ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಟಿಕೆಟ್‌: ಪಾಠ ಕಲಿಯಬೇಕಿದೆ

ಸಿನಿಮಾ ಟಿಕೆಟ್‌ ಬೆಲೆಗೆ ಗರಿಷ್ಠ ಮಿತಿ ವಿಧಿಸಿ, ಸಾಕಷ್ಟು ಪರಿಣಾಮಗಳನ್ನು ಎದುರಿಸಿದ ತಮಿಳುನಾಡಿನಿಂದ ಕರ್ನಾಟಕ ಕಲಿಯಬಹುದಾದ ಹಲವು ಪಾಠಗಳಿವೆ
Last Updated 19 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಪ್ರಿಯಾ ರವಿಚಂದ್ರನ್, ಲೇಖಕಿ ಬೆಂಗಳೂರಿನ ತಕ್ಷಶಿಲಾ ಸಂಸ್ಥೆಯಲ್ಲಿ ಸಂಶೋಧಕಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕೊನೆಯ ಬಜೆಟ್‌ ಭಾಷಣದಲ್ಲಿ ಹಲವು ಜನಪ್ರಿಯ ಯೋಜನೆಗಳನ್ನು ಪ್ರಕಟಿಸಿದರು. ಸಿನಿಮಾ ಟಿಕೆಟ್‌ಗಳ ಬೆಲೆ ಮೇಲೆ ಮಿತಿ ಹೇರುವುದೂ ಅವುಗಳಲ್ಲಿ ಒಂದು. ರಾಜ್ಯದಲ್ಲಿ ಸಿನಿಮಾ ಟಿಕೆಟ್‌ಗಳ ಮೇಲೆ ಈಗ ₹ 200ರ ಮಿತಿ ವಿಧಿಸಲಾಗಿದೆ.

ಇಂಥದ್ದೇ ಕ್ರಮ ಕೈಗೊಂಡಿರುವ ತಮಿಳುನಾಡಿನಿಂದ ಕರ್ನಾಟಕ ಕಲಿಯಬಹುದಾದ ಹಲವು ಪಾಠಗಳಿವೆ. ಟಿಕೆಟ್‌ಗೆ ಗರಿಷ್ಠ ಮಿತಿ ವಿಧಿಸುವುದು ಸುಸ್ಥಿರವಲ್ಲ, ಅದರಿಂದ ದೀರ್ಘಾವಧಿಯಲ್ಲಿ ಯಶಸ್ಸು ಕೂಡ ಸಿಗುವುದಿಲ್ಲ.

2006ರ ಚುನಾವಣೆ ನಂತರ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದ ಡಿಎಂಕೆ, ಸಿನಿಮಾ ಟಿಕೆಟ್‌ಗಳಿಗೆ ಗರಿಷ್ಠ ಮಿತಿ ವಿಧಿಸಿತು. ತಮಿಳುನಾಡು ಸಿನಿಮಾಗಳ (ನಿಯಂತ್ರಣ) ನಿಯಮ– 1957ಕ್ಕೆ ತಿದ್ದುಪಡಿ ತಂದು ಈ ಕ್ರಮ ಜಾರಿಗೆ ತರಲಾಯಿತು.

ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌ಗಳಲ್ಲಿ ಇರುವ ಧ್ವನಿ ವ್ಯವಸ್ಥೆ, ಪ್ರೊಜೆಕ್ಟರ್, ಹವಾ ನಿಯಂತ್ರಕ, ವಿದ್ಯುತ್ ಕೈಕೊಟ್ಟಾಗ ಚಿತ್ರ ವೀಕ್ಷಣೆಗೆ ಅಡಚಣೆ ಆಗದಂತೆ ನೋಡಿಕೊಳ್ಳುವ ವ್ಯವಸ್ಥೆಗಳನ್ನು ಗಮನಿಸಿ ನಗರ ಪಾಲಿಕೆಗಳು, ಪಂಚಾಯಿತಿಗಳ ಮೂಲಕ ಖರೀದಿಸುವ ಟಿಕೆಟ್‌ ದರಕ್ಕೆ ಮಿತಿ ನಿಗದಿ ಮಾಡಲಾಯಿತು. ಮಲ್ಟಿಪ್ಲೆಕ್ಸ್‌ಗಳಲ್ಲಿ ಹವಾ ನಿಯಂತ್ರಕ ವ್ಯವಸ್ಥೆ ಇರುವ ಸಿನಿಮಾ ಮಂದಿರಗಳು ಟಿಕೆಟ್ ದರವನ್ನು ₹ 120ಕ್ಕಿಂತ ಹೆಚ್ಚು ಇರಿಸುವಂತಿಲ್ಲ ಎಂಬ ಮಿತಿ ಜಾರಿಗೊಳಿಸಲಾಯಿತು.

ಈ ಕ್ರಮ ಜಾರಿಗೆ ತಂದಿದ್ದರ ಹಿಂದೆ ಎರಡು ಆಯಾಮಗಳ ಪ್ರೇರಣೆ ಇತ್ತು: 90ರ ದಶಕದ ಜಾಗತೀಕರಣದ ನಂತರದ ಅರ್ಥವ್ಯವಸ್ಥೆಯಲ್ಲಿ ಮಧ್ಯಮ ವರ್ಗದ ಆದಾಯದಲ್ಲಿ ಹೆಚ್ಚಳ ಕಂಡುಬಂತು. ಟಿ.ವಿ. ಖರೀದಿಸುವ ಅವರ ಸಾಮರ್ಥ್ಯ ಕೂಡ ವೃದ್ಧಿಯಾಯಿತು.

ಪ್ರಾದೇಶಿಕ ಕೇಬಲ್ ಟಿ.ವಿ. ಜಾಲದ ಕಾರಣ, ಮನರಂಜನೆ ಬೇಕೆಂದರೆ ಸಿನಿಮಾ ಮಂದಿರಗಳಿಗೆ ಹೋಗಿ ಸಿನಿಮಾ ನೋಡಬೇಕು ಎಂಬ ಸ್ಥಿತಿ ಬದಲಾಯಿತು. ಟಿಕೆಟ್‌ ಬೆಲೆಗೆ ಗರಿಷ್ಠ ಮಿತಿ ವಿಧಿಸುವ ಮೂಲಕ ಜನರಿಗೆ, ಅದರಲ್ಲೂ ಪ್ರಮುಖವಾಗಿ ಬಡವರಿಗೆ, ಸಿನಿಮಾ ಮಂದಿರಗಳಿಗೆ ಹೋಗಿ ಸಿನಿಮಾ ನೋಡುವುದು ಕೈಗೆಟಕುವಂತೆ ಆಗಬೇಕು ಎಂಬ ಉದ್ದೇಶ ಇತ್ತು.

ಸಿನಿಮಾ ನಿರ್ಮಾಣದಲ್ಲಿ ದೊಡ್ಡ ಕಂಪೆನಿಗಳೂ ಕೈಹಾಕಿದ ಕಾರಣ, ಸಣ್ಣ ಮಾರುಕಟ್ಟೆಗಳಿಗೆ ಸಿನಿಮಾ ಲಗ್ಗೆ ಇಟ್ಟಿತು. ಅಂದರೆ, ಸಿನಿಮಾ ವ್ಯಾಪ್ತಿ ಹಿಗ್ಗಿತು. ಸಿನಿಮಾ ಮಂದಿರಗಳು ತಮ್ಮಲ್ಲಿನ ಸೌಲಭ್ಯಗಳ ಮೇಲೆ ಹೆಚ್ಚಿನ ಬಂಡವಾಳ ಹೂಡಿಕೆ ಮಾಡುವಂತಾಗಲು, ಸಿನಿಮಾ ನೋಡಲು ಅಲ್ಲಿಗೆ ಬರುವ ಜನ ಖುಷಿಪಡುವಂತೆ ಆಗಲು ಟಿಕೆಟ್‌ ದರದ ಮೇಲೆ ಮಿತಿ ಹಾಕುವುದು ಉತ್ತಮ ಮಾರ್ಗ ಎಂದು ಭಾವಿಸಲಾಯಿತು.

ಸರ್ಕಾರದ ಈ ಕ್ರಮದಿಂದಾಗಿ ಆರಂಭದಲ್ಲಿ ದೊಡ್ಡ ನಗರಗಳಲ್ಲಿ ಮಲ್ಟಿಪ್ಲೆಕ್ಸ್‌ಗಳ ಸಂಖ್ಯೆ ಹೆಚ್ಚಾಯಿತು. ಸಿನಿಮಾ ನಿರ್ಮಿಸುವ ದೊಡ್ಡ ಕಂಪೆನಿಗಳ ಸಂಖ್ಯೆ ಹೆಚ್ಚಾಯಿತು, ದೊಡ್ಡ ಬಜೆಟ್‌ನ ಸಿನಿಮಾಗಳ ಸಂಖ್ಯೆಯಲ್ಲೂ ಏರಿಕೆ ಕಂಡುಬಂತು, ಆರಾಮವಾಗಿ ಸಿನಿಮಾ ವೀಕ್ಷಿಸಲು ಅಗತ್ಯ ಸೌಲಭ್ಯ ಕಲ್ಪಿಸಿದ ಚಿತ್ರಮಂದಿರಗಳಿಗೆ ಬರುವ ಜನರ ಸಂಖ್ಯೆ ಕೂಡ ಆರಂಭದಲ್ಲಿ ಹೆಚ್ಚಾಯಿತು. ಆದರೆ, ಟಿಕೆಟ್‌ ದರದ ಮೇಲಿನ ಮಿತಿಯಿಂದಾಗಿ ಎರಡು ಅನುದ್ದೇಶಿತ ಪರಿಣಾಮಗಳು ಕಂಡುಬಂದವು.

ಮೊದಲನೆಯದು: ಜನರ ಆದಾಯ ಹೆಚ್ಚಿ, ಹಣದುಬ್ಬರದಲ್ಲಿ ಏರಿಕೆ ಆಗಿ, ಸಿನಿಮಾ ಮಂದಿರಗಳಲ್ಲಿ ಇನ್ನಷ್ಟು ಹೆಚ್ಚಿನ ಸೌಲಭ್ಯಗಳು ಬೇಕು ಎಂದು ಜನ ಬಯಸಲು ಆರಂಭಿಸಿದ ಪರಿಣಾಮವಾಗಿ ಮಾಲೀಕರು ಸಿನಿಮಾ ಮಂದಿರಗಳನ್ನು ಮತ್ತೆ ಮತ್ತೆ ನವೀಕರಿಸಬೇಕಾಯಿತು. ಟಿಕೆಟ್‌ಗೆ ನಿಗದಿಗಿಂತ ಹೆಚ್ಚಿನ ದರ ವಿಧಿಸಲು ಅವಕಾಶ ಇಲ್ಲದಿದ್ದ ಕಾರಣ, ಜನರಿಂದ ಬಂದ ಹಣದಲ್ಲಿ ಅಲ್ಪ ಪಾಲು ಮಾತ್ರ ಸಿನಿಮಾ ನಿರ್ಮಾಪಕರಿಗೆ ವರ್ಗಾವಣೆ ಆಗುತ್ತಿತ್ತು. ಹಾಗಾಗಿ ನಿರ್ಮಾಪಕರಿಗೆ ಪುನಃ ಹಣ ಹೂಡಿಕೆ ಮಾಡಲು ಹೆಚ್ಚಿನ ಮೊತ್ತ ಸಿಗುತ್ತಿರಲಿಲ್ಲ.

ಮಲ್ಟಿಪ್ಲೆಕ್ಸ್‌ ಗಳು, ಮಿನಿಪ್ಲೆಕ್ಸ್‌ಗಳು ಇಲ್ಲದ ಊರುಗಳಲ್ಲಿ ಹಳೆಯ, ಏಕಪರದೆಯ ಚಿತ್ರಮಂದಿರಗಳು ಬಾಗಿಲು ಮುಚ್ಚಲು ಆರಂಭಿಸಿದವು. ಇದರಿಂದಾಗಿ ಸಿನಿಮಾ ವೀಕ್ಷಿಸುವವರ ಸಂಖ್ಯೆ ಕುಸಿಯಿತು. ಅಲ್ಲದೆ, ಸಿನಿಮಾ ಪೈರಸಿ ತೀರಾ ದೊಡ್ಡ ಪ್ರಮಾಣದಲ್ಲಿ ಬೆಳೆಯಿತು, ಸಿನಿಮಾ ನಿರ್ಮಾಪಕರು ನಷ್ಟ ಅನುಭವಿಸಿದರು. ಸಿನಿಮಾ ಅವಧಿ ಕಡಿಮೆ ಆಯಿತು. ವಿದೇಶಿ ಭಾಷೆಗಳ ಸಿನಿಮಾಗಳಿಗೆ ಬೇಡಿಕೆ ಕುಸಿಯಿತು.

ಎರಡನೆಯದು:  ಮಲ್ಟಿಪ್ಲೆಕ್ಸ್‌ಗಳು ತಾವು ನೀಡುವ ಇತರ ಸೌಲಭ್ಯಗಳಿಗೆ ದುಬಾರಿ ದರ ವಿಧಿಸಲು ಆರಂಭಿಸಿದವು– ಟಿಕೆಟ್‌ ದರ ಮಿತಿಯಿಂದ ಆಗುವ ಲಾಭದಲ್ಲಿನ ವ್ಯತ್ಯಾಸ ಭರ್ತಿ ಮಾಡಿಕೊಳ್ಳಲು. ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿಗುವ ತಿಂಡಿ ತಿನಿಸು, ಪಾನೀಯ, ವಾಹನ ನಿಲುಗಡೆ ಶುಲ್ಕಗಳು ಸಿನಿಮಾ ಟಿಕೆಟ್‌ ದರಕ್ಕಿಂತ ಹೆಚ್ಚಾದವು.

ಇದರಿಂದಾಗಿ ಸಿನಿಮಾ ವೀಕ್ಷಣೆಗೆ ಬಂದವರು ದೊಡ್ಡ ಮೊತ್ತದ ಹಣ ತೆರಬೇಕಾಯಿತು. ಮಲ್ಟಿಪ್ಲೆಕ್ಸ್‌ಗಳಿಂದ ಬರುವ ಲಾಭದಲ್ಲಿ ದೊಡ್ಡ ಮೊತ್ತ ಅವುಗಳ ಮಾಲೀಕರ ಕಿಸೆಗೆ ಹೋಗುತ್ತಿದ್ದ ಕಾರಣ, ಸಿನಿಮಾ ನಿರ್ಮಾಪಕರು ಹಾಕಿದ ಬಂಡವಾಳಕ್ಕೆ ಹೆಚ್ಚಿನ ಪ್ರತಿಫಲ ಸಿಗಲಿಲ್ಲ.

ಜನಪ್ರಿಯ ನಟರು ಇರುವ ಸಿನಿಮಾಗಳ ಟಿಕೆಟ್‌ ಬೆಲೆಯನ್ನು ಕೃತಕವಾಗಿ ಹೆಚ್ಚಿಸಿ, ಟಿಕೆಟ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ನಿದರ್ಶನಗಳೂ ಇವೆ. ಮಲ್ಟಿಪ್ಲೆಕ್ಸ್‌ಗಳ ಮಾಲೀಕರು ಹಾಗೂ ಸಿನಿಮಾ ರಂಗದ ಹೊರಗಿರುವ ವ್ಯಕ್ತಿಗಳು ಒಟ್ಟಾಗಿ ಇಂಥ ಕೆಲಸ ಮಾಡುತ್ತಿದ್ದರು.

ಏಕಪರದೆಯ ಸಿನಿಮಾ ಮಂದಿರಗಳು ಸ್ಥಗಿತಗೊಂಡ ಪರಿಣಾಮ ಸಿನಿಮಾ ವೀಕ್ಷಣೆಯ ಮೇಲೆ, ಪ್ರಮುಖವಾಗಿ ನಗರ ಪ್ರದೇಶಗಳಲ್ಲಿ ಆಯಿತು. ಅಲ್ಲಿ ವಾಣಿಜ್ಯ ಸಂಕೀರ್ಣಗಳಲ್ಲಿದ್ದ ಮಲ್ಟಿಪ್ಲೆಕ್ಸ್‌ಗಳಿಗೆ ಹೋಗಿ ಸಿನಿಮಾ ನೋಡುವುದು ಆರ್ಥಿಕವಾಗಿ ಹಿಂದುಳಿದವರಿಗೆ ಅಸಾಧ್ಯವಾಯಿತು.

ಟಿಕೆಟ್‌ ದರದ ಮೇಲೆ ನಿಯಂತ್ರಣ ವಿಧಿಸುವ ಸರ್ಕಾರದ ಕ್ರಮವು ಜನರ ಕೊಳ್ಳುವ ಶಕ್ತಿಯನ್ನು ಕಸಿಯುತ್ತದೆ. ಸಿನಿಮಾಗಳನ್ನು ಜನಸಾಮಾನ್ಯರಿಂದ ದೂರವಾಗಿಸುತ್ತದೆ. ಸಿನಿಮಾಗಳು ನೈಜ ಅರ್ಥದಲ್ಲಿ ‘ಸಾಮೂಹಿಕ ಮನರಂಜನೆ’ ಆಗಬೇಕು ಎಂದಾದರೆ ಟಿಕೆಟ್ ದರದ ಮೇಲಿನ ನಿಯಂತ್ರಣ ಹೋಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT