ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಟೆಲ್‌ಗಳ ನಿವೇಶನಕ್ಕೆ ಪರದಾಟ

ಕೆ.ಆರ್.ಪೇಟೆ: ಖಾಸಗಿ ಕಟ್ಟಡಗಳೇ ವಿದ್ಯಾರ್ಥಿನಿಲಯಗಳಿಗೆ ತಾಣ
Last Updated 20 ಮಾರ್ಚ್ 2017, 9:09 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ತಾಲ್ಲೂಕಿನ ಹಲವಾರು ಹಾಸ್ಟೆಲ್‌ಗಳಿಗೆ ಕಟ್ಟಡಗಳಿಲ್ಲ. ಖಾಸಗಿ ಕಟ್ಟಡಗಳಲ್ಲಿಯೇ ನಡೆಸಲಾಗುತ್ತಿದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಬೇಕಾದ ಮೂಲಸೌಲಭ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಕೊರತೆಗಳ ನಡುವೆಯೇ ಓದಬೇಕಾದ ಅನಿವಾರ್ಯತೆ ಇದೆ.

ಹಿಂದುಳಿದ ವರ್ಗ, ಸಮಾಜ ಕಲ್ಯಾಣ, ಕಿತ್ತೂರು ರಾಣಿ ಚನ್ನಮ್ಮ ಹಾಗೂ ಮೊರಾರ್ಜಿ ದೇಸಾಯಿ ವಸತಿ ನಿಲಯಗಳು ಸೇರಿ ಒಟ್ಟು 27 ವಸತಿ ನಿಲಯಗಳು ತಾಲ್ಲೂಕಿನಲ್ಲಿ ಇವೆ.

ಹಿಂದುಳಿದ ವರ್ಗಗಳ ಇಲಾಖೆಗೆ ಸೇರಿದ ಒಟ್ಟು 14 ಹಾಸ್ಟೆಲ್‌ಗಳಿವೆ. ಅವುಗಳಲ್ಲಿ ಆರು ಮೆಟ್ರಿಕ್ ಪೂರ್ವ  ಹಾಗೂ  ಮೆಟ್ರಿಕ್ ನಂತರ ಎಂಟು ವಿದ್ಯಾರ್ಥಿ ನಿಲಯಗಳಿವೆ.

ಇವುಗಳಲ್ಲಿ ನಾಲ್ಕು ಮಾತ್ರ ಸ್ವಂತ ಕಟ್ಟಡ ಹೊಂದಿದ್ದರೆ,  ಉಳಿದ10 ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಮೆಟ್ರಿಕ್ ನಂತರದ  ಬಾಲಕರ  ಹಾಗೂ ಬಾಲಕಿಯರ ವಿದ್ಯಾರ್ಥಿ ನಿಲಯಗಳು ಪಟ್ಟಣದಲ್ಲಿದ್ದು, ಯಾವುದಕ್ಕೂ ಸ್ವಂತ ಕಟ್ಟಡ ಹೊಂದಿಲ್ಲ.

1,150 ಕ್ಕೂ ಅಧಿಕ  ವಿದ್ಯಾರ್ಥಿಗಳಿರುವ ವಸತಿ ನಿಲಯಗಳಿಗೆ ಸ್ವಂತ ಕಟ್ಟಡ ಕಟ್ಟಲು ಹಣದ ಕೊರತೆಯಿಲ್ಲ. ಆದರೆ, ಸೂಕ್ತ ಸ್ಥಳದಲ್ಲಿ  ನಿವೇಶನ ಸಿಗುತ್ತಿಲ್ಲ. ಹೀಗಾಗಿ ಖಾಸಗಿ ಕಟ್ಟಡವನ್ನೇ ಆಶ್ರಯಿಸಬೇಕಾಗಿದೆ ಎನ್ನುತ್ತಾರೆ ತಾಲ್ಲೂಕು ಬಿಸಿಎಂ ಅಧಿಕಾರಿ ವೀರಪ್ಪಗೌಡ.

ಸಮಾಜ ಕಲ್ಯಾಣ ಇಲಾಖೆಯು ಒಂಬತ್ತು ಹಾಸ್ಟೆಲ್‌ ಹೊಂದಿದ್ದು, ಅದರಲ್ಲಿ ನಾಲ್ಕಕ್ಕೆ ಸ್ವಂತ ಕಟ್ಟಡವಿಲ್ಲ. ತಾಲ್ಲೂಕಿನ ಸಾರಂಗಿ, ಸಿಂಧಘಟ್ಟ ಹಾಗೂ ಪಟ್ಟಣದ ಎರಡು ಹಾಸ್ಟೆಲ್‌ಗೆ ಕಟ್ಟಡವಿಲ್ಲ. ನಿವೇಶನ ಗುರುತಿಸಲಾಗಿದೆ ಎನ್ನುತ್ತಾರೆ ತಾಲ್ಲೂಕು ಸಮಾಜಕಲ್ಯಾಣಾಧಿಕಾರಿ ಸುಧಾಮಣಿ
ತಾಲ್ಲೂಕಿನಲ್ಲಿ ನಾಲ್ಕು ವಸತಿ ಶಾಲೆಗಳಿದ್ದು, ಅವುಗಳಲ್ಲಿ ಎರಡಕ್ಕೆ ಸ್ವಂತ ಕಟ್ಟಡವಿದ್ದರೆ, ಇನ್ನೆರಡಕ್ಕೆ ಸ್ವಂತ ಕಟ್ಟಡವಿಲ್ಲ.

ಬಹುತೇಕ ಹಾಸ್ಟೆಲ್‌ಗಳು ಖಾಸಗಿ ಕಟ್ಟಡದಲ್ಲಿರುವುದರಿಂದ ಮಕ್ಕಳ ಓದಿಗೆ ಬೇಕಾದ ಎಲ್ಲ ಸೌಲಭ್ಯವನ್ನು ಒದಗಿಸಲು ಸಾಧ್ಯವಾಗಿಲ್ಲ. ವಿದ್ಯಾರ್ಥಿಗಳಿಗೆ ಮಲಗಲು ಮಂಚ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ, ಸ್ನಾನದ ಕೊಠಡಿ, ವಿಶಾಲವಾದ ಡೈನಿಂಗ್ ಹಾಲ್, ಓದಲು ಕೊಠಡಿ ಇಲ್ಲದಿರುವುದು  ಎದ್ದು ಕಾಣುತ್ತದೆ.

ವಿದ್ಯಾರ್ಥಿನಿಯರ ಎಲ್ಲಾ ಹಾಸ್ಟೆಲ್ ಗಳಲ್ಲಿ   ಸಿ.ಸಿ. ಟಿ.ವಿ ಕ್ಯಾಮೆರಾ  ಅಳವಡಿಸಲಾಗಿದ್ದು, ರಾತ್ರಿ ವೇಳೆ ಮಾತ್ರ ಕಾವಲುಗಾರರು ಇದ್ದು, ಹಗಲು ಇರುವುದಿಲ್ಲ. ವಿದ್ಯುತ್‌ ಸಮಸ್ಯೆ ಇರುವುದರಿಂದ ಯುಪಿಎಸ್‌ ಅಳವಡಿಸಬೇಕಾದ ಅವಶ್ಯಕತೆ ಇದೆ. ಬಿಸಿಎಂ ಹಾಸ್ಟೆಲ್‌ಗಳಲ್ಲಿ  32 ಮಂದಿ ಅಡಿಗೆ ಸಿಬ್ಬಂದಿ ಇರಬೇಕಾಗಿತ್ತು. ಐವರು ಮಾತ್ರ ಇದ್ದಾರೆ.

ಆರು ಮಂದಿ ವಾರ್ಡನ್‌ಗಳಿದ್ದು ಅವರೇ ಎಲ್ಲ ವಸತಿ ನಿಲಯ ನೋಡಿಕೊಳ್ಳಬೇಕಾಗಿದೆ. ಹೊರಗುತ್ತಿಗೆ  ಸಿಬ್ಬಂದಿ ಮೇಲೆ ಕಾರ್ಯ ನಿರ್ವಹಿಸಲಾಗುತ್ತಿದೆ.
-ಬಲ್ಲೇನಹಳ್ಳಿ ಮಂಜುನಾಥ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT