ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಜಾಟರ ಪ್ರತಿಭಟನೆ ರದ್ದು

ಸಮುದಾಯದ ಮುಖಂಡರು– ಹರಿಯಾಣ ಸರ್ಕಾರದ ನಡುವಣ ಮಾತುಕತೆ ಫಲಪ್ರದ
Last Updated 19 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ನವದೆಹಲಿ: ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಗೆ ಆಗ್ರಹಿಸಿ  ಸೋಮವಾರದಿಂದ ನವದೆಹಲಿಯಲ್ಲಿ ಆಯೋಜಿಸಲು ಉದ್ದೇಶಿಸಿದ್ದ ಬೃಹತ್‌ ಪ್ರತಿಭಟನೆಯನ್ನು ಜಾಟ್‌ ಸಮುದಾಯದವರು ವಾಪಸ್‌ ಪಡೆದಿದ್ದಾರೆ.
 
‍ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಅವರೊಂದಿಗೆ ನಾಲ್ಕೂವರೆ ಗಂಟೆಗಳ ಕಾಲ ಸುದೀರ್ಘ ಮಾತುಕತೆಯ ನಂತರ ಪ್ರತಿಭಟನೆಯನ್ನು ರದ್ದುಗೊಳಿಸುವ ನಿರ್ಧಾರವನ್ನು ಜಾಟ್‌ ಮುಖಂಡರು ಪ್ರಕಟಿಸಿದರು.
 
ಸಭೆಯಲ್ಲಿ ಜಾಟ್‌ ಸಮುದಾಯಕ್ಕೆ ಸೇರಿದ ಕೇಂದ್ರ ಸಚಿವರಾದ ಬಿರೇಂದರ್‌ ಸಿಂಗ್‌ ಮತ್ತು ಪಿ.ಪಿ. ಚೌಧರಿ ಕೂಡ ಇದ್ದರು. ಜಾಟರು ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಸರ್ಕಾರ ನೀಡಿದ ನಂತರ ಪ್ರತಿಭಟನೆ ಕೈ ಬಿಡುವ ನಿರ್ಧಾರಕ್ಕೆ ಸಮುದಾಯದ ಮುಖಂಡರು ಬಂದರು.
 
ಸಭೆ ನಂತರ ಅಖಿಲ ಭಾರತ ಜಾಟ್‌ ಆರಕ್ಷಣ್‌ ಸಂಘರ್ಷ ಸಮಿತಿ (ಎಐಜೆಎಎಸ್‌ಎಸ್‌) ಅಧ್ಯಕ್ಷ ಯಶ್‌ಪಾಲ್‌ ಮಲಿಕ್‌ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಮನೋಹರ್‌ ಖಟ್ಟರ್‌, ‘ದೆಹಲಿ ಹೈಕೋರ್ಟ್‌ನ ತೀರ್ಪು ಬಂದ ನಂತರ ಜಾಟರಿಗೆ ಮೀಸಲಾತಿ ನೀಡುವ ಪ್ರಕ್ರಿಯೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರಂಭಿಸಲಿವೆ’ ಎಂದರು.
 
‘ಜಾಟರು ದೆಹಲಿಗೆ ಬರುತ್ತಿಲ್ಲ. ನಮ್ಮ ಬೇಡಿಕೆಗಳನ್ನು ಸರ್ಕಾರ ಒಪ್ಪಿದೆ. ಹಾಗಾಗಿ ಪ್ರತಿಭಟನೆಯನ್ನು ರದ್ದು ಪಡಿಸಿದ್ದೇವೆ’ ಎಂದು ಮಲಿಕ್‌ ತಿಳಿಸಿದರು. ರಾಜ್ಯದ ವಿವಿಧ ಕಡೆಗಳಲ್ಲಿ ಸಮುದಾಯದವರು ನಡೆಸುತ್ತಿರುವ ಧರಣಿಗಳನ್ನೂ ಸ್ಥಗಿತಗೊಳಿಸಲಾಗುವುದು. ಕೆಲವು ಕಡೆಗಳಲ್ಲಿ ಮಾತ್ರ ಸಾಂಕೇತಿಕವಾಗಿ ಪ್ರತಿಭಟನೆ ಮುಂದುವರಿಯಲಿದೆ ಎಂದು ಅವರು ಹೇಳಿದರು.
 
ಮೀಸಲಾತಿ ಹೊರತು ಪಡಿಸಿ, ಕಳೆದ ವರ್ಷ ನಡೆದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ದಾಖಲಿಸಿರುವ ಪ್ರಕರಣಗಳನ್ನು ವಾಪಸ್‌ ಪಡೆಯಬೇಕು, ಹಿಂಸಾಚಾರದಲ್ಲಿ ಮೃತಪಟ್ಟ ಮತ್ತು ಗಾಯಗೊಂಡಿರುವವರ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂಬ ಬೇಡಿಕೆಗಳನ್ನು ಜಾಟರು ಸರ್ಕಾರದ ಮುಂದಿಟ್ಟಿದ್ದಾರೆ.
ಹರಿಯಾಣದ ವಿವಿಧ ಕಡೆಗಳಲ್ಲಿ ಜಾಟ್‌ ಸಮುದಾಯದವರು ಜನವರಿ 29ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
 
‘ಸರ್ಕಾರವು ಇನ್ನು ಕಾನೂನು ಪ್ರಕಾರ ಕಾರ್ಯ ನಿರ್ವಹಿಸಲಿದೆ. ಸಮೀಕ್ಷೆ ನಡೆಸಿ ವಾಸ್ತವಾಂಶಗಳನ್ನು ತಿಳಿದುಕೊಳ್ಳಲಿದೆ. ನಂತರ ನ್ಯಾಯಾಲಯವು ಎತ್ತಿಹಿಡಿಯುವಂತಹ ನಿರ್ಧಾರ ಕೈಗೊಳ್ಳಲಿದೆ’ ಎಂದು ಕಾನೂನು ಖಾತೆ ರಾಜ್ಯ ಸಚಿವ ಪಿ.ಪಿ.ಚೌಧರಿ ಹೇಳಿದರು.
 
‘ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಅಧ್ಯಕ್ಷರನ್ನು ನೇಮಿಸಿದ ನಂತರ ಮೀಸಲಾತಿ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗುವುದು. ಕಾನೂನು ವಿಚಾರಗಳ ಕಾರಣಕ್ಕೆ ಮೀಸಲಾತಿ ನೀಡುವುದಕ್ಕೆ ತೊಂದರೆಯಾಗಬಾರದು ಎಂಬುದು ನಮ್ಮ ನಿಲುವು’ ಎಂದು ಅವರು ವಿವರಿಸಿದರು.
 
ಅಖಿಲ ಭಾರತ ಜಾಟ್‌ ಆರಕ್ಷಣ್‌ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಸೋಮವಾರ ಸಂಸತ್‌ ಭವನಕ್ಕೆ ಮುತ್ತಿಗೆ ಸೇರಿದಂತೆ ನವದೆಹಲಿಯಲ್ಲಿ ಬೃಹತ್‌ ಪ್ರತಿಭಟನೆ  ನಡೆಸಲು ಸಮುದಾಯದ ಸದಸ್ಯರು ಯೋಜಿಸಿದ್ದರು.
 
ಮುಂಜಾಗ್ರತಾ ಕ್ರಮವಾಗಿ ರಾಜಧಾನಿಯಾದ್ಯಂತ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು. ಪ್ರತಿಭಟನೆಯಿಂದಾಗಿ ದೆಹಲಿಯಲ್ಲಿ ಜನಜೀವನ ಅಸ್ತವ್ಯಸ್ತವಾಗುವ ಆತಂಕವೂ ಎದುರಾಗಿತ್ತು.
 
ಘರ್ಷಣೆ
ಫತೇಹಾಬಾದ್‌:
ಪ್ರತಿಭಟನೆ ನಡೆಸುವುದಕ್ಕಾಗಿ ದೆಹಲಿಯತ್ತ ತೆರಳುತ್ತಿದ್ದ ಜಾಟ್‌ ಸಮುದಾಯದ ಸದಸ್ಯರು ಮತ್ತು  ಭದ್ರತಾ ಸಿಬ್ಬಂದಿ ನಡುವೆ ಸಂಭವಿಸಿದ ಘರ್ಷಣೆಯಲ್ಲಿ  18 ಪೊಲೀಸರು ಸೇರಿದಂತೆ 35 ಜನರು ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.

ಗಾಯಗೊಂಡಿರುವ ಪೊಲೀಸರಲ್ಲಿ ಫತೇಹಾಬಾದ್‌ ಎಸ್‌ಪಿ  ಹಾಗೂ ಒಬ್ಬರು ಡಿವೈಎಸ್‌ಪಿ ಕೂಡ ಇದ್ದಾರೆ. ಸಿರ್ಸಾ–ಹಿಸ್ಸಾರ್‌–ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಧನಿಗೋಪಾಲ್‌ ಗ್ರಾಮದಲ್ಲಿ ಈ ಘರ್ಷಣೆ ನಡೆದಿದೆ.  ಉದ್ರಿಕ್ತ ಪ್ರತಿಭಟನಾಕಾರರು ಎರಡು ಪೊಲೀಸ್‌ ವಾಹನಗಳಿಗೂ ಬೆಂಕಿ ಹಚ್ಚಿದ್ದರು.

ಛಾಮರ್ಖೆರಾ ಮತ್ತು ಖೇರಿ ಗ್ರಾಮಗಳ ಜನರು ಧನಿ ಗೋಪಾಲ್‌ನಲ್ಲಿ  ನಡೆಯುತ್ತಿದ್ದ ಧರಣಿಯಲ್ಲಿ ಭಾಗವಹಿಸುವುದಕ್ಕೆ ಫತೇಹಾಬಾದ್‌ ಜಿಲ್ಲೆಗೆ ಪ್ರವೇಶಿಸುವ ಸಂದರ್ಭದಲ್ಲಿ ಪೊಲೀಸರು ಅವರನ್ನು ತಡೆದಿದ್ದರಿಂದ ಘರ್ಷಣೆ ಉಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT