ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ಧೂರಿ ಮದುವೆಗೆ ಕಡಿವಾಣ ಬೀಳಲಿ

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಆಂಜನೇಯ ಹೇಳಿಕೆ
Last Updated 20 ಮಾರ್ಚ್ 2017, 7:13 IST
ಅಕ್ಷರ ಗಾತ್ರ

ಬಾಗಲಕೋಟೆ: ಆರ್ಥಿಕ ತೊಂದರೆ ಇದ್ದರೂ ಕೆಲವರು ಪ್ರತಿಷ್ಠೆಗಾಗಿ ಅದ್ದೂರಿ ಮದುವೆಗೆ ಮುಂದಾಗುತ್ತಾರೆ. ಕೊನೆಗೆ ಮಾಡಿದ ಸಾಲು ತೀರಿಸಲಾಗದೇ ಊರು ಬಿಡುವ ಗಂಭೀರ ಪರಿಸ್ಥಿತಿ ತಂದುಕೊಳ್ಳುತ್ತಾರೆ. ಹಾಗಾಗಿ ಹೆಚ್ಚು ಹೆಚ್ಚು ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿ ಜಾಗೃತಿ ಮೂಡಿಸಬೇಕಿದೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದರು.

ಬೆಣ್ಣೂರಿನ ಡಾ. ಅಂಬೇಡ್ಕರ್‌ ವಿದ್ಯಾವರ್ಧಕ ಶಿಕ್ಷಣ ಸಮಿತಿ ವತಿಯಿಂದ ಅಂಬೇಡ್ಕರ್‌ ಅವರ 125ನೇ ಜನ್ಮ ವರ್ಷಾಚರಣೆ ಪ್ರಯುಕ್ತ ಶನಿವಾರ ಆಯೋಜಿಸಲಾಗಿದ್ದ 25 ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಆರ್ಥಿಕ ನಷ್ಟ ಉಂಟಾಗಿ ಊರು ಬಿಟ್ಟು ಹೋದ ಘಟನೆಗಳು ಕಣ್ಣೆದುರಿಗೆ ನಡೆದರೂ ಅದ್ಧೂರಿ ಮದುವೆಗಳು ಕಡಿಮೆಯಾಗುತ್ತಿಲ್ಲ. ತಮ್ಮ ಗಳಿಕೆ ಸಾಮರ್ಥ್ಯವನ್ನು ಸಮಾಜಕ್ಕೆ ತೋರಿಸಲು ಕೆಲವರು ಅದ್ಧೂರಿ ಮದುವೆಗಳನ್ನು ವೇದಿಕೆಯಾಗಿ ಮಾಡಿಕೊಂಡಿದ್ದಾರೆ.

ಕೋಟಿಗಟ್ಟಲೇ ಖರ್ಚು ಮಾಡಿ ಒಬ್ಬರ ಮದುವೆ ಮಾಡುವ ಬದಲು ಅದೇ ವೇದಿಕೆಯಲ್ಲಿ  ಬಡವರ ನೂರಾರು ಮದುವೆಗಳನ್ನು ಆಯೋಜಿಸಿ ಸಾರ್ಥಕ ಮೆರೆಯಲಿ ಎಂದು ಆಶಿಸಿದರು.

ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಮಾತನಾಡಿ, ಇಂತಹ ಚಿಕ್ಕ ಗ್ರಾಮದಲ್ಲಿ ಎಲ್ಲಾ ಜಾತಿಯ ವಧು–ವರರ ಮದುವೆ ಆಯೋಜಿಸುವ ಮೂಲಕ ಮುತ್ತಣ್ಣ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದಾರೆ. ಸಂಸಾರದಲ್ಲಿ ಹಲವು ತೊಂದರೆ ಉದ್ಭವಿಸುವುದು ಸಹಜ. ಅವುಗಳಿಗೆ ಹೊಂದಿಕೊಂಡು ಜೀವನ ಎಂಬ ಸಂಸಾರದ ಬಂಡಿ ಸಾಗಬೇಕು. ಅಂದಾಗ ಮಾತ್ರ ಜೀವನಕ್ಕೆ ಒಂದು ಅರ್ಥ ಬರುತ್ತದೆ ಎಂದು ಕಿವಿಮಾತು ಹೇಳಿದರು.

ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಸ್ವಾಮೀಜಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಶಾಸಕರಾದ ಎಚ್. ವೈ ಮೇಟಿ, ಆರ್. ಬಿ. ತಿಮ್ಮಾಪುರ ಮಾತನಾಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯರಾದ ಹನುಮವ್ವ ಕರಿಹೊಳಿ, ಕಸ್ತೂರಿ ಲಿಂಗಣ್ಣವರ,ಮಾಜಿ ಶಾಸಕರಾದ ಎಸ್‌.ಜಿ.ನಂಜಯ್ಯನಮಠ, ಬಿ.ಜಿ. ಜಮಖಂಡಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ. ಬಿ. ಸೌದಾಗಾರ, ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಹನುಮಂತ ಮಾವಿನಮರದ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶಿವಾನಂದ ಕುಂಬಾರ, ಡಾ. ದೇವರಾಜ ಪಾಟೀಲ, ರಾಜು ಮನ್ನಿಕೇರಿ, ಶ್ಯಾಮರಾವ ಘಾಟಗೆ ಹಾಜರಿದ್ದರು. ಮುತ್ತಣ್ಣ ಬೆಣ್ಣೂರ ಸ್ವಾಗತಿಸಿದರು.

₹ 50 ಸಾವಿರ ಪ್ರೋತ್ಸಾಹಧನ ವಿತರಣೆ: ಹಿಂದುಳಿದ ವರ್ಗದ ಕುಟುಂಬಗಳಿಗೆ ರಾಜ್ಯ ಸರ್ಕಾರ ಹತ್ತು ಹಲವು ಯೋಜನೆ ಜಾರಿಗೆ ತಂದಿದೆ. ಅದರಲ್ಲಿ ಸರಳ ವಿವಾಹ ಮಾಡಿಕೊಳ್ಳುವ ಪರಿಶಿಷ್ಟ ಜಾತಿ, ಪಂಗಡದ ಕುಟುಂಬಗಳಿಗೆ ₹ 50 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ಆಂಜನೇಯ ತಿಳಿಸಿದರು.

ಸರಳ ವಿವಾಹಗಳತ್ತ ಜನರು ಮುಂದಾಗಬೇಕು. ಗ್ರಾಮದ ಡಾ. ಬಿ. ಆರ್. ಅಂಬೇಡ್ಕರ್‌ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ 25ನೇ ವರ್ಷಾಚರಣೆಯಲ್ಲಿ ಇಂತಹ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಆದ್ದರಿಂದ ಈ ಸಂಸ್ಥೆಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ  ₹ 50 ಲಕ್ಷ ಸಹಾಯ ನೀಡಲಾಗುವುದು.

ಸರಳ ಮದುವೆಗೆ ಸಾಕ್ಷಿಯಾಗಿರುವ 25 ಜೋಡಿಗಳಲ್ಲಿ 23 ಪರಿಶಿಷ್ಟ ಜಾತಿ, ಪಂಗಡ ಜೋಡಿಗಳಿದ್ದು, ಅವರಿಗೆ ಭೂಮಿ ಇದ್ದರೇ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆಬಾವಿ ಕೊರೆಸಿಕೊಡಲಾಗುವುದು. ಇನ್ನುಳಿದ ಎರಡು ಜೋಡಿಗೆ ವೈಯಕ್ತಿಕ ₹ 25 ಸಾವಿರ ಹಾಗೂ ಇಲಾಖೆಯಿಂದ ₹ 25 ಸಾವಿರ ಸಾಲ ನೀಡಲಾಗುವುದು ಎಂದರು.

ನಿರ್ದೇಶಕರಾಗಿ ನೇಮಕ: ಮುತ್ತಣ್ಣ ಬೆಣ್ಣೂರ ಅವರನ್ನು ಡಾ. ಬಿ.ಆರ್.ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ನಿರ್ದೇಶಕರನ್ನಾಗಿ ನೇಮಿಸಲಾಗುತ್ತಿದೆ. ಆ ಬಗ್ಗೆ ಎರಡು ದಿನಗಳಲ್ಲಿಯೇ  ಆದೇಶ ಹೊರಡಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT