ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನಸೆಳೆದ ಎತ್ತಿನಗಾಡಿ ಓಟದ ಸ್ಪರ್ಧೆ

ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ ಜಿಲ್ಲೆಯಿಂದ ಪಾಲ್ಗೊಂಡಿದ್ದ ಸ್ಪರ್ಧಿಗಳು
Last Updated 20 ಮಾರ್ಚ್ 2017, 9:07 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಎಂ. ಶೆಟ್ಟಹಳ್ಳಿಯಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆ ಜನಮನ ರಂಜಿಸಿತು.

ಗ್ರಾಮದ ಮುದ್ದುಮುತ್ತಲಾಂಬಿಕಾ ಗೆಳೆಯರ ಬಳಗ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಚಿಕ್ಕಮಗಳೂರು, ಅಜ್ಜಂಪುರ, ತಿ.ನರಸೀಪುರ, ಕೆ.ಆರ್‌.ನಗರ, ಹುಣಸೂರು, ಮಂಡ್ಯ, ಪಾಂಡವಪುರ ಇತರ ಕಡೆಗಳಿಂದ ಸುಮಾರು 39 ಜತೆ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. 

ಈ ಬಾರಿಯ ಸ್ಪರ್ಧೆಯಲ್ಲಿ ಭಾರಿ ಗಾತ್ರದ ಹೋರಿಗಳು ಪಾಲ್ಗೊಂಡು ಗಮನ ಸೆಳೆದವು. ಸ್ಪರ್ಧೆ ನಡೆಯುವಾಗ ಎತ್ತುಗಳು ಗಾಡಿಯನ್ನು ಎರಡು ಬಾರಿ ಅಡ್ಡಾದಿಡ್ಡಿ ಎಳೆದ ಪರಿಣಾಮ ಮರದ ತಡೆಗೋಡೆ ಮುರಿದವು. ಇದರಿಂದ ಕೆಲಕಾಲ ಗೊಂದಲ ಸೃಷ್ಟಿಯಾಗಿತ್ತು. ಸಂಘಟಕರು ಪರಿಸ್ಥಿತಿಯನ್ನು ತಹಬದಿಗೆ ತರಲು ಪರದಾಡಿದರು.

ಎತ್ತುಗಳು ಗಾಡಿಯನ್ನು ಎಳೆದು ಗುರಿಯತ್ತ ಮುನ್ನುಗ್ಗುವಾಗ ಅವುಗಳ ಬೆಂಬಲಿಗರು ಸಿಳ್ಳೆ, ಕೇಕೆ ಹಾಕಿ ಹುರಿದುಂಬಿಸಿದರು. ಗಾಡಿಯ ಮೇಲೆ ಇದ್ದವರು ಚಾವಟಿ ಬೀಸುತ್ತಾ, ತಮ್ಮ ಎತ್ತುಗಳ ಬಾಲ ಮುರಿಯುತ್ತಾ, ಹಲ್ಲಿನಿಂದ ಕಚ್ಚುತ್ತಾ ಗುರಿ ತಲುಪಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದ ದೃಶ್ಯ ಕಂಡುಬಂತು.

ಹಳ್ಳಿಕಾರ್‌ ಮತ್ತು ಅಮೃತಮಹಲ್‌ ತಳಿಯ ಜೋಡಿ ಎತ್ತುಗಳು ಹೆಚ್ಚಾಗಿದ್ದವು. ಕಾಂಗ್ರೆಸ್‌ ಮುಖಂಡ ದರ್ಶನ್‌ ಲಿಂಗರಾಜು ಸ್ಪರ್ಧೆಗೆ ಚಾಲನೆ ನೀಡಿದರು. ನಾಕೌಟ್‌ ಮಾದರಿಯಲ್ಲಿ ನಡೆದ ಈ ಸ್ಪರ್ಧೆ ಸಂಜೆ 7 ಗಂಟೆಯಾದರೂ ಮುಗಿದಿರಲಿಲ್ಲ.

ಸ್ಪರ್ಧೆಯಲ್ಲಿ ಗೆಲ್ಲುವ ಎತ್ತುಗಳ ಮಾಲೀಕರಿಗೆ ಪ್ರಥಮ ₹ 40 ಸಾವಿರ, ದ್ವಿತೀಯ ₹ 30 ಸಾವಿರ, ತೃತೀಯ ₹ 20 ಸಾವಿರ ಹಾಗೂ ಚತುರ್ಥ               ₹ 10 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಆಯೋಜಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT