ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರತಿನಿಧಿ, ಅಧಿಕಾರಿಗಳು ಕಣ್ಮುಚ್ಚಿಕೊಂಡು ಓಡಾಡ್ತಾರಾ?

ಕಿಷ್ಕಿಂದೆಯ ಜತೆಗೆ ತಿಪ್ಪೆಗುಂಡಿಯಾಗುತ್ತಿರುವ ಶಿಡ್ಲಘಟ್ಟ ರಸ್ತೆ ಪಾದಚಾರಿ ಮಾರ್ಗ
Last Updated 20 ಮಾರ್ಚ್ 2017, 5:24 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಇಲ್ಲಿ ನೋಡಿ ಹೇಗೆಲ್ಲಾ ಗಾಡಿ ಪಾರ್ಕ್‌ ಮಾಡಿದ್ದಾರೆ? ಅಲ್ನೋಡಿ ಆ ರೀತಿ ಬಸ್ ನಿಲ್ಲಿಸಿದರೆ ಹಿಂದಿನಿಂದ ಬರುವ ಸವಾರರ ಪಾಡೇನು? ಗ್ಯಾರೇಜ್‌ಗಳೆಲ್ಲ ರಸ್ತೆಗೆ ಬಂದರೆ ಪಾದಚಾರಿಗಳು ಎಲ್ಲಿಗೆ ಹೋಗಬೇಕು? ಈ ರೀತಿ ದಿನಾಲೂ ತ್ಯಾಜ್ಯ ಸುರಿಯುತ್ತ ಹೋದರೆ ವಿದ್ಯಾರ್ಥಿಗಳು, ಕಾರ್ಮಿಕರು ಎಲ್ಲಿ ನಡೆದುಕೊಂಡು ಹೋಗೋದು?...

–ಶಿಡ್ಲಘಟ್ಟ ವೃತ್ತದಿಂದ (ಅಂಬೇಡ್ಕರ್ ವೃತ್ತ) ಬೈಪಾಸ್‌ವರೆಗೆ ರಸ್ತೆಯ ಇಕ್ಕೆಲವನ್ನು ತೋರಿಸುತ್ತ ಪ್ರಶ್ನೆಗಳ ಮೇಲೆ ಪ್ರಶ್ನೆಯನ್ನು ಕೇಳುತ್ತಾ ಹೆಜ್ಜೆ ಹಾಕುತ್ತಿದ್ದ ಅಂಬೇಡ್ಕರ್‌ ನಗರದ ನಿವಾಸಿ ಮುನಿಕೃಷ್ಣಪ್ಪ ಕೊನೆಗೆ ಒಂದೆಡೆ ನಿಂತು, ‘ಈ ರಸ್ತೆ ಇಷ್ಟೆಲ್ಲಾ ಹಾಳಾಗಿ ಹೋಗುತ್ತಿದ್ದರೂ ನಿತ್ಯ ಇದೇ ಮಾರ್ಗದಲ್ಲಿ ಜಿಲ್ಲಾಡಳಿತ ಭವನಕ್ಕೆ ಓಡಾಡುವ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಕಣ್ಣಿಗೆ ಕಾಣೋದಿಲ್ವಾ? ಅವರೆಲ್ಲ ಕಣ್ಮುಚ್ಚಿಕೊಂಡು ಓಡಾಡ್ತಾರಾ’ ಎಂದು ಖಾರವಾಗಿ ಪ್ರಶ್ನಿಸಿದಾಗ, ಅಲ್ಲಿ ಮೌನವೇ ಉತ್ತರವಾಗಿತ್ತು.

ಹಿಂದಿರುಗಿ ಬರುವಾಗ ರಸ್ತೆಯ ಬಲಬದಿ ಮೇಲೆ ಕಣ್ಣು ನೆಟ್ಟು ಹೆಜ್ಜೆ ಹಾಕಿದವರಿಗೆ ಗೋಚರಿಸಿದ್ದು.. ಒಡೆದ ಗಾಜಿನ ಬಾಟಲಿಯ ಚೂರುಗಳು, ಹರಿದ ಚಪ್ಪಲಿಗಳು, ಮುರಿದ ಸಿಮೆಂಟ್ ಶೀಟ್ ತುಂಡುಗಳು, ಭಗ್ನಗೊಂಡ ಇಟ್ಟಿಗೆಯ ರಾಶಿ, ಬಾರ್‌ನವರು ಬಿಸಾಕಿದ ಖಾಲಿ ಪಾಕೆಟ್ – ಗ್ಲಾಸುಗಳು, ರಾಶಿ ರಾಶಿ ತ್ಯಾಜ್ಯ ಗೋಚರಿಸಿತು.

ಜಿಲ್ಲಾಡಳಿತ ಕೇಂದ್ರದ ಮುಕುಟದಂತಿರುವ ಜಿಲ್ಲಾಡಳಿತ ಭವನಕ್ಕೆ ಸಾಗುವ ಪ್ರಮುಖ ರಸ್ತೆ ದಿನೇ ದಿನೇ ಕಿಷ್ಕಿಂದೆಯಾಗುವ ಜತೆಗೆ ತಿಪ್ಪೆಗುಂಡಿಯಾಗುತ್ತಿರುವುದು ಜನರಲ್ಲಿ ಬೇಸರ ಮೂಡಿಸಿದೆ. ವೃತ್ತದ ಬಳಿ ಬಸ್‌ಗಳಿಗಾಗಿ ಕಾಯ್ದು ನಿಲ್ಲುವ ಪ್ರಯಾಣಿಕರ ಪಾಡಂತೂ ಅಯ್ಯೋ ಎನಿಸುತ್ತದೆ.

ವ್ಯವಸ್ಥಿತವಾಗಿ ಪಾದಚಾರಿ ಮಾರ್ಗ ಇಲ್ಲದ ಈ ರಸ್ತೆಯಲ್ಲಿ ಸಾರಿಗೆ ವಾಹನದವರು ನಿಲ್ಲಿಸಿದ ಸ್ಥಳವೇ ತಂಗುತಾಣವಾಗುತ್ತವೆ. ಕೆಲ ಬಾರಿಯಂತೂ ಜನರು ತಮ್ಮ ವಾಹನ ಏರಲು ಪರದಾಡಿದರೆ, ವಾಹನ ಸವಾರರು ಹಾರ್ನ್‌ ಹಾಕುತ್ತ ದಾರಿಗಾಗಿ ತಡಕಾಡುವ ದೃಶ್ಯಗಳು ಗೋಚರಿಸುತ್ತವೆ.

ಸ್ವಲ್ಪ ಮುಂದೆ ಸಾಗಿದರೆ ಪಾದಚಾರಿ ಮಾರ್ಗಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದು, ಗ್ಯಾರೇಜ್‌ನವರು ವಾಹನ ರಿಪೇರಿ ಮಾಡುವುದು, ವಿವಿಧ ಮಳಿಗೆಯವರು ಬೇರೆ ಬೇರೆ ರೀತಿಯಲ್ಲಿ ಪಾದಚಾರಿ ಮಾರ್ಗ ಅತಿಕ್ರಮಿಸಿಕೊಂಡಿರುವುದು ಕಾಣುತ್ತದೆ.

ಅಂಬೇಡ್ಕರ್‌ ನಗರ ಪ್ರವೇಶದ್ವಾರದಿಂದ ಮುಂದೆ ವಿದ್ಯಾನಿಕೇತನ್ ಪಿಯು ಕಾಲೇಜ್‌ ವರೆಗೂ ಎಡಬದಿಯ ದಾರಿಯಂತೂ ಅಕ್ಷರಶಃ ಗಬ್ಬೆದ್ದು ಹೋಗಿದೆ. ಇಷ್ಟೆಲ್ಲ ಅಧ್ವಾನಗೊಂಡರೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾಧಿಕಾರಿ ಅವರು ಇದನ್ನೆಲ್ಲ ಏಕೆ ಗಮನಿಸುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ.

ವಿದ್ಯಾರ್ಥಿಗಳು, ಕಾರ್ಮಿಕರು, ಸಾರ್ವಜನಿಕರು ಸೇರಿದಂತೆ ನಿತ್ಯ ಸಾವಿರಾರು ಜನರು ಓಡಾಡುವ ಈ ರಸ್ತೆಯಲ್ಲಿ ತ್ಯಾಜ್ಯದ ರಾಶಿಗಳು ದಿನೇ ದಿನೇ ರಸ್ತೆಗೆ ಬರುತ್ತಿವೆ. ಹೀಗಾಗಿ ಪಾದಚಾರಿಗಳು ಜೀವ ಭಯದಲ್ಲಿ ರಸ್ತೆಯಲ್ಲಿಯೇ ಹೆಜ್ಜೆ ಹಾಕಬೇಕಾಗಿದೆ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ಹೊತ್ತು ಗಾರ್ಮೆಂಟ್‌ ಫ್ಯಾಕ್ಟರಿಯ ನೂರಾರು ಕಾರ್ಮಿಕರು, ವಿದ್ಯಾರ್ಥಿಗಳು ಅಪಾಯದ ನಡುವೆ ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

‘ಈ ರಸ್ತೆಯಲ್ಲಿ ನಿತ್ಯ ರಾತ್ರಿ 12 ಗಂಟೆ ನಂತರ ಕಟ್ಟಡ ಒಡೆದ ಅವಶೇಷಗಳನ್ನು ತಂದು ಸುರಿಯಲಾಗುತ್ತದೆ. ಜತೆಗೆ ಚಿಕನ್‌ ಮತ್ತು ಮಟನ್‌ ಮಳಿಗೆಯವರು ತ್ಯಾಜ್ಯ ತಂದು ಸುರಿಯುತ್ತಾರೆ. ಸತ್ತ ನಾಯಿಗಳನ್ನು ಸಹ ತಂದು ಇಲ್ಲಿ ಎಸೆಯಲಾಗುತ್ತದೆ. ಒಂದೆಡೆ ಜನರು ನಡೆದಾಡಲು ಬಾಧೆ ಬಿದ್ದರೆ, ಇನ್ನೊಂದೆಡೆ ವಾಕರಿಕೆ ಬರುವ ದುರ್ವಾಸನೆ ನಡುವೆ ಮೂಗು ಮುಚ್ಚಿಕೊಂಡು ಓಡುತ್ತಾರೆ’ ಎಂದು ಅಂಬೇಡ್ಕರ್‌ ನಗರ ನಿವಾಸಿ ಶಿವಪ್ಪ ತಿಳಿಸಿದರು.

‘ಪಾದಚಾರಿ ಮಾರ್ಗದಲ್ಲಿ ತ್ಯಾಜ್ಯದ ರಾಶಿಗಳಿರುವ ಕಾರಣ ಜನರು ರಸ್ತೆಯಲ್ಲಿ ನಡೆದುಕೊಂಡು ಹೋಗಲೇ ಬೇಕಾಗಿದೆ. ಅದರಿಂದಾಗಿ ಆಗಾಗ ಅಪಘಾತಗಳು ಉಂಟಾಗಿ ಪಾದಚಾರಿಗಳು ಗಾಯಗೊಳ್ಳುತ್ತಿರುವ ಘಟನೆಗಳು ನಡೆಯುತ್ತಿವೆ. ಇಷ್ಟಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿರುವುದು ದುರಂತ’ ಎಂದು ಹೇಳಿದರು.

‘ರಸ್ತೆ ಬದಿಯ ಅತಿಕ್ರಮ ಮತ್ತು ತ್ಯಾಜ್ಯದ ರಾಶಿಗಳನ್ನು ತೆರೆವುಗೊಳಿಸುವ ಜತೆಗೆ ಪಾದಚಾರಿ ಮಾರ್ಗ ನಿರ್ಮಿಸಿ, ರಸ್ತೆ ವಿಭಜಕ ಹಾಕಿ ದ್ವಿಪಥ ಸಂಚಾರ ವ್ಯವಸ್ಥೆ ಮಾಡಬೇಕು. ಈ ವಿಚಾರದಲ್ಲಿ ರಾಜಕಾರಣಿಗಳಿಂತಲೂ ಜಿಲ್ಲಾಧಿಕಾರಿ ಅಥವಾ ಸಿಇಒ ಅವರು ಗಮನ ಹರಿಸಬೇಕು’ ಎಂದು ರೈತ ಮುಖಂಡ ಯಲುವಹಳ್ಳಿ ಸೊಣ್ಣೇಗೌಡ ತಿಳಿಸಿದರು.

‘ಚಿಕ್ಕಬಳ್ಳಾಪುರ ತಾಲ್ಲೂಕಾಗಿ ಇದ್ದಾಗಲೇ ನಗರ ಎಷ್ಟೊ ಚೆನ್ನಾಗಿತ್ತು. ಜಿಲ್ಲಾ ಕೇಂದ್ರವಾಗಿ ದಶಕ ಸಮೀಪಿಸುತ್ತ ಬಂದರೂ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ನಗರದಲ್ಲಿ ಎಲ್ಲೂ ಸುಸಜ್ಜಿತವಾದ ಪಾದಚಾರಿ ಮಾರ್ಗವಿಲ್ಲ. ಹೋಗಲಿ ನಡೆದು ಹೋಗಲು ದಾರಿಯಾದರೂ ಇದೆಯೇ ಎಂದರೆ ಅಲ್ಲಿ ಕಸದ ರಾಶಿಗಳು ಎದುರಾಗುತ್ತವೆ. ಕೋಟಿಗಟ್ಟಲೇ ಮಾತನಾಡುವವರು ಕಸದ ರಾಶಿ ತೆಗೆಸಿಹಾಕುವ ಶಕ್ತಿ ಇಲ್ಲವೆ’ ಎಂದು ಚಾಮರಾಜಪೇಟೆ ನಿವಾಸಿ  ಪ್ರವೀಣ್‌ ಪ್ರಶ್ನಿಸಿದರು.

‘ಸದ್ಯ ನಗರಸಭೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಅವರು ಪಾದಚಾರಿಗಳ ಸುರಕ್ಷತೆ ಮತ್ತು ಹಾಳುಗುತ್ತಿರುವ ನಗರದ ಸೌಂದರ್ಯದ ದೃಷ್ಟಿಯಿಂದ ಈ ರಸ್ತೆಯ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕು. ಮುಂದೊಂದು ದೊಡ್ಡ ಅನಾಹುತವಾಗಿ ಪ್ರಾಣ ಹಾನಿ ಸಂಭವಿಸುವ ಮುನ್ನವೇ ಸಂಬಂಧಪಟ್ಟವರೆಲ್ಲ ಎಚ್ಚೆತ್ತುಕೊಳ್ಳಬೇಕು’ ಎಂದು ಅವರು ತಿಳಿಸಿದರು.

*
ಅತ್ಯಂತ ಜನದಟ್ಟಣೆಯಿಂದ ಕೂಡಿರುವ ಶಿಡ್ಲಘಟ್ಟ ರಸ್ತೆಯ ಪಾದಚಾರಿಗಳು ಕೂಡಲೇ ಅತಿಕ್ರಮಣ ತೆರವುಗೊಳಿಸಬೇಕು. ಜತೆಗೆ ತ್ಯಾಜ್ಯವನ್ನು ಸ್ಥಳಾಂತರಿಸಿ ಸುಸಜ್ಜಿತವಾದ ಫುಟ್‌ಪಾತ್‌ ನಿರ್ಮಿಸಬೇಕು.
-ಯಲುವಹಳ್ಳಿ ಸೊಣ್ಣೇಗೌಡ,
ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT