ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಾಟರ್ ಪೋಲೊ ಗೊತ್ತೇ ಇಲ್ಲ!’

ಸಾಧಕ
Last Updated 19 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಕೆಂಪೇಗೌಡನಗರದ ಕೆ.ವಿ.ನಾಗರಾಜ್ ‘ವಾಟರ್ ಪೋಲೊ’ ಸ್ಪರ್ಧೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿದ ಆಟಗಾರ.
ಕ್ರಿಕೆಟ್‌ಮೋಹಿ ಗೆಳೆಯರ ಗುಂಪಿನಲ್ಲಿದ್ದ ನಾಗರಾಜ್, ತಮ್ಮ ಗುರಿ ನೆಟ್ಟಿದ್ದು ಮಾತ್ರ ವಾಟರ್‌ ಪೋಲೊದತ್ತ. ಗಲ್ಲಿಯಿಂದ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವವರೆಗೆ ಅವರು ಬೆಳೆದು ಬಂದ ರೀತಿ ವಿಶಿಷ್ಟ.

ನಾಗರಾಜ್ ತಂದೆ ವೆಂಕಟರಾಮ್ ಕೆ. ಮೈಕೊ ಕಂಪೆನಿಯ ಉದ್ಯೋಗಿ. ಮಂಡ್ಯ ಮೂಲದ ಅವರಿಗೆ ಈಜು ಎಂದರೆ ವಿಪರೀತ ಆಸಕ್ತಿ. ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದರೂ ಈಜಿನ ಮೇಲಿನ ಮೋಹ ಮಾತ್ರ ಕಮ್ಮಿಯಾಗಿರಲಿಲ್ಲ.

‘ಬಸವನಗುಡಿ ಅಕ್ವಾಟಿಕ್‌ ಸೆಂಟರ್‌ನಲ್ಲಿ (ಬಿಎಸಿ) ತಂದೆ ಈಜು ತರಬೇತುದಾರರಾಗಿಯೂ ಕೆಲಸ ಮಾಡುತ್ತಿದ್ದರು. ಚಿಕ್ಕವನಿದ್ದ ನನ್ನನ್ನು  ಜತೆಯಲ್ಲಿ ಕರೆದೊಯ್ಯುತ್ತಿದ್ದರು’ ಎಂದು ನಾಗರಾಜ್ ತಮ್ಮ ಈಜಿನ ಪಯಣದ ಕುರಿತು ಹೇಳುತ್ತಾರೆ.

‘ಶಾಲಾ ಅವಧಿಯಲ್ಲೇ ಅನೇಕ ಸ್ಪರ್ಧೆಗಳಲ್ಲಿ ಗೆದ್ದೆ. ನನ್ನನ್ನು ದೊಡ್ಡ ಈಜುಪಟು ಮಾಡಬೇಕೆಂಬ ಆಸೆ ತಂದೆಗಿತ್ತು. ಆದರೆ, ನಿತ್ಯ ತರಬೇತಿಗೆಂದು ಬಿಎಸಿಗೆ ಬರುತ್ತಿದ್ದ ಕೆಲ ವಾಟರ್‌ ಪೋಲೊ ಆಟಗಾರರನ್ನು ಗಮನಿಸುತ್ತಿದ್ದ ನನ್ನ ಮನಸು ವಾಲಿದ್ದು ಮಾತ್ರ ವಾಟರ್‌ ಪೋಲೊ ಕಡೆಗೆ.  ಈ ವೇಳೆ ತುಳಸಿ  ಅವರ ತರಬೇತಿಯಲ್ಲಿ ಪಳಗಿ, ಕಡೆಗೂ ವಾಟರ್‌ ಪೋಲೊ ಆಟಗಾರನಾಗುವಲ್ಲಿ ಯಶಸ್ವಿಯಾದೆ’ ಎಂದು ವಿವರಿಸುತ್ತಾರೆ.

2003, 2004, ಹಾಗೂ 2005ರಲ್ಲಿ ನಡೆದ ರಾಜ್ಯಮಟ್ಟದ ಅಕ್ವಾಟಿಕ್ ಚಾಂಪಿಯನ್‌ಷಿಪ್‌ ಜೂನಿಯರ್ ವಿಭಾಗದಲ್ಲಿ ಸತತ ಮೂರು ಬಾರಿ ಹಾಗೂ ಸೀನಿಯರ್ ವಿಭಾಗದಲ್ಲಿ ನಾಲ್ಕು ಸಲ ನಾಗರಾಜ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ರಾಜ್ಯ ಒಲಿಂಪಿಕ್ ಪಂದ್ಯದಲ್ಲಿ ಪದಕ ಸೇರಿದಂತೆ ವಲಯ ಮಟ್ಟದ, ರಾಷ್ಟ್ರಮಟ್ಟದ ಅನೇಕ ಸ್ಪರ್ಧೆಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. 2003ರಲ್ಲಿ ಚೀನಾದಲ್ಲಿ ನಡೆದ ಮೂರನೇ ಎಎಎಸ್‌ಎಫ್ ಏಷ್ಯನ್ ಏಜ್ ಗ್ರೂಪ್ ಚಾಂಪಿಯನ್‌ಷಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸಿ ಐದನೇ ಸ್ಥಾನ ಹಾಗೂ 2005ರಲ್ಲಿ ಥಾಯ್ಲೆಂಡ್‌ನಲ್ಲಿ ನಡೆದ ಇದೇ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದಾರೆ.

‘ಈಜು ಮತ್ತು ವಾಟರ್‌ಪೋಲೊದಲ್ಲಿನ ಸಾಧನೆಯಿಂದಾಗಿ ಕ್ರೀಡಾ ಕೋಟಾದಡಿ ಭಾರತೀಯ ರೈಲ್ವೆಯಲ್ಲಿ ಉದ್ಯೋಗ ದೊರೆಯಿತು. ನಂತರ ರೈಲ್ವೆ ತಂಡದಲ್ಲಿ ಆಟವಾಡಿದೆ. 2006ರಲ್ಲಿ ಕೋಲ್ಕತ್ತದಲ್ಲಿ ನಡೆದ 47ನೇ ಅಖಿಲ ಭಾರತ ರೈಲ್ವೆ ಅಕ್ವಾಟಿಕ್ ಚಾಂಪಿಯನ್‌ಷಿಪ್‌ನಿಂದ ಆರಂಭಗೊಂಡು, ದೇಶದ ವಿವಿಧೆಡೆ ನಡೆದ ಹತ್ತು ಅಖಿಲ ಭಾರತ ರೈಲ್ವೆ ಅಕ್ವಾಟಿಕ್ ಚಾಂಪಿಯನ್‌ಷಿಪ್‌ಗಳಲ್ಲಿ ಭಾಗವಹಿಸಿ, ಪದಕಗಳನ್ನು ಗೆದ್ದಿದ್ದೇನೆ.  ಈ ನನ್ನ ಯಶಸ್ಸಿನ ಪಯಣಕ್ಕೆ ಹಿರಿಯ ಆಟಗಾರರು ಹಾಗೂ ರಾಜ್ಯ ಸ್ವಿಮ್ಮಿಂಗ್ ಅಸೋಸಿಯೇಷನ್‌ ನೀಡಿದ ಕೊಡುಗೆಯನ್ನು ಮರೆಯುವಂತಿಲ್ಲ’ ಎನ್ನುತ್ತಾರೆ.

ನಾಗರಾಜ್ ಹಾಗೂ ಅಲ್ಪ್ರೆಡ್ ಅವರು  ಕೋಚ್‌ಗಳಾಗಿದ್ದ ರಾಜ್ಯ ಯುವತಿಯರ ವಾಟರ್‌ ಪೋಲೊ ತಂಡ, ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ 29ನೇ ದಕ್ಷಿಣ ವಲಯದ ಈಜು ಚಾಂಪಿಯನ್‌ನ ವಾಟರ್ ಪೋಲೊದಲ್ಲಿ ಎಂಟು ವರ್ಷದಿಂದ ಪಾರಮ್ಯ ಸಾಧಿಸಿದ್ದ  ಕೇರಳವನ್ನು ಪರಾಭವಗೊಳಿಸಿ  ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡಿರುವುದು ವಿಶೇಷ. ಸದ್ಯ ಅವರೀಗ ನೆಟ್ಟಕಲ್ಲಪ್ಪ ಅಕ್ವಾಟಿಕ್ ಸೆಂಟರ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

‘ಇತ್ತೀಚೆಗೆ ಪರಿಸ್ಥಿತಿ ಬದಲಾಗುತ್ತಿದೆ. ವಾಟರ್‌ ಪೋಲೊದತ್ತ ಅನೇಕ ಯುವಕ– ಯುವತಿಯರು ಬರುತ್ತಿದ್ದಾರೆ. ಸಾಧನೆಗೆ ಸಾಕಷ್ಟು ಉತ್ತಮ ಅವಕಾಶಗಳಿರುವಂತೆ, ಅನುಭವಿ ಕೋಚ್‌ಗಳಿಂದ ತರಬೇತಿ ಹಾಗೂ ಸೌಲಭ್ಯಗಳು ಸಿಗುತ್ತಿರುವುದು ಸಮಾಧಾನಕರ ಸಂಗತಿ. ಆದರೆ, ಇದಿಷ್ಟೇ ಸಾಲದು, ಅಂತರರಾಷ್ಟ್ರೀಯ ಮಟ್ಟದಲ್ಲಿ  ಪೈಪೋಟಿ ನೀಡುವುದಕ್ಕೆ ನಮ್ಮ ಸ್ಪರ್ಧಿಗಳನ್ನು ಸರಿಯಾಗಿ ಅಣಿಗೊಳಿಸುವ ಮೂಲಕ, ಒಲಿಂಪಿಕ್‌ ಸ್ಪರ್ಧೆಗೆ ಭಾರತದ ತಂಡ ಸ್ಥಾನ ಗಿಟ್ಟಿಸುವಂತಾಗಬೇಕು’ ಎನ್ನತ್ತಾರೆ ನಾಗರಾಜ್.

*

ಏನಿದು ‘ವಾಟರ್‌ ಪೋಲೊ’?

ಸರಳವಾಗಿ ಹೇಳಬೇಕೆಂದರೆ, ನೀರಿನಲ್ಲಿ ಆಡುವ ಫುಟ್‌ಬಾಲ್‌ ಈ ವಾಟರ್‌  ಪೋಲೊ ಎನ್ನಬಹುದು. 19ನೇ ಶತಮಾನದಲ್ಲಿ ಸ್ಕಾಟ್ಲೆಂಡ್‌ನಲ್ಲಿದ್ದ ‘ರಗ್ಬಿ ಫುಟ್‌ಬಾಲ್’ನ ಬದಲಾದ ರೂಪವೇ ವಾಟರ್‌ ಪೋಲೊ. ವಿಲಿಯಂ ವಿಲ್ಸನ್‌ ಎಂಬುವರು ಈ ಕ್ರೀಡೆಗೆ ನಿಯಮಗಳ ಚೌಕಟ್ಟು ಒದಗಿಸಿದರು. ಗೋಲ್‌ ಕೀಪರ್ ಸೇರಿ 13 ಮಂದಿ ತಂಡದಲ್ಲಿರುತ್ತಾರೆ. ಒಬ್ಬ ಗೋಲ್‌ಕೀಪರ್ ಸೇರಿ 7 ಮಂದಿ ಆಟಗಾರರು ಸಕ್ರಿಯವಾಗಿ ಆಟದಲ್ಲಿ ಭಾಗವಹಿಸುತ್ತಾರೆ, ಉಳಿದ ಆರು ಮಂದಿಯಲ್ಲಿ ಪ್ರತಿ ಎರಡು ನಿಮಿಷಕ್ಕೆ ಒಬ್ಬ ಆಟಗಾರ ಹೊರಬಂದು ಬದಲಿ ಆಟಗಾರ ನೀರಿಗಿಳಿಯುತ್ತಾನೆ. ಆಟಗಾರರು ಅತ್ಯುತ್ತಮ ಈಜುಗಾರರಾಗಿರುವ ಜೊತೆಗೆ ಶಕ್ತಿಶಾಲಿಗಳು, ಚಾಣಾಕ್ಷರೂ ಆಗಿರಬೇಕಾಗುತ್ತದೆ.

**

ಕ್ರಿಕೆಟ್‌ ಮುಂದೆ ಎಲ್ಲಾ ಕ್ರೀಡೆಗಳು ಹಿನ್ನೆಲೆಗೆ ಸರಿದಿವೆ. ನಾನು ವಾಟರ್ ಪೋಲೊ ಆಟಗಾರ ಎಂದರೆ  ಅದ್ಯಾವ ಆಟ ಎಂದು  ಕೇಳುತ್ತಾರೆ.

–ನಾಗರಾಜ್‌, ವಾಟರ್‌ಪೋಲೊ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT