ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮರದ ಜತೆಗೇ ಬೆಳೆದವನು ನಾನು’

ನಾ ಕಂಡ ಬೆಂಗಳೂರು
Last Updated 19 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಕ್ಕಿಗೆ ಬಾಣ ಬಿಡುತ್ತಿದ್ದ ಪಾಂಡವರ ಬಳಿ ದ್ರೋಣಾಚಾರ್ಯ ‘ನಿಮಗೆ ಏನು ಕಾಣುತ್ತಿದೆ’ ಎಂದು ಕೇಳುತ್ತಾನೆ. ಉಳಿದ ಪಾಂಡವರೆಲ್ಲ ಬೇರೆ ಬೇರೆ ಉತ್ತರಗಳನ್ನು ನೀಡಿದರೆ, ಅರ್ಜುನ ಮಾತ್ರ ‘ನನಗೆ ಹಕ್ಕಿಯ ಕಣ್ಣು ಮಾತ್ರ ಕಾಣುತ್ತಿದೆ’ ಎನ್ನುತ್ತಾನೆ.

ಹೇಗೆ ಅರ್ಜುನನ ಗುರಿ ಸ್ಪಷ್ಟವಾಗಿತ್ತೋ ಹಾಗೆಯೇ ನನ್ನ ಗುರಿ ಕೂಡ. ಅದು ನಗರಗಳಲ್ಲಿ ಗಿಡಗಳನ್ನು ಬೆಳೆಸುವುದು. ಗಿಡಗಳೇ ಆಗಿನ ಕಾಲದ ನನ್ನ ಆಪ್ತ ಗೆಳೆಯರು.

ನಾನು 1982ರಲ್ಲಿ ಬೆಂಗಳೂರಿಗೆ ಬಂದೆ. ಆಗ ಮಲ್ಲೇಶ್ವರ, ಬಸವನಗುಡಿ ಹೀಗೆ ಕೆಲವು ರಸ್ತೆಗಳಲ್ಲಿ ಮಾತ್ರವೇ ಹಸಿರು ಇತ್ತು. ಉಳಿದ ಕಡೆ ಗಿಡ– ಮರಗಳು ಮಾಯವಾಗುತ್ತಿದ್ದವು.

ಈಗಂತೂ ಎಷ್ಟೊಂದು ಲೇಔಟ್‌, ವಾಹನಗಳ ಅಬ್ಬರ. ಆಗೆಲ್ಲಾ ನಗರ ಹೀಗೆ ಇರಲಿಲ್ಲ.  ಕಟ್ಟಡಗಳು ಕಡಿಮೆ ಇದ್ದವು. ಮರಗಳು ಕೂಡ ಕಡಿಮೆ ಇದ್ದವು. ಎಲ್ಲೆಲ್ಲಿ ಗಿಡಗಳನ್ನು ನೆಡಬಹುದು ಎಂದು ಅವಲೋಕನ ನಡೆಸುವ ಸಲುವಾಗಿಯೇ ನಗರವನ್ನು ಸುತ್ತು ಹಾಕುತ್ತಿದ್ದೆ. ದಿನವಿಡೀ ಅದೇ ಕೆಲಸ. ನಿಜ ಹೇಳಬೇಕೆಂದರೆ ನಾನು ಮನೆಯವರೊಂದಿಗೆ ಕಾಲ ಸವೆಸಿದ್ದಕ್ಕಿಂತ ಗಿಡಗಳ ಜೊತೆಗೆ ಕಾಲ ಕಳೆದದ್ದೇ ಹೆಚ್ಚು. ಇಲ್ಲಿಗೆ ಬರುವ ಮೊದಲು ತೀರ್ಥಹಳ್ಳಿಯಲ್ಲಿದ್ದೆ.

ಅದು 1981. ಆಗ ಗುಂಡೂರಾವ್‌ ಮುಖ್ಯಮಂತ್ರಿಯಾಗಿದ್ದರು. ನಗರದಲ್ಲಿ ಹಸಿರುಪಟ್ಟಿ ನಿರ್ಮಿಸಲು ಅವರು ಮುಂದಾದರು. ಅಂದಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಶ್ಯಾಮ್‌ಸುಂದರ್‌ ಅವರು, ಆ ವಿಭಾಗಕ್ಕೆ ನನ್ನನ್ನು ಮೊದಲ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ (ಡಿಎಫ್‌ಒ) ನೇಮಿಸಿದರು. 

ಈ ವಿಭಾಗಕ್ಕೆ ಬರುವ ಮೊದಲು ನಾನು ಕಾಡುಮೇಡು ಅಲೆದು ಗಿಡ ಬೆಳೆಸುತ್ತಿದ್ದವನು. ಇಲ್ಲಿಗೆ ಬಂದ ಹೊಸತರಲ್ಲಿ, ಹೇಗೆ ಈ ನಗರದಲ್ಲಿ ಗಿಡ ಬೆಳೆಸುವುದಪ್ಪಾ ಎಂಬ ಯೋಚನೆ ಕಾಡಿತ್ತು. ಇಲ್ಲಿನ ಸ್ಥಿತಿಗತಿ ತಿಳಿದುಕೊಳ್ಳಲು ಎರಡು ತಿಂಗಳು ಇಡೀ ನಗರವನ್ನು ಸುತ್ತಾಡಿ ಅವಲೋಕನ ಮಾಡಿದೆ. ಸಸಿಗಳನ್ನು ನೆಡಲು ಇರುವ ತೊಡಕುಗಳನ್ನು ಗಮನಿಸಿದೆ.

ಇಲ್ಲಿ ಮೊದಲು ಆರು ಇಂಚಿನಿಂದ ಒಂದು ಅಡಿವರೆಗಿನ ಸಸಿ ಬೆಳೆಸುತ್ತಿದ್ದರು. ಇಷ್ಟು ಕಡಿಮೆ ಎತ್ತರದ ಸಸಿ ಬೆಳೆಸುತ್ತಿದ್ದ ಕಾರಣ ಅವು ಸುಲಭವಾಗಿ ಜಾನುವಾರುಗಳಿಗೆ ಆಹಾರವಾಗುತ್ತಿದ್ದವು. ಜೊತೆಗೆ ಮಕ್ಕಳೂ ಅವನ್ನು ಕಿತ್ತು ಹಾಕುವುದಕ್ಕೆ ಸುಲಭವಾಗಿತ್ತು. ಇನ್ನು ಬೇಕಂತಲೇ ಗಿಡ ಕೀಳುವ ದಾರಿಹೋಕರ ಸಂಖ್ಯೆಯೂ ಕಡಿಮೆ ಇರಲಿಲ್ಲ ಅನ್ನಿ.

(ಮರ ನೆಡಲು ನೆರವಾಗುತ್ತಿದ್ದ ಪತ್ನಿ ದಿ.ಜಾನಕಿದೇವಿ ಅವರೊಂದಿಗೆ – ಸಂಗ್ರಹ ಚಿತ್ರ)

ಇವೆಲ್ಲಾ ಸಮಸ್ಯೆಗಳ ಜೊತೆಗೆ ಸಸಿಗಳನ್ನು ಬೆಳೆಸಲು ಇಲ್ಲಿ ನರ್ಸರಿಗಳೇ ಇರಲಿಲ್ಲ.  ಜೊತೆಗೆ ಬಿಡಿಎ ಮತ್ತು ಕಾರ್ಪೊರೇಷನ್‌ನವರು ಕಾಂಕ್ರೀಟ್‌ನ ಗಿಡ ರಕ್ಷಕ (ಟ್ರೀ–ಗಾರ್ಡ್‌) ಬಳಸುತ್ತಿದ್ದರು. ಇದರ ತಯಾರಿಗೆ ಆಗಿನ ಕಾಲದಲ್ಲಿಯೇ ₹600 ಖರ್ಚಾಗುತ್ತಿತ್ತು. ಸರ್ಕಾರ ಗಿಡ ಬೆಳೆಸಲು ನೀಡುತ್ತಿದ್ದ ಹಣ ಟ್ರೀಗಾರ್ಡ್‌ ತಯಾರಿಗೆ ಸರಿ ಹೋಗುತ್ತಿತ್ತು.

ಇಷ್ಟೆಲ್ಲಾ ಸಮಸ್ಯೆಗಳನ್ನು ಮೀರಿ ಇಲ್ಲಿ ಹಸಿರು ಬೆಳೆಸುವುದು ಹೇಗೆ ಎಂಬುದೇ ನನಗೆ ದೊಡ್ಡ ಪ್ರಶ್ನೆಯಾಗಿತ್ತು.

ಆಗ ಹೊಸ ಆಲೋಚನೆಗಳು ಹೊಳೆದವು. ಆಗಿನ ಸಿಬ್ಬಂದಿ ನನ್ನ ಯೋಚನೆಗಳಿಗೆ ಸಹಕಾರ ನೀಡುತ್ತಿದ್ದರು. ಅವರ ನೆರವಿನಿಂದಲೇ ಇಲ್ಲಿ ಇಷ್ಟೊಂದು ಗಿಡಗಳನ್ನು ಬೆಳೆಸಲು ಸಾಧ್ಯವಾಗಿದ್ದು.

ಆರೂವರೆ ಅಡಿಗೂ ಹೆಚ್ಚು ಎತ್ತರಕ್ಕೆ ಬೆಳೆದ ಸಸಿಗಳನ್ನು ಮಾತ್ರ ನೆಡುವುದರಿಂದ ಜಾನುವಾರುಗಳ ಸಮಸ್ಯೆಯಿಂದ ಪಾರಾಗಬಹುದು ಎಂಬುದನ್ನು ಅರಿತುಕೊಂಡೆ. ಏಕೆಂದರೆ ದನಗಳಿಗೆ ಅಷ್ಟು ಎತ್ತರಕ್ಕೆ ಮುಖ ಎತ್ತಿ ತಿನ್ನಲು ಆಗುತ್ತಿರಲಿಲ್ಲ. ನೀಲಗಿರಿ ಮರದ ಕಂಬಗಳನ್ನು ಹುಗಿದು, ಅದಕ್ಕೆ ಮೆಶ್‌ ಅಳವಡಿಸುವ ಕಡಿಮೆ ಖರ್ಚಿನ ಟ್ರೀ–ಗಾರ್ಡ್‌ ಬಳಸಿದೆ.  ಇದಕ್ಕೆ ಕೇವಲ ₹ 23 ಖರ್ಚಾಗುತ್ತಿತ್ತು.

ನಗರದಲ್ಲಿ ಹೆಬ್ಬಾಳ, ವಿಶ್ವವಿದ್ಯಾಲಯದ ಆವರಣ ಹೀಗೆ 15 ನರ್ಸರಿ ಕ್ಷೇತ್ರಗಳನ್ನು ಹುಡುಕಿ ಅಭಿವೃದ್ಧಿಪಡಿಸಿದೆ. ಲಕ್ಷಗಟ್ಟಲೆ ಸಸಿಗಳನ್ನು ಬೆಳೆಸಿ ಇಟ್ಟುಕೊಂಡೆ. 1983ರಲ್ಲಿ ನಗರದಲ್ಲಿ ಸಸಿ ನೆಡಲು ಮುಂದಾದೆ. ಆಗ ಒಂದು ನರ್ಸರಿಯಲ್ಲಿ ಒಂದು ಕೋಟಿ ಸಸಿಗಳನ್ನು ಸಿದ್ಧ ಮಾಡಿಟ್ಟುಕೊಂಡಿದ್ದೂ ಇದೆ.
ಮುಂದೆ ಮುಖ್ಯಮಂತ್ರಿ ಆದ ರಾಮಕೃಷ್ಣ ಹೆಗಡೆ ಅವರೂ ಹಸಿರುಪಟ್ಟಿ ಬೆಳೆಸುವ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಿದ್ದರು. ಆಗೆಲ್ಲಾ ತುಂಬಾ ಒಳ್ಳೆಯ ರಾಜಕಾರಣಿಗಳು ಇದ್ದರು.

ಸಾರ್ವಜನಿಕರ ಸಹಕಾರ ಇಲ್ಲದಿದ್ದರೆ ಇಂತಹ ಕೆಲಸಗಳಲ್ಲಿ  ಯಶಸ್ವಿಯಾಗುವುದು ಕಷ್ಟ. ಇದೇ ಕಾರಣಕ್ಕೆ ಸಾರ್ವಜನಿಕರನ್ನೂ ನನ್ನ ಕೆಲಸಗಳಲ್ಲಿ ತೊಡಗಿಸಿಕೊಂಡೆ.

‘ಟ್ರೀ ವಾರ್ಡನ್‌’ಗಳೆಂಬ ಸ್ವಯಂಸೇವಕರನ್ನು ನೇಮಿಸಿಕೊಂಡೆವು. ನಗರದ ಪ್ರತಿಯೊಂದು ಪ್ರದೇಶದಲ್ಲಿ ಒಬ್ಬ ವಾರ್ಡನ್‌ ಇದ್ದರು. ಶಿಕ್ಷಕರು, ವಕೀಲರು, ದಾದಿಯರು, ವೈದ್ಯರು... ಹೀಗೆ ವಿಭಿನ್ನ ವೃತ್ತಿಯವರೆಲ್ಲ ಟ್ರೀ ವಾರ್ಡನ್‌ಗಳಾದರು. 

ಪ್ರತಿ ತಿಂಗಳೂ ಅರಣ್ಯ ಭವನದಲ್ಲಿ ಸಭೆ ನಡೆಸಿ, ಎಷ್ಟು ಸಸಿ ನೆಡಲಾಗಿದೆ, ಏನಾದರೂ ಸಮಸ್ಯೆ ಇದೆಯೇ ಎಂಬ  ಬಗ್ಗೆ ಚರ್ಚಿಸುತ್ತಿದ್ದೆವು. ಹಲವೆಡೆ ‘ಟ್ರೀ ಬ್ಯಾಂಕ್‌’ಗಳನ್ನು ಸ್ಥಾಪಿಸಿ ಜನರಿಗೆ ಉಚಿತವಾಗಿ ಗಿಡಗಳನ್ನು ಹಂಚಿದೆವು. ಎಲ್ಲ ಲೇಔಟ್‌ಗಳಲ್ಲಿ ಟ್ರೀ ಬ್ಯಾಂಕ್‌ ಆರಂಭಿಸಿ, ಸಾರ್ವಜನಿಕರಿಗೆ ಗಿಡಗಳನ್ನು ಉಚಿತವಾಗಿ ನೀಡುವ ಯೋಜನೆ ಜಾರಿ ಮಾಡಿದೆ. ನನ್ನ ಕಚೇರಿಯಲ್ಲಿ ಹಲವು ಕಾರ್ಪೊರೇಟರ್‌ಗಳು  ಸಾಲಾಗಿ ನಿಂತು,  ತಮ್ಮ ಏರಿಯಾಗಳಲ್ಲಿ ಗಿಡ ನೆಡಿಸುವಂತೆ ಕೇಳುತ್ತಿದ್ದರು. ಅಂತಹ ಕಾಲ ಅದು.

1987ರಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ನೌಕರಿಯಿಂದ ನಿವೃತ್ತನಾದೆ. ನನ್ನ ಅಧಿಕಾರದ  ಅವಧಿಯಲ್ಲಿ ನಗರದಲ್ಲಿ 15 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿರುವ ಹೆಮ್ಮೆಯಿದೆ.

ನಗರದಲ್ಲಿ ಯಾವ ಗಿಡಗಳನ್ನು ನೆಡಬೇಕು ಎಂಬ ಜ್ಞಾನವೂ ಈಗಿನವರಿಗೆ ಇಲ್ಲ. ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್‌ ಆಗಿರುತ್ತೇನೆ. ಅದರ ಮೂಲಕ ಪರಿಸರ ರಕ್ಷಣೆಯ ಮಹತ್ವ  ತಿಳಿಸುತ್ತೇನೆ. ಗಿಡ ಬೆಳೆಸುವ ಆಸೆಯುಳ್ಳವರು ನನ್ನ ಮನೆಗೇ ಬಂದು ಮಾಹಿತಿ ಪಡೆದುಕೊಳ್ಳುತ್ತಾರೆ. ಜನರಲ್ಲಿ ಪರಿಸರ ಕಾಳಜಿ ಬೆಳೆಸುವುದು ಎಂದರೆ ನನಗೆ ಖುಷಿ. ಪುಸ್ತಕಗಳನ್ನು ಬರೆದು  ಜನರಲ್ಲಿ ವನ್ಯಜೀವಿಗಳ ಬಗ್ಗೆ, ಗಿಡ ಮರಗಳ ಬಗ್ಗೆ ಕಾಳಜಿ ಮೂಡಿಸುತ್ತಿದ್ದೇನೆ.

ನಗರದಲ್ಲಿ ಎಲ್ಲೆಲ್ಲಿ ಮರಗಳು ಹೆಚ್ಚಿವೆಯೋ ಆ ಸ್ಥಳಗಳೆಲ್ಲ ನನಗೆ ತುಂಬಾ ಇಷ್ಟ. ಪ್ರಶಾಂತವಾಗಿರುವ ಯಾವುದೇ ಸ್ಥಳವಾದರೂ ನನಗೆ ಖುಷಿ. ಅದೇ ಕಾರಣಕ್ಕೆ ನಮ್ಮ ಮನೆ ಇರುವ ಬಸವೇಶ್ವರನಗರ ನನಗೆ ಇಷ್ಟ. ಇಲ್ಲಿ ಸಾಕಷ್ಟು ಮರಗಳಿವೆ. ಹಕ್ಕಿಗಳ ಚಿಲಿಪಿಲಿಯೂ ಕೇಳುತ್ತದೆ. ಆಗ ಈ ನಿವೇಶನವನ್ನು ನನ್ನ ಉಳಿತಾಯ ಮತ್ತು ಸ್ವಲ್ಪ ಸಾಲ ಮಾಡಿ ಒಂದೂವರೆ ಲಕ್ಷ ಕೊಟ್ಟು  ಕೊಂಡಿದ್ದೆ. ಈಗ ಇದರ ಬೆಲೆ 3 ಕೋಟಿ ರೂಪಾಯಿಗೂ ಹೆಚ್ಚು. ಮನೆ ಸಮೀಪ ‘ಮಂಕಿ ಪಾರ್ಕ್‌’ ಇದೆ. ಮೊದಲೆಲ್ಲ, ಬೆಳಿಗ್ಗೆ ಕೆಲಸಕ್ಕೆ ಹೋಗುವ ಮೊದಲು ಸಮಯ ಸಿಕ್ಕರೆ ಒಂದು ಸುತ್ತು ಹಾಕಿಬರುತ್ತಿದ್ದೆ. ಅಲ್ಲೊಂದು ದೊಡ್ಡ ಆಲದ ಮರವಿತ್ತು. ಇತ್ತೀಚೆಗಷ್ಟೇ ಅದು ಬಿದ್ದು ಹೋಗಿದೆ. 

ನಾನು ವೃತ್ತಿಯಲ್ಲಿದ್ದಾಗ ಸಮಯ ಕಳೆಯಬೇಕು ಎಂದು ನಗರವನ್ನು ಸುತ್ತಾಡಿದ್ದು ತೀರಾ ಕಡಿಮೆ. ಮಕ್ಕಳೊಂದಿಗೆ ಕಡಿಮೆ ಸಮಯ ಕಳೆದಿದ್ದೇನೆ. ನನ್ನ ಪತ್ನಿ ಜಾನಕಿ ದೇವಿ. ಎಲ್ಲಾ ಸಂದರ್ಭಗಳಲ್ಲಿಯೂ ನನ್ನ ಬೆನ್ನೆಲುಬಾಗಿದ್ದಳು.  ಇತ್ತೀಚೆಗಷ್ಟೇ ಆಕೆ ತೀರಿಕೊಂಡಳು.

ಈಗ ನನಗೆ  88 ವರ್ಷ. ಆದರೂ ಕಾಡುಮೇಡು ಅಲೆಯುವುದನ್ನು ಇಂದಿಗೂ ನಿಲ್ಲಿಸಿಲ್ಲ. ತಿಂಗಳಿನಲ್ಲಿ ಎರಡು ಸಲವಾದರೂ ಬಂಡೀಪುರ, ದಾಂಡೇಲಿ ಹೀಗೆ ವಿವಿಧ ಸ್ಥಳಗಳಿಗೆ ವನ್ಯಜೀವಿ ಛಾಯಾಗ್ರಹಣಕ್ಕಾಗಿ ಹೋಗುತ್ತೇನೆ.

ನನಗೆ ಈ ನಗರ ತುಂಬಾ ಆಪ್ತ ಅನುಭೂತಿ ನೀಡಿದೆ. ಉದ್ಯೋಗದಲ್ಲಿದ್ದಾಗ ಸ್ನೇಹಿತರು ಕಡಿಮೆ. ದಿನಪೂರ್ತಿ ಕೆಲಸದಲ್ಲಿಯೇ ಸಮಯ ಕಳೆಯುತ್ತಿತ್ತು. ಆದರೆ ಈಗ ಅನೇಕ ಸ್ನೇಹಿತರಿದ್ದಾರೆ. ಹೆಗಲಿಗೆ ಕ್ಯಾಮೆರಾ ಏರಿಸಿಕೊಂಡು ಕಾಡು ಅಲೆಯುವ ಜೊತೆಗಾರರು ಇಲ್ಲಿಯೇ ಇರುವುದು.  ನಿವೃತ್ತಿ ನಂತರ ಹುಬ್ಬಳ್ಳಿಗೆ ಸ್ವಲ್ಪ ದಿನ ಹೋಗಿದ್ದೆ. ಆದರೆ ಈ ನಗರದಿಂದ ದೂರವಿರುವುದು ಹೆಚ್ಚು ದಿನ ಸಾಧ್ಯವಾಗಲಿಲ್ಲ. ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಇಲ್ಲಿಯೇ ಇರುವುದರಿಂದ ಮತ್ತೆ ವಾಪಸ್‌ ಇಲ್ಲಿಗೇ ಬಂದೆ.

ಇಲ್ಲಿ ಎಲ್ಲಿಯೇ ಹೋದರೂ, ಆಗ ನೆಟ್ಟ ಸಸಿಗಳು ಈಗ ಹೆಮ್ಮರವಾಗಿರುವುದನ್ನು ಕಂಡಾಗ ಖುಷಿಯಾಗುತ್ತದೆ. ಅದರಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಈಗ ಶೇ 10ರಷ್ಟು ನಾಶವಾಗಿದೆ. ಮೂಲಸೌಕರ್ಯದ ಹೆಸರಿನಲ್ಲಿ ಮರಗಳನ್ನು ಕಡಿಯುವುದನ್ನು ಕಂಡಾಗ ಸಂಕಟವಾಗುತ್ತದೆ. ಉಳಿದಿರುವ ಮರಗಳನ್ನಾದರೂ ಉಳಿಸಿಕೊಳ್ಳಬೇಕು ಎಂಬುದು ನನ್ನ ಹಂಬಲ.

**

ಬ್ರಿಟಿಷ್‌ ಸರ್ಕಾರದಿಂದ...
ತಂದೆ ಊರು ಬೆಳಗಾವಿ. ತಾಯಿ ಊರು ಧಾರವಾಡ.  ಅಲ್ಲಿಯೇ ಪದವಿ ಪಡೆದರು. ತಂದೆ ಬ್ರಿಟಿಷ್‌ ಸರ್ಕಾರದಲ್ಲಿ ವಲಯ ಅರಣ್ಯಾಧಿಕಾರಿಯಾಗಿದ್ದರು. 1951ನೇ ಇಸವಿಯಲ್ಲಿ  ಅರಣ್ಯ ಇಲಾಖೆ ಸೇರಿಕೊಂಡರು. ‘ನಗರ ಅರಣ್ಯ’ ಪರಿಕಲ್ಪನೆಗೆ ಮೂರ್ತ ರೂಪ ನೀಡಲು ಶ್ರಮಿಸಿದವರಲ್ಲಿ ಪ್ರಮುಖರು.

ಅದಕ್ಕಾಗಿ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಬೆಂಗಳೂರು ಮಾತ್ರವಲ್ಲದೆ ಕಾರವಾರ, ದಾಂಡೇಲಿ, ಕುಮಟಾ, ಶಿರಸಿ, ಖಾನಾಪುರ ಸಿದ್ಧಾಪುರ, ತೀರ್ಥಹಳ್ಳಿಯಲ್ಲೂ ಸೇವೆ ಸಲ್ಲಿಸಿದ್ದಾರೆ. ಇವರು ವನ್ಯಜೀವಿ ಛಾಯಾಗ್ರಾಹಕರೂ ಆಗಿದ್ದಾರೆ.

**

ಮಧ್ಯರಾತ್ರಿ ಗಿಡ ನೆಟ್ಟ ನೆನಪು
ಎಲ್ಲಾ ಅಧಿಕಾರಿಗಳಿಗೆ ನಗರದ ಒಂದೊಂದು ಏರಿಯಾಗಳನ್ನು ವಹಿಸಿಕೊಟ್ಟಿದ್ದೆ. ಮೆಜೆಸ್ಟಿಕ್‌, ಆನಂದ್‌ರಾವ್‌ ಸರ್ಕಲ್‌ ಬಳಿ ಆಗ ಕೂಡ ಜನಜಂಗುಳಿಯ ಜೊತೆಗೆ  ವಾಹನಗಳ ಓಡಾಟ ಹೆಚ್ಚು. ಒಮ್ಮೆ ನಾನು ಅಲ್ಲಿಗೆ ಹೋದಾಗ ಗಿಡಗಳೇ ಇರಲಿಲ್ಲ. ಇದರ ಬಗ್ಗೆ ಅಧಿಕಾರಿಯನ್ನು ಪ್ರಶ್ನಿಸಿದಾಗ ಅವರು, ‘ಇದು ಸದಾ ಜನಜಂಗುಳಿ, ವಾಹನಗಳಿಂದ ಕೂಡಿರುವ ಸ್ಥಳ. ಇಲ್ಲಿ ಗಿಡವನ್ನು ನೆಡುವುದಾದರೂ ಹೇಗೆ’ ಎಂದರು. ‘ಸರಿ ಹಾಗಿದ್ದರೆ ಒಂದು ಕೆಲಸ ಮಾಡೋಣ. ಇವತ್ತು ರಾತ್ರಿ ಗಿಡ ನೆಡಲು ಎಲ್ಲ ವ್ಯವಸ್ಥೆ ಮಾಡಿಕೊಂಡು ಬನ್ನಿ. ನಾನೂ ಬರುತ್ತೇನೆ’ ಎಂದೆ. ಮಧ್ಯರಾತ್ರಿಯಲ್ಲೇ ಗಿಡಗಳನ್ನು ನೆಟ್ಟೆವು. ಬೆಳಿಗ್ಗೆ ಜನ ‘ಇದೇನು, ಒಂದೇ ರಾತ್ರಿಯಲ್ಲಿ ಗಿಡಗಳು ಹದಿನೈದು ಅಡಿ ಬೆಳೆದಿವೆ’ ಎಂದು ಆಶ್ಚರ್ಯಪಟ್ಟಿದ್ದರು.

**

ವೈಯಕ್ತಿಕ ವಿವರ
ಜನನ: 1929 ಮೇ 2
ಪೂರ್ತಿ ಹೆಸರು: ಸೇತುರಾಂ ಗೋಪಾಲರಾವ್ ನೇಗಿನಹಾಳ್‌
ಪತ್ನಿ: ಜಾನಕಿ ದೇವಿ
ಮಕ್ಕಳು: ನಾಲ್ಕು ಹೆಣ್ಣು , ಒಬ್ಬ ಗಂಡು ಮಗ
ನಿವಾಸ: ಬಸವೇಶ್ವರ ನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT