ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಕ ಜಾತ್ಯತೀತ, ವಿಶ್ವಮಾನವ: ಸಿದ್ದೇಶ್ವರ ಶ್ರೀ

ರೈತರ ಕುರಿತಾಗಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮ
Last Updated 20 ಮಾರ್ಚ್ 2017, 6:29 IST
ಅಕ್ಷರ ಗಾತ್ರ

ಧಾರವಾಡ: ‘ಕೃಷಿಕರಿಗೆ ರಾಷ್ಟ್ರ, ಧರ್ಮ, ಜಾತಿ, ದೇಶದ ಮಿತಿಯಿಲ್ಲ. ಅವರಿಗೆ ಭೂ, ಜಲ, ಧಾನ್ಯವೇ ಪಕ್ಷಗಳು. ಹೀಗಾಗಿ ಆತ ವಿಶ್ವ ಮಾನವ’ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಡೇರಿಯಲ್ಲಿ ರೈತರ ಸಮಸ್ಯೆಗಳ ಕುರಿತು ಶನಿವಾರ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರೈತ ಋಷಿ ಇದ್ದಂತೆ. ಜಲ, ಅನ್ನ, ಸುಭಾಷಿತ ಎಂಬ ರತ್ನಗಳು ನಮ್ಮ ಭೂಮಿಯಲ್ಲಿವೆ. ಇದನ್ನು ಹೊಂದಿದವನಿಗಿಂತ ಮತ್ತೊಬ್ಬ ಶ್ರೀಮಂತ ವ್ಯಕ್ತಿ ದೇಶದಲ್ಲಿಲ್ಲ. ಇಂತಹ ಭೂಮಿಯನ್ನು ದೇಶದ ರೈತರು ಮಾತ್ರ ಹೊಂದಿದ್ದಾರೆ. ರೈತನಂತಹ ಸುಂದರ ಜೀವನ ಯಾರದ್ದೂ ಇಲ್ಲ. ನಿಮ್ಮ ಜೀವನ ನೋಡಿ ಮಕ್ಕಳೂ ಸಹ ರೈತನಾಗಬೇಕು ಎಂದು ಆಸಕ್ತಿ ವಹಿಸುವಂತೆ ಶುದ್ಧ ಜೀವನ ನಡೆಸಬೇಕು’ ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಕನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ‘ರೈತ ಪರಾವಲಂಬಿಯಾಗದೇ ಸ್ವಂತಿಕೆಯಿಂದ ಜೀವನ ನಡೆಸಲು ಕಲಿಯಬೇಕು. ದೇಶ ಇಂದು ವಿಚಿತ್ರ ಪರಿಸ್ಥಿತಿ ಎದುರಿಸುತ್ತಿದೆ. ವಿಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡುವ ನೆಪದಲ್ಲಿ ಕೃಷಿಯನ್ನು ಕಡೆಗಣಿಸಲಾಗುತ್ತಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

‘ಇಂದು ರೈತರಿಗೆ ಕೆಲಸ ಕಡಿಮೆ, ಉತ್ಪಾದನೆ ಹೆಚ್ಚು ಬೇಕಾಗಿದೆ. ಭೂಮಿಗೆ ಹೆಚ್ಚು ನೀರು ನಿಲ್ಲಿಸುವುದಕ್ಕಿಂತ ತೇವಾಂಶದ ಅವಶ್ಯಕತೆ ಇರುತ್ತದೆ. ರಾಸಾಯನಿಕ ಗೊಬ್ಬರ ಬರುವುದಕ್ಕಿಂತ ಪೂರ್ವದಲ್ಲಿ ರೈತರು ಸಾವಯವ ಗೊಬ್ಬರದಿಂದಲೇ ಬೆಳೆ ಬೆಳೆಯುತ್ತಿದ್ದರು.

ಇಂದು ಎಲ್ಲ ಕಡೆಗಳಿಂದಲೂ ರೈತರು ಶೋಷಣೆಗೆ ಒಳಗಾಗಿದ್ದಾರೆ. ರೈತರು ಆತ್ಮಹತ್ಯೆಗೆ ಮೊರೆ ಹೋಗದೇ ನೈಸರ್ಗಿಕ ಗೊಬ್ಬರ ಬಳಸಿ ಉತ್ತಮ ಬೆಳೆ ಬೆಳೆಯಲು ಮುಂದಾಗಬೇಕು’ ಎಂದು ಅವರು ಹೇಳಿದರು.

ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ರಾಮಕೃಷ್ಣ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮೀಜಿ, ಉಪ್ಪಿನ ಬೆಟಗೇರಿಯ ಕುಮಾರ ವಿರೂಪಾಕ್ಷ ಸ್ವಾಮೀಜಿ, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಸಚಿವ ವಿನಯ ಕುಲಕರ್ಣಿ, ವಿಧಾನ ಪರಿಷತ್ ಮಾಜಿ ಸದಸ್ಯ ವೀರಣ್ಣ ಮತ್ತಿಗಟ್ಟಿ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಶಾಸಕ ಎನ್.ಎಚ್.ಕೋನರಡ್ಡಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಂ.ಹಿಂಡಸಗೇರಿ ಸೇರಿದಂತೆ ಸಾವಿರಾರು ರೈತರು, ರೈತ ಮಹಿಳೆಯರು ಕಾರ್ಯಕ್ರಮದಲ್ಲಿದ್ದರು.

ನಿತ್ಯ 2 ಸಾವಿರ ಕುಟುಂಬ ಕೃಷಿಯಿಂದ ವಿಮುಖ: ದೇಶದಲ್ಲಿರುವ 8 ಕೋಟಿ ಕೃಷಿಕರ ಮನೆಗಳ ಪೈಕಿ 2,058 ಕುಟುಂಬಗಳು ನಿತ್ಯ ಕೃಷಿಯಿಂದ ವಿಮುಖವಾಗುತ್ತಿವೆ. ನಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ನಾವೇ ಉಪಾಯಗಳನ್ನು ಕಂಡುಕೊಳ್ಳಬೇಕು.

ಹೊಲದಲ್ಲಿ ಗಿಡಗಳನ್ನು ಬೆಳೆಸುವುದರಿಂದ ಭೂಮಿ ರಕ್ಷಣೆಯಾಗುತ್ತದೆ. ಜೊತೆಗೆ ಅಂತರ್ಜಲಮಟ್ಟ ಸಹ ಹೆಚ್ಚುತ್ತದೆ ಎಂದು ಕನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಗಿಡ, ಮರ ಕಡಿಯುವುದು ಸೇರಿದಂತೆ ಕೃಷಿಯಲ್ಲಿ ಎದುರಾಗಿರುವ ಬಹುತೇಕ ಸಮಸ್ಯೆಗಳಿಗೆ ನಾವೇ ಕಾರಣರಾಗಿದ್ದೇವೆ. ಈಗ ಸಮಸ್ಯೆಗಳನ್ನು ನಾವೇ ಪರಿಹರಿಸಬೇಕು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT