ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯುತಿರುವೆ ನಿನಗಾಗಿ...

ಪತ್ರ ಲಹರಿ
Last Updated 20 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಪ್ರೀತಿಯ ಮಗನೆ,
ನಾನು ಎಲ್ಲರಿಗೂ ಹೇಳುತ್ತಿರುತ್ತೇನೆ. ಕನಿಷ್ಟ ಮೂರು ಮಕ್ಕಳಾದರೂ ಇರಲೇಬೇಕು ಎಂದು. ಆಗ ನಮ್ಮ ವೃದ್ಧಾಪ್ಯದಲ್ಲಿ ಒಬ್ಬರಲ್ಲ ಒಬ್ಬರಾದರೂ ನಮ್ಮನ್ನು ನೋಡಿಕೊಳ್ಳಲು ಬರುತ್ತಿರುತ್ತಾರೆ.  ನನಗೆ ನಾಲ್ಕು ಮಕ್ಕಳಿದ್ದರೂ ಇಬ್ಬರು ತುಂಬ ದೂರದಲ್ಲಿದ್ದಾರೆ. ಒಬ್ಬ ಇಲ್ಲಿ ನನ್ನೊಡನೆಯೇ ಇದ್ದಾನೆ. ನೀನು ನನ್ನ ಪ್ರೀತಿಯ ಹಿರಿಯ ಮಗ. ಸಾಕಷ್ಟು ಹತ್ತಿರ ಇದ್ದರೂ ನಿನ್ನನ್ನು ನೋಡಲಾಗುತ್ತಿಲ್ಲವಲ್ಲ ಎಂದೇ ನನಗೆ ಚಿಂತೆ. ನೀನಂತೂ ಬರುವುದೇ ಇಲ್ಲ. ನಿನ್ನ ಮನೆಗೆ ನನಗೆ ಬರಲೇನೋ ಮನಸು ಇದೆ. ಆದರೆ ಮನಸು ಕೇಳಿದರೂ ದೇಹ ಸಹಕರಿಸುವುದಿಲ್ಲ. ವಯಸ್ಸು ತೊಂಬತ್ತರ ಹತ್ತಿರ ಬರುತ್ತ ಇದೆ. ಮೈಕೈ ನೋವು ವಿಪರೀತವಾಗಿದೆ. ಈ ಪತ್ರ ಬರೆಯಲೂ ಕೈ ನೋಯುತ್ತಿದೆ. ಆದರೂ ನಿನಗೆ ಪತ್ರ ಬರೆಯಲೇಬೇಕೆಂಬ ಹಠದಲ್ಲಿ ಬರೆಯಲು ಹೊರಟಿರುವೆ..

ಇತ್ತೀಚೆಗೆ ನನಗೆ ಅತ್ಯಂತ ದುಃಖ ತಂದ ವಿಚಾರವೊಂದಿದೆ. ಅದನ್ನು ನಿನ್ನೊಡನೆ ಹಂಚಿಕೊಳ್ಳುತ್ತೇನೆ. ಯಾವುದೋ ಸಂಸ್ಥೆಯವರು ನಿನ್ನ ಅಪ್ಪನ ಸಾಧನೆ ಮೆಚ್ಚಿ ಅವರ ಪರವಾಗಿ ನನಗೆ ಸನ್ಮಾನ ಮಾಡಿದಾಗ ನೀನು ಬರದೇ ಇದ್ದದ್ದು ನನಗೆ ಅತೀವ ಸಂಕಟ ತಂದಿದೆ.

ಆ ವಿಷಯವಾಗಿ ನಾಲ್ಕು ಸಲ ನಿನಗೆ ಫೋನ್‌ ಮಾಡಿದ್ದೆ. ಬರಲೇಬೇಕೆಂದು ದಯನೀಯವಾಗಿ ಬೇಡಿಕೊಂಡಿದ್ದೆ. ಆದರೆ ನಿನ್ನ ಮನಸುಕರಗಿರಲೇ ಇಲ್ಲ. ನಾಲ್ಕನೆ ಸಲವಂತೂ ಅಪ್ಪ ಅಂತೂ ಈಗ ಇಲ್ಲ. ನಾನಿದ್ದೇನೆ ಆದರೆ ಎಷ್ಟು ದಿನವೋ ಗೊತ್ತಿಲ್ಲ. ದಮ್ಮಯ್ಯ ಬಾ. ನೀನು ಬಂದರೆ ನನಗೆ ಸನ್ಮಾನ ಸ್ವೀಕರಿಸಲು ಹುರುಪು ಬರುತ್ತದೆ. ಸಮಾಧಾನ ಸಂತೋಷದಿಂದ ಒಟ್ಟಿಗೆ ಹೋಗಬಹುದು ಎಂದು ನಿನ್ನಲ್ಲಿ ಅಂಗಲಾಚಿದ್ದೆ. ಆದರೆ ನೀನು ಅದಕ್ಕೆ ಹಾರಿಕೆಯ ಉತ್ತರ ಕೊಟ್ಟಿದ್ದೆ. ನೀನು ಬರುತ್ತೇನೆ ಎನ್ನದೆ ಇದ್ದದ್ದರಿಂದ ಈ ಜನುಮ ಇನ್ನೂ ಯಾಕೆ ಬೇಕು ಎಂಬುದಾಗಿ ತುಂಬ ಹತಾಶೆಯಾಗಿ ದುಃಖ ಆವರಿಸಿತ್ತು.

ಆದರೂ ಮನಸ್ಸಿನ ಮೂಲೆಯಲ್ಲಿ ಒಂದು ಸಣ್ಣ ಆಸೆ ಜೀವಂತವಾಗಿ ಇತ್ತು. ಅಮ್ಮ ಇಷ್ಟು ಕರೆದಾಗ ಖಂಡಿತ ಮಗ ಆ ದಿನ ಓಡಿ ಬಂದಾನು. ನೀನು ಬಂದೇ ಬರುತ್ತಿ ಎಂದು ಮನಸು ಹಿತನುಡಿಯುತ್ತಿತ್ತು. ನನಗೆ ಹೇಳದೆಯೇ ಆ ದಿನ ಬೆಳಿಗ್ಗೆ ನೀನು ನನ್ನ ಮುಂದೆ ಪ್ರತ್ಯಕ್ಷನಾಗುತ್ತೀಯ ಎಂದೇ ಬಲವಾಗಿ ನಂಬಿದ್ದೆ. ಆ ದಿನ ಬೆಳಿಗ್ಗೆ ಗೇಟ್ ಶಬ್ದ ಆದಾಗಲೆಲ್ಲ ರಾತ್ರಿ ಬಸ್ಸಲ್ಲಿ ಹೊರಟು ನೀನು ಬಂದೆಯೇನೋ ಎಂದು ಕಾತರದಿಂದ ನೋಡಿದ್ದೆ. ಈಗ ಬಂದಾನು ಆಗ ಬಂದಾನು ಎಂದು ಸಂಜೆ ಸನ್ಮಾನಕ್ಕೆ ಹೋಗುವವರೆಗೂ ಕುತ್ತಿಗೆ ಉದ್ದ ಮಾಡಿಯೇ ಕೂತಿದ್ದೆ. ಕೊನೆಗೂ ನೀನು ಬರಲೇ ಇಲ್ಲ. ಆಗ ಎಷ್ಟು ನಿರಾಸೆಯಾಯಿತೆಂದರೆ ಅಳು ತಡೆಯಲಾಗಲೆ ಇಲ್ಲ. ಮನಸಾರೆ ಅತ್ತು ಹಗುರವಾಗಲು ಪ್ರಯತ್ನಿಸಿದೆ. ನಾನು ಅಷ್ಟು ಕೇಳಿಕೊಂಡರೂ ಬರದೆ ಇರಬೇಕಾದರೆ ನಿನ್ನ ಹೃದಯ ಇಷ್ಟು ಕಠಿಣ ಏಕಾಯಿತು? ಎಂದು ಚಿಂತಿಸಿದೆ.  ನಿನ್ನ ಅಪ್ಪನಂತೆಯೇ? ಮುಂದೆ ನಿನ್ನ ವೃದ್ಧಾಪ್ಯದಲ್ಲಿ ನೀನು ನಿನ್ನ ಮಕ್ಕಳನ್ನು ಮನೆಗೆ ಬನ್ನಿ ಎಂದು ಕರೆದರೆ ಅವರು ಆಗಾಗ ಬಂದು ನಿನ್ನನ್ನು ಮಾತಾಡುಸುತ್ತಿರಲಿ ಎಂದೇ ಹಾರೈಸುತ್ತೇನೆ. ಏಕೆಂದರೆ ಮಕ್ಕಳು ಬರದಿದ್ದರೆ ಆ  ನೋವು ಸಹಿಸಲು ಬಹಳ ಕಷ್ಟ. ಅದರ ಅರಿವು ನನಗಾಗಿದೆ.

ಈ ವೃದ್ಧಾಪ್ಯದಲ್ಲಿ ಹೊರಗೆಲ್ಲೂ ಹೋಗಲಾರದೆ ಮನೆಯಲ್ಲೇ ಕುಳಿತು ಬಲು ಬೇಸರವಾಗುತ್ತದೆ. ಯಾವುದೇ ಸಮಾರಂಭಗಳಲ್ಲೂ ಭಾಗಿಯಾಗಲು ಆಗುವುದಿಲ್ಲವಲ್ಲ, ಈ ಜನುಮ ಇನ್ನು ನಿರರ್ಥಕ ಎಂದೂ ತೀವ್ರವಾಗಿ ಅನಿಸುತ್ತದೆ. ಫೋನು ಮಾಡಿಯೂ ಮಾತಾಡುತ್ತಿಲ್ಲ ನೀನು. ಪ್ರತೀಸಲವೂ ನಾನೇ ಫೋನ್‌ ಮಾಡಿ  ನಿನ್ನ ಕ್ಷೇಮಸಮಾಚಾರ ತಿಳಿಯಬೇಕಾಗಿದೆ. ಎರಡು ದಿನಕ್ಕೊಮ್ಮೆಯಾದರೂ ನಿನ್ನಲ್ಲಿ ಮಾತಾಡದೆ ಇದ್ದರೆ ಮನಸುಕೇಳುವುದಿಲ್ಲ. ಬೇಸರವಾದಾಗ ಮಾತನಾಡಲು ನನಗಾದರೆ ತಮ್ಮಂದಿರು, ತಂಗಿಯಂದಿರು ಬೇಕಾದಷ್ಟು ಮಂದಿ ಇದ್ದಾರೆ 

ನಿನ್ನಲ್ಲಿ ಕೇಳಿಕೊಳ್ಳುವುದೇನೆಂದರೆ ಈ ಪತ್ರ ನೋಡಿಯಾದರೂ ಒಮ್ಮೆ ನನ್ನನ್ನು ನೋಡಲು ಬಾ. ನಾನಿರುವಷ್ಟು ಸಮಯ ಎರಡು ತಿಂಗಳಿಗೊಮ್ಮೆಯಾದರೂ ಬಂದು ಒಂದೇ ಒಂದು ದಿನ ಇದ್ದರೂ ಸಾಕು. ಆ ಒಂದು ದಿನವಾದರೂ ನಾನು ಖುಷಿಯಿಂದ ನಿನ್ನ ಬಳಿ ಮಾತಾಡುತ್ತ ಈ ಮೈ ಕೈ ನೋವನ್ನು ಮರೆಯುತ್ತೇನೆ. ನಿನ್ನನ್ನೇ ಕಾಯುತ್ತಿರುತ್ತೇನೆ. ಬರುತ್ತೀಯಲ್ಲ?
ಇಂತಿ ನಿನ್ನ ಅಮ್ಮ
ರುಕ್ಮಿಣಿ ಮಾಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT