ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರೋಗ್ಯ ವಿ.ವಿ. ಸ್ಥಾಪನೆಗೆ 216 ಎಕರೆ ಜಾಗ’

ರಾಮನಗರಕ್ಕೆ ಆರೋಗ್ಯ ವಿ.ವಿ. ಸ್ಥಳಾಂತರ: ನಿರ್ವಹಣೆಗೆ ವಾರ್ಷಿಕ ₹100 ಕೋಟಿ ಅನುದಾನದ ಭರವಸೆ
Last Updated 20 ಮಾರ್ಚ್ 2017, 8:52 IST
ಅಕ್ಷರ ಗಾತ್ರ

ರಾಮನಗರ: ‘ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆಂದು ನಗರದ ಹೊರವಲಯದಲ್ಲಿ ಅರ್ಚಕರಹಳ್ಳಿ ಸಮೀಪ 216 ಎಕರೆ ಜಾಗ ನೀಡಿದೆ. ಇದರಲ್ಲಿ 73 ಎಕರೆಗೆ ಸಂಬಂಧಿಸಿ ಮಾತ್ರ ನ್ಯಾಯಾಲಯದಲ್ಲಿ ವ್ಯಾಜ್ಯವಿದೆ. ಇನ್ನುಳಿದ 148 ಎಕರೆಯಲ್ಲಿ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು.

ಈ ಹಿಂದೆ ನಿರ್ಧಾರವಾದಂತೆಯೇ ಕ್ಯಾಂಪಸ್‌ ಹಾಗೂ ಆರೋಗ್ಯ ನಗರ ನಿರ್ಮಾಣಗೊಳ್ಳಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ನಗರದ ಕಂದಾಯ ಭವನದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸ್ಥಳಾಂತರ ಮತ್ತು ಕಾರ್ಯಾರಂಭ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಳಾಂತರದ ವಿಷಯದಲ್ಲಿ ಕೆಲವರು ದಾರಿ ತಪ್ಪಿಸುತ್ತಿದ್ದಾರೆ. ಅಂಥವರು ಎಚ್ಚತ್ತುಕೊಳ್ಳದಿದ್ದರೆ ತಕ್ಕ ಪಾಠ ಕಲಿಸಲಾಗುವುದು’ ಎಂದು ಎಚ್ಚರಿಸಿದರು.

‘ವಿವಿ ಸ್ಥಾಪನೆಗೆ ಹಣವಿಲ್ಲ ಎಂದು ಕೆಲವು ಸಿಂಡಿಕೇಟ್‌ ಸದಸ್ಯರು ಸುಳ್ಳು ಹೇಳುತ್ತಿದ್ದಾರೆ. ವಿ.ವಿ. ಬಳಿ ಸುಮಾರು ₹800 ಕೋಟಿ ಹಣವಿದೆ. ರಾಮನಗರದಲ್ಲಿ ವಿ.ವಿ. ಕ್ಯಾಂಪಸ್‌ ನಿರ್ಮಿಸಲು ₹580 ಕೋಟಿ ಸಾಕಾಗಲಿದೆ. ಅದನ್ನು ಬಳಸಿಕೊಳ್ಳದೇ ಇದ್ದಲ್ಲಿ ವಿ.ವಿಯು ಸರ್ಕಾರಕ್ಕೆ ತೆರಿಗೆ ಕಟ್ಟಬೇಕಾಗುತ್ತದೆ’ ಎಂದು ತಿಳಿಸಿದರು.

ಇದೂ ಬೆಂಗಳೂರು!: ‘2007ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ವಿಶ್ವವಿದ್ಯಾಲಯದ ಸ್ಥಾಪನೆಯ ಮಹತ್ವದ ನಿರ್ಧಾರ ತೆಗೆದುಕೊಂಡರು. ಅದಾಗಿ ಒಂದು ದಶಕವಾದರೂ ಆ ಕನಸು ನನಸಾಗಿಲ್ಲ. ರಾಮನಗರವು ಉತ್ತರ ಕರ್ನಾಟಕ ಭಾಗದ ಯಾವುದೋ ಮೂಲೆಯಲ್ಲಿ ಇದೆ ಎನ್ನುವಂತೆ ಬೆಂಗಳೂರಿನ ಮಂದಿ ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ವಾಸ್ತವದಲ್ಲಿ ಈ ಜಿಲ್ಲೆ ಕೂಡ ಬೆಂಗಳೂರಿನ ಒಂದು ಭಾಗವೇ.

ವಿಶ್ವವಿದ್ಯಾಲಯದ ಕೆಲವು ಅಧಿಕಾರಿಗಳು, ಸಿಂಡಿಕೇಟ್‌ ಸದಸ್ಯರು ಈ ವಿಷಯದಲ್ಲಿ ರಾಜ್ಯಪಾಲರನ್ನು ಹಾಗೂ ನ್ಯಾಯಾಲಯವನ್ನೂ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ಅಂತಹವರು ನನಗೂ ಚೆಸ್‌, ಫುಟ್‌ಬಾಲ್‌ ಗೊತ್ತು ಎಂಬುದನ್ನು ಅರಿತರೆ ಒಳ್ಳೆಯದು’ ಎಂದು ಎಚ್ಚರಿಸಿದರು.

‘ವಿಶ್ವವಿದ್ಯಾಲಯದ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡಲ್ಲ. ಅವರಿಗೆ ಅಗತ್ಯವಾದ ಎಲ್ಲ ಮೂಲ ಸೌಕರ್ಯ ಒದಗಿಸಲು ಸಿದ್ಧನಿದ್ದೇನೆ. ಬರುವವರಗೆ ನಾನೇ ರತ್ನಗಂಬಳಿ ಹಾಸಿ, ಬಾಗಿಲಲ್ಲಿ ನಿಂತು ಕೈ ಮುಗಿದು ಸ್ವಾಗತ ಕೋರುತ್ತೇನೆ’ ಎಂದರು.

ವರ್ಷಕ್ಕೆ ₹100 ಕೋಟಿ ಅನುದಾನ: ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಮಾತನಾಡಿ ‘ರಾಮನಗರಕ್ಕೆ ಸ್ಥಳಾಂತರಗೊಳ್ಳಲಿರುವ ವಿಶ್ವವಿದ್ಯಾಲಯದ ನಿರ್ವಹಣೆಗಾಗಿ ರಾಜ್ಯ ಸರ್ಕಾರವು ಪ್ರತಿ ವರ್ಷ ₹100 ಕೋಟಿ ಅನುದಾನ ನೀಡಲಿದೆ’ ಎಂದು ತಿಳಿಸಿದರು.

‘ಮೊದಲಿಗೆ ವಿಶ್ವವಿದ್ಯಾಲಯದ ಎಂಜಿನಿಯರಿಂಗ್‌ ವಿಭಾಗವು ಇಲ್ಲಿಗೆ ಸ್ಥಳಾಂತರಗೊಂಡು ಆಡಳಿತ ವಿಭಾಗಕ್ಕೆ ಬೇಕಾದ ಮೂಲ ಸೌಕರ್ಯಗಳ ಕಡೆ ಗಮನ ನೀಡಲಿದೆ. ಜೂನ್ ವೇಳೆಗೆ ವಿ.ವಿ.ಯು ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರಗೊಳ್ಳಲಿದೆ’ ಎಂದು ಅವರು ವಿವರಿಸಿದರು. ಆರೋಗ್ಯ ಸಚಿವ ಕೆ.ಆರ್. ರಮೇಶ್‌ಕುಮಾರ್ ಮಾತನಾಡಿ,  ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಂತೆಯೇ ಖಾಸಗಿ ಆಸ್ಪತ್ರೆಗಳಲ್ಲಿ ಜನರಿಂದ ಹಣ ಸುಲಿಗೆ ನಿಯಂತ್ರಣಕ್ಕೂ ಬದ್ಧವಾಗಿದೆ’ ಎಂದರು.

ನಂತರ ಅರ್ಚಕರಹಳ್ಳಿಯಲ್ಲಿ ವಿವಿಗೆ ಗುರುತಿಸಿರುವ ಜಾಗವನ್ನು ಸಚಿವರಾದ ಡಿ.ಕೆ ಶಿವಕುಮಾರ್, ಸಂಸದ ಡಿ.ಕೆ ಸುರೇಶ್  ವೀಕ್ಷಣೆ ನಡೆಸಿದರು. 
ಶಾಸಕ ಎಚ್‌.ಸಿ. ಬಾಲಕೃಷ್ಣ, ವಿಧಾನ ಪರಿಷತ್‌ ಸದಸ್ಯರಾದ ಎಸ್‌.ರವಿ. ಸಯ್ಯದ್‌ ಮುದೀರ್‌ ಆಗಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಪಿ. ರಾಜೇಶ್, ಉಪಾಧ್ಯಕ್ಷೆ ದಿವ್ಯಾ ಗಂಗಾಧರ್‌, ಮೈಸೂರು ಎಲೆಕ್ಟ್ರಿಕಲ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಕೆ. ಶೇಷಾದ್ರಿ, ನಗರಸಭೆ ಅಧ್ಯಕ್ಷ ರವಿಕುಮಾರ್,

ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಎನ್. ವೆಂಕಟೇಶ್‌, ತಾ.ಪಂ. ಅಧ್ಯಕ್ಷ ಡಿ.ಎನ್. ಮಹದೇವಯ್ಯ, ಮಾಜಿ ಶಾಸಕ ಸಿ.ಎಂ. ಲಿಂಗಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜು, ಜಿಲ್ಲಾಧಿಕಾರಿ ಬಿ.ಆರ್. ಮಮತಾ. ಜಿ.ಪಂ. ಸಿಇಒ ಸಿ.ಪಿ. ಶೈಲಜಾ, ಎಸ್‌.ಪಿ ರಮೇಶ್, ಕುಲ ಸಚಿವರಾದ ಸಿ.ಎಂ.ನೂರ್‌ಮನ್ಸೂರ್, ಎಂ.ಕೆ. ರಮೇಶ್‌ ಇತರರು ಇದ್ದರು.

ರಾಮನಗರದ ಬಗ್ಗೆ ತಪ್ಪು ಕಲ್ಪನೆ ಬೇಡ
‘ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯರು, ಅಧಿಕಾರಿಗಳು ರಾಮನಗರ ಜಿಲ್ಲೆ ಬಗ್ಗೆ ತಪ್ಪು ಕಲ್ಪನೆ ಮೂಡಿಸುತ್ತಿರುವುದು ಸರಿಯಲ್ಲ’ ಎಂದು ಸಂಸದ ಡಿ.ಕೆ. ಸುರೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಕಾನೂನು ಚೌಕಟ್ಟಿನಲ್ಲಿಯೇ ವಿ.ವಿ ಸ್ಥಾಪನೆ ಮಾಡಲಾಗುತ್ತಿದೆ ಎಂಬುದನ್ನು ಯಾರೂ ಮರೆಯಬಾರದು. ಈ ಊರಿನಲ್ಲಿ ಮೂಲ ಸೌಕರ್ಯಗಳೇ ಇಲ್ಲ ಎಂದು ಆರೋಪಿಸುವವರು ಈಗ ಬೆಂಗಳೂರಿನಲ್ಲಿ ವಿ.ವಿ.ಯು ಯಾವ ಕಟ್ಟಡದಲ್ಲಿ ಇದೆ, ಅಲ್ಲಿನ ಸೌಕರ್ಯಗಳೂ ಹೇಗಿವೆ ಎಂಬುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ವಿಶ್ವವಿದ್ಯಾಲಯದ ವಿಚಾರಕ್ಕೆ ರಾಜಕೀಯದ ಬಣ್ಣ ಬಳಿಯಬೇಡಿ’ ಎಂದು ಮನವಿ ಮಾಡಿದರು.

1 ಲಕ್ಷ ವಿದ್ಯಾರ್ಥಿಗಳು
ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಎಸ್. ರವೀಂದ್ರನಾಥ್‌ ಪ್ರಾಸ್ತಾವಿಕವಾಗಿ ಮಾತನಾಡಿ ‘1996ರಲ್ಲಿ ಆರೋಗ್ಯ ವಿ.ವಿ ಸ್ಥಾಪನೆಯಾಗಿದ್ದು, ಪ್ರಸ್ತುತ 600ಕ್ಕೂ ಹೆಚ್ಚು ಕಾಲೇಜುಗಳು ಇದರ ಅಧೀನದಲ್ಲಿವೆ. ಸುಮಾರು 1 ಲಕ್ಷದಷ್ಟು ವಿದ್ಯಾರ್ಥಿಗಳು ಈ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಪ್ರತಿ ವರ್ಷ 30 ಸಾವಿರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಈ ಸಾಲಿನ ಘಟಿಕೋತ್ಸವ  ಏ. 6ರಂದು ನಡೆಯಲಿದೆ’ ಎಂದು ತಿಳಿಸಿದರು.

*
ವಿಶ್ವವಿದ್ಯಾಲಯದ ಮುಂದಿನ ಸಿಂಡಿಕೇಟ್‌ ಸಮಿತಿ ಸಭೆ ರಾಮನಗರದಲ್ಲಿಯೇ ನಡೆಯಬೇಕು. ಸದಸ್ಯರು ಬರಲು ಒಪ್ಪದಿದ್ದರೆ ನಮ್ಮೂರಿನ ಜನ ಬಸ್‌ ಮಾಡಿಕೊಂಡು ಹೋಗಿ ಅವರನ್ನು ಎತ್ತಿ ಹಾಕಿಕೊಂಡು ಬರುತ್ತಾರೆ.
-ಡಿ.ಕೆ. ಶಿವಕುಮಾರ್,
ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT