ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋವಿನ ‘ಧ್ವನಿ’, ಈಗ ಗಂಡಸರ ಸರದಿ!

Last Updated 19 ಮಾರ್ಚ್ 2017, 19:30 IST
ಅಕ್ಷರ ಗಾತ್ರ

‘ಪ್ರಶಸ್ತಿಗಾಗಿ ಮಾಡಿದ ಈ ಚಿತ್ರ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (ಬಿಐಎಫ್‌ಎಫ್‌ಎಸ್) ಆಯ್ಕೆಯಾಯಿತು. ಸಿನಿಮಾ ವೀಕ್ಷಿಸಿ ಹೊರಬಂದ ಪ್ರೇಕ್ಷಕರು – ‘ಈ ಕಾಲಕ್ಕೆ ಇಂತಹದ್ದೊಂದು ವಿಷಯದ ಕುರಿತ ಚಿತ್ರ ಬೇಕಿತ್ತು. ಥಿಯೇಟರ್‌ನಲ್ಲೂ ಬಿಡುಗಡೆ ಮಾಡಿ ಎಂದು ಕೈ ಕುಲುಕಿ ಹೋಗುತ್ತಿದ್ದರು’.

ತಮ್ಮ ‘ಧ್ವನಿ’ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಪ್ರೇರಣೆಯಾದ ಪ್ರೇಕ್ಷಕರ ಮಾತುಗಳನ್ನು ನಿರ್ದೇಶಕ ಸೆಬಾಸ್ಟಿಯನ್ ಡೇವಿಡ್ ಹಂಚಿಕೊಂಡಿದ್ದು ಹೀಗೆ. ಅಂದಹಾಗೆ, ಈ ಚಿತ್ರ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

ಸುದ್ದಿ ನಿರೂಪಕ ಚಂದನ್ ಶರ್ಮ ನೊಂದ ಗಂಡನಾಗಿ, ಇತಿ ಆಚಾರ್ಯ ಕಾಡುವ ಹೆಂಡತಿಯಾಗಿ ಕಾಣಿಸಿಕೊಂಡಿದ್ದಾರೆ. ನಟಿ ವಿನಯಾ ಪ್ರಸಾದ್ ಚಂದನ್ ತಾಯಿ ಪಾತ್ರಕ್ಕೆ ಹಾಗೂ ರಮೇಶ್ ಭಟ್ ತಂದೆ ಪಾತ್ರಕ್ಕೆ ಜೀವ ತುಂಬಿದ್ದಾರೆ.

‘ಧ್ವನಿಗೂ ದನಿಗೂ ಇರುವ ವ್ಯತ್ಯಾಸ ಏನೆಂಬುದು ಈ ಚಿತ್ರದಲ್ಲಿ ಗೊತ್ತಾಗುತ್ತದೆ. ಜ್ವಲಂತ ಸಮಸ್ಯೆಯ ಚಿತ್ರದ ಕಥೆ, ಹಲವು ಮನೆ–ಮನಸುಗಳ ನೈಜ ಘಟನೆಯಾಧಾರಿತವಾಗಿದೆ’ ಎಂದ ವಿನಯಾ ಪ್ರಸಾದ್, ‘ಧ್ವನಿ’ ಚಿತ್ರ ಎಲ್ಲೆಡೆ ಪ್ರತಿಧ್ವನಿಸಲಿ’ ಎಂದು ಹರಸಿದರು.

ಕೃಷ್ಣೇಗೌಡ ಚಿತ್ರಕ್ಕೆ ಕಥೆಯ ಜೊತೆಗೆ ಸಂಭಾಷಣೆಯನ್ನೂ ಬರೆದಿದ್ದಾರೆ. ‘ಗಂಡು ಮತ್ತು ಹೆಣ್ಣನ್ನು ಸಮಾಜ ವ್ಯತ್ಯಾಸಾತ್ಮಕವಾಗಿ ನೋಡುತ್ತದೆ. ಯಾವುದೇ ಸಂದರ್ಭಗಳಲ್ಲಿ ಆತ ಕುಸಿದರೆ,

ಅಸಹಾಯಕನಾದರೆ ಜನ ಆತನನ್ನು ‘ಹೆಣ್ಣಿಗ’ ಎಂದು ಮೂದಲಿಸುತ್ತಾರೆ. ಅತ್ತ ಅಳಲೂ ಆಗದ ಇತ್ತ ನಗಲೂ ಆಗದ ಆತನ ಒಡಲಿನ ತುಮುಲಗಳನ್ನು ಈ ಚಿತ್ರ ತೆರೆದಿಡುತ್ತದೆ’ ಎಂದು ಕೃಷ್ಣೇಗೌಡ ಚಿತ್ರದ ಎಳೆಯನ್ನು ಹಂಚಿಕೊಂಡರು.

ನೋವುಂಡ ಗಂಡಸರನ್ನು ಪ್ರತಿನಿಧಿಸುವ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಂದನ್ ಶರ್ಮ, ‘ಅಳೋ ಗಂಡಸನ್ನು ನಂಬಬಾರದು ಎಂಬ ಮಾತು ಎಲ್ಲಾ ಕಾಲವೂ ಸತ್ಯವಲ್ಲ. ಕಾನೂನಿನ ದುರ್ಬಳಕೆಯ ಕುಣಿಕೆಯಲ್ಲಿ ಬಲಿಪಶುವಾದಾಗ ಆತನೂ ಅಳಬಲ್ಲ’ ಎಂದು ಪಕ್ಕದಲ್ಲಿದ್ದ ನಟಿ ಇತಿ ಆಚಾರ್ಯಗೆ ಮೈಕ್ ಹಸ್ತಾಂತರಿಸಿದರು. ‘ನೆಗೆಟಿವ್ ಶೇಡ್ ಇರುವ ಈ ಪಾತ್ರ ನನ್ನ ನಟನೆಗೆ ಸಾಣೆ ಹಿಡಿದಿದೆ’ ಎಂದರು ಇತಿ ಆಚಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT