ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಜನಬಳಕೆಗೆ ಆದ್ಯತೆ

ಇಸ್ರೊ ಅಧ್ಯಕ್ಷ ಎ.ಎಸ್‌.ಕಿರಣ್‌ ಕುಮಾರ್‌
Last Updated 18 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ವಿಶ್ವದಲ್ಲೇ ಮೊದಲ ಬಾರಿಗೆ 104 ಉಪಗ್ರಹಗಳನ್ನು ಏಕಕಾಲದಲ್ಲಿ, ಅತ್ಯಂತ ಕಡಿಮೆ ಖರ್ಚಿನಲ್ಲಿ ಇತ್ತೀಚೆಗೆ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಹಾರಿಬಿಟ್ಟಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಜಗತ್ತಿನ ಚಿತ್ತವನ್ನು ತನ್ನತ್ತ ಸೆಳೆದಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೂ ಈಗ ಭಾರತದ ಬಾಹ್ಯಾಕಾಶ ವಿಜ್ಞಾನಿಗಳ ಸಾಧನೆ ಬಗ್ಗೆ ತಲೆಕೆಡಿಸಿಕೊಳ್ಳುವಂತೆ ಆಗಿದೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಅಮೆರಿಕ, ರಷ್ಯಾ, ಜಪಾನ್‌, ಚೀನಾ ಮತ್ತು ಯುರೋಪ್‌ ಕೂಡ ಈಗ ಭಾರತದತ್ತ ಅಚ್ಚರಿಗಣ್ಣಿನಿಂದ ನೋಡುತ್ತಿವೆ. ಈ ಅಸಾಮಾನ್ಯ ಸಾಧನೆ ಮಾಡಿರುವ ದೇಶದ ಬಾಹ್ಯಾಕಾಶ ವಿಜ್ಞಾನಿಗಳ ತಂಡದ ನಾಯಕ, ಇಸ್ರೊ ಅಧ್ಯಕ್ಷ ಡಾ. ಎ.ಎಸ್‌.ಕಿರಣ್‌ ಕುಮಾರ್‌ ಅವರು ಸಂಸ್ಥೆಯ ಮುಂದಿರುವ ಗುರಿ ಮತ್ತು ಯೋಜನೆಗಳ ಕುರಿತು ‘ಪ್ರಜಾವಾಣಿ’ ಜತೆ ಮುಕ್ತವಾಗಿ ಮಾತನಾಡಿದ್ದಾರೆ.

* ಇಸ್ರೊ 104 ಉಪಗ್ರಹಗಳನ್ನು ಒಟ್ಟಿಗೇ ಹಾರಿಸಿ ಮೈಲುಗಲ್ಲು ಸ್ಥಾಪಿಸಿದೆ. ಇದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಉಪಗ್ರಹಗಳ ಉಡಾವಣೆಯ ಆಲೋಚನೆ ಸಂಸ್ಥೆಯ ಮುಂದಿದೆಯೇ?

ನಾವು ಸ್ಪರ್ಧೆಗಾಗಿ ಅಥವಾ ದಾಖಲೆ ನಿರ್ಮಿಸುವ ಸಲುವಾಗಿ ಇಷ್ಟೊಂದು ಉಪಗ್ರಹಗಳನ್ನು ಏಕಕಾಲದಲ್ಲಿ ಹಾರಿಸಲಿಲ್ಲ. ನಮ್ಮ ಉಡಾವಣಾ ವಾಹನಕ್ಕೆ ಹೆಚ್ಚಿನ ಉಪಗ್ರಹಗಳನ್ನು ಹಾರಿಸುವ ಸಾಮರ್ಥ್ಯವಿತ್ತು. ಹಾಗಾಗಿ ಅಂತಹ ಅವಕಾಶವನ್ನು ಬಳಸಿಕೊಂಡು ಈ ಸಾಧನೆ ಮಾಡಿದೆವು. ಅದರಲ್ಲಿ ನಮ್ಮ ಒಂದು ಉಪಗ್ರಹ ಕಾರ್ಟೋಸ್ಯಾಟ್‌ ಇತ್ತು. ಈ ನಮ್ಮ ಉಪಗ್ರಹವನ್ನಷ್ಟೇ ಹಾರಿಸಲು ಉಡಾವಣಾ ವಾಹನವನ್ನು ಬಳಸಿಕೊಂಡಿದ್ದರೆ, ಒಂದು ಅಂಚೆ ಕಾಗದವನ್ನು ಸಾಗಿಸಲು ಒಂದು ಲಾರಿಯನ್ನು ಬಳಸಿಕೊಂಡಂತೆ ಆಗುತ್ತಿತ್ತು. ಹಾಗಾಗಿ ಇತರ ರಾಷ್ಟ್ರಗಳ ಉಪಗ್ರಹಗಳನ್ನೂ ಅದರೊಟ್ಟಿಗೆ ಹಾರಿಸಿದೆವು. ಸಣ್ಣ ಉಪಗ್ರಹವನ್ನು ಹಾರಿಸುವವರಿಗೆ ಇದೊಂದು ಅವಕಾಶವಾಯಿತು. ನಮಗೂ ನಮ್ಮ ಉಪಗ್ರಹ ಹಾರಿಸಲು ವ್ಯಯಿಸುವ ಖರ್ಚು, ಸಮಯ ಉಳಿಯಿತು. ಆರಂಭದಲ್ಲಿ ನಮ್ಮ ಉಪಗ್ರಹವನ್ನಷ್ಟೇ ಹಾರಿಸುವ ಸಾಮರ್ಥ್ಯ ಗಳಿಸಿದ್ದೆವು. ಈಗ ಬೇರೆಯವರ ಉದ್ದೇಶವನ್ನು ಈಡೇರಿಸುವ ಸಾಮರ್ಥ್ಯವನ್ನು ಗಳಿಸಿದ್ದೇವೆ.

ಪ್ರಸ್ತುತ ವಿಶ್ವದಲ್ಲಿ ಸಣ್ಣಸಣ್ಣ ಉಪಗ್ರಹಗಳ ತಯಾರಿ ನಡೆಯುತ್ತಿದೆ. ಅನೇಕ ಸಲ ಅವುಗಳನ್ನು ಹಾರಿಸಲು ಅವಕಾಶವೇ ಸಿಗುತ್ತಿರಲಿಲ್ಲ. ಈ ರೀತಿ ಒಟ್ಟೊಟ್ಟಿಗೆ ಹಾರಿಸುವುದರಿಂದ ಜಾಗತಿಕವಾಗಿಯೂ ಒಳಿತಾಗಲಿದೆ. ಭವಿಷ್ಯದಲ್ಲಿ ಈಗಿನ ಸಂಖ್ಯೆಗಿಂತಲೂ ಹೆಚ್ಚಿನ ಸಂಖ್ಯೆಯ ಉಪಗ್ರಹಗಳ ಉಡಾವಣೆ ನಡೆಯಬಹುದು.

* ಚಂದ್ರಯಾನ–2 ಯೋಜನೆ ತಯಾರಿ ಹೇಗಿದೆ?

ಚಂದ್ರಯಾನ –1 ಯೋಜನೆಯು ಚಂದ್ರನನ್ನು ಸ್ಪರ್ಶಿಸಿ, ಅಲ್ಲಿನ ವಾತಾವರಣವನ್ನು ಪರಿಚಯಿಸಿಕೊಳ್ಳುವುದಾಗಿತ್ತು. ಈ ಯೋಜನೆಗೆ ಬಳಸಿದ ಎಂಜಿನ್‌ನಲ್ಲಿ ಸ್ವನಿಯಂತ್ರಣ ವ್ಯವಸ್ಥೆ ಇರಲಿಲ್ಲ.  ಚಂದ್ರಯಾನ–2 ಯೋಜನೆಗೆ ಅತ್ಯಾಧುನಿಕ ತಂತ್ರಜ್ಞಾನದ ವಿಶೇಷ ಎಂಜಿನ್‌ ಅನ್ನು ಸಿದ್ಧಪಡಿಸಲಾಗಿದೆ. ಈ ಎಂಜಿನ್‌ ಸ್ವನಿಯಂತ್ರಣದ ಮೂಲಕ ಚಂದ್ರನಲ್ಲಿ ಗುರುತ್ವಾಕರ್ಷಣೆಗೆ ಹೊಂದಿಕೊಂಡು ಇಳಿಯಲಿದೆ. ಸ್ವಯಂಚಾಲಿತವಾಗಿ ಪ್ರಯೋಗ ನಡೆಸಿ, ನಮಗೆ ಬೇಕಾದ ಮಾಹಿತಿ ರವಾನಿಸಲು ನೆರವಾಗಲಿದೆ. ಇದು ಒಂದು ರೀತಿ ಸ್ವಸ್ಥಾನೀಯ ವೀಕ್ಷಕನಂತೆ ಲೇಸರ್‌ ಮೂಲಕ ಕೆಲಸ ಮಾಡಲಿದೆ. ಚಂದ್ರನ ಮೇಲ್ಮೈನಲ್ಲಿರುವ ಮಣ್ಣಿನ ಲಕ್ಷಣಗಳನ್ನು ಸಂಗ್ರಹಿಸುವುದಕ್ಕೆ ಪೂರಕವಾಗಿ ಇರಲಿದೆ. 

ಈಗಾಗಲೇ ತಮಿಳುನಾಡಿನ ಮಹೇಂದ್ರಗಿರಿಯಲ್ಲಿ ಪ್ರಾಯೋಗಿಕ ಪರೀಕ್ಷೆಗಳು ನಡೆದಿವೆ. ಚಂದ್ರನ ಭೂಮೇಲ್ಮೈ ವಾತಾವರಣವನ್ನು ಬೆಂಗಳೂರು, ಚಿತ್ರದುರ್ಗದ ಕೆಲವು ಸ್ಥಳಗಳಲ್ಲಿ ಕೃತಕವಾಗಿ ಸಿದ್ಧಪಡಿಸಿ, ರೋವರ್‌ ಇಳಿಯುವ ಮತ್ತು ಅಲ್ಲಿನ ಮಣ್ಣು ಇನ್ನಿತರ ವಸ್ತುಗಳನ್ನು ಸಂಗ್ರಹಿಸುವ ಪ್ರಯೋಗ ನಡೆಸಲಾಗಿದೆ. ಬೆಂಗಳೂರಿನ ಪ್ರಯೋಗಾಲಯದಲ್ಲಿ ಚಂದ್ರನಲ್ಲಿಗೆ ಕಳುಹಿಸುವ ಎಂಜಿನ್‌ನ ಅಂತಿಮ ಸಿದ್ಧತೆಗಳು ನಡೆಯುತ್ತಿವೆ. 2018ರ ಮೊದಲ ಮೂರು ತಿಂಗಳೊಳಗೆ ಚಂದ್ರಯಾನ–2 ಉಪಗ್ರಹವನ್ನು ಕಳುಹಿಸಲು ಯೋಜನೆ ಹಾಕಿಕೊಂಡಿದ್ದೇವೆ.

* ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ದೇಶದ ಸ್ಥಿತಿಗತಿ ಹೇಗಿದೆ?

ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನ ದೇಶದ ಆಂತರಿಕ ಬಳಕೆಯ ಉದ್ದೇಶವನ್ನು ಪ್ರಮುಖವಾಗಿ ಹೊಂದಿದೆ. ಆದರೆ ಬೇರೆ ದೇಶಗಳು ಅಲ್ಲಿನ ಮಿಲಿಟರಿ ಉದ್ದೇಶಕ್ಕೆ ಆರಂಭವಾದವು. ಅಮೆರಿಕ ಮತ್ತು ರಷ್ಯಾ ಜಗತ್ತಿನಲ್ಲಿ ಯಾರು ಬಲಾಢ್ಯರೆನ್ನುವುದನ್ನು ತೋರಿಸಿಕೊಳ್ಳಲು ಪೈಪೋಟಿ ಆರಂಭಿಸಿದವು. ಆದರೆ, ನಮ್ಮ ದೇಶದಲ್ಲಿ ಬಾಹ್ಯಾಕಾಶ ತಂತ್ರಜ್ಞಾನವು ಜನಬಳಕೆಗೆ ಮೊದಲ ಆದ್ಯತೆ ನೀಡಿದೆ. ಇದನ್ನು ಎಲ್ಲ ದೇಶಗಳೂ ಒಪ್ಪುತ್ತವೆ. ನಮ್ಮ ಪಿಎಸ್‌ಎಲ್‌ವಿ (ಉಪಗ್ರಹ ಉಡಾವಣಾ ವಾಹಕ)  ವಿಶ್ವದಲ್ಲಿಯೇ ಅತ್ಯುತ್ತಮವಾದುದು. ಇದು 1000 ಕಿ.ಮೀ. ಅಂತರದ ಕಕ್ಷೆಗೆ 1500 ಕೆ.ಜಿ.ಯಿಂದ 1800 ಕೆ.ಜಿ.ವರೆಗಿನ ಉಪಗ್ರಹವನ್ನು ತಲುಪಿಸುವ ಸಾಮರ್ಥ್ಯ ಹೊಂದಿದೆ. ಆದರೆ, ಜಿಎಸ್ಎಲ್‌ವಿ (ಭೂಸ್ಥಾಯಿ ಉಪಗ್ರಹ ಉಡ್ಡಯನ ವಾಹನ) 36 ಸಾವಿರ ಕಿ.ಮೀ ಎತ್ತರದ ಕಕ್ಷೆಯನ್ನು ತಲುಪುತ್ತದೆ. ಈ ಉಡಾವಣಾ ವಾಹನದ ಈಗಿನ ಸಾಗಣೆ ಸಾಮರ್ಥ್ಯ 3 ಟನ್‌ ಮಾತ್ರ. ಇದನ್ನು 6 ಟನ್‌ ಸಾಮರ್ಥ್ಯಕ್ಕೆ ಏರಿಸಬೇಕಿದೆ. ಜಿಎಸ್‌ಎಲ್‌ವಿಯಲ್ಲಿ ಅಮೆರಿಕ, ರಷ್ಯಾ, ಜಪಾನ್‌, ಚೀನಾಕ್ಕಿಂತ ನಾವು ಹಿಂದೆ ಇದ್ದೇವೆ.

ಜಿಎಸ್‌ಎಲ್‌ವಿ ಮಾರ್ಕ್‌–3 ಉಡಾವಣೆ ಏಪ್ರಿಲ್‌ ಕೊನೆ ವಾರದಲ್ಲಿ ಕಾರ್ಯಗತವಾಗಲಿದೆ. ಮೊದಲು 3.3 ಟನ್‌, ಆನಂತರ 4 ಟನ್‌ ಸಾಗಿಸುವಂತೆ ಅದನ್ನು ರೂಪಿಸಲಾಗುವುದು. ಜಿಎಸ್‌ಎಲ್‌ವಿ ಮಾರ್ಕ್‌– 2ರಲ್ಲಿ 4 ಟನ್‌ ತೂಕದ ಉಪಗ್ರಹ ಸಾಗಿಸಬಹುದು. ಹೆಚ್ಚು ತೂಕ ಮತ್ತು ಸಾಮರ್ಥ್ಯದ ಉಪಗ್ರಹವನ್ನು ನಾವು ದೇಶದಲ್ಲಿ ತಯಾರಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಅಗತ್ಯವಾದ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕಿದೆ.

ದೂರಸಂವೇದಿ ಉಪಗ್ರಹದಲ್ಲಿ ಈಗ ನಾವು ಬೇರೆ ದೇಶವನ್ನು ಅವಲಂಬಿಸಬೇಕಿಲ್ಲ. ನಾವೇ ಉಪಗ್ರಹ ತಯಾರಿಸಿ ಉಡಾವಣೆ ಮಾಡುತ್ತಿದ್ದೇವೆ. ಇದರಲ್ಲಿ ನಾವು ಸ್ವಾವಲಂಬಿಗಳಾಗಿದ್ದೇವೆ. ಈಗ ಜಿಎಸ್‌ಎಲ್‌ವಿಯಲ್ಲೂ 4 ಟನ್‌ ತೂಕದ ಉಪಗ್ರಹ ಉಡಾವಣೆ ಮಾಡುವ ಮೂಲಕ ನಾವು ಹೆಚ್ಚಿನ ಸಾಮರ್ಥ್ಯ ಪಡೆಯುತ್ತೇವೆ. 6– 10 ಟನ್‌  ತೂಕದ ಉಪಗ್ರಹವನ್ನು ಉಡಾವಣೆ ಮಾಡುವ ಗುರಿ ಇದೆ.

* ಇಷ್ಟೊಂದು ಸಂಖ್ಯೆಯ ಉಪಗ್ರಹಗಳನ್ನು ಹಾರಿಬಿಡುತ್ತಿದ್ದರೆ ಬಾಹ್ಯಾಕಾಶ ಮುಂದೊಂದು ದಿನ ಕಸದ ಬುಟ್ಟಿಯಾಗಿ ಮಾರ್ಪಡುವ ಅಪಾಯವಿಲ್ಲವೇ?

ಸಣ್ಣ ಉಪಗ್ರಹಗಳು 500 ಕಿ.ಮೀ. ಎತ್ತರದ ಕಕ್ಷೆಯ ಪರಿಧಿಯೊಳಗೆ ಉಡಾವಣೆಯಾಗುತ್ತವೆ. ಅವುಗಳ ಅವಧಿ ಮುಗಿದು, ಅನುಪಯುಕ್ತವಾದಾಗ ಅವು ವಾತಾವರಣದಲ್ಲೇ ಸುಟ್ಟು ನಾಶವಾಗುತ್ತವೆ. ಇನ್ನು ಎತ್ತರದ ಕಕ್ಷೆಗೆ ಹೋಗುವ ಉಪಗ್ರಹಗಳು ತಮ್ಮ ಕಾರ್ಯಾಚರಣೆ ಅವಧಿ ಮುಗಿದ ಮೇಲೆ ಅಲ್ಲೇ ತ್ಯಾಜ್ಯಗಳಾಗಿ ಉಳಿಯುವ ಸಾಧ್ಯತೆ ಇರುತ್ತದೆ. ಅವುಗಳನ್ನು ಅಲ್ಲೇ ಉಳಿಸಿದರೆ ಮತ್ತೊಂದು ಉಪಗ್ರಹಕ್ಕೆ ಡಿಕ್ಕಿಯಾಗಬಹುದು. ಅಂತರರಾಷ್ಟ್ರೀಯ ಸಂಸ್ಥೆಗಳು ಈ ಸಮಸ್ಯೆಯನ್ನು ಹೇಗೆ ನಿಭಾಯಿಸಬೇಕೆಂದು ಮಾರ್ಗಗಳನ್ನು ಹುಡುಕುತ್ತಿವೆ. 500 ಕಿ.ಮೀ.ಗೂ ಮೇಲ್ಮಟ್ಟದ ಕಕ್ಷೆಗೆ ಹೋಗುವ ಉಪಗ್ರಹಗಳನ್ನು ಅವುಗಳ ಕಾರ್ಯಾಚರಣೆ ಅವಧಿ ಮುಗಿದ ಮೇಲೆ ಜಿಯೊ ಸ್ಟೇಷನರಿಯಲ್ಲಿರುವ ಗ್ರೇವ್‌ಯಾರ್ಡ್‌ ಕಕ್ಷೆಗೆ ತಳ್ಳಬೇಕು. ಅಲ್ಲಿ ಅವು ನಿರುಪದ್ರವಿಯಾಗಿ ಸುತ್ತುತ್ತಿರುತ್ತವೆ.

* ಬಿಯರ್‌ ತಯಾರಿಕೆಗೆ ಬೇಕಾದ ಈಸ್ಟ್‌ ಬೆಳೆಯಲು ಚಂದ್ರಲೋಕಕ್ಕೆ ಉಪಗ್ರಹ ಕಳುಹಿಸಲಾಗುತ್ತಿದೆಯೇ?
ಹೌದು, ಈ ಬಗ್ಗೆ ಸಂಸತ್‌ನಲ್ಲಿ ನಡೆದಿರುವ ಸ್ವಾರಸ್ಯಕರ ಚರ್ಚೆ ಗಮನಿಸಿದ್ದೇವೆ. ಆದರೆ, ಅದು ಇಸ್ರೊ ಕೈಗೊಂಡಿರುವ ಯೋಜನೆ ಅಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಆಯೋಜನೆಯಾಗಿರುವ ‘ಗೂಗಲ್‌ ಲೂನಾರ್‌ ಎಕ್ಸ್‌ಪ್ರೈಸ್‌’ ಸ್ಪರ್ಧೆಯಲ್ಲಿ ಬೆಂಗಳೂರು ಮೂಲದ ‘ಟೀಮ್‌ ಇಂಡಸ್‌’ ಎಂಬ ಖಾಸಗಿ ತಂಡ ಭಾಗವಹಿಸುತ್ತಿದೆ. ಆ ಸ್ಪರ್ಧೆಯಲ್ಲಿ ಭಾಗವಹಿಸುವ ಯಾವುದೇ ಸಂಸ್ಥೆ ಚಂದ್ರನ ಮೇಲೆ ರೋವರ್‌ ಇಳಿಸಿ, 100 ಮೀಟರ್‌ ಮುಂದೆ ಚಲಿಸಿದರೆ ಕೋಟ್ಯಂತರ ಡಾಲರ್‌ ಮೊತ್ತದ ಬಹುಮಾನ ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಭಾರತದ ಕಂಪೆನಿಯು ಇಸ್ರೊ  ಜತೆಗೆ ಉಪಗ್ರಹ ಉಡಾವಣೆ ಒಪ್ಪಂದ ಮಾಡಿಕೊಂಡಿದೆ ಅಷ್ಟೆ. ನಮ್ಮ ವಾಣಿಜ್ಯ ಬಳಕೆ ಉದ್ದೇಶದ ಉಡಾವಣಾ ವಾಹನದಲ್ಲಿ ಅವರ ಉಪಗ್ರಹ ಉಡಾವಣೆ ಮಾಡಿಕೊಡುತ್ತಿದ್ದೇವೆ. ಇದು ಕೇಂದ್ರ ಸರ್ಕಾರದ ಅನುಮತಿ ಮೇರೆಗೆ ನಡೆಯಲಿದೆ.

* ದೇಶಕ್ಕೆ ಉಪಯೋಗವಾಗುವ ಯಾವ ಯೋಜನೆ ಕೈಗೊಂಡಿದ್ದೀರಿ?
ಆಡಳಿತ ನಿರ್ವಹಣೆ, ಕೃಷಿ, ಮೀನುಗಾರಿಕೆಗೆ ಅನುವಾಗುವಂತಹ, ಚಂಡಮಾರುತದ ಮುನ್ಸೂಚನೆ ನೀಡುವಂತಹ ತಂತ್ರಜ್ಞಾನ ಒದಗಿಸಲಾಗಿದೆ. ದೇಶಕ್ಕೆ ಜಿಪಿಎಸ್‌ ಮಾದರಿಯಲ್ಲಿ ತನ್ನದೇ ಆದ ‘ನ್ಯಾವಿಗೇಷನ್ ಮ್ಯಾಪ್‌’ ಸಿದ್ಧಪಡಿಸಲಾಗುತ್ತಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕೆಲಸಗಳನ್ನು ಕುಳಿತಲ್ಲೇ ಖಾತರಿಪಡಿಸಿಕೊಳ್ಳಲು ತಂತ್ರಜ್ಞಾನ ಒದಗಿಸಿದ್ದೇವೆ. ಕೃಷಿ ಸ್ಥಿತಿಗತಿ ಬಗ್ಗೆ ಸಮಗ್ರ ಮಾಹಿತಿಯನ್ನು ಅಂಚೆಯಣ್ಣನ ಮೂಲಕ ಕೊಡಲು ಯೋಜನೆ ಸಿದ್ಧಪಡಿಸುತ್ತಿದ್ದೇವೆ.

ಮುಂದೆ ತಯಾರಾಗುವ ಉಪಗ್ರಹಗಳ ಗಾತ್ರ ಚಿಕ್ಕದಾಗಿರಬೇಕು, ಸೂಕ್ಷ್ಮವಾಗಿರಬೇಕು, ಉಡಾವಣಾ ವೆಚ್ಚವೂ ಕಡಿಮೆ ಇರಬೇಕು. ಇನ್ನೊಂದು ಮುಖ್ಯ ಉದ್ದೇಶ, ನಾವು ಉಡಾವಣೆ ಮಾಡುವಾಗ ಎಷ್ಟು ವೆಚ್ಚ ತಗಲುತ್ತಿದೆಯೋ ಅದೇ ವೆಚ್ಚವನ್ನು ಮುಂದುವರಿಸಿಕೊಂಡು ಹೋದರೆ ಅದು ಅವನತಿಯ ತಂತ್ರಜ್ಞಾನವಾಗಿ ಸಂಸ್ಥೆಯ ಕೆಲಸವೇ ನಿಂತು ಹೋಗಬಹುದು. ಹಾಗಾಗಿ ಪುನರ್‌ಬಳಕೆ ವಿಧಾನ ಕಂಡುಕೊಂಡು ವೆಚ್ಚ ಕಡಿಮೆ, ಹೆಚ್ಚು ಸಾಮರ್ಥ್ಯ ಸಾಧಿಸಬೇಕಿದೆ.

* ಇಸ್ರೊ ಹೊಸ ಆವಿಷ್ಕಾರವೇನು?
ಹೊಸತು ಎಂದರೆ ಅಮೆರಿಕದ ಜಿಪಿಆರ್‌ ಜತೆ ಸೇರಿ ‘ನಿಸಾರ್‌’ ಎನ್ನುವ (‘ನಾಸಾ– ಇಸ್ರೊ ಸಿಂಥೆಟಿಕ್‌ ರಾಡಾರ್‌’) ತಂತ್ರಜ್ಞಾನದ ಮೂಲಕ ಭೂಕಂಪನದ ಮುನ್ಸೂಚನೆಗೆ ಸಹಕಾರಿಯಾಗುವ ತಂತ್ರಜ್ಞಾನ ರೂಪಿಸುತ್ತಿದ್ದೇವೆ.

ಈಗ ದೇಶದಲ್ಲಿ 40 ಉಪಗ್ರಹಗಳು ಕಾರ್ಯನಿರ್ವಹಿಸುತ್ತಿದ್ದು, ಇಡೀ ದೇಶದಲ್ಲಿ ಪ್ರತಿ ದಿನವೂ ಏನೇನು ನಡೆಯುತ್ತಿದೆ ಎನ್ನುವುದನ್ನು ನೋಡಲು ಅನುವಾಗುವಂತೆ ಉಪಗ್ರಹಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಿ, ಸಂವಹನ ಸೇರಿದಂತೆ ಬೇರೆ ಕ್ಷೇತ್ರಗಳಿಗೂ ಅವನ್ನು ಬಳಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಹೊಸ ಆವಿಷ್ಕಾರಗಳತ್ತ ಇಸ್ರೊ ಗಮನ ಹರಿಸುತ್ತಿದೆ.

* ಬಾಹ್ಯಾಕಾಶಕ್ಕೆ ಮನುಷ್ಯರನ್ನು ಕಳುಹಿಸುವ ಯೋಜನೆ ಇದೆಯೇ?
ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸಲು ಇಸ್ರೊ ಸಿದ್ಧವಿದೆ. ಆದರೆ, ಅದಕ್ಕೆ ಬೇಕಾದ ಹಣಕಾಸು ನೆರವನ್ನು ಭಾರತ ಸರ್ಕಾರ ನೀಡಬೇಕು ಅಷ್ಟೆ. ಹಣಕಾಸು ನೆರವು ಸಿಕ್ಕಿದರೆ ಮುಂದೆ ಇಸ್ರೊದಿಂದ ಬಾಹ್ಯಾಕಾಶಕ್ಕೆ ಮಾನವ ಪಯಣವೂ ಸಾಧ್ಯವಾಗಲಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT