ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿಯಲ್ಲಿ ಜಲಮೂಲ ಕಣ್ಮರೆ!

ನಗರ ವ್ಯಾಪ್ತಿಯ ಕೆರೆಗಳಲ್ಲಿ ಹೂಳು, ನೀರಿನ ಸಂಗ್ರಹ ಸಾಮರ್ಥ್ಯ ಕುಸಿತ
Last Updated 20 ಮಾರ್ಚ್ 2017, 9:03 IST
ಅಕ್ಷರ ಗಾತ್ರ

ಮಡಿಕೇರಿ: ‘ವರ್ಷಗಳ ಹಿಂದೆ ನಗರಸಭೆ ಪೂರೈಸುವ ನೀರಿಗೂ ಯಾರೂ ಕಾಯುತ್ತಿರಲಿಲ್ಲ. ನಗರ ವ್ಯಾಪ್ತಿಯಲ್ಲಿ ವಾರ್ಷಿಕ 300 ಇಂಚಿಗೂ ಅಧಿಕ ಮಳೆ ಸುರಿಯುತ್ತಿದ್ದ ಕಾರಣ ಜೀವಜಲದ ಸಮಸ್ಯೆ ಇರಲಿಲ್ಲ.

‘ಮನೆಯ ಸಮೀಪವೇ ತೆರೆದ ಬಾವಿ ನಿರ್ಮಿಸಿಕೊಂಡು ಅದರ ನೀರನ್ನೇ ದಿನನಿತ್ಯ ಬಳಕೆ ಮಾಡಿಕೊಳ್ಳುತ್ತಿದ್ದೆವು. ಮಳೆಗಾಲದಲ್ಲಂತೂ ತೆರೆದ ಬಾವಿಗಳು ಉಕ್ಕಿ ಹರಿಯುತ್ತಿದ್ದವು. ಅಲ್ಲಲ್ಲಿ ತೋಡು ಗಳಿಂದ ನೀರು ಸದಾ ಹರಿಯುತ್ತಿತ್ತು...’ ಇದು ಮಡಿಕೇರಿ ನಗರದ ಹಿರಿಯರ ಮಾತು.

ಆದರೆ, ಮಡಿಕೇರಿಯಲ್ಲಿ ಈಗ ಪರಿಸ್ಥಿತಿ ಬದಲಾಗಿದೆ. ನೂರಾರು ಜಲಮೂಲಗಳು ಕಣ್ಮರೆ ಆಗಿವೆ. ಅಭಿವೃದ್ಧಿ ಭರಾಟೆಯಲ್ಲಿ ಜಲಮೂಲ ಗಳಿಗೆ ಕುತ್ತು ಬಂದಿದೆ. ಕಟ್ಟಡಗಳ ಮಣ್ಣನ್ನು ಜಲಮೂಲಕ್ಕೆ ಹಾಕಿ ಮುಚ್ಚಲಾಗುತ್ತಿದೆ.

ಎಲ್ಲೆಂದರಲ್ಲಿ ಬಡಾವಣೆ ನಿರ್ಮಾಣ, ರೆಸಾರ್ಟ್‌ ಹಾವಳಿ, ಹೋಮ್‌ಸ್ಟೆಗಳ ನಿರ್ಮಾಣ, ವಾಣಿಜ್ಯ ಉದ್ದೇಶಕ್ಕೆ ಭೂಪರಿವರ್ತನೆ ಮಾಡುತ್ತಿ ರುವುದೇ ಅದಕ್ಕೆ ಮುಖ್ಯ ಕಾರಣ. ಇದರಿಂದಾಗಿ ನಗರದ ಜನತೆ ಆತಂಕಕ್ಕೂ ಒಳಗಾಗಿದ್ದಾರೆ, ಭವಿಷ್ಯದ ಪ್ರಶ್ನೆ ಏನು ಎಂಬುದು ಅವರನ್ನು ಕಾಡುತ್ತಿದೆ.

ಅಂದಾಜು 35 ಸಾವಿರ ಜನಸಂಖ್ಯೆ ಯಿರುವ (2011ರ ಜನಗಣತಿ ಪ್ರಕಾರ) ಪುಟ್ಟ ನಗರಕ್ಕೆ ಇತ್ತೀಚಿನ ವರ್ಷಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಲೇ ಇದೆ. ಒಂದು ಕಡೆ ಮಳೆಯ ಕೊರತೆ, ಮತ್ತೊಂದು ಕಡೆ ನಗರದಲ್ಲಿರುವ ಕೆರೆಗಳು ಅಭಿವೃದ್ಧಿಯಾಗದೇ ಇರುವುದು ಪ್ರಮುಖ ಕಾರಣ.

ಈ ನಿಟ್ಟಿನಲ್ಲಿ ಈಗ ಎಚ್ಚೆತ್ತು ಕೊಂಡಿರುವ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರವು ಜೀವಜಲ ಉಳಿಸಲು ಅಭಿಯಾನ ಹಮ್ಮಿಕೊಂಡಿದೆ. ಜತೆಗೆ, ಈ ಬಾರಿ ಬಜೆಟ್‌ನಲ್ಲಿ ₹30 ಲಕ್ಷ ಅನುದಾನವನ್ನೂ ಮೀಸಲಿಟ್ಟಿದೆ.

ಬೇಸಿಗೆಯಲ್ಲಿ ಶೇ 70ರಷ್ಟು ನಗರದ ಪ್ರದೇಶಕ್ಕೆ ಕೂಟುಹೊಳೆಯಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಇನ್ನುಳಿದ ಶೇ 30ರಷ್ಟು ಪ್ರದೇಶಕ್ಕೆ ಪಂಪಿನಕೆರೆ, ರೋಶನಾರ ಕೆರೆ, ಕನ್ನಂಡಬಾಣೆ, ಎಲೆಪೇಟೆ ಕೆರೆಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ.

ಕೂಟುಹೊಳೆಯ ನೀರು ಸೋರಿಕೆ ಯಾಗುತ್ತಿರುವ ಕಾರಣ ಶೀಘ್ರದಲ್ಲಿ ಕಟ್ಟೆಯ ದುರಸ್ತಿಯ ಜತೆಗೆ ಹೂಳೆತ್ತುವ ಕಾರ್ಯಕ್ಕೂ ಚಾಲನೆ ನೀಡಲಾಗಿದೆ
ರೋಷನ್‌ಕೆರೆಯಿಂದ ಮೈಸೂರು ರಸ್ತೆ, ಮಂಗಳಾದೇವಿ ನಗರ ಮತ್ತಿತರ ವಾರ್ಡ್‌ಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಪಂಪಿನ ಕೆರೆಯಿಂದ ಮಹದೇವಪೇಟೆ, ದಾಸವಳ ರಸ್ತೆ, ಆಜಾದ್‌ ನಗರ ಮತ್ತಿತರ ಬಡಾವಣೆಗಳಿಗೆ ನೀರು ಸರಬಾರಜು ಮಾಡಲಾಗುತ್ತಿದೆ.

ಇನ್ನು ಕನ್ನಂಡಬಾಣೆ ಕೆರೆ ನೀರನ್ನು ಕೇವಲ ಕನ್ನಂಡಬಾಣೆ ಬಡಾವಣೆಗೆ ಮಾತ್ರ ನೀಡಲಾಗುತ್ತಿದೆ. ಈ ಕೆರೆಗಳನ್ನು ಅಭಿವೃದ್ಧಿ ಪಡಿಸಿದರೆ  ನಗರದ ಎಲ್ಲ ಭಾಗಕ್ಕೂ ಪ್ರತಿನಿತ್ಯ ನೀರು ಪೂರೈಕೆ ಮಾಡಬಹುದು ಎನ್ನುತ್ತಾರೆ ಅಧಿಕಾರಿಗಳು.

‘2006ರಲ್ಲಿ ಕುಂಡಾಮೇಸ್ತ್ರಿ ಯೋಜನೆಗೆ ಅನುಮೋದನೆ ದೊರೆಯಿತು. ಆದರೆ, ಬೇಸಿಗೆ ಅವಧಿಯಲ್ಲಿ ಮೂರರಿಂದ ನಾಲ್ಕು ತಿಂಗಳು ಕುಡಿಯಲು ನೀರಿಗೆ ಮಲೆನಾಡಿನಲ್ಲಿ ಸಮಸ್ಯೆ ಬರುವ ಆತಂಕವಿದೆ. ಕಳೆದ ಮಂಗಳವಾರ ಸುರಿದ ಮಳೆಯಿಂದ ಕೆಲವು ಕೆರೆಗಳಲ್ಲಿ ಸ್ವಲ್ಪ ಪ್ರಮಾಣದ ನೀರು ಸಂಗ್ರಹವಾಗಿದೆ. ಆದರೆ, ಭೀಕರ ಬೇಸಿಗೆ ಬಂದರೆ ತೊಂದರೆ ಖಚಿತ’ ಎನ್ನುತ್ತಾರೆ ಜನರು.
-ಬಿ.ವಿಕಾಸ್‌

ಸಾಕಾರಗೊಳ್ಳದ ಯೋಜನೆ
ಕುಂಡಾಮೇಸ್ತ್ರಿಯಿಂದ ನೀರು ನೇರವಾಗಿ ಕೂಟುಹೊಳೆಗೆ ಬಂದು ಸೇರಿ ಸಂಗ್ರಹವಾಗುತ್ತದೆ. ಅಲ್ಲಿಂದ ನೀರು ನಗರಕ್ಕೆ ಪೂರೈಕೆ ಮಾಡಲಾ ಗುತ್ತಿದೆ. ಇದರೊಂದಿಗೆ ನಗರದ ಅಲ್ಲಲ್ಲಿ ಓವರ್‌ಹೆಡ್‌ ಟ್ಯಾಂಕ್‌ ನಿರ್ಮಿಸಿ ನೀರು ಪೂರೈಕೆ ಮಾಡಲು ಸಾಧ್ಯವಿದೆ.

ಆ ಯೋಜನೆಗಳು ಇನ್ನೂ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂಬ ಆರೋಪ ಬಲವಾಗಿದೆ. ಕುಂಡಾ ಮೇಸ್ತ್ರಿ ಯೋಜನೆಗೆ ಅನುದಾನ ವರ್ಷ ದಿಂದ ವರ್ಷಕ್ಕೆ ಏರಿಕೆ ಆಗುತ್ತಲೆ ಇದೆ. ಆದರೆ, ನೀರಿನ ಸಮಸ್ಯೆ ಮಾತ್ರ ಪರಿಹಾರ ಕಾಣಿಸುತ್ತಿಲ್ಲ ಎಂಬ ಆರೋಪವಿದೆ.

ಏಪ್ರಿಲ್‌ನಿಂದ ಮಳೆನೀರು ಸಂಗ್ರಹ  ಕಡ್ಡಾಯ
ಮಡಿಕೇರಿ ನಗರದಲ್ಲಿ ನೂತನವಾಗಿ ವಾಣಿಜ್ಯ ಮಳಿಗೆ, ಮನೆ ನಿರ್ಮಿಸುವರು ಏಪ್ರಿಲ್‌ 1ರಿಂದ ಕಡ್ಡಾಯವಾಗಿ ಮಳೆ ನೀರು ಸಂಗ್ರಹ ಅಳವಡಿಸಿ ಕೊಳ್ಳಬೇಕು. ಇಲ್ಲದಿದ್ದರೆ ಅನುಮತಿ ನೀಡುವುದಿಲ್ಲ ಎಂದು ‘ಮುಡಾ’ ಅಧ್ಯಕ್ಷ ಚುಮ್ಮಿ ದೇವಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು. 

ಕೆರೆಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ₹30 ಲಕ್ಷ ಮೀಸಲಿಡಲಾಗಿದೆ. ಇದರಲ್ಲಿ ಕನ್ನಂಡಬಾಣೆ ಪಕ್ಕದಲ್ಲಿರುವ ಪಂಪ್‌ಹೌಸ್ ಕೆರೆ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಮಾಹಿತಿ ನೀಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT