ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾಹಿತಿ ಸುರಕ್ಷತೆ ಅಗತ್ಯ’

Last Updated 18 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಮುಂಬೈ: ‘ಡಿಜಿಟಲ್‌ ಇಂಡಿಯಾ, ಭಾರತದಲ್ಲಿಯೇ ತಯಾರಿಸಿ ಅಭಿಯಾನದಂತೆ ದೇಶದಲ್ಲಿರುವ ದತ್ತಾಂಶ ಮತ್ತು  ಮಾಹಿತಿಯನ್ನು ಸುರಕ್ಷಿತವಾಗಿಡಲು ಕೀಪ್ ಇನ್ ಇಂಡಿಯಾ (Keep in india) ಪರಿಕಲ್ಪನೆ ಅಗತ್ಯ’ ಎಂದು ಉದ್ಯಮಿ ಮುಕೇಶ್ ಅಂಬಾನಿ ಅಭಿಪ್ರಾಯಪಟ್ಟಿದ್ದಾರೆ.

‘ಡಿಜಿಟಲ್‌ ಯುಗದಲ್ಲಿ ದತ್ತಾಂಶ ಮತ್ತು ಮಾಹಿತಿ ಅತ್ಯಂತ ಶಕ್ತಿಶಾಲಿ ಸಾಧನಗಳಾಗಿವೆ. ತುಸು ಎಚ್ಚರ ತಪ್ಪಿದರೂ ಕ್ಷಣಮಾತ್ರದಲ್ಲಿ ಜಗತ್ತಿನಾದ್ಯಂತ ಹರಿದಾಡುವ ಅಪಾಯವಿದೆ. ಹೀಗಾಗಿ ದೇಶದಲ್ಲಿ ಸೃಷ್ಟಿಯಾಗುವ ದತ್ತಾಂಶ ಮತ್ತು ಮಾಹಿತಿಗಳನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಕಾರ್ಪೊರೇಟ್‌ ವಲಯದಲ್ಲಿ ವಾಣಿಜ್ಯ ಹಿತಾಸಕ್ತಿಗಾಗಿ ದತ್ತಾಂಶ ಬಳಕೆ ಮಾಡುತ್ತಿರುವುದು ಹೆಚ್ಚಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿದ ಅಂಬಾನಿ, ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತ್ವದ ರಕ್ಷಣೆಯ ಜತೆ ಜತೆಗೆ ದೇಶದ ಆರ್ಥಿಕತೆಯ ಸುರಕ್ಷತೆಗಾಗಿ ದತ್ತಾಂಶ ಸುರಕ್ಷತೆಯ ಅಗತ್ಯವಿದೆ ಎಂದಿದ್ದಾರೆ.

ಇಂಡಿಯಾ ಟುಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನೋಟು ರದ್ದತಿ ಕ್ರಮ ಮತ್ತು ಡಿಜಿಟಲ್‌ ಇಂಡಿಯಾದ ಬಗ್ಗೆ ಅಂಬಾನಿ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

‘ನೋಟು ರದ್ದತಿಯಿಂದ ಭಾರತದ ನಗದು ಆರ್ಥಿಕತೆ ಡಿಜಿಟಲ್‌ ಅರ್ಥವ್ಯವಸ್ಥೆಯತ್ತ ಹೊರಳಿದೆ. ಅನುತ್ಪಾದಕವಾಗಿದ್ದ ಹಣವನ್ನು ಉತ್ಪಾದಕತೆಗೆ ಬಳಸಲು ನೋಟು ರದ್ದತಿ ನೆರವಾಗಿದೆ’ ಎಂದು ಹೇಳಿದ್ದಾರೆ.

‘ದೇಶದ ಜನತೆಯನ್ನಷ್ಟೇ ಅಲ್ಲದೆ, ಜಗತ್ತು ಮತ್ತು ತಂತ್ರಜ್ಞಾನವನ್ನೂ ಅರ್ಥಮಾಡಿಕೊಳ್ಳುವಂತಹ ನಾಯಕನ್ನು ಪಡೆಯಲು ನಾವು ಪುಣ್ಯ ಮಾಡಿದ್ದೇವೆ’  ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT