ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌ ಅವಕಾಶಗಳು, ವೃತ್ತಿಪರತೆಯ ಸವಾಲುಗಳು....

Last Updated 20 ಮಾರ್ಚ್ 2017, 6:48 IST
ಅಕ್ಷರ ಗಾತ್ರ

* ಉಜ್ಬೇಕಿಸ್ತಾನ ವಿರುದ್ಧದ ಡೇವಿಸ್‌ ಕಪ್‌ ಪಂದ್ಯಕ್ಕೆ ಪ್ರಕಟವಾಗಿರುವ ಭಾರತ ತಂಡದ ಬಗ್ಗೆ ಮತ್ತು ನಿಮ್ಮ ಅಭ್ಯಾಸದ ಕುರಿತು ಹೇಳಿ?
ಡೇವಿಸ್‌ ಕಪ್‌ನ ವೇಳಾಪಟ್ಟಿ ಮಾರ್ಚ್‌ 6ರಂದು ಪ್ರಕಟವಾಗಿದೆ. ಇದಕ್ಕೂ ಒಂದು ತಿಂಗಳು ಮೊದಲೇ ಅಭ್ಯಾಸ ಆರಂಭಿಸಿದ್ದೆ. ಸತತ ಆರು ವಾರಗಳಿಂದ  ಒಂದಲ್ಲಾ ಒಂದು ಟೂರ್ನಿಗಳಲ್ಲಿ ಆಡುತ್ತಿದ್ದೇನೆ. ಇತ್ತೀಚಿನ ಟೂರ್ನಿಗಳಲ್ಲಿ ಯೂಕಿ ಭಾಂಬ್ರಿ ಅದ್ಭುತ ಆಟವಾಡಿದ್ದಾರೆ.  ಸಿಂಗಲ್ಸ್‌ ವಿಭಾಗದಲ್ಲಿ ರಾಮಕುಮಾರ್ ರಾಮನಾಥನ್‌ ಚೆನ್ನಾಗಿ ಆಡುತ್ತಾರೆ. ಪುಣೆಯಲ್ಲಿ ನಡೆದ ನ್ಯೂಜಿಲೆಂಡ್‌ ಎದುರಿನ ಡೇವಿಸ್‌ ಕಪ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಈ ಇಬ್ಬರೂ ಆಟಗಾರರು ಶ್ರೇಷ್ಠ ಸಾಮರ್ಥ್ಯ ತೋರಿದ್ದಾರೆ.

ಲಿಯಾಂಡರ್‌ ಮತ್ತು ರೋಹನ್‌ ಬೋಪಣ್ಣ ಡಬಲ್ಸ್‌ ಸವಾಲು ಎತ್ತಿ ಹಿಡಿಯಲಿದ್ದಾರೆ. ಈಗಿರುವುದು ಅತ್ಯಂತ ಶ್ರೇಷ್ಠ ತಂಡ. ಪ್ರಜ್ಞೇಶ್‌ 15 ದಿನಗಳ ಹಿಂದೆ ಐಟಿಎಫ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು. ಬೆಂಗಳೂರಿನಲ್ಲಿ ನಡೆದ ಐಟಿಎಫ್‌ ಟೂರ್ನಿ ಯಲ್ಲಿಯೂ ಸೆಮಿಫೈನಲ್‌ ತಲುಪಿದ್ದರು. ಯೂಕಿ ಇತ್ತೀಚಿಗೆ ಚಾಲೆಂಜರ್ಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು. ಎದುರಾಳಿ ತಂಡಕ್ಕೆ ಮುನ್ನಡೆ ಗಳಿಸಲು ಅವಕಾಶ ಕೊಡದೇ ಹೋರಾಟ ಮಾಡುವುದಕ್ಕೆ ರಾಮಕುಮಾರ್‌ ಹೆಸರುವಾಸಿ. ಅವರ ಹೋರಾಟ ಮನೋಭಾವ ಮೆಚ್ಚುವಂಥದ್ದು.

* ಡೇವಿಸ್‌ ಕಪ್‌ ಪಂದ್ಯ ಆರಂಭವಾಗಲು 15 ದಿನಗಳಷ್ಟೇ ಬಾಕಿಯಿವೆ. ಈ ಪಂದ್ಯಕ್ಕೆ ಸಜ್ಜಾಗಲು ಬೆಂಗಳೂರಿನಲ್ಲಿ ಹೋದ ವಾರ ನಡೆದ ಐಟಿಎಫ್‌ ಟೂರ್ನಿ ಹೇಗೆ ನೆರವಾಯಿತು?
ನಮಗೆ ಅಭ್ಯಾಸ ನಡೆಸಲು ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿಯೇ ಈ ಟೂರ್ನಿ ಆಯೋಜಿಸಲಾಗಿತ್ತು. ಪ್ರತಿದಿನ ಒಂದು ಸಿಂಗಲ್ಸ್‌ ಮತ್ತು ಎರಡು ಡಬಲ್ಸ್‌ ಪಂದ್ಯಗಳನ್ನು ಆಡುತ್ತೇನೆ. ಹಲವು ವಾರಗಳಿಂದ ಡಬಲ್ಸ್‌ ವಿಭಾಗಕ್ಕೂ ಒತ್ತು ಕೊಡುತ್ತಿದ್ದೇನೆ. ಐಟಿಎಫ್‌ ಟೂರ್ನಿಯಿಂದ ಬೆಂಗಳೂರು ಅಂಕಣದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅನುಕೂಲವಾ ಯಿತು. ಎಟಿಪಿ ರ‍್ಯಾಂಕಿಂಗ್‌ನಲ್ಲಿ ಮೊದಲ 100ರ ಒಳಗೆ ಸ್ಥಾನ ಹೊಂದಿರುವವರಿಗೆ ಅಂತಿಮ ತಂಡದಲ್ಲಿ ಅವಕಾಶ ಲಭಿಸುತ್ತದೆ.

* ತಂಡದಲ್ಲಿ ರೋಹನ್‌ ಬೋಪಣ್ಣ ಹಾಗೂ ಲಿಯಾಂಡರ್‌ ಪೇಸ್‌ ಅವರಂತಹ ಹಿರಿಯ ಆಟಗಾರರು ಇದ್ದಾರೆ. ಇದರಿಂದ ಕಿರಿಯ ಆಟಗಾರರಿಗೆ ಏನು ಅನುಕೂಲ?
ಹಿರಿಯರು ತಂಡದಲ್ಲಿದ್ದರೆ ಹೊಸಬರು ಮತ್ತು ಯುವ ಆಟಗಾರರಿಗೆ ತುಂಬಾ ಅನುಕೂಲವಾಗುತ್ತದೆ. ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ ಸೇರಿ ಒಟ್ಟು 18 ಗ್ರ್ಯಾಂಡ್‌ಸ್ಲಾಮ್‌ ಟ್ರೋಫಿ ಗಳನ್ನು ಗೆದ್ದಿರುವ ಲಿಯಾಂಡರ್‌ ಪೇಸ್ ತಂಡದಲ್ಲಿರುವುದೇ ನಮ್ಮೆಲ್ಲರ ಅದೃಷ್ಟ. ಇದರಿಂದ ನಮ್ಮ ವಿಶ್ವಾಸ ಹೆಚ್ಚಿದೆ. ಹಿಂದಿನ ಮೂರ್ನಾಲ್ಕು ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಗಳಲ್ಲಿ ರೋಹನ್ ಬೋಪಣ್ಣ ಕೂಡ ಚೆನ್ನಾಗಿ ಆಡಿದ್ದಾರೆ. ಈ ಜೋಡಿ ಡಬಲ್ಸ್‌ನಲ್ಲಿ ಭಾರತದ ಶಕ್ತಿ. ಸಿಂಗಲ್ಸ್‌ನಲ್ಲಿ ಈಗಷ್ಟೇ  ಅನುಭವ ಪಡೆಯುತ್ತಿ ರುವ ಹೊಸ ಆಟಗಾರರು ಸಂಕಷ್ಟದಲ್ಲಿದ್ದಾಗ ಹಿರಿಯರು ಸಲಹೆಗಳನ್ನು ನೀಡುತ್ತಾರೆ. ತಂಡ ಸೋಲಿನ  ಭೀತಿಯಲ್ಲಿದ್ದಾಗ ಮೇಲಕ್ಕೆತ್ತುವ ಛಾತಿ ಅವರಲ್ಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮಹೇಶ್ ಭೂಪತಿ ಅವರು ಮೊದಲ ಬಾರಿಗೆ ತಂಡದ ನಾಯಕರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಆಡುವುದೇ ಹೆಮ್ಮೆ.

* ಭಾರತದಲ್ಲಿ ಉತ್ತಮ ಸಿಂಗಲ್ಸ್‌ ಆಟಗಾರರ ಕೊರತೆಯಿದೆಯಲ್ಲವೇ?
ಹಾಗೇನೂ ಇಲ್ಲ. ಇತ್ತೀಚಿನ ಪೀಳಿಗೆಯ ಆಟಗಾರರು ಸಿಂಗಲ್ಸ್ ವಿಭಾಗಕ್ಕೆ ಒತ್ತು ಕೊಡುತ್ತಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಹೆಚ್ಚು ಪ್ರಶಸ್ತಿಗಳನ್ನು ಗೆಲ್ಲುತ್ತಿದ್ದಾರೆ.

* ಹಾಗಾದರೆ ಗ್ರ್ಯಾಂಡ್‌ ಸ್ಲಾಮ್‌ನಂತಹ ಪ್ರತಿಷ್ಠಿತ ಟೂರ್ನಿಗಳಲ್ಲಿ ಪ್ರಶಸ್ತಿ ಗೆಲ್ಲಲು ಏಕೆ ಸಾಧ್ಯವಾಗುತ್ತಿಲ್ಲ?
ನಮ್ಮಲ್ಲಿರುವ ಕೌಶಲಕ್ಕೆ ವೇದಿಕೆಯ ಕೊರತೆ ಇದೆ. ಐದಾರು ವರ್ಷಗಳ ಹಿಂದೆ ಎಟಿಪಿಯ 500ರ ರ್‍ಯಾಂಕ್‌ ಒಳಗೆ ಭಾರತದ ಒಬ್ಬರು ಅಥವಾ ಇಬ್ಬರು ಆಟಗಾರರು ಮಾತ್ರ ಇರುತ್ತಿದ್ದರು. ಈಗ ಹತ್ತು ಆಟಗಾರರು ಇದ್ದಾರೆ. ಇದು ಬಹಳ ವೇಗವಾಗಿ ಆದ ಬದಲಾವಣೆ. ಇದೇ ದೊಡ್ಡ ಸಾಧನೆ ಎಂದು ಬೀಗುವುದಿಲ್ಲ. ಪ್ರತಿ ವರ್ಷ ಭಾರತದಲ್ಲಿ ಕನಿಷ್ಠ ನಾಲ್ಕೈದು ಚಾಲೆಂಜರ್ಸ್‌ ಟೂರ್ನಿಗಳು ನಡೆದರೆ ಎಟಿಪಿ ರ್‍ಯಾಂಕ್‌ನಲ್ಲಿ ಬೇಗನೆ 300ರ ಒಳಗೆ ಸ್ಥಾನ ಪಡೆಯಲು ಸಾಧ್ಯವಾಗುತ್ತದೆ. ಪ್ರಜ್ಞೇಶ್‌ ಹೋದ ವರ್ಷದ ಚಾಲೆಂಜರ್ಸ್‌ ಟೂರ್ನಿಯಲ್ಲಿ ಫೈನಲ್‌ ತಲುಪಿದ್ದರು. ದೆಹಲಿ ಓಪನ್‌ ಚಾಲೆಂಜರ್ಸ್‌ನಲ್ಲಿ ಚೆನ್ನಾಗಿ ಆಡಿದ್ದರು. ದೇಶಿ ಯವಾಗಿ ನಮಗೆ ವರ್ಷಕ್ಕೆ ಹೆಚ್ಚು ಟೂರ್ನಿಗಳು ನಡೆಯುವುದು ಅಗತ್ಯವಿದೆ.

* ಭಾರತದ ಟೆನಿಸ್‌ನಲ್ಲಿ ಏನು ಸುಧಾರಣೆ ಆಗಬೇಕು ಅನಿಸುತ್ತದೆ?
ಉತ್ತಮ ಕೋಚ್‌ಗಳು, ಆಟಗಾರರು ಮತ್ತು ಟೆನಿಸ್‌ ಸಂಸ್ಥೆ ಎಲ್ಲವೂ ಇದೆ. ಆದರೆ ವೃತ್ತಿಪರತೆಯ ಕೊರತೆಯಿದೆ. ಎಲ್ಲರೂ ಸಂಘಟಿತವಾಗಿ ಪ್ರಯತ್ನಿಸಿದರೆ ಭಾರತದ ಕನಿಷ್ಠ ಹತ್ತು ಆಟಗಾರರು ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆಯು ವುದು ಕಷ್ಟವೇನಲ್ಲ. ಸೌಲಭ್ಯಗಳಿವೆ ನಿಜ. ಆದರೆ  ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. 100ರ ಒಳಗೆ ಸ್ಥಾನ ಪಡೆಯುವಂತೆ ಮಾಡಲು ಎಲ್ಲರೂ ಶ್ರಮಿಸಬೇಕು.

* ಪುಣೆಯಲ್ಲಿ ನಡೆದ ನ್ಯೂಜಿಲೆಂಡ್‌ ವಿರುದ್ಧದ ಡೇವಿಸ್‌ ಕಪ್‌ ಪಂದ್ಯದಲ್ಲಿ ಭಾರತದ ಆಟವನ್ನು ಹೇಗೆ ವಿಶ್ಲೇಷಿಸುತ್ತೀರಿ?
ಸಿಂಗಲ್ಸ್‌ ಮತ್ತು ರಿವರ್ಸ್ ಸಿಂಗಲ್ಸ್‌ ಎರಡೂ ಪಂದ್ಯಗಳಲ್ಲಿ ಯೂಕಿ ಗೆಲುವು ಪಡೆದಿದ್ದರಿಂದ ನಮಗೆ ಪಂದ್ಯ ಜಯಿಸಲು ಸಾಧ್ಯವಾಯಿತು. ಎದುರಾಳಿಗಳಿಗೆ ಮುನ್ನಡೆ ಪಡೆಯಲು ಅವಕಾಶ ಕೊಡದ ರೀತಿಯಲ್ಲಿ ಆಡಿದರು. ಆದ್ದರಿಂದ 4–1ರ ಅಂತರದಲ್ಲಿ ಜಯ ಲಭಿಸಿತು. ದೊಡ್ಡ ಅಂತರದಲ್ಲಿ ಪಂದ್ಯ ಗೆದ್ದ ಒಂದು ತಿಂಗಳಲ್ಲೇ ಮತ್ತೊಂದು ಕಠಿಣ ಸವಾಲು ಎದುರಿಸುವ ಅವಕಾಶ ಲಭಿಸಿದೆ.

(ಡೇವಿಸ್‌ ಕಪ್ ತಂಡದ ಡಬಲ್ಸ್‌ ಆಟಗಾರರಾದ ಲಿಯಾಂಡರ್‌ ಪೇಸ್‌  ಮತ್ತು ರೋಹನ್‌ ಬೋಪಣ್ಣ)

* ಎದುರಾಳಿ ಉಜ್ಬೇಕಿಸ್ತಾನ ತಂಡದ ಬಗ್ಗೆ ಹೇಳಿ?
ಆ ತಂಡದ ಬಗ್ಗೆ ಗೊತ್ತಿಲ್ಲ. ತಂಡದಲ್ಲಿ ಯಾರು ಇದ್ದಾರೆ ಎಂಬುದೂ ತಿಳಿದಿಲ್ಲ.

* ಬೆಂಗಳೂರಿನಲ್ಲಿ ಬಿಸಿಲು ಜಾಸ್ತಿ. ಇದು ನಿಮ್ಮ ಆಟದ ಮೇಲೆ ಪರಿಣಾಮ ಬೀರುತ್ತದೆಯೇ?
ಬೆಂಗಳೂರಿನ ವಾತಾವರಣ ಈಗಿರುವ ಡೇವಿಸ್‌ ಕಪ್‌ ತಂಡದ ಸದಸ್ಯರಿಗೆ ಹೊಸದೇನಲ್ಲ. ಆದರೆ ಉಜ್ಬೇಕಿಸ್ತಾನದ ತಂಡದವರಿಗೆ ಇಲ್ಲಿನ ವಾತಾವರಣಕ್ಕೆ ಹೊಂದಿ ಕೊಳ್ಳುವುದು ಬಹಳ ಕಷ್ಟ. ತರಬೇತಿ ಪಡೆಯುವ ಸಲುವಾಗಿ ನಾನು ಎರಡು ತಿಂಗಳು ಉಜ್ಬೇಕಿಸ್ತಾನದಲ್ಲಿದ್ದೆ. ಮೈನಸ್‌ ಡಿಗ್ರಿ ಇದ್ದಾಗ ಪಂದ್ಯ ಆಡಬೇಕಾಗುತ್ತಿತ್ತು. ಆದ್ದರಿಂದ ಈಗಿನ ವಾತಾವರಣದಿಂದ ನಮಗೆ ಅನುಕೂಲ.

* ಮತ್ತೆ ಬೆಂಗಳೂರಿನಲ್ಲಿ ಡೇವಿಸ್‌ ಕಪ್‌ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಇದರ ಬಗ್ಗೆ ಹೇಳಿ?
ದಕ್ಷಿಣ ಭಾರತದಲ್ಲಿ ಎಲ್ಲಿಯೇ ಪಂದ್ಯವಾಡಿದರೂ ಖುಷಿಯಾಗು ತ್ತದೆ. ಅದರಲ್ಲಿಯೂ ವಿಶೇಷವಾಗಿ ಬೆಂಗಳೂರು, ಚೆನ್ನೈ, ಹೈದರಾ ಬಾದ್‌ನಲ್ಲಿ ಪಂದ್ಯ ಆಡಿದರೆ ಹೆಚ್ಚು ಬೆಂಬಲ ಲಭಿಸುತ್ತದೆ. ಈ ಮೂರು ಸ್ಥಳಗಳು ಟೆನಿಸ್‌ ಅಭಿಮಾನಿಗಳ ಕೇಂದ್ರಗಳೆನಿಸಿವೆ.

* ದೊಡ್ಡ ಸಾಧನೆ ಮಾಡುವ ಆಸೆ ಹೊತ್ತು ಟೆನಿಸ್‌ ಆಡಲು ಬರುವ ಆಟಗಾರರಿಗೆ ನಿಮ್ಮ ಸಲಹೆ ಏನು?
ಜೂನಿಯರ್‌ ಹಂತದಲ್ಲಿ ಸಣ್ಣ ಸಣ್ಣ ಟೂರ್ನಿಗಳಲ್ಲಿ ಲಭಿಸುವ ಯಶಸ್ಸಿನಿಂದ ಹಿಗ್ಗುವ ಆಟಗಾರರು ದೊಡ್ಡ ಸಾಧನೆ ಮಾಡಬೇಕೆಂದು ಕನಸು ಕಾಣುತ್ತಾರೆ. ಇದರಲ್ಲಿ ತಪ್ಪೇನೂ ಇಲ್ಲ. ಆದರೆ ಜೂನಿ ಯರ್ ಮತ್ತು ಸೀನಿಯರ್‌ ವಿಭಾ ಗಕ್ಕೆ ತುಂಬಾ ವ್ಯತ್ಯಾಸವಿದೆ. ಸೀನಿಯರ್ ವಿಭಾಗದ ಟೂರ್ನಿ ಆಡುವಾಗ ಸಾಕಷ್ಟು ಕಠಿಣ ಸವಾಲು ಎದುರಿಸಬೇಕಾಗುತ್ತದೆ. ಯಾವುದೇ ಟೂರ್ನಿಯಾದರೂ ಶ್ರಮ ಮುಖ್ಯ. ಇದಷ್ಟೇ ಯಶಸ್ಸಿನ ಮಂತ್ರ.

* ಬೇರೆ ಕ್ರೀಡೆಗಳಿಗೆ ಹೋಲಿಸಿದರೆ ಟೆನಿಸ್‌ ಹೆಚ್ಚು ವೆಚ್ಚದಾಯಕವೇ?
ಈಗ ಎಲ್ಲಾ ಕ್ರೀಡೆಗಳೂ ವೆಚ್ಚದಾಯಕವೇ. ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಬೇರೆ  ಬೇರೆ ಸ್ಥಳಗಳಿಗೆ ಹೋಗಬೇಕಾಗುತ್ತದೆ. ಆಟದ ಸಲಕರಣೆಗಳನ್ನು ಖರೀದಿಸಬೇಕಾಗುತ್ತದೆ. ಇದಕ್ಕೆಲ್ಲಾ ಟೆನಿಸ್‌ನಲ್ಲಿ ಒಂದು ವರ್ಷಕ್ಕೆಕನಿಷ್ಠ ₹40 ಲಕ್ಷ ಖರ್ಚಾಗುತ್ತದೆ. ಆದರೆ ಇತರೆ ಕ್ರೀಡೆಗಳಿಗೆ ಬೇಗನೆ ಪ್ರಾಯೋಜಕರು ಸಿಗುತ್ತಾರೆ. ಪ್ರಾಯೋಜಕರಿಗಾಗಿ  ನಾವು ಅಲೆದಾಡಬೇಕಾಗುತ್ತದೆ.
 

**

ಶ್ರೀರಾಮ್ ಬಾಲಾಜಿ ಬಗ್ಗೆ
ಕೊಯಮತ್ತೂರಿನ ನಾರಾಯಾಣಸ್ವಾಮಿ ಶ್ರೀರಾಮ್‌ ಬಾಲಾಜಿ ವೃತ್ತಿಪರ ಟೆನಿಸ್ ಆಟಗಾರ. ಐಟಿಎಫ್‌ ಟೂರ್ನಿಯ ಸಿಂಗಲ್ಸ್‌ನಲ್ಲಿ ಆರು ಸಲ, ಡಬಲ್ಸ್‌ನಲ್ಲಿ 29 ಬಾರಿ ಚಾಂಪಿಯನ್‌ ಆಗಿದ್ದಾರೆ.

14 ವರ್ಷದ ಒಳಗಿನವರ ವಿಭಾಗದಲ್ಲಿ ಬಾಲಾಜಿ ರಾಷ್ಟ್ರೀಯ ಟೂರ್ನಿಯ ಚಾಂಪಿಯನ್‌ ಆಗಿದ್ದರಲ್ಲದೇ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆದಿದ್ದರು. 2006ರಲ್ಲಿ ಮಲೇಷ್ಯಾದಲ್ಲಿ ನಡೆದ ಜೂನಿಯರ್‌ ಡೇವಿಸ್‌ ಕಪ್‌ ಪಂದ್ಯದಲ್ಲಿ ಆಡಿದ್ದರು. ಅದೇ ವರ್ಷ ದೋಹಾದಲ್ಲಿ ನಡೆದ 15ನೇ ಏಷ್ಯನ್‌ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಿದ್ದರು.

ಹೊಸದಾಗಿ ಆರಂಭವಾಗಿರುವ ಚಾಂಪಿಯನ್ಸ್‌ ಟೆನಿಸ್‌ ಲೀಗ್‌ನಲ್ಲಿ ಮುಂಬೈ ಮಾಸ್ಟರ್ಸ್ ತಂಡದಲ್ಲಿದ್ದಾರೆ. 2014ರ ನವೆಂಬರ್‌ 24ರಂದು ಐಟಿಎಫ್‌ ರ‍್ಯಾಂಕಿಂಗ್‌ನಲ್ಲಿ 309ನೇ ಸ್ಥಾನ ಪಡೆದಿದ್ದು ಅವರ ಶ್ರೇಷ್ಠ ಸಾಧನೆ ಅನಿಸಿದೆ. ಈಗ ರ‍್ಯಾಂಕಿಂಗ್‌ನಲ್ಲಿ 403ನೇ ಸ್ಥಾನ ಹೊಂದಿದ್ದಾರೆ.

**

ಏಪ್ರಿಲ್‌ 7ರಿಂದ ಬೆಂಗಳೂರಿನಲ್ಲಿ ಡೇವಿಸ್‌ ಕಪ್‌
ಡೇವಿಸ್ ಕಪ್‌ ಟೆನಿಸ್‌ ಟೂರ್ನಿಯ ಏಷ್ಯಾ/ಒಸೀನಿಯಾ ಗುಂಪಿನ ಎರಡನೇ ಸುತ್ತಿನ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ. ಭಾರತ ಮತ್ತು ಉಜ್ಬೇಕಿಸ್ತಾನ ತಂಡಗಳು ಪೈಪೋಟಿ ನಡೆಸಲಿವೆ. ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆಯ ಅಂಕಣದಲ್ಲಿ ಪಂದ್ಯ ಆಯೋಜನೆಯಾಗಿದೆ.

2014ರಲ್ಲಿ ಕೊನೆಯ ಬಾರಿಗೆ ಉದ್ಯಾನನಗರಿಯಲ್ಲಿ ನಡೆದಿದ್ದ  ವಿಶ್ವ ಗುಂಪಿನ ಪ್ಲೇ ಆಫ್ ಪಂದ್ಯದಲ್ಲಿ ಭಾರತ ಮತ್ತು ಸರ್ಬಿಯಾ ಮುಖಾಮುಖಿಯಾಗಿದ್ದವು.

**

* ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ವೃತ್ತಿಪರವಾಗಿಲ್ಲ ಎಂದು ಇತ್ತೀಚಿಗೆ ನಿವೃತ್ತಿಯಾದ ಸೋಮದೇವ್ ದೇವವರ್ಮನ್‌ ಆರೋಪಿಸಿದ್ದರಲ್ಲವೇ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
ಅವರು ಹೇಳಿದ ಮಾತು ಸತ್ಯ. ನಾನು 17 ವರ್ಷಗಳಿಂದ ಟೆನಿಸ್‌ ಆಡುತ್ತಿದ್ದೇನೆ. ಸೋಮದೇವ್‌ ಅವರು ಪ್ರತಿ ಪಂದ್ಯಕ್ಕೂ ಸಜ್ಜಾಗುತ್ತಿದ್ದ ಮತ್ತು ಕಠಿಣ ಪರಿಶ್ರಮ ಪಡುತ್ತಿದ್ದ ರೀತಿಯನ್ನು ನೋಡಿದ್ದೇನೆ. ಬೇರೆ ಆಟಗಾರರಿಗೂ  ಅವರು ತುಂಬಾ ಸಹಾಯ ಮಾಡಿದ್ದಾರೆ. ನಮ್ಮಲ್ಲಿ ವೃತ್ತಿಪರತೆಯ ಕೊರತೆ ಇರುವುದು ಅವರ ಬೇಸರಕ್ಕೆ ಕಾರಣವಾಗಿರಬಹುದು.

**

ಸಿಂಗಲ್ಸ್ ಆಟಗಾರರ ಸಾಧನೆಗಳು

ಯೂಕಿ ಭಾಂಬ್ರಿ


* 2008ರ ಯೂತ್‌ ಕಾಮನ್‌ವೆಲ್ತ್‌ ಕ್ರೀಡಾಕೂಟದ ಸಿಂಗಲ್ಸ್‌ನಲ್ಲಿ ಕಂಚು ಹಾಗೂ ಡಬಲ್ಸ್‌ನಲ್ಲಿ ಬೆಳ್ಳಿ
* 2010ರ ಯೂತ್‌ ಒಲಿಂಪಿಕ್ಸ್‌ನ ಸಿಂಗಲ್ಸ್‌ನಲ್ಲಿ ಬೆಳ್ಳಿ
* 2014ರ ಇಂಚೆನ್ ಏಷ್ಯನ್‌ ಕೂಟದ ಸಿಂಗಲ್ಸ್‌ ಮತ್ತು ಡಬಲ್ಸ್‌ನಲ್ಲಿ ಕಂಚು
* ಜೂನಿಯರ್‌ ವಿಭಾಗದ ವಿಶ್ವ ರ್‍ಯಾಂಕ್‌ನಲ್ಲಿ ಅಗ್ರಸ್ಥಾನ ಹೊಂದಿದ್ದರು
* 2009ರ ಆಸ್ಟ್ರೇಲಿಯಾ ಓಪನ್‌ ಟೂರ್ನಿಯ ಜೂನಿಯರ್ ವಿಭಾಗದಲ್ಲಿ ಪ್ರಶಸ್ತಿ
* 2015ರ ಡೇವಿಸ್‌ ಕಪ್‌ ಪಂದ್ಯದಲ್ಲಿ ಆಡಿದ್ದರು
* ಶ್ರೇಷ್ಠ ರ್‍ಯಾಂಕಿಂಗ್: 138 (ಮಾರ್ಚ್‌ 3ರ, 2014)
* ಈಗಿನ ರ‍್ಯಾಂಕಿಂಗ್‌: 482

**

ರಾಮಕುಮಾರ್ ರಾಮನಾಥನ್‌


* 2014ರ ಚೆನ್ನೈ ಓಪನ್‌ನಲ್ಲಿ ಸೋಮದೇವ್‌ ಎದುರು ಗೆದ್ದಿದ್ದರು
* ನಾಲ್ಕೂ ಗ್ರ್ಯಾಂಡ್ ಸ್ಲಾಮ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ತಲಾ ಒಂದು ಬಾರಿ ಆಡಿದ್ದಾರೆ
* ಗರಿಷ್ಠ ರ‍್ಯಾಂಕಿಂಗ್‌: 260 (10ನೇ ನವೆಂಬರ್‌ 2014)
* ಸದ್ಯದ ರ್‍ಯಾಂಕಿಂಗ್: 313

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT