ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಳೆಗಾಲದಲ್ಲಿ ನೀರು ಹರಿಸುವ ಕಾರ್ಯ’

ಹರಿಹರ ತಾಲ್ಲೂಕಿನ ರಾಜನಹಳ್ಳಿ ಬಳಿಯ ಜಾಕ್‌ವೆಲ್‌ಗೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭೇಟಿ
Last Updated 20 ಮಾರ್ಚ್ 2017, 6:04 IST
ಅಕ್ಷರ ಗಾತ್ರ

ದಾವಣಗೆರೆ: ‘ಮಳೆಗಾಲ ಆರಂಭ ಆಗುತ್ತಿದ್ದಂತೆ ತುಂಗಭದ್ರಾ ನದಿ ನೀರನ್ನು ಜಿಲ್ಲೆಯ 22 ಕೆರೆಗಳಿಗೆ ಹರಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗುವುದು’ ಎಂದು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಹರಿಹರ ತಾಲ್ಲೂಕಿನ ರಾಜನಹಳ್ಳಿ ಬಳಿಯ ಜಾಕ್‌ವೆಲ್‌ಗೆ ಭಾನುವಾರ ಭೇಟಿ ನೀಡಿ, ತುಂಗಭದ್ರಾ ನದಿಯನ್ನು ಪರಿಶೀಲಿಸಿ ಅವರು ಭಕ್ತರೊಂದಿಗೆ ಮಾತನಾಡಿದರು.

‘ಸಕಾಲಕ್ಕೆ ಮಳೆ ಬಾರದೇ ಇರುವುದರಿಂದಾಗಿ ನದಿ ಬತ್ತಿಹೋಗಿದ್ದು, ನದಿಪಾತ್ರದ ರೈತರ ಬೆಳೆಗೆ ನೀರು ಇಲ್ಲವಾಗಿದೆ. 22 ಕೆರೆ ಏತ ನೀರಾವರಿ ಯೋಜನೆಯಿಂದ 22 ಕೆರೆಗಳ ಸುತ್ತಮುತ್ತಲಿನ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಕೆರೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು’ ಎಂದು ಅವರು ಹೇಳಿದರು.

₹ 671ಕೋಟಿ ಪರಿಹಾರ: ‘ಭೂಮಿ ಆನ್‌ಲೈನ್‌ ಪರಿಹಾರ ಯೋಜನೆಯು ರೈತರ ಬಾಳಿಗೆ ಆಧಾರವಾಗಿದ್ದು, ಬೆಳೆ ಹಾನಿಗೊಳಗಾದ ರೈತರ ಬ್ಯಾಂಕ್‌ ಖಾತೆಗೆ ಸರ್ಕಾರದಿಂದಲೇ ನೇರವಾಗಿ ಬೆಳೆ ನಷ್ಟ ಪರಿಹಾರದ ಮೊತ್ತವನ್ನು ಜಮಾ ಮಾಡಲಾಗುತ್ತದೆ.

ಅಂತೆಯೇ ಬೆಳೆ ನಷ್ಟ ಪರಿಹಾರ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಈಗಾಗಲೇ ₹ 450 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಇದರೊಂದಿಗೆ ರಾಜ್ಯ ಸರ್ಕಾರವು ಮುಂಗಡವಾಗಿ ₹ 221 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಒಟ್ಟು ₹ 671 ಕೋಟಿ ಪರಿಹಾರದ ಮೊತ್ತವನ್ನು ಭೂಮಿ ಆನ್‌ಲೈನ್‌ ಪರಿಹಾರ ಯೋಜನೆ ಮೂಲಕ ಫಲಾನುಭವಿ ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ಪರಿಹಾರದ ಮೊತ್ತವನ್ನು ಜಮಾ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ರೈತರು ಆಧಾರ್ ಕಾರ್ಡ್‌ನ್ನು ಬ್ಯಾಂಕ್‌ ಖಾತೆಗೆ ಕಡ್ಡಾಯವಾಗಿ ಜೋಡಣೆ ಮಾಡಬೇಕು. ದಾಖಲೆಗಳು ಸಮರ್ಪಕವಾಗಿರದಿದ್ದಲ್ಲಿ ಪರಿಹಾರದ ಮೊತ್ತವು ಖಾತೆಗೆ ಜಮಾ ಆಗುವಲ್ಲಿ ವಿಳಂಬವಾಗುವ ಸಾಧ್ಯತೆ ಇರುತ್ತದೆ’ ಎಂದರು.

ಕ್ರಿಮಿನಲ್‌ ದೂರು ದಾಖಲು: ‘ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ಜಮಾವಾಗುವ ಬೆಳೆನಷ್ಟ ಪರಿಹಾರ ಮೊತ್ತವನ್ನು ಯಾವುದೇ ಬ್ಯಾಂಕ್‌ಗಳು ರೈತರು ಮಾಡಿದ್ದ ಸಾಲಕ್ಕೆ ಜಮಾ ಮಾಡಿಕೊಳ್ಳುವಂತಿಲ್ಲ. ಒಂದು ವೇಳೆ ಜಮಾ ಮಾಡಿಕೊಂಡಲ್ಲಿ ಅಂತಹ ಬ್ಯಾಂಕ್‌ಗಳ ವಿರುದ್ಧ ಕ್ರಿಮಿನಲ್‌ ದೂರು ದಾಖಲಿಸಲಾಗುವುದು’ ಎಂದು ಸ್ವಾಮೀಜಿ ಎಚ್ಚರಿಸಿದರು.

ನದಿ ಜೋಡಣೆ ಅವಶ್ಯ: ‘ರಾಜ್ಯ
ಸರ್ಕಾರ ಬಜೆಟ್‌ನಲ್ಲಿ ನೂತನ ತಾಲ್ಲೂಕುಗಳನ್ನು ಘೋಷಣೆ ಮಾಡಿದ ರೀತಿಯಲ್ಲಿ ನದಿಗಳ ಜೋಡಣೆ ಯೋಜನೆಗಳನ್ನು ಘೋಷಣೆ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರವು ಚಿಂತನೆ ನಡೆಸಬೇಕು’ ಎಂದು ಅವರು ಒತ್ತಾಯಿಸಿದರು. ‘ದೂಡಾ’ ಅಧ್ಯಕ್ಷ ರಾಮಚಂದ್ರಪ್ಪ, ಎಪಿಎಂಸಿ ಅಧ್ಯಕ್ಷ ಮುದೇಗೌಡ್ರು ಗಿರೀಶ್‌, ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಎಸ್‌.ಬಸವಂತಪ್ಪ, ಡಾ.ಮಂಜುನಾಥ ಗೌಡ್ರು ಉಪಸ್ಥಿತರಿದ್ದರು.

ಪ್ರತಿ ತಾಲ್ಲೂಕಿಗೆ 10 ನೀರಿನ ಟ್ಯಾಂಕರ್‌   ವಿತರಣೆ
‘ಜಿಲ್ಲೆಯಲ್ಲಿ ಬರಗಾಲ ತೀವ್ರವಾಗಿದ್ದು, ಸಕಾಲಕ್ಕೆ ನೀರು ದೊರೆಯದೇ ಅಡಿಕೆ ತೋಟಗಳು ಒಣಗುತ್ತಿವೆ. ಅಡಿಕೆ ತೋಟ ಉಳಿಸಿ ಕೊಳ್ಳಲು ಪರದಾಡುತ್ತಿರುವ ರೈತರಿಗೆ ಅನುಕೂಲವಾಗಲಿ ಎಂದು ಪ್ರತಿ ತಾಲ್ಲೂಕಿಗೆ 10 ನೀರಿನ ಟ್ಯಾಂಕರ್‌ಗಳನ್ನು ನೀಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್‌.ಮಲ್ಲಿಕಾರ್ಜುನ ತಿಳಿಸಿದರು.

‘ಪ್ರತಿ ತಾಲ್ಲೂಕಿಗೆ ಕನಿಷ್ಠ 150 ನೀರಿನ ಟ್ಯಾಂಕರ್‌ಗಳನ್ನು ನೀಡಬೇಕು ಎಂಬ ಬೇಡಿಕೆ ಬಂದಿತ್ತು. ಬೇಸಿಗೆ ಸಮಯದ 3 ತಿಂಗಳ ಅವಧಿಗೆ ಮಾತ್ರ ನೀರಿನ ಟ್ಯಾಂಕರ್‌ಗಳ ಉಪಯೋಗ ಇರುತ್ತದೆ. ನಂತರ ಅವು ಮೂಲೆಗುಂಪಾಗುತ್ತವೆ. ಹೀಗಾಗಿ ಪ್ರತಿ ತಾಲ್ಲೂಕಿಗೆ 10 ನೀರಿನ ಟ್ಯಾಂಕರ್‌ಗಳನ್ನು ವಿತರಿಸಲಾಗಿದೆ’ ಎಂದು ಹೇಳಿದರು.

‘22 ಕೆರೆ ಏತ ನೀರಾವರಿ ಯೋಜ ನೆಯಿಂದಾಗಿ ಹರಿಹರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರ ಬೆಳೆಗೆ ಯಾವುದೇ ಸಮಸ್ಯೆ ಇಲ್ಲ. ಈ ಬಗ್ಗೆ ಸ್ಥಳೀಯ ರೈತರೊಂದಿಗೆ ಚರ್ಚೆ ನಡೆಸಲಾಗಿದೆ’ ಎಂದು ಹೇಳಿದರು.

‘ಪ್ರತಿ ಗ್ರಾಮದಲ್ಲಿಯೂ ಓವರ್‌ ಹೆಡ್‌ ನೀರಿನ ಟ್ಯಾಂಕ್‌ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪರಿಹಾರಕ್ಕೆ ಮನವಿ
ನೀರಿಲ್ಲದೇ ಹೆಮ್ಮನಬೇತೂರಿನಲ್ಲಿ ಸುಮಾರು 200 ಎಕರೆ ಪ್ರದೇಶದ ಅಡಿಕೆ ತೋಟವು ಒಣಗಿದೆ. ಅಡಿಕೆ ಬೆಳೆಗಾರರು ಕಂಗಾಲಾಗಿದ್ದು, ಕೂಡಲೇ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಈ ವರ್ಷ ನಷ್ಟವಾಗಿರುವ ₹ 60 ಕೋಟಿ ಪರಿಹಾರವನ್ನು ಬಿಡುಗಡೆ ಕ್ರಮಕೈಗೊಳ್ಳಬೇಕು ಎಂದು ಹೆಮ್ಮನಬೇತೂರು ರೈತರು ಸಚಿವರಿಗೆ ಮನವಿ ಸಲ್ಲಿಸಿದರು.

*
ಯೋಗಿ ಆದಿತ್ಯನಾಥ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿರುವುದು ಧಾರ್ಮಿಕ ಸಮಾನತೆಗಾಗಿ ಹಾಗೂ ಕೆಲ ಅನುಮಾನಗಳ ನಿವಾರಣೆಗಾಗಿ ಉತ್ತಮ ಆಯ್ಕೆ.
–ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT