಆತನ ಜೊತೆ ದಾಳಿಗೆ ಮುಂದಾಳತ್ವ ವಹಿಸಿದ್ದ ಆಸ್ಥಾನ ಕವಿಯೂ ಇತಿಹಾಸಕಾರನೂ ಆದ ಫರೂಕಿ ಸಿಸ್ಥಾನಿ ಇದನ್ನು ತನ್ನ ಪುಸ್ತಕದಲ್ಲಿ ಉಲ್ಲೇಖಿಸಿದ್ದಾನೆ ಎನ್ನಲಾಗುತ್ತಿದೆ.

ಸೋಮನಾಥ ದೈವವನ್ನು ಇಸ್ಲಾಂ ಪೂರ್ವ ಬದೂವಿಗಳ ಮನಾತ್ ದೇವರೆಂದು ಇಬ್ಬರೂ ಭಾವಿಸುತ್ತಾರೆ. ಮನಾತ್ ಎಂಬ ಆ ಬದೂವಿಗಳ ಕಪ್ಪು ಹೆಣ್ಣು ದೇವತೆಯೇ ಇದು, ಸು–ಮನಾತ್! ಕಪ್ಪು ಆಕೃತಿಯ ಲಿಂಗವನ್ನು ಮನಾತ್ ದೈವದ ಮೂರ್ತಿ ಎಂದುಕೊಂಡು ಆ ದೇವಾಲಯವನ್ನು ಧ್ವಂಸಗೊಳಿಸುತ್ತಾರೆ.
 
ದೇವಾಲಯವನ್ನು ಲೂಟಿ ಮಾಡಿ, ಲಿಂಗದ ಚೂರುಗಳನ್ನು ಪರ್ಷಿಯಾಕ್ಕೆ ಹೊತ್ತೊಯ್ಯುತ್ತಾರೆ. ‘ಶತಮಾನಗಳ ಹಿಂದೆ ಅರೇಬಿಯಾದಿಂದ ಓಡಿಹೋದ ಬದೂವಿಗಳ ದೈವ, ಇದೊ  ಸು–ನಾತ್! ತುಳಿಯಿರಿ!’ ಎಂದು ಹಾದಿಗಳಲ್ಲಿ ಲಿಂಗದ ಚೂರುಗಳನ್ನು ಚೆಲ್ಲುತ್ತಾನಂತೆ! ಖಲೀಫರಿಂದ ಇದಕ್ಕಾಗಿ ಬಿರುದು ಬಿನ್ನಾಣಗಳ ಪಡೆಯುತ್ತಾನಂತೆ!

ಇಸ್ಲಾಂ ಪೂರ್ವ ಅರೆಬಿಕ್ ಇತಿಹಾಸವನ್ನು ಅರಿಯದ ನಮ್ಮಲ್ಲಿ ಕೆಲವರು ‘ನಮ್ಮ ಧರ್ಮದ ಮೇಲೆ ದಾಳಿ ಎಸಗಿದ, ದೇವಸ್ಥಾನವನ್ನು ಧ್ವಂಸಗೊಳಿಸಿದ’ ಎಂದು ಈ ಕೃತ್ಯವನ್ನು ತಮ್ಮ ಮೂಗಿನ ನೇರಕ್ಕೆ ಅರ್ಥೈಸಿಕೊಳ್ಳುತ್ತಾರೆ.
 
ವರ್ಷದಲ್ಲೊಮ್ಮೆ ಮೆಕ್ಕಾದಲ್ಲಿ ಸೇರಿ ದೇವರ ಉತ್ಸವವನ್ನು ಮಾಡುತ್ತಿದ್ದ ಆಗಿನ ಬದೂವಿಗಳು ಅದೇ ಸಮಯದಲ್ಲಿ ಕಾವ್ಯ ಉತ್ಸವವನ್ನೂ ಮಾಡುತ್ತಿದ್ದರಂತೆ. ಪ್ರತಿ ಬದೂವಿ ಗುಂಪೂ ತಮ್ಮ ಸರದಿ ಬಂದಾಗ ತಮ್ಮ ಕವಿಶ್ರೇಷ್ಠನನ್ನು ಕಳುಹಿಸುತ್ತಿದ್ದವು. ಪ್ರತಿ ದಿನವೂ ಕಾವ್ಯೋತ್ಸವ! ಜೊತೆಗೆ ಮದ್ಯ! ಸುರಪಾನದ ಜೊತೆ ಕಾವ್ಯದ ಸಾಲುಗಳು! ಕಾವ್ಯ ಕೇಳಿದ್ದೇ ತಮ್ಮ ಅಭಿಪ್ರಾಯ ತಿಳಿಸಬೇಕಿತ್ತು.
 
ಲಹರಿ, ಪ್ರಾಸ, ವಸ್ತು ಮತ್ತಿತರ ಮಾನದಂಡಗಳ ಮೂಲಕ ಉತ್ತಮ ಕಾವ್ಯವನ್ನು ಆಯ್ಕೆ ಮಾಡಲಾಗುತ್ತಿತ್ತು. ಹಾಗೆ ಆರಿಸಿದ ಕಾವ್ಯಗಳನ್ನು ಮೀರಿಸಲು ಪ್ರತಿ ವರ್ಷವೂ ಆಹ್ವಾನವಿರುತ್ತಿತ್ತು. ಕಾವ್ಯ ಓದುವಾಗ ಮುಗಿಲ ಮುಟ್ಟುವ ಕರಾಡತನ! ಹೀಗೆ ಕಾವ್ಯದ ಸೆಲೆಬ್ರೇಷನ್ ನಡೆಯುತ್ತಾ ಬದೂವಿ ಬದುಕುಗಳು ಪ್ರತಿ ವರ್ಷವೂ ಹೊಸದಾಗಿ ಅರಳಿವೆ! 
 
ಬದೂವಿ ಬದುಕಿನ ಮುಖ್ಯ ಅಂಗವಾಗಿದ್ದ ಕಾವ್ಯ ಬಹುತೇಖ ಮೌಖಿಕವಾದುದು. ಸ್ಮೃತಿಯ ಮೂಲಕ ತಲೆಮಾರುಗಳಿಗೆ ರವಾನೆಯಾಗಿದೆ. ಅರೇಬಿಯಾದಲ್ಲಿ ಇಸ್ಲಾಂ ಧರ್ಮ ಹುಟ್ಟುವ ಒಂದು ಶತಮಾನದ ಹಿಂದೆಯಷ್ಟೇ ಈ ಕಾವ್ಯಕ್ಕೆ ಬರಹ ರೂಪಕ್ಕಿಳಿಯುವ ಅದೃಷ್ಟ ದಕ್ಕಿದೆ.

ಇಸ್ಲಾಂ ಪೂರ್ವ ಅರಬ್ಬರು ಏಳು ಕವಿಗಳ ಪದ್ಯಗಳನ್ನು ಅತಿ ಶ್ರೇಷ್ಠ ಪದ್ಯಗಳೆಂದು ಪರಿಗಣಿಸಿ, ಆ ಏಳು ಪದ್ಯಗಳನ್ನು ಚೀನಾದ ವ್ಯಾಪಾರಿಗಳಿಂದ ಕೊಂಡ ಬಂಗಾರ ಲೇಪಿತ ಬಟ್ಟೆ ಮತ್ತು ಈಜಿಪ್ಟ್‌ನಿಂದ ತಂದ ಬಂಗಾರದ ಪೆನ್ನುಗಳ ಮೂಲಕ, ಅವುಗಳನ್ನು ಅಕ್ಷರ ರೂಪಕ್ಕಿಳಿಸಿದರು.

ಆ ಲಿಖಿತ ಕಾವ್ಯವನ್ನು ತಮ್ಮ ಕುಲದೈವಗಳ ಪವಿತ್ರ ಆಗರವಾದ ಮೆಕ್ಕಾದಲ್ಲಿನ ಕಾಬಾದ ಗೋಡೆಗಳಲ್ಲಿ ನೇತುಹಾಕಿದ್ದರಂತೆ! ಬದುಕಿನ ಒಂದು ಭಾಗವನ್ನಾಗಿ ಕಾವ್ಯವನ್ನು ಪರಿಗಣಿಸಿದ್ದ ಆಗಿನ ಬದೂವಿಗಳು ಈ ಕಾರಣಕ್ಕಾಗಿಯೇ ಪ್ರಪಂಚದ ಇತಿಹಾಸದಲ್ಲಿ ವಿಶಿಷ್ಟವಾಗಿ ನಿಲ್ಲುತ್ತಾರೆ, ಮತ್ತು ಜಗತ್ತಿನ ಕಾವ್ಯ ಇತಿಹಾಸದಲ್ಲಿ ಅಳಿಸಿಹಾಕಲಾಗದ ಛಾಪು ಮೂಡಿಸಿದ್ದಾರೆ. 
 
‘ಮು ಅಲಖಾತ್’ ಎಂದು ಕರೆಯಲಾಗುವ ಆ ಏಳು ಪದ್ಯಗಳ ಅನನ್ಯತೆಗೆ ಹಲವಾರು ಕಾರಣಗಳಿವೆ. ಪೂರ್ಣ ಲೌಕಿಕ ಕಾವ್ಯಗಳಾಗಿರುವ ಇವುಗಳಲ್ಲಿ ಎಲ್ಲೂ ಧರ್ಮ, ದೇವರು, ಸತ್ಯ, ನೀತಿ, ನಿಯಮ ಇನ್ನಿತರ ಮನುಷ್ಯ ಸ್ಥಾಪಿತ ಸತ್ಯಗಳು ಇಲ್ಲ. ಯುರೋಪಿನ ಕೆಲವು ವಿದ್ವಾಂಸರು ಈ ಕಾವ್ಯಗಳನ್ನು ಪ್ರಾಚೀನ ಜಗತ್ತಿನ ಸೆಕ್ಯುಲರ್ ಕಾವ್ಯಗಳಲ್ಲಿ ಮೊದಲನೆಯ ಸಾಲಿನವು ಎನ್ನುತ್ತಾರೆ.
 
ಇಸ್ಲಾಂ ಪೂರ್ವದ ಅರಬ್ ಬದೂವಿಗಳಿಗೆ ಸ್ವರ್ಗ–ನರಕ ಮತ್ತಿತರ ಭಯಗಳಿರಲಿಲ್ಲ. ಅವರಿಗೆ ಇದ್ದುದು ಒಂದೇ: ಸದ್ಯದ ಬದುಕು ಮತ್ತದರ ಸವಿರುಚಿ! ಅಲ್ಲಿ ದೇವರು ಹೆಸರಿಗಷ್ಟೆ. ಅಸೀಮ ಧೈರ್ಯ, ಅದ್ದೂರಿ ಆತಿಥ್ಯ, ಎಂಟೆದೆಯ ಹುರುಪು, ಕಷ್ಟಗಳ ಎದುರಿಸುವ ಸಹಿಷ್ಣುತೆ, ಪ್ರೀತಿಯ ಒರತೆ – ಇವೇ ಆಗಿನ ಬದೂವಿ ಬದುಕಿನ ಮೌಲ್ಯಗಳು! ಅಲ್ಲಿ ವ್ಯಭಿಚಾರ, ಮದ್ಯಪಾನ, ಜೂಜುಗಳು ನಿಷಿದ್ಧವಲ್ಲ, ಮೌಲ್ಯದ ಅಳತೆಗೋಲಲ್ಲ ಅವು, ಬದಲಿಗೆ ಸಂಭ್ರಮ! 
 
ಯುರೋಪ್ ಒಳಗೊಂಡಂತೆ ಜಗತ್ತಿನ ಬಹುತೇಕ ಕಾವ್ಯಗಳು 5–6ನೇ ಶತಮಾನದಲ್ಲಿ ಮೌಲ್ಯ, ನ್ಯಾಯ, ಸತ್ಯ ಎಂಬೆಲ್ಲ ಮಾತನಾಡುತ್ತಿದ್ದರೆ ಅರಬ್ಬರ ಇಸ್ಲಾಂ ಪೂರ್ವ ಕಾವ್ಯಗಳು ರಕ್ತಮಾಂಸ ತುಂಬಿದ ಬದುಕಿನ ನೇರ ನಿತ್ಯಗಳನ್ನು ಹಾಡುತ್ತಿದ್ದವು.
 
ಈ ‘ಮು ಅಲಖಾತ್’ ಪದ್ಯಗಳು ಮನುಷ್ಯನ ಕಣ್ಣಿಗೆ, ಮನಸ್ಸಿಗೆ ನಾಟುವುದನ್ನು ಹಾಡುತ್ತಿದ್ದವು; ಖುಷಿ, ಬೇಸರ, ವಾಂಛೆ, ನೋವು, ನಲಿವು, ಸೇಡು, ಸೌಂದರ್ಯ ಮುಂತಾದ ಮನುಷ್ಯನ ಮೂಲಗುಣಕ್ಕೆ ಹತ್ತಿರವಾದ ವಸ್ತುಗಳನ್ನು ಪದಗಳಲ್ಲಿ ಕಟ್ಟುತ್ತಿದ್ದವು! ಮಿಷೆಲ್ ಫುಕೊ ಹೇಳುವ ಸಹಜ ಮಾನವನ ಕಾವ್ಯ ಅದು, ಯಾವುದೇ ಬಾಹ್ಯಶಕ್ತಿಗಳಿಂದ ಕಟ್ಟಲಾದ ಚಿತ್ರಣಗಳಲ್ಲ ಅವು! ಯುರೋಪ್‌ನಲ್ಲಿ ಇಂಥ ಕಾವ್ಯ ಹುಟ್ಟಿದ್ದು 19–20ನೇ ಶತಮಾನದಲ್ಲಿ.

ಜಾನ್ ಡನ್ ಮುಂತಾದ ತಾತ್ವಿಕ ಕವಿಗಳು ಹದಿನಾಲ್ಕನೇ ಶತಮಾನದಲ್ಲಿ ಇದ್ದರೂ ಅವರುಗಳು ಕ್ರಿಶ್ಚಿಯನ್ ಧರ್ಮದ ತಿರುಳಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಹತ್ತೊಂಬತ್ತನೇ ಶತಮಾನದ ಮಾರ್ಕ್ ಡೆ ಸೇಡ್,  ಚಾರ್ಲ್ಸ್ ಬೋದಿಲೇರ್, ಜ಼ಾನ್ ಜೆನೆ, ಮುಂತಾದ ಕ್ರಾಂತಿ ಕವಿಗಳ ತಾತಂದಿರು ಈ ‘ಮು–ಅಲಾಖತ್’ ಕವಿಗಳು!
 
ಪದ್ಯಗಳನ್ನು ಅರೆಬಿಕ್‌ನಲ್ಲಿ ‘ಗಸೀದ’ ಎನ್ನಲಾಗುತ್ತದೆ. ‘ಮು–ಅಲಖಾತ್‌’ನ ಈ ಏಳು ಗಸೀದಾಗಳು ತಲಾ ನೂರರಿಂದ ನೂರಿಪ್ಪತ್ತು ಸಾಲಿನವು. ಅಂತಿಮ ಪ್ರಾಸ, ಆರಂಭ ಪ್ರಾಸ ಎಂದು ಗೇಯ ಗುಣವುಳ್ಳ ಇವುಗಳು ಮೂರು ಭಾಗಗಳಾಗಿ ತಮ್ಮನ್ನು ತಾವು ವಿಂಗಡಿಸಿಕೊಂಡಿವೆ.
 
ನಸಿಬ್, ರಹಿಲ್, ಫಕರ್ ಎಂಬ ಮೂರು ಭಾಗಗಳು ಪ್ರತ್ಯೇಕವಾಗಿ ನಿಂತರೂ ಒಮ್ಮುಖವಾಗಿ ಚಲಿಸುವಂತಹವು. ಮೊದಲ ಭಾಗವಾದ ‘ನಸಿಬ್‌’ನಲ್ಲಿ ಪ್ರೀತಿ–ಕಾಮಗಳ ನಿವೇದನೆ ಇದ್ದರೆ, ‘ರಹಿಲ್‌’ನಲ್ಲಿ ಬೆನ್ನಟ್ಟುವ ಅಭಿವ್ಯಕ್ತಿ, ‘ಫಕರ್‌’ನಲ್ಲಿ ಹೊಗಳುವ ಆತ್ಮಸ್ತುತಿ. ಹೀಗಿದ್ದರೂ ಏಳು ಕಾವ್ಯಗಳು ಏಳು ಬಗೆ! ಏಕೆಂದರೆ ಏಳು ಕವಿಗಳ ಅನುಭವಗಳು ಒಂದಕ್ಕಿಂತ ಒಂದು ಭಿನ್ನ!
 
ಈ ಏಳು ಕವಿಗಳಲ್ಲಿ ಮೊದಲನೆಯವನು ಉಮ್ರು ಅಲ್ ಖೈಸ್, ಬಹು ರಸಿಕ! ಹೆಣ್ಣು–ಹೆಂಡ–ಜೂಜು ಇವುಗಳೇ ಅವನ ಬದುಕು! ಇಂದಿನ ಯೆಮೆನ್ ದೇಶದ ಒಂದು ಭಾಗವನ್ನು – ಅಂದಿನ ಬಹು ಸಂಪತ್ತಿನ ರಾಷ್ಟ್ರ– ಆಳುತ್ತಿದ್ದ ಖಿಂದ ರಾಜಮನೆತನದ ಕುಡಿ ಈ ಅಲ್ ಖೈಸ್. ತನ್ನ ಮಗ ಯಥೇಚ್ಛ ಮದ್ಯಮಾನಿನಿಯರ ಸಹವಾಸದಿಂದ ರಾಜ್ಯವನ್ನು ಹಾಳುಮಾಡಿಬಿಟ್ಟಾನೆಂದು ರಾಜ ಇವನನ್ನು ಗಡೀಪಾರು ಮಾಡುತ್ತಾನೆ.
 
ತನ್ನದೇ ನಾಡಿನಿಂದ, ತನ್ನ ತಂದೆಯಿಂದಲೇ ಗಡೀಪಾರಿಗೆ ಒಳಗಾದ ಉಮ್ರು ಅರೇಬಿಯಾದ ಮರಳುಗಾಡಿನತ್ತ ಪಯಣ ಶುರು ಮಾಡುತ್ತಾನೆ. ಮುಂದೆ ಅದುವೇ ಇತಿಹಾಸವಾಗುತ್ತದೆ.

ಮರುಭೂಮಿಗಳ ದಿನ್ನೆಗಳನ್ನೇರಿ, ಓಯಸಿಸ್ ನೀರು ಕುಡಿಯುತ್ತ ಸಾಗಿದ ಹಾದಿಗಳ ತುಂಬೆಲ್ಲ ಇವನ ತಾರುಣ್ಯದ ಸಾಹಸಗಳೇ! ಮರುಭೂಮಿಗಳಲ್ಲಿ ಗುಢಾರ ಹಾಕಿಕೊಂಡಿದ್ದ ಬದೂವನ್‌ಗಳ ಮತ್ತು ಓಯಸಿಸ್ ಸನಿಹದಲ್ಲಿ ಊರು ಕಟ್ಟಿಕೊಂಡಿದ್ದ ಅರಬ್ ನಗರವಾಸಿ (ಹದರಿ)ಗಳ ನಡುವೆ ತನ್ನ ಕಾವ್ಯ, ಒಗಟುಗಳ ಮೂಲಕ ಈತ ಹೆಸರುವಾಸಿಯಾಗಿದ್ದಾನೆ.
 
ಇವನು ಕೇಳುತ್ತಿದ್ದ ಒಗಟುಗಳಿಗೆ ಉತ್ತರಿಸಲಾಗದೆ ತತ್ತರಿಸಿದವರೇ ಅನೇಕ. ‘ಮದುವೆ ಮಾಡಿಕೊಳ್ಳುವ ಪ್ಲ್ಯಾನ್ ಗೀನ್ ಇದೆಯಾ ಹೇಗೆ? ಹೀಗೆ ಉಂಡಾಡಿ ಗುಂಡನಾಗಿ ಸುತ್ತುತ್ತ ನಿನ್ನ ಪ್ರಖಂಡ ಶಕ್ತಿಯನ್ನು ನಿನ್ನಲ್ಲೇ ಕೊನೆಗೊಳಿಸುವೆಯಾ?’ ಎಂದು ಹಲವರು ಕೇಳುತ್ತಿದ್ದರಂತೆ.
 
ಇಂಥ ಪ್ರಶ್ನೆಗಳಿಗೆ ನಗುತ್ತಿದ್ದ ಉಮ್ರು – ‘ನನ್ನ ಒಗಟಿಗೆ ಯಾವ ಹೆಣ್ಣು ಉತ್ತರಿಸುತ್ತಾಳೊ ಅವಳನ್ನು ಮದುವೆಯಾಗುತ್ತೇನೆ’ ಎನ್ನುತ್ತಿದ್ದನಂತೆ. ಅವನ ಒಗಟನ್ನು ಬಿಡಿಸಲಾಗದೆ ದೇಹವನ್ನು ಅವನಿಗೆ ಕೊಟ್ಟು ಅಸಹಾಯಕರಾದ ಹೆಣ್ಣುಗಳು ಅಸಂಖ್ಯ ಎನ್ನುತ್ತಾರೆ ಕೆಲವು ಸಂಶೋಧಕರು.

ಅವನ ಒಗಟು ಹೀಗಿತ್ತು: ‘ಎರಡು, ನಾಲ್ಕು, ಎಂಟು’. ಇದನ್ನು ಬಿಡಿಸಿ ಹೇಳಬೇಕಿತ್ತು. ಈ ಭೂಮಿಯ ಮೇಲಿರುವ ಬಹುತೇಕ ಎಲ್ಲವನ್ನೂ ಹೇಳಿ ನೋಡಿದರು. ಆತ ನಗುತ್ತಿದ್ದನೇ ವಿನಾ ಒಪ್ಪಿಕೊಳ್ಳಲಿಲ್ಲ. ಯಾರೊಬ್ಬರೂ ಅವನ ಒಗಟು ಬಿಡಿಸಲಾಗಲಿಲ್ಲ.
 
ಅಸಾಧಾರಣ ವ್ಯಕ್ತಿಯಾಗಿ ಮಿಂಚುತ್ತಿದ್ದ ಇವನ ಈ ಒಗಟನ್ನು ಬಿಡಿಸುವ ಹೆಣ್ಣೊಬ್ಬಳು ಅಂತೂ ಬಂದಳು! ಅವಳು ಒಂದು ಬದೂವಿ ಗುಂಪಿನ ಷೇಯ್‌ಕ್‌ನ ಮಗಳು. ಖೈಸ್ ಆಕೆಯ ಉತ್ತರಕ್ಕೆ ಸೋತುಹೋದ.

‘ಎರಡು, ನಾಲ್ಕು, ಎಂಟು’ ಒಗಟಿನ ಅರ್ಥವನ್ನು ಆಕೆ ಹೀಗೆ ಹೇಳಿದಳು: ‘ಹೆಣ್ಣು, ಆಡು, ತೋಳ’. ಸೃಷ್ಟಿಯ ಮೂಲ ಅವು – ಹಾಲುಣಿಸುವ, ಹಸಿವ ತಣಿಸುವ ತಾಣಗಳು! ಉಮ್ರು ಅಲ್ ಖೈಸ್ ಆಕೆಯನ್ನು ಮದುವೆಯಾದ! ಅರೇಬಿಯಾದ ನಜ್ದ್ ಭಾಗದಲ್ಲಿ ಸುಮಾರು ವರ್ಷಗಳ ಕಾಲ ತಂಗಿದ್ದ ಆತ ತನ್ನ ರೋಮಾಂಚಕ ಜೀವನವನ್ನು ಸಾಗಿಸುತ್ತ ಕಾವ್ಯ ರಚಿಸುತ್ತಾನೆ. ಈ ಮಧ್ಯೆ ಹೆಂಡತಿ ತೀರಿಹೋಗುತ್ತಾಳೆ.
 
ಕುಡಿತ, ಕಾವ್ಯ, ಹೆಣ್ಣಿನ ಮಾಯೆಯಲ್ಲಿದ್ದ ಈತ ಒಂದು ದಿನ ಎಲ್ಲವನ್ನು ಬಿಟ್ಟು ಸಿಡಿದು ನಿಲ್ಲುತ್ತಾನೆ. ತನ್ನ ತಂದೆಯನ್ನು ವಿರೋಧಿ ಬದೂವಿ ಗುಂಪಿನವರು ಕೊಂದು ಖಿಂದ ರಾಜ್ಯವನ್ನು ವಶಪಡಿಸಿಕೊಂಡ ಸುದ್ದಿ ತಲುಪುತ್ತದೆ. ಇವನು ಅರೇಬಿಯಾದಿಂದ ಹೊರಟು, ಬೆಟ್ಟಗಳ ಹತ್ತಿ ಇಳಿದು ಖಿಂದ ತಲುಪಿ, ಸೈನ್ಯವನ್ನು ಕಟ್ಟಿ, ವಿರೋಧಿಗಳನ್ನು ಮಣಿಸುತ್ತಾನೆ. ಈ ನಡುವೆ ಅವನು ಬರೆದ ಕಾವ್ಯ ಪ್ರಾಚೀನ ಅರಬ್ ಸಾಹಿತ್ಯದಲ್ಲಿ ಅಳಿಸಲಾಗದ ಸ್ಥಾನವನ್ನು ಪಡೆದಿರುತ್ತದೆ. 
 
ಉಮ್ರು ಕಾವ್ಯ ಮುಖ್ಯವಾಗುವುದು ಸ್ವಚ್ಛಂದ ಬದುಕಿನ ಲಯಗಳಿಗೆ ಮಾತ್ರವಲ್ಲ, ಬದಲಿಗೆ ಅವನು ಪ್ರತಿ ಕಾವ್ಯದಲ್ಲೂ ಹಂಬಲಿಸಿದ ಸ್ವಾತಂತ್ರ್ಯಕ್ಕಾಗಿ! ಸ್ವಾತಂತ್ರ್ಯ ಎನ್ನುವುದು ಅವನಿಗೆ ವ್ಯಕ್ತಿನಿಷ್ಠವಾದುದಲ್ಲ, ಅದು ಸಕಲ ಮಾನವರ ಸ್ವಾತಂತ್ರ್ಯ. ಈ ಕಾರಣಕ್ಕಾಗಿಯೇ ಇರಾಖ್‌ನ ಬರಹಗಾರ ಮದ್ದಾರ್ ಅಲ್ ಸಮ್ಮಾರಿ ಈತನನ್ನು ‘ಸ್ವಾತಂತ್ರ್ಯದ ಕವಿ’ ಎನ್ನುತ್ತಾನೆ. ಸಮಕಾಲೀನ ಅರಬ್ ಸಾಹಿತ್ಯದ ಮೇರು ಕವಿ ಅದೂನಿಸ್ ಇವನನ್ನು ‘ಕವಿಗಳ ಕವಿ’ ಎನ್ನುತ್ತಾನೆ. ಅದೇ ಸಮಯದಲ್ಲಿ ಇಸ್ಲಾಂ ಪಂಡಿತರು ಇವನನ್ನು ‘ಅಜ್ಞಾನದ ಪರಮಾವಧಿ’ ಎನ್ನುತ್ತಾರೆ. ಇವನ ಒಂದು ಪದ್ಯದ ಆರಂಭ ಹೀಗಿದೆ:
 
ನಿಲ್ಲಿ ಸರೀಕರೆ
ಇಲ್ಲೇ ನಿಲ್ಲಿ, ಖಾಸಗೀ ಬಿಡುವ ನನಗೆ ದಯಪಾಲಿಸಿ
ನನ್ನ ಪ್ರೇಯಸಿಯ ನೆನಪಿಸಿಕೊಳ್ಳಲು...
 ನೀವಿಂದಿಗೂ ಕಾಣಬಹುದು
ಅದೊ ಅವಳ ಗುಡಾರದ ಗುರುತುಗಳ
ತೆಂಕಣದ ಸುಳಿಗಾಳಿ, ಬಡಗಣದ ನಡುಗುವ ಮುದಿಗಾಳಿಗೂ ಅಲುಗಾಡದ್ದು...
ಅವಳು ಉನೈಜ಼
ಈ ಉನೈಜಾಳನ್ನು ಕಾಣುವ ಮುಂಚೆ
ನಾ ಈರ್ವರಿಗಾಗಿ ಅತ್ತಿದ್ದೆ
ಅವರಿಬ್ಬರೂ ಇವಳಂತೆಯೇ ಸುಂದರಿಯರು
ಚಂಪಕ ಕಸ್ತೂರಿಯ ಸೂಸುತ್ತಿದರು, ನಡೆದಾಡುವಾಗ
ಮಂದ ಮಾರುತವೊಂದು ಕಂಪಿನ ಲವಂಗವ ಹೊತ್ತು ತಂದಂತೆ!
ಕಣ್ಣೀರ ಹನಿಗಳು ಎದೆಗೆ ತೊಟ್ಟಿಕ್ಕುತ್ತಿವೆ
ಕಳೆದ ಪ್ರೇಮ ಗಳಿಗೆಗಳು ಗಮಗುಟ್ಟುತ್ತಿವೆ
ಗೆಳೆಯರೆ,
ಕಣ್ಣೀರು ನನ್ನ ಖಡ್ಗವನ್ನೂ ತೋಯಿಸುತ್ತಿದೆ
ಖಡ್ಗವೂ ಮೆತುವಾಗುತ್ತಿದೆ, ನನ್ನ ಪ್ರೀತಿಯಂತೆ!
 
ಉಮ್ರು ಅಲ್ ಖೈಸ್‌ನ ನಂತರ ತರಾಫ, ಜ಼ೊಹರ್, ಲೆಬಿಡ್, ಅಂತಾರಾ, ಇಬ್ನ್ ಕೊಲ್ತೊಮ್ ಹಾಗೂ ಎಲ್ ಹರೀತ್ ‘ಮು–ಅಖಾತ್‌’ನ ಕವಿಗಳು. ಬಂಗಾರ ಕಾವ್ಯದ ಗಾರುಡಿಗರಾದ ಇವರಲ್ಲಿ ಕೊನೆಯವನಾದ ಎಲ್ ಹರೀತ್ ಮಾತ್ರ ಪ್ರೇಮದ ಹೊರತಾಗಿ ಸಾಮಾಜಿಕ ವಿಷಯಗಳನ್ನೂ ಬರೆದ. ಜ಼ೊಹರ್ ಮೌಲ್ಯಗಳ ಕುರಿತು ಅಲ್ಲಲ್ಲಿ ಹಾಡಿದ್ದಾನೆ. ಇನ್ನುಳಿದಂತೆ ಐವರಿಗೂ ತಮ್ಮ ಕಣ್ಣೆದುರಿನ ಪ್ರಪಂಚವೇ ಕಾವ್ಯ. 
 
ಈ ಏಳು ಕವಿಗಳಲ್ಲಿ ಒಬ್ಬನಾದ ಅಂತಾರಾ ಒಂದು ಬಗೆಯಲ್ಲಿ ಉಮ್ರು ಅಲ್ ಖೈಸ್‌ನಿಗಿಂತಲೂ ರಸಿಕ, ಛಲಗಾರ ಮತ್ತು ಕೋಪಿಷ್ಟ. ಬದೂವಿ ಷೇಯ್‌ಕ್‌ನೊಬ್ಬನಿಗೂ ಗುಲಾಮಿ ಹೆಣ್ಣೊಬ್ಬಳಿಗೂ ಹುಟ್ಟಿದ ಕಪ್ಪುದೇಹದ ಈತನ ಹುಟ್ಟನ್ನು ಒಪ್ಪಿಕೊಳ್ಳದ ಬದೂವಿ ಗುಂಪು ಅವನನ್ನು ತಿರಸ್ಕರಿಸುತ್ತದೆ.
 
ಉಳಿದ ಗುಲಾಮರಂತೆ ಇವನನ್ನೂ ಒಂಟೆ ಮೇಯಿಸಲು ಮರುಭೂಮಿಗೆ ಅಟ್ಟಲಾಗುತ್ತದೆ. ಛಲಗಾರನಾದ ಇವನೊಳಗೆ ಸಿಟ್ಟು ಮಡುಗಟ್ಟಿ ಕೂತಿದ್ದರೂ ಎದೆಯಾಳದಲ್ಲಿ ತನ್ನ ತಂದೆಯ ಅಣ್ಣನ ಮಗಳಾದ ಅಬ್ಲಾಳನ್ನು ವಿಪರೀತವಾಗಿ ಹಚ್ಚಿಕೊಂಡಿರುತ್ತಾನೆ. (ಬದೂವಿಗಳಲ್ಲಿ ಮದುವೆಗಳು ನಡೆಯುವುದು ತಂದೆಯ ಸಂಬಂಧಗಳ ಮೂಲಕವೇ. ತಮ್ಮ ಕುಲದ ಶ್ರೇಷ್ಠತೆ ಇರುವುದು ತಂದೆಯ ಕುಲದಲ್ಲೇ ಹೊರತು ತಾಯಿಯ ಹೊಕ್ಕುಳಬಳ್ಳಿಯ ಸಂಬಂಧದಲ್ಲಲ್ಲ ಎನ್ನುವುದು ಅವರ ನಂಬಿಕೆ). 
 
ಅಂತಾರಾ ತನ್ನ ಚಿಕ್ಕಪ್ಪನ ಮಗಳನ್ನು ಎದೆಯಲ್ಲಿ ಹೊತ್ತು ಬಿಸಿಲು ಚಳಿಗಳಲ್ಲಿ ಅಲೆಯುತ್ತಿರುತ್ತಾನೆ. ಒಂದು ದಿನ ತನ್ನ ಗುಲಾಮ ಸ್ಥಿತಿಯ ಒಪ್ಪದೆ ಕಲಹಕ್ಕಿಳಿಯುತ್ತಾನೆ. ತನ್ನಂತಹ ಗುಲಾಮರ ಪಡೆಯನ್ನು ಕಟ್ಟಿ ಹೋರಾಡಿ ಗೆದ್ದರೂ ಅವನಿಗೆ ಬದೂವಿ ಸ್ಥಾನ ದಕ್ಕುವುದಿಲ್ಲ. ಒಮ್ಮೆ, ಅವನ ತಂದೆಯ ಬದೂವಿ ಕುಲವನ್ನು ಮತ್ತೊಂದು ಬದೂವಿ ಗುಂಪು ಆಕ್ರಮಿಸುತ್ತದೆ, ಹೆಣ್ಣುಗಳನ್ನು ಸೆರೆಹಿಡಿಯುತ್ತದೆ.
 
ಇದನ್ನು ಕೇಳುವ ಅಂತಾರಾ ಒಂಟೆಯನ್ನೇರಿ ಹಾರುತ್ತಾನೆ. ‘ತನ್ನ ಹೃದಯದ ಒಡತಿ ಮತ್ತೊಬ್ಬನ ಅಧೀನದಲ್ಲೇ!? ಯಾಲ್ಲ...’ ಎಂದು ತನ್ನ ಪಡೆಯ ಎಳೆದುಕೊಂಡು ದಾಳಿ ನಡೆಸಿ ತನ್ನ ತಂದೆಯ ಕುಲವನ್ನು ಉಳಿಸುತ್ತಾನೆ. ನಂತರವೇ ಅವನನ್ನು ಬದೂವಿ ಎಂದು ಒಪ್ಪಿಕೊಳ್ಳಲಾಗುತ್ತದೆ. (ಈ ಬದೂವಿಗಳ ನಡುವೆ ಆಚರಣೆಯಲ್ಲಿದ್ದ ಈ ಬಗೆಯ ಮೇಲು–ಕೀಳು ಭಿನ್ನತೆಗಳನ್ನು ಇಸ್ಲಾಂ ಧರ್ಮ ತಾತ್ವಿಕವಾಗಿ ನಿರಾಕರಿಸುತ್ತದೆ).   
 
ಇಸ್ಲಾಂ ಧರ್ಮದ ನೀತಿನಿಯಮ, ರೀತಿರಿವಾಜುಗಳಂತೆಯೇ ಕಾವ್ಯ ಇರಬೇಕೆಂದು ಬಯಸುವ ಆಧುನಿಕ ಅರಬ್ ಸಾಹಿತ್ಯದ ಒಂದು ಗುಂಪು ಈ ಕಾವ್ಯವನ್ನು ಅಲ್ಲಗೆಳೆದರೆ, ಮತ್ತೊಂದು ಗುಂಪು ಧಾರ್ಮಿಕ ಹಿನ್ನೆಲೆಯಿಂದ ಕಾವ್ಯವನ್ನು ಓದಬಾರದು ಎನ್ನುತ್ತ ಈ ಕಾವ್ಯದ ಪರ ನಿಲ್ಲುತ್ತದೆ. ಆಧುನಿಕ ಅರಬ್ ಸಾಹಿತ್ಯದ ಮೇರು ಕವಿಗಳಾದ ಅದೂನಿಸ್, ನಿಸ್ಸಾರ್ ಖಿಬ್ಬಾನಿ ಅಂತಹವರು ಈ ಕಾವ್ಯವನ್ನು ಅರಬ್ ಕಾವ್ಯದ ಅಮೂಲ್ಯ ರತ್ನಗಳು ಎನ್ನುತ್ತ, ‘ಅರಬ್ ಕಾವ್ಯ ಜಗತ್ತಿಗೆ ನೀಡಿದ ಮಹಾನ್ ಕೊಡುಗೆ ಇವು’ ಎನ್ನುತ್ತಾರೆ.
 
ಈ ಕಾವ್ಯ ಹದಿನೆಂಟನೆಯ ಶತಮಾನದಲ್ಲಿ ಜರ್ಮನ್, ಇಂಗ್ಲಿಷ್, ಫ್ರೆಂಚ್ ಮುಂತಾದ ಭಾಷೆಗಳಲ್ಲಿ ತರ್ಜುಮೆಗೊಂಡು ಪಶ್ಚಿಮದ ವಿದ್ವಾಂಸರ ಗಮನ ಸೆಳೆದಿವೆ. ಇಂಗ್ಲಿಷ್‌ಗೆ ಈ ಕಾವ್ಯವನ್ನು ಹಲವರು ತಗೆದುಕೊಂಡು ಹೋಗಿದ್ದಾರೆ. ಅವರಲ್ಲಿ ಕ್ಯಾಪ್ಟನ್ ಜಾನ್ಸನ್ 1890ರಲ್ಲಿ ಅನುವಾದಿಸಿದ.
 
ಅವನು ಅನುವಾದಿಸಿದ್ದು ನಮ್ಮ ಮುಂಬೈಯಲ್ಲಿ – ಭಾರತೀಯ ವಿದ್ಯಾರ್ಥಿಗಳಿಗಾಗಿ ಅನುವಾದಿಸಿದನೆಂದು ದಾಖಲೆಗಳು ಹೇಳುತ್ತವೆ. ಈ ಇಸ್ಲಾಂ ಪೂರ್ವ ಅರಬ್ ಬದೂವಿ ಕಾವ್ಯವನ್ನು ನಮ್ಮ ಕಾಲೇಜುಗಳು ಬೋಧಿಸಿದ್ದವೆ? ಗೊತ್ತಿಲ್ಲ, ಆದರೆ ಕ್ಯಾಪ್ಟನ್ ಜಾನ್ಸನ್ ಅನುವಾದಿಸಿದ್ದು ಮಾತ್ರ ನಮ್ಮ ಸಾಹಿತ್ಯ ವಿದ್ಯಾರ್ಥಿಗಳಿಗೆ ಎನ್ನುವುದು ಖರೆ! 
ಉಮರ್ ಖಯ್ಯಾಂ, ಖಲೀಲ್ ಗಿಬ್ರಾನ್‌ರ ಕಾವ್ಯದಂತೆ ಈ ಕಾವ್ಯ ಪಶ್ಚಿಮದಲ್ಲಿ ಅಷ್ಟು ಜನಪ್ರಿಯವಾಗಿಲ್ಲ. ಅದಕ್ಕಿರುವ ಕಾರಣಗಳು ಹಲವು. 
 
ಅವರಿಬ್ಬರ ಕಾವ್ಯಚಿತ್ರಣಕ್ಕೂ ಈ ಕಾವ್ಯ ಚೆಲ್ಲುವ ಬಣ್ಣಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಇವರ ಕಾವ್ಯವನ್ನು ಆಸ್ವಾದಿಸಲು ವಿಶಿಷ್ಟ ತಯಾರಿ ಇರಬೇಕಾದ ಅನಿವಾರ್ಯತೆಯ ಕಾರಣದಿಂದಲೊ ಏನೋ ಇದು ಪಶ್ಚಿಮದಲ್ಲಿ ಅಷ್ಟು ಜನಪ್ರಿಯವಾಗಿಲ್ಲ. ಹೀಗಿದ್ದರೂ ಈ ಕಾವ್ಯವನ್ನು ಗಂಭೀರವಾಗಿ ಪರಿಗಣಿಸುವ ಸಂಶೋಧಕರ ಒಂದು ಸಣ್ಣ ಸಾಲೇ ಅಲ್ಲಿದೆ. 
 
ಇದೆಲ್ಲದರ ನಡುವೆ, ಮುಖ್ಯವಾದ ಸಂಗತಿಯೊಂದಿದೆ. ಸ್ವಪ್ರತಿಷ್ಠೆ, ಹಮ್ಮುಬಿಮ್ಮುಗಳಲ್ಲಿ ಮುಳುಗೇಳುತ್ತಿದ್ದ ಆಗಿನ ಅರಬ್ ಬದೂವಿಗಳು ಈ ಏಳು ‘ಮು-ಅಲಖಾತ್’ ಕವಿಗಳ ಪ್ರೇಮ, ಕಾಮ, ಸಿಟ್ಟು ಸೆಡವುಗಳೇ ತುಂಬಿರುವ ಕಾವ್ಯವನ್ನೇಕೆ ಶ್ರೇಷ್ಠ ಎಂದು ಒಪ್ಪಿಕೊಂಡರು ಎಂಬ ಪ್ರಶ್ನೆ ಏಳುತ್ತದೆ.

ಮೌಲ್ಯ, ಧರ್ಮ ಎಂಬಂತಹ ಹಲವು ಬಾಹ್ಯ ಸಂಸ್ಥೆಗಳಿಂದ ಹೊರತಾದ, ಸಹಜ ಮಾನವ ಗುಣಕ್ಕೆ ಹತ್ತಿರವಾದ ಅಂಶಗಳನ್ನು ಅವರು ಶ್ರೇಷ್ಠ ಎಂದುಕೊಂಡಿದ್ದಿರಬಹುದೆ ಎಂಬ ಪ್ರಶ್ನೆ ಈ ಕಾವ್ಯವನ್ನು ಓದಿದಾಗಲೆಲ್ಲ ನನ್ನನ್ನು ಬಹುವಾಗಿ ಕಾಡುತ್ತದೆ. 
 
ಇಸ್ಲಾಂ ಪೂರ್ವ ಅರಬ್ ಕಾವ್ಯದ ಬಗ್ಗೆ ಅರಬ್ ಸಾಹಿತ್ಯದಲ್ಲಿ ಪರ–ವಿರೋಧಗಳ ಸರಣಿಗಳಿದ್ದರೂ ಮನುಷ್ಯ ಇತಿಹಾಸದಲ್ಲೇ ಇದೊಂದು ಪ್ರಮುಖ ಘಟ್ಟ ಎನ್ನುವುದರಲ್ಲಿ ಅನುಮಾನವಿಲ್ಲ. ಅರಬ್ ಲೋಕದ ಖ್ಯಾತ ಚಿಂತಕನಾದ ತಾಹಾ ಹುಸೇನ್ ಹೇಳುವಂತೆ – ‘ಇದು ಎಲ್ಲ ಜ್ಞಾನಶಾಖೆಗಳೂ ಗಮನಿಸಲೇಬೇಕಾದ ಕಾವ್ಯ’.
 
ಸಮಕಾಲೀನ ಜಗತ್ತಿನ ಪ್ರಖರ ಚಿಂತಕರಾದ ಜಾಕ್ ಡೆರಿಡ, ಮಿಷೆಲ್ ಫುಕೊ, ಜಾಕ್ ಲಕಾನ್‌ರ ಆಧುನಿಕೋತ್ತರ ಚಿಂತನೆಗಳಿಗೆ ಅತಿ ಸಮೀಪದ ರೆಫೆರೆನ್ಸ್ ಈ ಇಸ್ಲಾಂ ಪೂರ್ವ ಅರಬ್ ಬದೂವಿ ಕಾವ್ಯ.
 
‘ಕಾವ್ಯ ಎಲ್ಲ ಕಾಲದಲ್ಲೂ ಅಲ್ಪಸಂಖ್ಯಾತರ ವ್ಯವಹಾರ’ ಎನ್ನುವುದು ಜನಪ್ರಿಯ ನಂಬಿಕೆ. ಆದರೆ ಅರೇಬಿಯಾದ ಬುಡಕಟ್ಟು ಸಮುದಾಯಗಳ ಪಾಲಿಗೆ ಕಾವ್ಯ ತಮ್ಮ ಸಮುದಾಯದ ಶ್ರೇಷ್ಠತೆಯ ಪ್ರತೀಕವಾಗಿತ್ತು. ತಮ್ಮ ಬುಡಕಟ್ಟನ್ನು ಪ್ರತಿನಿಧಿಸುವ ಮುಖಂಡನಷ್ಟೇ ಗೌರವ ಕವಿಗೂ ಇತ್ತು. ಮೆಕ್ಕಾದಲ್ಲಿರುವ ‘ಕಾಬಾ’ ಅವರ ಪಾಲಿಗೆ ವಾರ್ಷಿಕ ಕಾವ್ಯಸಂಭ್ರಮದ ವೇದಿಕೆಯಾಗಿ ಒದಗಿಬರುತ್ತಿತ್ತು. ಅತ್ಯುತ್ತಮ ಕಾವ್ಯವನ್ನು ಬಂಗಾರ ಲೇಪನದ ಹಾಳೆಗಳ ಮೇಲೆ ಬರೆದು ಕಾಬಾದಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಲಾಗುತ್ತಿತ್ತು. ಇಸ್ಲಾಂ ಪೂರ್ವ ಕಾಲದ ಈ ಕಾವ್ಯ ಮೌಲ್ಯ ಹಾಗೂ ದೇವರ ಬದಲಿಗೆ ಲೌಕಿಕ ಸುಖದ ಕುರಿತು, ಮನುಷ್ಯನ ವಾಂಛೆಗಳ ಕುರಿತು ಮಾತನಾಡಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT