ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಕಾಳಜಿ ಬೆಳೆಸಿಕೊಳ್ಳಲು ಸಲಹೆ

ಪರಿಸರ ಮಿತ್ರ ಶಾಲಾ ಪ್ರಶಸ್ತಿ ವಿತರಿಸಿದ ಜಿಲ್ಲಾಧಿಕಾರಿ ರಿಚರ್ಡ್ ಡಿಸೋಜ
Last Updated 20 ಮಾರ್ಚ್ 2017, 9:00 IST
ಅಕ್ಷರ ಗಾತ್ರ

ಮಡಿಕೇರಿ: ಪ್ರತಿಯೊಬ್ಬರೂ ಪರಿಸರ ಕಾಳಜಿ ಬೆಳೆಸಿಕೊಂಡಾಗ ಮಾತ್ರ ಉತ್ತಮ ಪರಿಸರ ನಿರ್ಮಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ  ತಿಳಿಸಿದರು.

ನಗರದ ದೇವರಾಜು ಅರಸು ಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಆಯೋಜಿಸಿದ್ದ ಜಿಲ್ಲಾಮಟ್ಟದ ಪರಿಸರ ಮಿತ್ರ ಶಾಲಾ ಪ್ರಶಸ್ತಿಗಳನ್ನು ವಿತರಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ  ಘನತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಎಲ್ಲ ಸ್ಥಳೀಯ ಸಂಸ್ಥೆಗಳು ಹೆಚ್ಚಿನ ನಿಗಾ ವಹಿಸಬೇಕು. ಕಾವೇರಿ ನದಿಗೆ ಯಾವುದೇ ತ್ಯಾಜ್ಯ ಹರಿದು ಹೋಗ ದಂತೆ ಸೂಚಿಸಲಾಗಿದೆ. ಜೀವನದಿ ಕಾವೇರಿ ಮಲಿನಗೊಳ್ಳದಂತೆ ಜಾಗೃತಿ ವಹಿಸಿ ನದಿಯನ್ನು ಸಂರಕ್ಷಿಸಲು ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.

ಪರಿಸರ ಮಿತ್ರ ಶಾಲೆಗಳ ಪರಿಸರ ಚಟುವಟಿಕೆಗಳ ಕುರಿತಂತೆ ಹೊರತಂದಿರುವ ‘ಹಸಿರು -ನನಸಾದ ಕನಸು’ ಪುಸ್ತಕ ಬಿಡುಗಡೆಗೊಳಿಸಿದ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸೂರ್ಯಸೇನ್,  ಶಾಲೆಗಳಲ್ಲಿ ಹಸಿರು ಪರಿಸರವನ್ನು ನಿರ್ಮಿಸುವ ಮೂಲಕ ಶಾಲೆಗಳನ್ನು ಆಕರ್ಷಣೀಯವಾಗಿ ರೂಪಿಸಲು ಈ ಕಾರ್ಯಕ್ರಮ ಸಹಕಾರಿಯಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜತೆಯಾಗಿ ಶಾಲೆಯ ಪರಿಸರವನ್ನು ಉತ್ತಮವಾಗಿ ಕಾಪಾಡಬೇಕು ಎಂದರು.

ಮಾಲಿನ್ಯ ನಿಯಂತ್ರಣ ಮಂಡಳಿಯ ಮೈಸೂರು ವಲಯ ಕಚೇರಿ ಹಿರಿಯ ಪರಿಸರ ಅಧಿಕಾರಿ ಕೆ.ಎಂ.ಲಿಂಗರಾಜು, ಶಾಲೆಯ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಲು ವಿವಿಧ ಪರಿಸರ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಪರಿಸರ ಮಿತ್ರ ಶಾಲೆಗಳು ಇತರೆ ಶಾಲೆಗಳಿಗೆ ಮಾದರಿಯಾಗಿವೆ. ಶಿಕ್ಷಕರು ಮಕ್ಕಳನ್ನು ಪರಿಸರ ರಾಯಭಾರಿಗಳಾಗಿ ರೂಪಿಸಬೇಕು ಎಂದರು.

ಡಿಡಿಪಿಐ ಜಿ.ಆರ್.ಬಸವರಾಜ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಜಿ.ಆರ್.ಗಣೇಶನ್, ಪರಿಸರ ಮಿತ್ರ ಶಾಲೆಗಳು ಅಳವಡಿಸಿಕೊಂಡಿರುವ ಪರಿಸರ ಸ್ನೇಹಿ ಚಟುವಟಿಕೆಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದ ಸಂಯೋಜಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಪರಿಸರ ಮಿತ್ರ ಶಾಲೆಗಳ ಇಕೋ ಕ್ಲಬ್‌ಗಳ ಪರಿಸರ ಚಟುವಟಿಕೆಗಳ ಕುರಿತು ವಿವರಿಸಿದರು. ಪ್ರಶಸ್ತಿ ಗಳಿಸಿರುವ ಶಾಲೆಗಳ ಪರಿಸರ ಚಟುವಟಿಕೆಗಳು ಇತರೆ ಶಾಲೆಗಳಿಗೆ ಮಾದರಿಯಾದುದು ಎಂದರು.

ಕೂಡಿಗೆ ಡಯಟ್‌ನ ಪ್ರಾಂಶುಪಾಲ ಎಸ್.ದೊಡ್ಡಮಲ್ಲಪ್ಪ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಅಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯೂ, ಜಿಲ್ಲಾ ಬಿಸಿಎಂ ಅಧಿಕಾರಿ ಕೆ.ವಿ.ಸುರೇಶ್, ರಾಜ್ಯ ವಿಜ್ಞಾನ ಪರಿಷತ್‌ ಜಿಲ್ಲಾ ಘಟಕದ ಉಪಾಧ್ಯಕ್ಷೆ ಡಿ.ಎಂ.ರೇವತಿ, ಸಹ ಕಾರ್ಯದರ್ಶಿ ಎಸ್.ನಾಗರಾಜ್, ಸದಸ್ಯ ಜಿ.ಶ್ರೀಹರ್ಷ ಇತರರು ಇದ್ದರು. ಗರಗಂದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಪರಿಸರ ಸಂರಕ್ಷಣೆ ಕುರಿತ ರೂಪಕ ಪ್ರದರ್ಶಿಸಿದರು.

ಸಮಾರಂಭದಲ್ಲಿ ಹತ್ತು ಹಸಿರು ಶಾಲೆಗಳಿಗೆ ತಲಾ ₹5 ಸಾವಿರ ನಗದು ಹಾಗೂ ಹತ್ತು ಹಳದಿ ಶಾಲೆಗಳಿಗೆ ತಲಾ₹4 ಸಾವಿರ ನಗದು ಬಹುಮಾನ ಹಾಗೂ ಜಿಲ್ಲಾಮಟ್ಟದ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪಡೆದ ಗರಗಂದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ₹30 ಸಾವಿರ ನಗದು ಬಹುಮಾನ ಹಾಗೂ ಪಾರಿತೋಷಕ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT